ರೈತರು ಬೀಜ ರಸಗೊಬ್ಬರ, ಕೀಟನಾಶಕ ಖರೀದಿಸುವಾಗ ಎಚ್ಚರವಿರಲಿ

Vijayanagara Vani
ರೈತರು ಬೀಜ ರಸಗೊಬ್ಬರ, ಕೀಟನಾಶಕ ಖರೀದಿಸುವಾಗ ಎಚ್ಚರವಿರಲಿ
ಬಳ್ಳಾರಿ,
ಜಿಲ್ಲೆಯ ರೈತರು ಕೃಷಿ ಪರಿಕರಗಳಾದ ಬೀಜ ರಸಗೊಬ್ಬರ ಮತ್ತು ಕೀಟನಾಶಕಗಳ ಖರೀದಿಸುವಾಗ ಎಚ್ಚರವಹಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಕೆ.ಸೋಮಸುಂದರ್ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಅಧಿಕೃತವಾಗಿ ಪರವಾನಿಗೆ ಪಡೆದ ಮಾರಾಟ ಕೇಂದ್ರಗಳಿಂದಲೇ ಖರೀದಿಸಬೇಕು. ಖರೀದಿಸಿದ ನಂತರ ಮಾರಾಟಗಾರರಿಂದ ಕಡ್ಡಾಯವಾಗಿ ರಸೀದಿ ಕೇಳಿ ಪಡೆಯಬೇಕು ಎಂದು ಹೇಳಿದ್ದಾರೆ.
ಬಿತ್ತನೆ ಬೀಜ ಖರೀದಿ ರಸೀದಿಯಲ್ಲಿ ತಳಿಹೆಸರು, ಲಾಟ್ ಸಂಖ್ಯೆ, ಮಾರಾಟಗಾರರ ಮತ್ತು ಉತ್ಪಾದಕರ ವಿಳಾಸ ಗಮನಿಸಬೇಕು. ಬಿತ್ತನೆ ಬೀಜದ ಚೀಲದಲ್ಲಿ ಸ್ವಲ್ಪ ಪ್ರಮಾಣದ ಬೀಜ ಮತ್ತು ಬಿತ್ತನೆ ಬೀಜದ ದೃಢೀಕರಣದ ಬಗ್ಗೆ ಲಗತ್ತಿಸಿದ ಟ್ಯಾಗ್ನ್ನು ಬೆಳೆ ಕಟಾವು ಆಗುವವರೆಗೆ ಸುರಕ್ಷಿತವಾಗಿ ಕಾಯ್ದಿರಿಸಿಕೊಳ್ಳಬೇಕು ಎಂದಿದ್ದಾರೆ.
ರಸಗೊಬ್ಬರದ ಚೀಲವನ್ನು ಖರೀದಿಸುವಾಗ ಚೀಲವು ಯಂತ್ರದಿಂದ ಹೊಲಿದಿರಬೇಕು ಮತ್ತು ನಮೂದಿಸಿದಂತೆ ತೂಕ ಸರಿಯಾಗಿದೆಯೇ? ಎಂಬುದರ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಸಂಶಯವಾದಲ್ಲಿ ತೂಕ ಮಾಡಿಸಿ ಖರೀದಿಸಬೇಕು. ರಸಗೊಬ್ಬರದ ಚೀಲದ ಮೇಲೆ ನಮೂದಿಸಿರುವ ಗರಿಷ್ಟ ಮಾರಾಟ ಬೆಲೆಗಿಂತ ಹೆಚ್ಚಿಗೆ ಹಣವನ್ನು ನೀಡಬಾರದು. ರಸಗೊಬ್ಬರ ಖರೀದಿ ರಸೀದಿಯಲ್ಲಿ ರಸಗೊಬ್ಬರದ ಹೆಸರು, ಬ್ರಾಂಡ್ ಹೆಸರು ಮತ್ತು ಬ್ಯಾಚ್ ಸಂಖ್ಯೆ ನಮೂದಿಸಿರಬೇಕು. ರಸಗೊಬ್ಬರವನ್ನು ಖರೀದಿಸಬೇಕಾದರೆ ರೈತರು ತಪ್ಪದೇ ಆಧಾರ್ ಸಂಖ್ಯೆಯನ್ನು ನೀಡಿ ಪಿ.ಓ.ಎಸ್ ಮಷಿನ್ ಬಿಲ್ ತಪ್ಪದೇ ಪಡೆಯಬೇಕು ಎಂದು ಅವರು ತಿಳಿಸಿದ್ದಾರೆ.
ಕೀಟನಾಶಕಗಳನ್ನು ಖರೀದಿಸುವಾಗ ಬಾಟಲಿ, ಟಿನ್, ಪಾಲಿಥೀನ್ ಪೌಚ್ ಮೇಲೆ ತಯಾರಕರ ಹೆಸರು, ತಯಾರಿಸಿದ ದಿನಾಂಕ, ಕೊನೆಗೊಳ್ಳುವ ದಿನಾಂಕ, ಬ್ಯಾಚ್ ಸಂಖ್ಯೆ ಹಾಗು ಎರಡು ತ್ರಿಕೋನಗಳ ಚಿನ್ಹೆಯನ್ನು ತಪ್ಪದೇ ಗಮನಿಸಬೇಕು. ಕೀಟನಾಶಕ ಕಾಯ್ದೆ 1968 ಮತ್ತು ಕೀಟನಾಶಕ (ತಿದ್ದುಪಡಿ) ನಿಯಮ 2015 ಪ್ರಕಾರ ಪ್ರತಿಯೊಂದು ಕೀಟನಾಶಕದ ಧಾರಕಗಳ ಮೇಲೆ ಅವುಗಳಲ್ಲಿರುವ ವಿಷದ ಪ್ರಮಾಣಕ್ಕೆ ಅನುಗುಣವಾಗಿ ನಾಲ್ಕು ತರಹದ ಕೀಟನಾಶಕಗಳೆoದು ಪರಿಗಣಿಸಲಾಗಿದೆ. ಅವುಗಳನ್ನು ಗುರುತಿಸಲು ಎರಡು ತ್ರಿಕೋನಗಳಲ್ಲಿ ಪದ ಹಾಗು ಚಿಹ್ನೆಗಳ ಮೂಲಕ ತಿಳಿಯಪಡಿಸಲಾಗುತ್ತದೆ.
ಮೊದಲನೆಯದಾಗಿ, ಮೇಲಿನ ತ್ರಿಕೋನದಲ್ಲಿ ವಿಷ ಎಂಬ ಪದದ ಜೊತೆಗೆ ಎಲಬು ಮತ್ತು ಬುರುಡೆ ಚಿಹ್ನೆ ಮತ್ತು ಕೆಳಗಿನ ತ್ರಿಕೋನದಲ್ಲಿ ಕೆಂಪು ಬಣ್ಣ, ಎರಡನೆಯದಾಗಿ ಮೇಲಿನ ತ್ರಿಕೋನದಲ್ಲಿ ವಿಷ ಎಂಬ ಪದ ಮತ್ತು ಕೆಳಗಿನ ತ್ರಿಕೋನದಲ್ಲಿ ಹಳದಿ ಬಣ್ಣ, ಮೂರನೇಯದಾಗಿ ಮೇಲಿನ ತ್ರಿಕೋನದಲ್ಲಿ ಅಪಾಯ ಎಂಬ ಪದ ಮತ್ತು ಕೆಳಗಿನ ತ್ರಿಕೋನದಲ್ಲಿ ನೀಳಿ ಬಣ್ಣ ಮತ್ತು ನಾಲ್ಕನೇಯದಾಗಿ ಮೇಲಿನ ತ್ರಿಕೋನದಲ್ಲಿ ಎಚ್ಚರಿಕೆ ಎಂಬ ಪದ ಮತ್ತು ಕೆಳಗಿನ ತ್ರಿಕೋನದಲ್ಲಿ ಹಸಿರು ಬಣ್ಣದ ಗುರುತು ಕಡ್ಡಾಯವಾಗಿ ಇರಬೇಕು. ಹಾಗಾಗಿ ರೈತರು ಅಧಿಕೃತ ಕೀಟನಾಶಕಗಳನ್ನೇ ಮಾತ್ರ ಖರೀದಿಸಬೇಕು ಮತ್ತು ವಿವಿಧ ಬೆಳೆಗಳಿಗೆ ಕೀಟಗಳ ಹತೋಟಿಗಾಗಿ ಶಿಫಾರಸ್ಸು ಮಾಡಿದ ಕೀಟನಾಶಕಗಳನ್ನು ನಿಗಧಿತ ಪ್ರಮಾಣದಲ್ಲಿ ಮಾತ್ರ ಬಳಸಬೇಕು ಎಂದಿದ್ದಾರೆ.
ರೈತರು ಎಲ್ಲಿಯಾದರೂ ನಕಲಿ ಬೀಜ, ರಸಗೊಬ್ಬರ, ಕೀಟನಾಶಕ ತಯಾರಿಕೆ ಮತ್ತು ಮಾರಾಟ ಮಾಡುವುದು ಕಂಡುಬಂದಲ್ಲಿ ಆಯಾ ರೈತ ಸಂಪರ್ಕ ಕೇಂದ್ರದ ಅಥವಾ ತಾಲ್ಲೂಕಿನ ಪರಿವೀಕ್ಷಕರಿಗೆ ದೂರವಾಣಿ ಮೂಲಕ ಇಲ್ಲವೇ ಲಿಖಿತ ದೂರು ನೀಡಿದಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ದೂರುದಾರನ ಹೆಸರು ಗೌಪ್ಯವಾಗಿ ಇಡಲಾಗುವುದು. ನಕಲಿ ಪರಿಕರಗಳ ಮಾರಾಟ ತಡೆಹಿಡಿಯಲು ರೈತರು ಕೃಷಿ ಇಲಾಖೆಗೆ ಸಹಕರಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article
error: Content is protected !!