Ad image

ರಾಯಚೂರಿನಲ್ಲಿ ಹತ್ತಿ ಬೆಳೆ ಹೆಚ್ಚಿನ ಸಾಂದ್ರತೆಯ ನಾಟಿ ಪದ್ಧತಿಯ ಕ್ಷೇತ್ರೋತ್ಸವ, ರೈತರ ಸಂವಾದ ಯಶಸ್ವಿ

Vijayanagara Vani
ರಾಯಚೂರಿನಲ್ಲಿ ಹತ್ತಿ ಬೆಳೆ ಹೆಚ್ಚಿನ ಸಾಂದ್ರತೆಯ ನಾಟಿ ಪದ್ಧತಿಯ ಕ್ಷೇತ್ರೋತ್ಸವ, ರೈತರ ಸಂವಾದ ಯಶಸ್ವಿ
ರಾಯಚೂರು ಅಕ್ಟೋಬರ್ 29 : ಹತ್ತಿ ಬೆಳೆಯಲ್ಲಿ ಹೆಚ್ಚಿನ ಸಾಂದ್ರತೆಯ ನಾಟಿ ಪದ್ಧತಿಯ ಕ್ಷೇತ್ರೋತ್ಸವ ಹಾಗೂ ರೈತರ ಸಂವಾದ ಕಾರ್ಯಕ್ರಮವು ಇತ್ತೀಚೆಗೆ ರಾಯಚೂರಿನ ಕಸಬೆಕ್ಯಾಂಪನ ಡಾ.ಶಂಕರಗೌಡ ಫಾರ್ಮ ಹೌಸ್‌ನಲ್ಲಿ ನಡೆಯಿತು.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕೃಷಿ ಇಲಾಖೆಯ ಸಹಯೋಗದಲ್ಲಿ ರಾಯಚೂರಿನ ಕೃಷಿ ತಂತ್ರಜ್ಞರ ಸಂಸ್ಥೆಯು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಕಾಯಕಶ್ರೀ ಪ್ರಶಸ್ತಿ ವಿಜೇತರು ಹಾಗೂ ಪ್ರಗತಿಪರ ರೈತರಾದ ಶರಣಪ್ಪಗೌಡ ಅವರು ಚಾಲನೆ ನೀಡಿದರು.
ಪ್ರಾಯೋಗಿಕವಾಗಿ ಮೂರು ಬಿ.ಟಿ ಹೈಬ್ರಿಡ್ ಮತ್ತು ಎರಡು ವಿವಿಧ ಜಾತಿಯ ಹತ್ತಿ ಬೆಳೆಯಲ್ಲಿ ಎಕೆರೆಗೆ 29,000 ಗಿಡಗಳ ಸಾಂದ್ರತೆಯಿ0ದ ಎಕರೆವಾರು 16 ಕ್ವಿಂಟಲ್ ಇಳುವರಿಯನ್ನು ಏಕಕಾಲಕ್ಕೆ ಹತ್ತಿ ಬಿಡಿಸಿ 120 ರಿಂದ 130 ದಿನಗಳಲ್ಲಿ ಕೊಯ್ಲು ಅಪೇಕ್ಷಿಸುವ ಬಗ್ಗೆ ಸಮಗ್ರ ಚರ್ಚಿಸಲಾಯಿತು. ಸಿಎ ಶಿವಾನಂದ ಅಮರಖೇಡ ಮತ್ತು ಶ್ರೀ ವಿಜಯ ಎನ್ ಅವರು ತಮ್ಮ ಹೊದಲ್ಲಿ ಹೆಚ್‌ಡಿಪಿಎಸ್‌ನ್ನು ಆಸಕ್ತಿಯಿಂದ ಅನುಷ್ಠಾನಗೊಳಿಸಿದ ಬಗ್ಗೆ ವಿವರಿಸಿದರು.
ಬೆಂಗಳೂರಿನ ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷರಾದ ಡಾ.ಎ.ಬಿ. ಪಾಟೀಲ ಅವರು ಮಾತನಾಡಿ, ರೈತರು ಹತ್ತಿ ಬೆಳೆಯಲ್ಲಿ ವಿನೂತನ ಪದ್ಧತಿಯಾದ ಹೆಚ್‌ಡಿಪಿಎಸ್‌ನ್ನು ಅಳವಡಿಸಿ ಬೆಳೆಯನ್ನು ಏಕಕಾಲಕ್ಕೆ ಕಟಾವು ಮಾಡಿ ಲಾಭವನ್ನು ದ್ವಿಗುಣಗೊಳಿಸಬೇಕು ಎಂದು ಸಲಹೆ ಮಾಡಿದರು.
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಹನುಮಂತಪ್ಪ ಎಮ್. ಅವರು ಮಾತನಾಡಿ, ಹತ್ತಿ ಬೆಳೆಯಲ್ಲಿ ಅಡಚಣೆಗಳನ್ನು ನಿವಾರಿಸಿಕೊಂಡು ಉತ್ತಮ ಲಾಭದಾಯಕವಾದ ಇಳುವರಿಯನ್ನು ಏಕ ಕಾಲಕ್ಕೆ ಕೊಯ್ಲುನ್ನು ಮಾಡಿ ಹಿಂಗಾರಿನಲ್ಲಿ ಎರಡನೇ ಬೆಳೆಯನ್ನು ರೈತರು ಪಡೆದುಕೊಳ್ಳಬಹುದು ಎಂದು ಸಲಹೆ ಮಾಡಿದರು.
ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಬಿ.ವಿ. ಪಾಟೀಲ ಅವರು ಮಾತನಾಡಿ, ಅಮೇರಿಕಾ, ಬ್ರೆಜಿಲ್ ಮತ್ತು ಇನ್ನೀತರ ದೇಶಗಳಲ್ಲಿ ಹೆಚ್‌ಡಿಪಿಎಸ್ ಪದ್ಧತಿ ಅಳವಡಿಸಿಕೊಂಡು ಉತ್ತಮ ಉಳುವರಿ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಡೀನ್ ಡಾ.ಸಿ.ವಿ.ಪಾಟೀಲ ಮಾತನಾಡಿ, ಹತ್ತಿ ಬೆಳೆಯು ವಾಣಿಜ್ಯ ಬೆಳೆಯಾಗಿದ್ದು, ಇದನ್ನು ಲಾಭದಾಯಕವಾಗಿ ಬೆಳೆಯಲು ಎಚ್‌ಡಿಪಿಎಸ್ ಪ್ರಯೋಗ ಅತ್ಯಗತ್ಯ ಎಂದು ಸಲಹೆ ಮಾಡಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಪ್ರಕಾಶ ಚವ್ಹಾಣ್ ಅವರು ಮಾತನಾಡಿ, ರಾಜ್ಯದಲ್ಲಿಯೇ ಅತಿ ಹೆಚ್ಚು ಹತ್ತಿ ಬೆಳೆಯುವ ಜಿಲ್ಲೆಗಳಲ್ಲಿ ರಾಯಚೂರು ಪ್ರಮುಖವಾಗಿದ್ದು, ಜಿಲ್ಲೆಯಲ್ಲಿ ಒಟ್ಟು 1.8 ಲಕ್ಷ ಹೆಕ್ಟರ್ ಹತ್ತಿ ಬೆಳೆ ಇದ್ದು, ಹೆಚ್‌ಡಿಪಿಎಸ್ ಯನ್ನು ಅಳವಡಿಸಿಕೊಂಡಲ್ಲಿ ರೈತರು ಇನ್ನೂ ಗರಿಷ್ಠ ಲಾಭವನ್ನು ಪಡೆದುಕೊಳ್ಳಲು ಸಫಲರಾಗುತ್ತಾರೆ ಮತ್ತು ಈ ಹೆಚ್‌ಡಿಪಿಎಸ್ ಉತ್ತೇಜಿಸಲು ನವೀನ ಯಂತ್ರೋಪಕರಣಗಳನ್ನು ಒದಗಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ತಿಳಿಸಿದರು. ಹೆಚ್‌ಡಿಪಿಎಸ್ ಮಾಹಿತಿಯನ್ನು ರೈತರಿಗೆ ತಲುಪಿಸುವ ಪ್ರಯತ್ನವನ್ನು ಕೈಗೊಂಡಿರುವುದಕ್ಕೆ ಕೃಷಿ ತಂತ್ರಜ್ಞರ ಸಂಸ್ಥೆ ರಾಯಚೂರು ಇವರನ್ನು ಮನಪೂರ್ವಕವಾಗಿ ಶ್ಲಾಘಿಸಿದರು.
ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷರಾದ ಆರ್.ಎ. ಪಾಟೀಲ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಹೆಚ್‌ಡಿಪಿಎಸ್ ಪ್ರಯೋಗದ ಕಾರ್ಯಕ್ರಮಕ್ಕೆ ಸಿಎ ಶಿವಾನಂದ ಅಮರಖೇಡ ಹಾಗೂ ಅವರ ಕುಟುಂಬದವರು ತಮ್ಮ ಜಮೀನು ಒದಗಿಸಿಕೊಟ್ಟಿದ್ದಕ್ಕೆ ಮತ್ತು ಈ ಕಾರ್ಯಕ್ರಮಕ್ಕೆ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ಇಲಾಖೆ ಹಾಗೂ ಕಾವೇರಿ ಸೀಡ್ಸ್ ರಾಯಚೂರು ಇವರ ಸಹಕಾರ ಸ್ಮರಣೀಯವಾಗಿದೆ. ಕೃಷಿ ತಂತ್ರಜ್ಞರ ಸಂಸ್ಥೆಯು ಸದಾಕಾಲ ರೈತರ ಹಿತಕ್ಕಾಗಿ ಹಾಗೂ ವಿವಿಧ ವಿಷಯಗಳ ಬಗ್ಗೆ ಮಾಹಿತಿ ಒದಗಿಸಲು ಬದ್ಧವಿದ್ದು ಈ ಸಂಸ್ಥೆಯ ಸದುಪಯೋಗ ಪಡೆದುಕೊಳ್ಳಲು ರೈತರಲ್ಲಿ ವಿನಂತಿಸಿದರು.
ಡಾ.ಭೀಮಣ್ಣ ಹಾಗೂ ಡಾ.ಜೆ.ಎಮ್. ನಿಡಗುಂದಿ ಅವರು ಪ್ರಾಸ್ತಾವಿಕ ಮಾತನಾಡಿ, ಈ ವಿನೂತ ಹೆಚ್‌ಡಿಪಿಎಸ್ ಪದ್ದತಿಯನ್ನು ಪರಿಚಯಿಸಿ ತಾಂತ್ರಿಕ ಮಾಹಿತಿ ನೀಡಿದರು.
ಸಮಾರಂಭದಲ್ಲಿ ಕೃಷಿ ವಿವಿಯ ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕರಾದ ಡಾ.ಅಮರೇಗೌಡ, ಕೃಷಿ ತಂತ್ರಜ್ಞರ ಸಂಸ್ಥೆಯ ಜಂಟಿ ಕಾರ್ಯದರ್ಶಿ ಸಿ.ಎಸ್.ಪಾಟೀಲ, ಸಿದ್ಧನಗೌಡ ಗಾರಲದಿನ್ನಿ ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆಯ ಇತರೆ ಕಾರ್ಯಕಾರಿ ಸಮಿತಿ ಸದಸ್ಯರು, ಜಿಲ್ಲೆಯ ವಿವಿಧ ಭಾಗದ ಹತ್ತಿ ಬೆಳೆಯ ರೈತರು ಭಾಗವಹಿಸಿದ್ದರು. ಡಾ.ಶರಣಗೌಡ ಹಿರೇಗೌಡರ್ ನಿರೂಪಿಸಿದರು.

Share This Article
error: Content is protected !!
";