ರಾಯಚೂರು,ಜೂ.5 ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದ್ದು, ಪರಿಸರ ರಕ್ಷಣೆಗೆ ಪ್ರತಿಯೊಬ್ಬರು ಸಸಿಗಳನ್ನು ನೆಡುವ ಮೂಲಕ ಸಮಾಜಕ್ಕೆ ಉತ್ತಮ ಪರಿಸರವನ್ನು ನೀಡಲು ಮುಂದಾಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ ಅವರು ಹೇಳಿದರು.
ಅವರು ಜೂ.5ರ(ಬುಧವರಾ) ತಾಲೂಕಿನ ಬಿಜನಾಗೇರಾ ಗ್ರಾಮದ ವ್ಯಾಪ್ತಿಯ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ನೀರೆರೆದು ಮಾತನಾಡಿದರು.
ಮನೆಗೊಂದು ಮರ, ಊರಿಗೊಂದು ವನ ಎಂಬ ಮಾತಿನಂತೆ ಪ್ರತಿಯೊಬ್ಬರೂ ಮರಗಿಡವನ್ನು ಬೆಳೆಸುವ ಪ್ರಾಮಾಣಿಕ ಪ್ರಜ್ಞೆ ಮೆರೆಯಬೇಕು ಹಾಗೂ ಈ ಆಧುನಿಕತೆಯ ದಿನಗಳಲ್ಲಿ ಬೆಳೆಯುತ್ತಿರುವ ಜನಸಂಖ್ಯೆಯ ಬೇಡಿಕೆಗಳನ್ನು ಪೂರೈಸಲು ಪರಿಸರ ವಿನಾಶದ ಅಂಚಿಗೆ ತಲುಪಿದೆ. ಇದರಿಂದ ದಿನದಿನಕ್ಕೆ ಮಳೆಯ ಪ್ರಮಾಣ ಕಡಿಮೆಯಾಗುತ್ತಾ ಬರುತ್ತಿದ್ದು, ವಿದ್ಯಾರ್ಥಿಗಳು ಜಾಗೃತರಾಗಿ ಮರಗಿಡಗಳನ್ನು ಬೆಳೆಸಲು ಮುಂದಾಗಬೇಕು ಎಂದರು.
ನಂತರ ಇದೇ ವೇಳೆ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರ ಪ್ರಕಾಶ.ವಿ ಮಾತನಾಡಿ, ಇಂದಿನ ಮಕ್ಕಳು ಹಾಗೂ ಯುವಕರು ಪರಿಸರ ಉಳಿವಿಗಾಗಿ ಗಿಡಗಳನ್ನು ಬೆಳೆಸಿ, ಕಾಡುಗಳನ್ನು ಸಂರಕ್ಷಿಸಿದರೆ ಮುಂದಿನ ದಿನಗಳಲ್ಲಿ ಅವು ನಮ್ಮನ್ನು ರಕ್ಷಿಸುತ್ತವೆ. ಪ್ರತಿಯೊಬ್ಬರೂ ಪ್ರಕೃತಿಯ ವಿರುದ್ಧ ಸಮರ ಸಾರದೆ ಅದರ ಜತೆಯಲ್ಲಿ ಸಾಗಬೇಕು ಎಂದು ತಿಳಿಸಿದರು.
ಯರಗೇರಾ ಗ್ರಾ.ಪಂಯಲ್ಲಿರುವ ಸಾಮಾಜಿಕ ಅರಣ್ಯ ವಿಭಾಗದ ನರ್ಸರಿ ಕ್ಷೇತ್ರಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾ ಅಧಿಕಾರಿಗಳು ಸುರೇಶ ಬಾಬು, ರಾಯಚೂರು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ, ಸಹಾಯಕ ನಿರ್ದೇಶಕರು (ಗ್ರಾ.ಉ) ಹನುಮಂತ, ಸಹಾಯಕ ಸಂರಕ್ಷಣಾ ಅಧಿಕಾರಿಗಳು ಬಿರಪ್ಪ, ವಲಯ ಅರಣ್ಯ ಅಧಿಕಾರಿಗಳು ನಾಗರಾಜ, ಜಿಲ್ಲಾ ಸಹಾಯಕ ಸಮನ್ವಯ ಅಧಿಕಾರಿ ಮಲ್ಲಮ್ಮ, ಜಿಲ್ಲಾ ಐಇಸಿ ಸಂಯೋಜಕ ವಿಶ್ವನಾಥ, ತಾಂತ್ರಿಕ ಸಂಯೋಜಕ ಸೈಮನ್, ತಾಂತ್ರಿಕ ಸಹಾಯಕ ವಿನೋದ, ಯಲ್ಲೇಶ (ಎಸ್.ಎಫ್), ಶಾಲೆಯ ವಿದ್ಯಾರ್ಥಿಗಳು ಮತ್ತು ಗ್ರಾ.ಪಂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.