Ad image

ವಾಲ್ಮೀಕಿ ನಿಗಮ ಹಗರಣ ಮಾಜಿ ಸಚಿವ ನಾಗೇಂದ್ರ ಪತ್ನಿ ಇಡಿ ವಶಕ್ಕೆ

Vijayanagara Vani
ವಾಲ್ಮೀಕಿ ನಿಗಮ ಹಗರಣ ಮಾಜಿ ಸಚಿವ ನಾಗೇಂದ್ರ ಪತ್ನಿ ಇಡಿ ವಶಕ್ಕೆ

ಬೆಂಗಳೂರು, 17 : ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಸಂಬಂಧ ಸಚಿವ ಬಿ.ನಾಗೇಂದ್ರ ಬಂಧನದ ಬೆನ್ನಲ್ಲೇ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಅವರ ಪತ್ನಿ ಮಂಜುಳಾ ಅವರನ್ನು ವಶಕ್ಕೆ ಪಡೆದಿದ್ದಾರೆ.ಡಾಲರ್ಸ್ ಕಾಲೋನಿ ನಿವಾಸದಿಂದ ಶಾಸಕ ನಾಗೇಂದ್ರ ಪತ್ನಿ ಮಂಜುಳಾರನ್ನು ವಶಕ್ಕೆ ಪಡೆದು ಇಡಿ ಕಚೇರಿ ಕರೆ ತಂದು ವಿಚಾರಣೆ ಕೈಗೊಂಡಿದ್ದಾರೆ.ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಮಂಜುಳಾ ಅವರನ್ನು ವಿಚಾರಣೆ ಕೈಗೊಂಡು ಮಾಹಿತಿ ಕಲೆ ಹಾಕಲಿದ್ದಾರೆ.
ಮಂಜುಳಾ ಅವರ ಹೆಸರಲ್ಲಿ ಹಣದ ವಹಿವಾಟು ನಡೆದಿರುವ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ.ಅವ್ಯವಹಾರ ನಡೆದ ಸಮಯದಲ್ಲಿ ಮಂಜುಳಾ ಅವರ ಬ್ಯಾಂಕ್ ಖಾತೆಗಳಿಗೂ ಹಣ ಬಂದಿರುವ ಹಿನ್ನಲೆಯಲ್ಲಿ ಇಡಿ ಅಧಿಕಾರಿಗಳು ಇದರ ಮೂಲವನ್ನು ಪ್ರಶ್ನಿಸಲಿದ್ದಾರೆ.
ಕಳೆದ ಜುಲೈ 13ರಂದು ನಾಗೇಂದ್ರ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಬಳಿಕ ಯಲಹಂಕದಲ್ಲಿರುವ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರ ಮನೆಗೆ ಹಾಜರುಪಡಿಸಲಾಗಿತ್ತು.ಈ ವೇಳೆ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು 5 ದಿನಗಳ ಕಾಲ ಕಸ್ಟಡಿಗೆ ನೀಡಿದ್ದರು. 18ನೇ ತಾರೀಖಿನಂದು ಬೆಳಿಗ್ಗೆ 11ಕ್ಕೆ ಮತ್ತೆ ಹಾಜರುಪಡಿಸುವಂತೆ ಸೂಚನೆ ನೀಡಿದ್ದರು.
ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಎಂಬಾತ ಮೇ 26ರಂದು ಶಿವಮೊಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.ನಿಗಮದ 187 ಕೋಟಿ ರೂ.ಗಳನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಲಾಗಿದೆ, ಇದರಲ್ಲಿ 83 ಕೋಟಿ ಹಣ ದುರುಪಯೋಗವಾಗಿದೆ ಎಂದು ಅವರು ಡೆತ್‌ ನೋಟ್‌ನಲ್ಲಿ– ಬರೆದಿದ್ದರು. ಹೀಗಾಗಿ ನಿಗಮದ ಎಂಡಿ ಮತ್ತು ಲೆಕ್ಕಾಧಿಕಾರಿಯನ್ನು
ಅಮಾನತು ಮಾಡಲಾಗಿತ್ತು. ನಂತರ ಅಧಿಕಾರಿಗಳ ಬಂಧನವಾಗಿತ್ತು.
ಚಂದ್ರಶೇಖರ್ ಬರೆದಿರುವ ಡೆತ್ ನೋಟ್‌ನಲ್ಲಿ ಎಂಡಿ ಜೆ.ಜೆ ಪದ್ಮನಾಭ ಹಾಗೂ ಲೆಕ್ಕಾಧಿಕಾರಿ ಪರಶುರಾಮ್ ಹಾಗೂ ಯೂನಿಯನ್ ಬ್ಯಾಂಕ್‌ ಮ್ಯಾನೇಜರ್ ಸುಚಿಸ್ಮಿತಾ ಅವರೇ ನನ್ನ ಸಾವಿಗೆ ಕಾರಣ ಎಂದು ಬರೆದಿಟ್ಟಿದ್ದರು. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಂಡಿ ಜೆ.ಜೆ ಪದ್ಮನಾಭ ಹಾಗೂ ಲೆಕ್ಕಾಧಿಕಾರಿ ಪರಶುರಾಮ್‌ರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿತ್ತು. ವಾಲ್ಮೀಕಿ ನಿಗಮಕ್ಕೆ ಪ್ರಭಾರ ವ್ಯವಸ್ಥಾಪಕ ನಿರ್ದೇಶಕರಾಗಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ. ಕೆ. ಆರ್. ರಾಜ್ ಕುಮಾರ್ ಅವರನ್ನು ನೇಮಿಸಿತ್ತು.

Share This Article
error: Content is protected !!
";