ಬಳ್ಳಾರಿ,ಜು.11
ಗ್ರಾಮ ಹಾಗೂ ಕೃಷಿ ಪ್ರದೇಶಗಳಲ್ಲಿ ವಿದ್ಯುತ್ಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ, ದೂರು ಬಂದಲ್ಲಿ ಕೂಡಲೇ ಸ್ಪಂದಿಸಿ, ಅದನ್ನು ಸರಿಪಡಿಸುವ ಕೆಲಸ ಮಾಡಬೇಕು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಜೆಸ್ಕಾಂ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇಂಧನ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ನ ನಜೀರ್ ಸಭಾಂಗಣದಲ್ಲಿ ಜಿಲ್ಲೆಯ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳೊಂದಿಗೆ ಗುರುವಾರ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಳೆಗಾಲ, ಗಾಳಿ ಇತ್ಯಾದಿ ಸಂದರ್ಭಗಳಲ್ಲಿ ವಿದ್ಯುತ್ ಲೈನ್ ಹರಿದು ಬಿದ್ದಲ್ಲಿ, ಲೈನ್ಗಳ ನಿರ್ವಹಣೆ, ದುರಸ್ತಿ ಕಾರ್ಯ ಮತ್ತು ಇನ್ನಿತರೆ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಯಾವುದೇ ಉದಾಸೀನತೆ ಹಾಗೂ ನಿರ್ಲಕ್ಷ್ಯ ತೋರದೇ, ಜೀವಹಾನಿ ಸಂಭವಿಸದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಸಾಮಾನ್ಯವಾಗಿ ಕೃಷಿ ಪ್ರದೇಶಗಳಲ್ಲಿ ವಿದ್ಯುತ್ ಲೈನ್ ತುಂಡಾದಲ್ಲಿ ರೈತರು ಜೆಸ್ಕಾಂ ಅಧಿಕಾರಿಗಳಿಗೆ ಸಂಪರ್ಕಿಸುತ್ತಾರೆ. ಆಗ ಅಧಿಕಾರಿಗಳು ಸ್ಪಂದಿಸಬೇಕು. ಅವುಗಳನ್ನು ತ್ವರಿತವಾಗಿ ಸರಿಪಡಿಸುವ ಕಾರ್ಯ ಕೈಗೊಳ್ಳಬೇಕು ಎಂದರು.
ವಿದ್ಯುತ್ ಸಮಸ್ಯೆ ಕುರಿತಾಗಿ ರೈತರು ಜೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಕರೆ ಸ್ವೀಕರಿಸುವುದಿಲ್ಲ ಎಂಬುದಾಗಿ ಶಾಸಕರುಗಳು ಗಮನಕ್ಕೆ ತಂದಿದ್ದು, ಇಂತಹ ವರದಿಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಸಚಿವರು ಎಚ್ಚರಿಸಿದರು.
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷರು ಹಾಗೂ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರು ಮಾತನಾಡಿ, ಕಂಪ್ಲಿ ಮತ್ತು ಕುರುಗೋಡು ತಾಲ್ಲೂಕು ವ್ಯಾಪ್ತಿಯಲ್ಲಿ ವಿವಿಧ ಗ್ರಾಮಗಳಲ್ಲಿ ಹಳೆಯ ವಿದ್ಯುತ್ ಲೈನ್ಗಳು ಹಾದುಹೋಗಿವೆ. ಈ ಕುರಿತು ಜೆಸ್ಕಾಂ ಅಧಿಕಾರಿಗಳ ಗಮನಕ್ಕೂ ತಂದಿದ್ದೇನೆ. ಕುರುಗೋಡು ಭಾಗದ ಬಹುವರ್ಷದ ಕೋಳೂರು ಏತ ನೀರಾವರಿ ಯೋಜನೆಯು, 20 ಸಾವಿರ ಎಕರೆ ಕೃಷಿ ಭೂಮಿಗೆ ನೀರುಣಿಸುವ ಯೋಜನೆಯಾಗಿದ್ದು, ಕೇವಲ ವಿದ್ಯುತ್ ಸರಬರಾಜಿಲ್ಲದೇ ಸ್ಥಗಿತಗೊಂಡಿದೆ. ಇದಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜೆಸ್ಕಾಂ ಇಲಾಖೆಯ ಮುಖ್ಯ ಅಭಿಯಂತರರಾದ ಲಕ್ಷ್ಮಣ್ ಚೌವ್ಹಾಣ್ ಅವರು, ಈ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುತ್ತೇನೆ ಎಂದು ಸಚಿವರ ಗಮನಕ್ಕೆ ತಂದರು.
ಬಳಿಕ ಮಧ್ಯಪ್ರವೇಶಿಸಿದ ಇಂಧನ ಇಲಾಖೆ ಸಚಿವ ಕೆ.ಜೆ.ಜಾರ್ಜ್ ಅವರು, ಜೆಸ್ಕಾಂ ಇಲಾಖೆ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದರೆ, ಆಯಾ ಸ್ಥಳೀಯ ಶಾಸಕರ ಗಮನಕ್ಕೆ ತರಬೇಕು. ಈ ಕುರಿತಾಗಿ ಸಭೆ ನಡೆಸಬೇಕು. ಅಧಿಕಾರಿಗಳು, ಶಾಸಕರೊಂದಿಗೆ ಸಹ ಸಂಪರ್ಕ ಸಾಧಿಸಬೇಕು ಎಂದು ತಿಳಿಸಿದರು.
‘ಬುಕ್ಕ ಸಾಗರದ ಬಹು ಕುಡಿಯುವ ನೀರಿನ ಯೋಜನೆಯು ಆ ವ್ಯಾಪ್ತಿಯ 10 ಗ್ರಾಮ ಪಂಚಾಯತ್ಗಳ ಸಾರ್ವಜನಿಕರಿಗೆ ಕುಡಿಯುವ ನೀರಿನ ಯೋಜನೆಯಾಗಿದೆ. ಇದು ಕೂಡ ವಿದ್ಯುತ್ ಸಂಪರ್ಕದ ಕೊರತೆಯಿಂದಾಗಿಯೇ ಕಾಮಗಾರಿ ಸ್ಥಗಿತಗೊಂಡಿದೆ’ ಎಂದು ಶಾಸಕ ಜೆ.ಎನ್.ಗಣೇಶ್ ಅವರು ಸಭೆಗೆ ತಿಳಿಸಿದರು.
ಇದಕ್ಕೆ ಸಚಿವರು ಮಾತನಾಡಿ, ವಿದ್ಯುತ್ ಸರಬರಾಜು ಸಂಬಂಧಿಸಿದಂತೆ ಕಾಮಗಾರಿಗಳ ಡಿಪಿಆರ್ ಸಿದ್ದಪಡಿಸಿ, ಕೂಡಲೇ ಅನುಮೋದನೆ ಪಡೆಯಬೇಕು. ಮಳೆಗಾಲ ಆರಂಭ ಸಮಯದ ಹಿನ್ನಲೆಯಲ್ಲಿ ಬಾಕಿ ಉಳಿದ ಮತ್ತು ಹೊಸ ಕಾಮಗಾರಿಗಳನ್ನು ಪೂರ್ಣಗೊಳಿಸುವ ಕೆಲಸವಾಗಬೇಕು ಎಂದು ಜೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಳೆದ 6-7 ತಿಂಗಳಲ್ಲಿ ಕುರುಗೋಡು ತಾಲ್ಲೂಕು ವ್ಯಾಪ್ತಿಯಲ್ಲಿ ವಿದ್ಯುತ್ ಅವಘಡ ಸಂಬಂಧಿಸಿದಂತೆ ಸಾವು ಪ್ರಕರಣಗಳು ವರದಿಯಾಗಿವೆ. ಕುಟುಂಬಗಳಿಗೆ ಪರಿಹಾರ ಹಣವು ತಲುಪಿಲ್ಲ ಎಂದು ಮೃತರ ಕುಟುಂಬದವರು ಗಮನಕ್ಕೆ ತಂದಿದ್ದಾರೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ಇದಕ್ಕೆ ಸಚಿವರು, ಜಿಲ್ಲೆಯಲ್ಲಿ ವಿದ್ಯುತ್ಗೆ ಸಂಬಂಧಿಸಿದಂತೆ ಸಾವು ಪ್ರಕರಣಗಳ ಮೃತರ ಕುಟುಂಬಕ್ಕೆ ಕಾನೂನಾತ್ಮಕವಾಗಿ ಪರಿಹಾರ ನೀಡಲು ಮುತುವರ್ಜಿ ವಹಿಸಬೇಕು. ಅನಧಿಕೃತವಾಗಿ ವಿದ್ಯುತ್ ಲೈನ್ ಸಂಪರ್ಕ ಪಡೆಯುವಂತಿಲ್ಲ, ಈ ಕಾರಣಗಳಿಗಾಗಿಯೇ ವಿದ್ಯುತ್ ಸಾವು ಪ್ರಕರಣಗಳು ಸಂಭವಿಸುತ್ತವೆ, ಇವುಗಳನ್ನು ತಪ್ಪಿಸಬೇಕು. ಐಪಿ ಲೈನ್ ಗ್ರಾಹಕರ ಆಧಾರ್ ಜೋಡಣೆಗೆ ಆದೇಶವಿದ್ದು, ಇದರ ಬಗ್ಗೆ ಪ್ರಚಾರ ನೀಡಬೇಕು ಎಂದರು.
ಸಿರುಗುಪ್ಪ ಶಾಸಕ ಬಿ.ಎಂ.ನಾಗರಾಜ ಅವರು, ತಮ್ಮ ಕ್ಷೇತ್ರ ವ್ಯಾಪ್ತಿಯ ವಿದ್ಯುತ್ ಸಂಬಂಧಿಸಿದಂತೆ ಸಮಸ್ಯೆಗಳನ್ನು ಸಚಿವರ ಮತ್ತು ಸಭೆಗೆ ತಿಳಿಸಿದರು.
ಸಭೆಯಲ್ಲಿ ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್, ಉಪಮೇಯರ್ ಡಿ.ಸುಕುಂ, ಡಾ.ಬಾಬು ಜಗನ್ಜೀವನ್ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಮುಂಡರಗಿ ನಾಗರಾಜ, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಸೇರಿದಂತೆ ಜೆಸ್ಕಾಂ, ಬಿಟಿಪಿಎಸ್ ಹಾಗೂ ಇತರೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.