ಕಾರಟಗಿ : ತಾಲೂಕಿನ ನಾನಾ ಗ್ರಾಮಗಳಲ್ಲಿ ಸುರಿದ ಆಲಿ ಕಲ್ಲು ಮಳೆಯಿಂದಾಗಿ ಸುಮಾರು 50 ರಿಂದ 60 ಕೋಟಿ ರೂಪಾಯಿಗಳಷ್ಟು ನಷ್ಟವಾಗಿದೆ. ಇದರಿಂದ ರೈತರು ಕಣ್ಣೀರಲ್ಲಿ ಕೈ ತೊಳೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ತಾಲೂಕು ಆಡಳಿತ ತತಕ್ಷಣ ವರದಿ ಸಲ್ಲಿಸಿ ಕಳುಹಿಸಿ ಕೊಡಬೇಕು ಜತೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಕೂಡಲೇ ರೈತರಿಗೆ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಆರ್. ಮಾಧವ ರೆಡ್ಡಿ ಒತ್ತಾಯಿಸಿದರು
ತಾಲೂಕಿನ ಚಳ್ಳೂರು, ಚಳ್ಳೂರು ಕ್ಯಾಂಪ್, ಗುಡೂರು, ಮಾರಿ ಕ್ಯಾಂಪ್,ಹುಳ್ಕಿಹಾಳ, ಉಸಗಿನ ಕ್ಯಾಂಪ್, ತೊಂಡಿಹಾಳ 28ನೇ ಕಲೆ, ತೊಂಡಿಹಾಳ ಹನುವಾಳ್, ಸಿಂಗನಾಳ, ಸೋಮನಾಳ, ಮೈಲಾಪುರ, ನಾಗನಕಲ್, ಬೇವಿನಾಳ,ಬಸವಣ್ಣ ಕ್ಯಾಂಪ್, ಗುಂಡೂರು, ಅಂಜೂರಿ ಕ್ಯಾಂಪ್ ಗಳಿಗೆ ಭೇಟಿ ನೀಡಿ ಹಾನಿಯಾಗಿರುವ ಭತ್ತ ವನ್ನು ಶುಕ್ರವಾರ ವೀಕ್ಷಣೆ ಮಾಡಿ ರೈತರೊಂದಿಗೆ ಚರ್ಚೆ ನಡೆಸಿ ಮಾತನಾಡಿದರು.
ರೈತರು ದೇಶಕ್ಕೆ ಅನ್ನ ನೀಡುವ ಅನ್ನದಾತರು ಅಂತ ನಾವೆಲ್ಲಾ ಹೇಳುತ್ತೇವೆ. ಆದರೆ ರೈತರು ಸಂಕಷ್ಟದಲ್ಲಿದ್ದಾಗ ಸರಕಾರಗಳು ಸ್ಪಂದನೆ ನೀಡಬೇಕು. ಇಲ್ಲವಾದಲ್ಲಿ ರೈತರು ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆಯಂತ ನಿರ್ಧಾರಕ್ಕೆ ಮುಂದಾಗುತ್ತಾರೆ. ಹೀಗಾಗಿ ಈ ದೇಶದಲ್ಲಿ ಏನೇ ಸಮಸ್ಯೆಯಾಗಲಿ ಆದರೆ ರೈತರ ಆತ್ಮಹತ್ಯೆಯಾಗಬಾರದು ಎಂದು ತಿಳಿಸಿದರು.
ಈ ವೇಳೆ ರೈತ ಮುಖಂಡರಾದ ರಾಮನಗೌಡ, ಹನುಮಂತ ರಡ್ಡಿ, ಸುರೇಂದ್ರ, ಓಂ ಕಾರಿ, ವಿಶ್ವಾನಾಥ, ವೆಂಕನಗೌಡ ಸೇರಿ ರೈತರು ಇದ್ದರು.