ಬಳ್ಳಾರಿ,ಜ.03
ಪ್ರತಿ ದೇಶಕ್ಕೂ ತಮ್ಮದೇ ಆದ ಸಾಂಪ್ರದಾಯಿಕ ಆರೋಗ್ಯದ ಸೂತ್ರಗಳಿವೆ. 95ಕ್ಕೂ ಹೆಚ್ಚು ಪಶ್ಚಿಮ ದೇಶಗಳಲ್ಲಿ ವಿವಿಧ ಔಷಧ ದ್ರವ್ಯಗಳ ವ್ಯಾಪಾರ ವಹಿವಾಟು ನಡೆಯುತ್ತಿವೆ ಎಂದು ಲಂಡನ್ ಆಯುರ್ವೇದ ಅಕಾಡೆಮಿಯ ನಿರ್ದೇಶಕ ಡಾ.ವೆಂಕಟ ನಾರಾಯಣ ಜೋಶಿ ಅವರು ಹೇಳಿದರು.
ತಾರಾನಾಥ ಹಳೆಯ ವಿದ್ಯಾರ್ಥಿಗಳ ಸಂಘ, ನಿಮಾ ಬಳ್ಳಾರಿ ಮತ್ತು ನಿಮಾ ಮಹಿಳಾ ವೇದಿಕೆ ಸಹಭಾಗಿತ್ವದಲ್ಲಿ ನಗರದ ತಾರಾನಾಥ ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದ ಮಂಥನ ಹಾಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ “ಯುರೋಪ್ ಮತ್ತು ಯುಕೆಯಲ್ಲಿ ಆಯುರ್ವೇದ” ವಿಷಯದ ಮೇಲೆ ಒಂದು ದಿನದ “ತಜ್ಞರ ತರಬೇತಿ ಕಾರ್ಯಕ್ರಮ”ದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಪಶ್ಚಿಮ ದೇಶಗಳಲ್ಲಿ ಶಿವಲಿಂಗಿ ಮತ್ತು ಪುತ್ರಂಜೀವ ಬೀಜಗಳ ಸಂರಕ್ಷಣೆ ಮತ್ತು ಮಾರಾಟ ಮಾಡಲಾಗುತ್ತಿದೆ. ದೇವದಾರುವಿನ ಸುಗಂಧ ಸಾರವನ್ನು ಪುರುಷ ಬಂಜೆತನದಲ್ಲಿ ಉತ್ತರ ಬಸ್ತಿಯ ಚಿಕಿತ್ಸೆಗಾಗಿ ಬಳಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಅಮೃತ ಸತ್ವವು ಏಡ್ಸ್ ಚಿಕಿತ್ಸೆಯಲ್ಲಿ ಸಹಾಯಕವಾಗಿದೆ. ನಿರ್ಗುಂಡಿ, ಕಡಲ ಬೆಳ್ಳುಳ್ಳಿ ಮತ್ತು ಮರಿಚಾ ಇತ್ಯಾದಿ ಔಷಧೀಯ ಸಸ್ಯಗಳು ಯೂರೋಪ್‌ನಲ್ಲಿ ಲಭ್ಯವಿವೆ ಮತ್ತು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ತಯಾರಿಸಲಾದ ಸ್ವಯಂ ಔಷಧಿಗಳು ಪರಿಣಾಮಕಾರಿಯಾಗಿವೆ ಎಂದರು.
ಲಂಡನ್ ಮತ್ತು ಯುಕೆಯಲ್ಲಿ ಆಯುರ್ವೇದದ ವ್ಯಾಪ್ತಿ ಮತ್ತು ವಿಶ್ವಮಟ್ಟದ ಆರೋಗ್ಯ ಸೇವೆಗಳ ಭವಿಷ್ಯದ ಯೋಜನೆಗಳ ಕುರಿತು ವಿವರಿಸಿದರು.
ಇದೇ ಸಂದರ್ಭದಲ್ಲಿ ಮಹಾವಿದ್ಯಾಲಯದಲ್ಲಿ ನೂತನವಾಗಿ ಅನುಸಂಧಾನ, ಹೊಸಪರಿಕಲ್ಪನೆ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸಲಾಯಿತು.
ಈ ವೇಳೆ ಆಯುಷ್ ಇಲಾಖೆಯ ಮಾಜಿ ಜಂಟಿ ನಿರ್ದೇಶಕ ಡಾ.ಎನ್.ಎ.ಮೂರ್ತಿ, ತಾರಾನಾಥ ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾದ ಡಾ.ಜಿ.ಆರ್.ವಸ್ತçದ್, ತಾರಾನಾಥ ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಮಾಧವ ದಿಗ್ಗಾವಿ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ತಿತರಿದ್ದರು.
———–