Ad image

ಪರೀಕ್ಷಾ ಪೇ ಚರ್ಚಾ’ ವಿದ್ಯಾರ್ಥಿಮುಖಿ ಕಾರ್ಯಕ್ರಮ

Vijayanagara Vani
ಪರೀಕ್ಷಾ ಪೇ ಚರ್ಚಾ’ ವಿದ್ಯಾರ್ಥಿಮುಖಿ ಕಾರ್ಯಕ್ರಮ

 

ಬಳ್ಳಾರಿ,ಫೆ.07
‘ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್’ ಎನ್ನುವ ಮಾತಿದ್ದರೂ, ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳು ಸಾಮಾನ್ಯವಾಗಿ ಇಷ್ಟಪಡದಿರೋ ವಿಷಯವೆಂದರೆ ಪರೀಕ್ಷೆಗಳು.
ವರ್ಷವಿಡಿ ತರಗತಿಗಳನ್ನು ಅಟೆಂಡ್ ಮಾಡಿ ಶೈಕ್ಷಣಿಕ ವರ್ಷದ ಅಂತ್ಯದಲ್ಲಿ ಬರುವ ಈ ಪರೀಕ್ಷೆಗಳು ವಿದ್ಯಾರ್ಥಿಗಳಲ್ಲಿ ಒಂದು ಬಗೆಯ ಭಯ ಹಾಗೂ ಆತಂಕಗಳನ್ನು ಉಂಟು ಮಾಡಿಬಿಡುತ್ತವೆ.
ಎಷ್ಟೇ ಚೆನ್ನಾಗಿ ತಯಾರಾಗಿದ್ದರೂ ಒಂದು ಬಗೆಯ ದುಗುಡ ವಿದ್ಯಾರ್ಥಿಗಳನ್ನು ಕಾಡದೇ ಇರುವುದಿಲ್ಲ. ಅದರಲ್ಲೂ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎನಿಸಿಕೊಳ್ಳುವ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ವರ್ಷದ ಪಿ.ಯು.ಸಿ.ಯ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಬಗೆಗಿನ ನೋವು ಇನ್ನೂ ಹೆಚ್ಚು. ಸರಿಯಾದ ಮಾರ್ಗದರ್ಶನ ಹಾಗೂ ಬೆಂಬಲ ವಿದ್ಯಾರ್ಥಿಗಳಲ್ಲಿ ಪರೀಕ್ಷೆಗಳನ್ನು ಎದುರಿಸುವ ಆತ್ಮವಿಶ್ವಾಸವನ್ನು ನೀಡಿದರೆ, ಇವುಗಳ ಕೊರತೆ ಹಲವಾರು ಅಧ್ಯಯನಶೀಲ ವಿದ್ಯಾರ್ಥಿಗಳೂ ಪರೀಕ್ಷೆಗಳಲ್ಲಿ ಕಳಪೆ ಪ್ರದರ್ಶನ ನೀಡುವಂತೆ ಮಾಡುತ್ತವೆ. ಮತ್ತೊಮ್ಮೆ ಈ ವರ್ಷದ ಪರೀಕ್ಷಾ ಸಮಯ ಬಂದಿರುವುದರಿಂದ ನಮ್ಮ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವ ಕಾರ್ಯಕ್ರಮಗಳನ್ನು ಬಹಳಷ್ಟು ವಿದ್ಯಾ ಸಂಸ್ಥೆಗಳಲ್ಲಿ ಮಾಡುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳಲ್ಲಿ ಎದ್ದು ಕಾಣುತ್ತಿರುವುದು ರಾಷ್ಟçದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ನಡೆಸಿಕೊಡುತ್ತಿರುವ ‘ಪರೀಕ್ಷಾ ಪೆ ಚರ್ಚಾ’ ಎನ್ನುವ ವಿಶಿಷ್ಟ ಹಾಗೂ ವಿಭಿನ್ನ ಕಾರ್ಯಕ್ರಮ.
ಭಾರತದಂತಹ ಬೃಹತ್ ರಾಷ್ಟçದಲ್ಲಿ ದೇಶದ ಪ್ರಧಾನಮಂತ್ರಿಗಳು ವಿದ್ಯಾರ್ಥಿಗಳಿಗೋಸ್ಕರ ಒಂದು ಕಾರ್ಯಕ್ರಮ ನಡೆಸಿ, ತಾವೂ ಪಾಲ್ಗೊಂಡು, ವಿದ್ಯಾರ್ಥಿಗಳನ್ನು ಹುರಿದುಂಬಿಸಿ, ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ ಎಂದು ಹೇಳುವುದೇ ವಿಶೇಷ. ಇದಕ್ಕೆ ಸಂಬಂಧಿಸಿದ ಸ್ವತಃ ಪ್ರಧಾನಮಂತ್ರಿಗಳೇ ‘ಎಕ್ಸಾಂ ವಾರಿರ‍್ಸ್’ (ಪರೀಕ್ಷಾ ಯೋಧರು) ಎನ್ನುವ 280 ಪುಟಗಳ ಪುಸ್ತಕವನ್ನು 2021ರಲ್ಲೇ ಬರೆದಿರುವುದು ಮತ್ತೊಂದು ವಿಶೇಷ. ಈ ಪುಸ್ತಕವು ಸಂಭಾಷಣಾ ಶೈಲಿಯಲ್ಲಿದ್ದು, ಚಿತ್ರ, ಯೋಗಾಸನ ಹಾಗೂ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗೋಸ್ಕರ ಒಳಗೊಂಡಿದೆ.
ಪರೀಕ್ಷೆಗಳನ್ನು ಯಶಸ್ವಿಯಾಗಿ ಹಾಗೂ ಚಿಂತಾರಹಿತವಾಗಿ ಎದುರಿಸಲು ಅಗತ್ಯವಿರುವ ಹಲವಾರು ಸಲಹೆಗಳನ್ನು ಈ ಪುಸ್ತಕ ಒಳಗೊಂಡಿದೆ. ನೂರ ಇಪ್ಪತ್ತೆöದು ರೂಪಾಯಿಗಳಿಗೆ ಈ ಪುಸ್ತಕ, ಪುಸ್ತಕ ಭಂಡಾರಗಳಲ್ಲದೇ ಆನ್‌ಲೈನ್ ಪೋರ್ಟಲ್‌ಗಳಲ್ಲಿ ಲಭ್ಯವಿದೆ.
ಇನ್ನು ಪರೀಕ್ಷೆ ಎನ್ನುವ ಯುದ್ಧದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಭಾಗವಹಿಸುವವರಿಗೆ ನಡೆಸುತ್ತಿರುವ ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮ 2018 ರಿಂದಲೇ ಪ್ರಾರಂಭವಾಗಿದೆ ಎನ್ನುವ ವಿಷಯ ಹಲವರಿಗೆ ತಿಳಿದಿಲ್ಲದಿರಬಹುದು. ಆದರೆ, ಆಗಿನಿಂದ ಪ್ರತಿವರ್ಷ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿಯವರು ರಾಷ್ಟçದ ಬೇರೆ ಬೇರೆ ಭಾಗಗಳಲ್ಲಿರುವ ವಿದ್ಯಾರ್ಥಿ ಸಮುದಾಯ ಮಾತ್ರವಲ್ಲದೇ, ಶಿಕ್ಷಕರು, ಪೋಷಕರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರೊಂದಿಗೆ ಪರೀಕ್ಷೆಗಳು ಹಾಗೂ ಅವುಗಳನ್ನು ಧೈರ್ಯದಿಂದ ಎದುರಿಸುವ ರೀತಿಯ ಬಗ್ಗೆ ಸಂವಾದ ನಡೆಸುತ್ತಾರೆ.
ವಿದ್ಯಾರ್ಥಿಗಳೂ ಕೂಡ ಈ ಚರ್ಚೆಗಳಲ್ಲಿ ಪಾಲ್ಗೊಂಡು ತಮಗಿರುವ ಆತಂಕಗಳನ್ನು ನಿವಾರಣೆಮಾಡಿಕೊಳ್ಳುತ್ತಾರೆ. ದೇಶದ ಪ್ರಧಾನಿಗಳೇ ನಮ್ಮೊಂದಿಗಿದ್ದಾಗ ಯಾವ ಪರೀಕ್ಷೆಯಾದರೇನು? ಅದನ್ನು ನಾವು ಸಮರ್ಥವಾಗಿಯೇ ಎದುರಿಸುತ್ತೇವೆ ಎಂಬ ಮನೋಭಾವದೊಂದಿಗೆ ಅವರು ಪರೀಕ್ಷೆಗಳನ್ನು ಬರೆಯಲು ಸನ್ನದ್ಧರಾಗುತ್ತಾರೆ.
ಕೇಂದ್ರ ಶಿಕ್ಷಣ ಸಚಿವಾಲಯದ ಮಾಹಿತಿಯ ಪ್ರಕಾರ ಈ ಬಾರಿಯ ‘ಪರೀಕ್ಷಾ ಪೆ ಚರ್ಚಾ’ ಎಂಟನೇ ಸಂಚಿಕೆಯಾಗಿದೆ. ಈ ಬಾರಿಯ ವಿದ್ಯಾರ್ಥಿಗಳೊಂದಿನ ಮೊದಲ ಸಂವಾದವನ್ನು ದೂರದರ್ಶನ, ಪ್ರಧಾನಮಂತ್ರಿಗಳ ಕಚೇರಿಯ ಯೂಟ್ಯೂಬ್ ಚಾನಲ್, ಶಿಕ್ಷಣ ಸಚಿವಾಲಯ ಹಾಗೂ ಮಾಹಿತಿ ಮತ್ತು ಸಂವಹನ ಸಚಿವಾಲಯದ ಸಾಮಾಜಿಕ ಮಾಧ್ಯಮಗಳಲ್ಲಿ ನೇರ ಪ್ರಸಾರ ಮಾಡಲಾಗುವುದು.
ಇಡೀ ರಾಷ್ಟçದ ವಿದ್ಯಾರ್ಥಿಗಳು, ಶಿಕ್ಷಕ ವೃಂದ ಹಾಗೂ ಪೋಷಕರು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕೆನ್ನುವುದು ಈ ಎಲ್ಲಾ ಸಂಸ್ಥೆಗಳ ಮೂಲ ಉದ್ದೇಶ.
ಪರೀಕ್ಷೆ ಎನ್ನುವುದು ಭಯ ಅಥವಾ ದುಗುಡತೆಯನ್ನು ಉಂಟುಮಾಡದೆ, ಸಾಮಾನ್ಯವಾಗಿ ನಡೆಯುವ ಪ್ರಕ್ರಿಯೆಯಂತಾದಾಗ ಮಾತ್ರ ಅದರಲ್ಲಿ ನೇರವಾಗಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಅವರು ನಿರೀಕ್ಷಿಸುವ ಯಶಸ್ಸು ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ನಡೆಯುವ ‘ಪರೀಕ್ಷಾ ಪೆ ಚರ್ಚಾ 2025’ರಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಪಾಲ್ಗೊಂಡು ಪರೀಕ್ಷೆಗಳ ಕುರಿತಾದ ಆತಂಕಗಳನ್ನು ದೂರಮಾಡಿಕೊಳ್ಳಲಿ ಎನ್ನುವುದು ಈ ಲೇಖನದ ಉದ್ದೇಶ ಕೂಡ.
ಎಲ್ಲರಿಗೂ ಈ ನಿಟ್ಟಿನಲ್ಲಿ ಆಲ್ ದ ಬೆಸ್ಟ್ !
ಡಾ. ನವೀನ. ವಿ.
ಸಹ ಪ್ರಾಧ್ಯಾಪಕರು,
ಇಂಗ್ಲೀಷ್ ವಿಭಾಗ,
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಶಿವಮೊಗ್ಗ.
———

Share This Article
error: Content is protected !!
";