ಅದ್ವೈತ ತತ್ವದ ಪ್ರತಿಪಾದಕರಾಗಿದ್ದ ಶಂಕರಾಚಾರ್ಯರು ತಮ್ಮ ಗುರುಗಳಾದ ಗುರು ಗೋವಿಂದಪಾದರ ಆಶಯದಂತೆ ಪ್ರಸ್ತಾನತ್ರಯಗಳಾದ ಬ್ರಹ್ಮಸೂತ್ರ, ಉಪನಿಷತ್ ಮತ್ತು ಶ್ರೀಮದ್ ಭಗವದ್ಗೀತೆಗಳಿಗೆ ಭಾಷ್ಯವನ್ನು ಬರೆದರು ಎಂದು ಎಲ್ಲೆಡೆ ಓದುತ್ತೇವೆ ಮತ್ತು ಹಾಗೆಂದು ನಾನು ಕೂಡ ಬರೆದಿದ್ದೆ… ಹಾಗೆ ಬರೆದಾಗ ನನ್ನಲ್ಲಿ ಒಂದು ಜಿಜ್ಞಾಸೆ ಹುಟ್ಟಿ ಇದರ ಕುರಿತು ಹೆಚ್ಚಿನ ವಿಷಯ ತಿಳಿಯಲು ಪ್ರಯತ್ನಿಸಿದಾಗ ದೊರೆತ ಮಾಹಿತಿ ಹೀಗಿದೆ.
ಸಾಮಾನ್ಯವಾಗಿ ನಮ್ಮ ಶ್ಲೋಕಗಳು ರಚನೆಯಾಗಿದ್ದು ಸಂಸ್ಕೃತ ಭಾಷೆಯಲ್ಲಿ… ಜ್ಞಾನಿಗಳ ಭಾಷೆಯಾಗಿರುವ ಸಂಸ್ಕೃತ ಜನಸಾಮಾನ್ಯರಿಂದ ದೂರವಾಗಿದ್ದು ಶ್ಲೋಕಗಳ ಅರ್ಥಗಳನ್ನು ಅರಿಯಲು ಸಾಧ್ಯವಾಗದ ಕಾರಣ ಪ್ರತಿಯೊಂದು ಶ್ಲೋಕದ ಸಂಸ್ಕೃತ ಪದದ ಅರ್ಥವನ್ನು ಅರಿತು ವಿವರವಾಗಿ ಎರಡ್ಮೂರು ಸಾಲಿನಲ್ಲಿ ಅದರ ಸಾರವನ್ನು ಹೇಳುವುದನ್ನು ಭಾಷ್ಯ ಎಂದು ಕರೆಯುತ್ತೇವೆ.
ಅಂತೆಯೇ ಹೀಗೆ ಬರೆದ ಭಾಷ್ಯಗಳನ್ನು ಹಲವಾರು ಸಾಲುಗಳಲ್ಲಿ ವಿವಿಧ ಉದಾಹರಣೆಗಳನ್ನು ನೀಡಿ ಜನಸಾಮಾನ್ಯರಿಗೂ ಅರ್ಥವಾಗುವಂತೆ ಬರೆಯುವ ವಿಧಾನವನ್ನು ‘ವಾರ್ತಿಕೆ’ ಎಂದು ಕರೆಯುತ್ತಾರೆ.
ಉದಾಹರಣೆ ಹೀಗಿದೆ
ಕರ್ಮಣ್ಯೇವಾಧಿಕಾರಸ್ತೇ, ಮಾ ಫಲೇಷು ಕದಾಚನ |
ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಘೋ ⁇ ಯಸ್ತ್ವಕರ್ಮಣಿ || 47 ||
ಎಂಬುದು ಭಗವದ್ಗೀತೆಯ ಅತ್ಯಂತ ಜನಪ್ರಿಯ ಶ್ಲೋಕವಾಗಿದೆ.
ಕರ್ಮಾಣ್ಯ-ಇವಾಧಿಕಾರಸ್ ತೇ ಮಾ ಫಲೇಷು ಕದಾಚನ
ಮಾ ಕರ್ಮ-ಫಲ-ಹೇತುರ್ ಭೂರ್ ಮಾ ತೇ ಸಂಗೋ ‘ಸ್ತ್ವಕರ್ಮಾಣಿ
ಕರ್ಮಾಣಿ – ನಿಗದಿತ ಕರ್ತವ್ಯಗಳಲ್ಲಿ ; ಇವಾ – ಮಾತ್ರ ; ಅಧಿಕಾರಃ – ಬಲ ; ತೆ – ನಿಮ್ಮ ; ಮಾ – ಅಲ್ಲ ; ಫಲೇಷು – ಹಣ್ಣುಗಳಲ್ಲಿ ; ಕದಾಚನ – ಯಾವುದೇ ಸಮಯದಲ್ಲಿ ; ಮಾ – ಎಂದಿಗೂ ; ಕರ್ಮ-ಫಲ – ಚಟುವಟಿಕೆಗಳ ಫಲಿತಾಂಶಗಳು ; ಹೇತುಃ – ಕಾರಣ ; ಭೂಃ – ಎಂದು ; ಮಾ – ಅಲ್ಲ ; ತೆ – ನಿಮ್ಮ ; ಸಂಗಃ – ಬಾಂಧವ್ಯ ; ಅಸ್ತು – ಇರಬೇಕು ; ಅಕರ್ಮಣಿ – ನಿಷ್ಕ್ರಿಯತೆಯಲ್ಲಿ
ಕರ್ಮಾಣ್ಯ-ಇವಾಧಿಕಾರಸ್ ತೇ ಮಾ ಫಲೇಷು ಕದಾಚನ
ಮಾ ಕರ್ಮ-ಫಲ-ಹೇತುರ್ ಭೂರ್ ಮಾ ತೇ ಸಾಂಗೋ ‘ಸ್ತ್ವಕರ್ಮಣಿ
ಎಂದು ಈ ಪದಗಳನ್ನು ಬಿಡಿಸಿ ಹೇಳಲಾಗಿದ್ದು ಇದು ಈ ಶ್ಲೋಕದ ಭಾಷ್ಯವಾಗಿದೆ.
” ನಿಗದಿತ ಕ್ರಿಯೆಗಳನ್ನು ಮಾಡಲು ನಿಮಗೆ ಹಕ್ಕಿದೆ ಆದರೆ ಇದರ ಫಲಾಫಲಗಳು ನಿಮಗೆ ಸೇರಿದ್ದಲ್ಲ, ನಿಮ್ಮ ಚಟುವಟಿಕೆಗಳ ಫಲಿತಾಂಶಗಳಿಗೆ ನೀವು ಕಾರಣರಲ್ಲ ಮತ್ತು ನಿಷ್ಕ್ರಿಯತೆಗೂ ಕೂಡ” ಎಂಬುದು ಇದರ ಅರ್ಥವಾಗಿದೆ.
ಪ್ರಾಜ್ಞರು ಸಂಸ್ಕೃತದಲ್ಲಿ ವಿದ್ವತ್ತಿರುವವರು ಈ ವಿಷಯಗಳನ್ನು ಇಷ್ಟಕ್ಕೆ ಅರ್ಥಮಾಡಿಕೊಳ್ಳಬಹುದು.
ಆದರೆ ಸಂಸ್ಕೃತ ದೇವ ಭಾಷೆ ಎಂದು ಪರಿಗಣಿತವಾಗಿದ್ದು ಕೇವಲ ಕೆಲವೇ ಜನರ ಸ್ವತ್ತಾಗಿತ್ತು.. ಬ್ರಾಹ್ಮಣರು, ಪಂಡಿತರು ಮಾತ್ರ ಕಲಿಯಬಹುದಾದ ಈ ವಿಷಯಗಳನ್ನು ಜನಸಾಮಾನ್ಯರಿಗೆ ತಿಳಿಸಲು ವಾರ್ತಿಕೆಗಳು ಅವಶ್ಯಕ ವಾಗಿದ್ದವು.
ಉದಾಹರಣೆಗೆ…. ಮನೆಯ ಮುಂದೆ ಭಿಕ್ಷೆ ಬೇಡಲು ಬರುವ ವ್ಯಕ್ತಿ ಯಾರೇ ಇದ್ದರೂ ಕೊಡುವ ಸ್ಥಿತಿಯಲ್ಲಿರುವ ವ್ಯಕ್ತಿ ಖಂಡಿತವಾಗಿಯೂ ಕೊಡಬೇಕು. ದಾನ ಮಾಡುವ ವ್ಯಕ್ತಿ ದಾನ ಸ್ವೀಕರಿಸುವವರ ಜಾತಿ, ಮತ, ಕುಲ, ಲಿಂಗ ಭಾಷೆಗಳನ್ನು ಪರಿಗಣಿಸಬಾರದು, ದಾನವನ್ನು ಸ್ವೀಕರಿಸಲು ಬಂದಿರುವಾತ ಒಳ್ಳೆಯವನೋ ಕೆಟ್ಟವನೋ, ಪಾತ್ರನೋ ಅಪಾತ್ರನೋ ಎಂಬುದು ನಮಗೆ ಅನವಶ್ಯಕ ವಿಷಯ. ದಾನ ಮಾಡಬೇಕೆಂಬ ನಮ್ಮ ಕೆಲಸವನ್ನು ನಾವು ನಿಷ್ಕಾಮವಾಗಿ ನಿರ್ವಹಿಸಬೇಕು. ದಾನ ಮಾಡುವುದರಿಂದ ನಮಗೆ ಒಳ್ಳೆಯದಾಗಬಹುದು ಎಂಬ ಫಲಾಪೇಕ್ಷೆ ಬೇಡ, ದಾನ ಮಾಡುವ ಶಕ್ತಿಯನ್ನು ಕೊಟ್ಟಿರುವ ಆ ಭಗವಂತನಿಗೆ ಕೃತಜ್ಞತೆ ಅರ್ಪಿಸುವ ಕೆಲಸ ಮಾತ್ರ ನಮ್ಮದು ಎಂಬುದು ಮೇಲಿನ ಶ್ಲೋಕವನ್ನು ವಿವರವಾಗಿ ಹೇಳುವುದು ವಾರ್ತಿಕೆ.
ನಂತರ ಬರುವುದು ಅವಲೋಕನ…. ಶ್ಲೋಕದ ಭಾಷೆಯನ್ನು ಅರಿತು ವಾರ್ತಿಕೆಗಳನ್ನು ಅರ್ಥೈಸಿಕೊಂಡು ಅವುಗಳ ಕುರಿತು ಚರ್ಚೆ ಮಾಡಿ ಮತ್ತಷ್ಟು ವಿಷಯಗಳನ್ನು ಅರಿತುಕೊಳ್ಳುವುದನ್ನು ಅವಲೋಕನ ಎಂದು ಕರೆಯುತ್ತಾರೆ.
ಯಾವುದೇ ವಿಷಯವನ್ನಾಗಿ ಬಹಳಷ್ಟು ಬಾರಿ ನಾವು ಕೇವಲ ಅವಲೋಕಿಸುವುದರಲ್ಲಿ ಕಾಲವನ್ನು ಕಳೆಯುತ್ತೇವೆ. ನಿಜವಾಗಿ ಹೀಗೆ ಅವಲೋಕಿಸಿದ ವಿಷಯದ ಸಕಾರಾತ್ಮಕ ಗುಣಗಳನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಈ ಅಳವಡಿಕೆಯು ನಮ್ಮ ಅನುಭವದ ಭಾಗವಾಗಬೇಕು. ಈ ಅನುಭವದಲ್ಲಿ ನಮ್ಮ ಬದುಕು ಮಾಗಬೇಕು. ಇದನ್ನು ‘ಅನುಭವ ಸಿದ್ದಾಂತ’ ಎಂದು ಹೇಳುತ್ತಾರೆ.
ಸ್ನೇಹಿತರೆ, ಶ್ಲೋಕಕ್ಕೆ ಭಾಷ್ಯ,ಭಾಷ್ಯಕ್ಕೆ ವಾರ್ತಿಕೆ ವಾರ್ತಿಕೆಗೆ ಅವಲೋಕನ, ಅವಲೋಕನವನ್ನು ಬದುಕಿನ ಅನುಭವವಾಗಿಸಿದರೆ ಅದುವೇ
“ಅನುಭವ ಸಿದ್ಧಾಂತ”.
ಈ ಮೇಲಿನ ಎಲ್ಲ ಹಂತಗಳಲ್ಲಿ ಅನುಭವ ಸಿದ್ಧಾಂತವೇ ಪ್ರಮುಖವಾದದ್ದು. ಶ್ಲೋಕದ ಅರ್ಥವನ್ನು ವಾರ್ತಿಕೆಯ ಮೂಲಕ ಅರಿತು ಕೂಡ ಅದನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳದೆ ಹೋದರೆ ಅದೆಷ್ಟೇ ನಾವು ರಾಮಾಯಣ ಮಹಾಭಾರತದಂತಹ ಮಹಾನ್ ಗ್ರಂಥಗಳನ್ನು, ಭಗವದ್ಗೀತೆಯ ಪಠಣವನ್ನು ಮಾಡಿದರೂ ಉಪಯೋಗವಿಲ್ಲ.
ನಮ್ಮ ಬಸವಾದಿ ಶರಣರು “ಅನುಭವದಲ್ಲಿ ಅಮೃತತ್ವವಿದೆ” ಎಂದು ಹೇಳಿದ್ದಾರೆ. ಇದರ ಅರ್ಥ ನಾವು ಕಲಿತ ಒಳ್ಳೆಯ ವಿಷಯಗಳು ಕೇವಲ ಮಸ್ತಕದಲ್ಲಿರದೆ ಆಚರಣೆಗೆ ಬರಬೇಕು ಆಚರಣೆಯ ಮೂಲಕ ಅನುಭವಕ್ಕೆ ಒಳಗಾಗಿ ಆ ಅನುಭವದಿಂದ ಬದುಕಿನಲ್ಲಿ ಅನುಭಾವಿಗಳಾಗಬೇಕು.
ಅಂತೆಯೇ ವಾರ್ತಿಕೆಗಳನ್ನು ಕೇವಲ ಸಂಸ್ಕೃತ ಶ್ಲೋಕಗಳಿಗೆ ಮಾತ್ರ ಬಳಸಬೇಕಾಗಿಲ್ಲ…. ಬೇರೆ ಯಾವುದೇ ತ್ರಿಪದಿ, ಚೌಪದಿ, ಷಟ್ಪದಿ, ರಗಳೆಗಳು, ಮುಕ್ತಕಗಳು ಮತ್ತು ಸುನೀತಗಳಿಗೆ ಬಳಸಬಹುದು.
“ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ
ಕುದುರೆ ನೀನ್ ಅವನು ಪೇಳ್ದಂತೆ ಪಯಣಿಗನು
ಮದುವೆಗೂ ಮಸಣಕೋ ಹೋಗೆಂದ ಕಡೆಗೋಡು
ಪದಕುಸಿಯೆ ನೆಲವಿಹುದು ಮಂಕುತಿಮ್ಮ ”
ಬಹಳಷ್ಟು ಪ್ರಚಲಿತವಿರುವ ಡಿವಿಜಿಯವರ ಮಂಕುತಿಮ್ಮನ ಕಗ್ಗದ ಮುಕ್ತಕದ ಈ ಸಾಲುಗಳ ಅರ್ಥ ಹೀಗಿದೆ.
ನಮ್ಮ ಬದುಕು ಒಂದು ಜಟಕಾ ಬಂಡಿಯಂತೆ, ಯಾವ ರೀತಿ ಜಟಕಾ ಬಂಡಿಯನ್ನು ಅದರ ಮಾಲೀಕ ಓಡಿಸುತ್ತಾನೋ, ಹಾಗೆಯೇ ನಮ್ಮ ಬದುಕನ್ನು ವಿಧಿ ಎಂಬ ದೇವರು ನಡೆಸುತ್ತಾನೆ. ಇಲ್ಲಿ ನಾವುಗಳು ಕುದುರೆ ಎಂಬ ನಿಮಿತ್ತ ಮಾತ್ರ… ಬಂಡಿಯ ಮಾಲೀಕ ಓಡಿಸಿದಂತೆ ಓಡುವವರು. ಮದುವೆಗೋ ಮಸಣಕ್ಕು ಎಂಬುದರ ಅರ್ಥ ವಿಧಿ ಬದುಕಿನಲ್ಲಿ ಎತ್ತ ಕಡೆ ಕರೆದೊಯ್ಯುತ್ತಾನೋ ಅಂದರೆ ಬದುಕಿನ ಯಾವುದೇ ಘಳಿಗೆಗಳನ್ನು ನಮಗೆ ತಂದು ಒಡ್ದುತ್ತಾನೋ ಅದನ್ನು ನಾವು ಸ್ವೀಕರಿಸಲೇಬೇಕು. ಪದಕುಸಿಯೇ ಎಂದರೆ ಕಾಲುಗಳು ಸೋತಾಗ ಅಥವಾ ಬದುಕಿನ ಯಾತ್ರೆ ಮುಗಿದಾಗ ಭೂಮಿ ತಾಯಿಯ ಮಡಿಲಲ್ಲಿ ಮಲಗಬಹುದು ಎಂಬ ಈ ಕಗ್ಗದಲ್ಲಿ ಬದುಕಿನಲ್ಲಿ ನಮ್ಮ ಪಾತ್ರ ಏನೂ ಇಲ್ಲ ನಾವೆಲ್ಲರೂ ಆ ದೇವರ ಆಟದ ಕೀಲು ಗೊಂಬೆಗಳು. ಆತ ನಡೆಸಿದಂತೆ ನಾವು ನಡೆಯಬೇಕು. ನಮ್ಮ ಪಾತ್ರ ಮುಗಿದಾಗ ಭೂಮಿ ತಾಯಿಯ ಮಡಿಲು ಇದ್ದೇ ಇರುತ್ತದೆ ಎಂದು ಹೇಳಿದ್ದಾರೆ.
ಇದನ್ನು ನಾವು ವಾರ್ತಿಕೆ ಎಂದೂ, ಸಾರಾಂಶ, ಅರ್ಥ ವಿವರಣೆ ಎನ್ನಬಹುದು
ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್