ನವರಾತ್ರಿಯ 5ನೇ ದಿನ ತಾಯಿ
ಪಾರ್ವತಿ ದೇವಿಯನ್ನು ಸ್ಕಂದ ಮಾತಾ ದೇವಿಯ ರೂಪದಲ್ಲಿ ಪೂಜಿಸುತ್ತಾರೆ. ದೇವತೆಗಳ ಅಪೇಕ್ಷೆಯ ಮೇರೆಗೆ ಪಾರ್ವತಿಯ ಅಚಲ ಪ್ರೇಮಕ್ಕೊಲಿದ ಶಿವನು ಆಕೆಯನ್ನು ವರಿಸಿದನು. ಅಸುರ ಸಂಹಾರಕ್ಕಾಗಿ ದೇವಸೇನಾನಿಯಾದ ಷಣ್ಮುಖನ ಜನನಕ್ಕಾಗಿ ಮತ್ತೆ ದೇವತೆಗಳು ಶಿವನನ್ನು ಪ್ರಾರ್ಥಿಸಿದರು. ಶಿವ ಮತ್ತು ಪಾರ್ವತಿಯರ ಯೋಗ ಅಗ್ನಿ ತೇಜಸನ್ನು ಧರಿಸಲು ಎಲ್ಲರೂ ಹೆದರಿದಾಗ ಗಂಗೆಯು ಅದನ್ನು ತನ್ನಲ್ಲಿಟ್ಟು ಬೆಳೆಸಿದಳು. ನವಜಾತ ಶಿಶುವಿಗೆ ಕೃತ್ತಿಕೆಯರು ಹಾಲೂಡಿಸಿ ಬೆಳೆಸಿದರೆ ಪಾರ್ವತಿ ದೇವಿಯು ಕುಮಾರನನ್ನು ಮುದ್ದಿಸಿ ಬೆಳೆಸಿದಳು. ಮುಂದೆ ಆತನೇ ಬೆಳೆದು ತಾರಕಾಸುರನನ್ನು ಸಂಹರಿಸಿದನು. ಹೀಗೆ ತಾರಕಾಸುರನನ್ನು ಸಂಹರಿಸಿದ ಸ್ಕಂದ ಎಂದರೆ ಷಣ್ಮುಖನ ತಾಯಿ ಪಾರ್ವತಿ ದೇವಿಯನ್ನು ಸ್ಕಂದ ಮಾತೆಯ ಹೆಸರಿನಲ್ಲಿ ಎಲ್ಲರೂ ಈ ದಿನ ಪೂಜಿಸುವರು.
ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತ ಕರದ್ವಯಂ
ಶುಭರಾತ್ರಿ ಸದಾ ದೇವಿ ಸ್ಕಂದಮಾತಾ ಯಶಸ್ವಿನಿ
ಎಂಬುದು ಆಕೆಯ ಧ್ಯಾನ ಮಂತ್ರವಾಗಿದೆ.
ನಾಲ್ಕು ಕೈಗಳನ್ನು, ಮೂರು ಕಣ್ಣುಗಳನ್ನು ಹೊಂದಿರುವ ತಾಯ್ತನದ ಪ್ರತೀಕವಾಗಿರುವ ಸ್ಕಂದ ಮಾತ ದೇವಿಯು ಸಿಂಹಾರೂಢಳಾಗಿದ್ದಾಳೆ. ಎರಡು ಕರೆಗಳಲ್ಲಿ ಕಮಲದ ಹೂಗಳನ್ನು ಹಿಡಿದಿರುವ ಸ್ಕಂದಮಾತಾ ದೇವಿಯ ಒಂದು ಕೈ ಅಭಯಮುದ್ರೆಯಲ್ಲಿದ್ದು ಭಕ್ತರಿಗೆ ಧೈರ್ಯವನ್ನು ನೀಡುವಂತಿದ್ದರೆ ಮತ್ತೊಂದು ಕೈಯಲ್ಲಿ ಪುಟ್ಟ ಹಸುಗೂಸು ಕಾರ್ತಿಕೇಯನನ್ನು ಹಿಡಿದಿರುವ ಸ್ಕಂದ ಮಾತಾದೇವಿ ಮಾತೃತ್ವದ ಪ್ರತೀಕವೆನಿಸಿದ್ದಾಳೆ. ಕೆಲವೆಡೆ ಕಮಲದ ಹೂವಿನ ಮೇಲೆ ಪದ್ಮಾಸನದಲ್ಲಿ ಆಕೆ ಕುಳಿತಿರುವುದನ್ನು ಕಾಣಬಹುದು. ತುಸು ಶ್ಯಾಮಲ ವರ್ಣದವಳಾಗಿರುವ ಸ್ಕಂದಮಾತ ದೇವಿಯು ನೀಲವಣದ ಉಡುಗೆಯನ್ನು ಧರಿಸಿರುತ್ತಾಳೆ.ಭಕ್ತರಿಗೆ ಧೈರ್ಯ, ಸಿರಿ, ಸಂಪತ್ತುಗಳನ್ನು ನೀಡುವ ಅಧಿದೇವತೆಯಾಗಿದ್ದಾಳೆ. ಬೇಡಿದ ಭಕ್ತರಿಗೆ ಜ್ಞಾನ ಸಾಗರವನ್ನು ಉಣಪಡಿಸುವಷ್ಟು ಜಾಣ್ಮೆಯನ್ನು ಆಕೆ ಹೊಂದಿದ್ದು ಆಕೆಯನ್ನು ಅಗ್ನಿ ದೇವತೆ ಎಂದು ಕೂಡ ಕರೆಯುತ್ತಾರೆ. ಮೋಕ್ಷಪ್ರದಾಯಿನಿ ಕೂಡ ಆಕೆಯೇ.
ಸ್ಕಂದ ಮಾತಾ ದೇವಿಯನ್ನು ಪೂಜಿಸುವ ಭಕ್ತರು ಪ್ರಾಪಂಚಿಕ ಮೋಹವನ್ನು, ಪಂಚೇಂದ್ರಿಯಗಳ ಭೋಗವನ್ನು ತೊರೆಯಬೇಕು. ಭಕ್ತಿ ಮತ್ತು ನಂಬಿಕೆಯಿಂದ ಆಕೆಯನ್ನು ಪೂಜಿಸಿದ ಭಕ್ತರಿಗೆ ಆಕೆ ಅಭಯಪ್ರದಳಾಗಿದ್ದಾಳೆ.
ಯಾ ದೇವಿ ಸರ್ವಭೂತೇಶು ದಯಾ ರೂಪೇಣ ಸಂಸ್ಥಿತ
ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋ ನಮಃ
ಎಂಬ ಮಂತ್ರವನ್ನು ಉಚ್ಚರಿಸುತ್ತಾ ಈ ದಿನದ ಪೂಜೆಯನ್ನು ಮಾಡಬೇಕು
ಸ್ಕಂದ ಮಾತ ದೇವಿಯು ಪುತ್ರ ಷಣ್ಮುಖನನ್ನು ಕುಮಾರ ಸ್ವಾಮಿ, ಮುರುಗನ್ ಎಂಬ ಹೆಸರಿನಿಂದ ಕರೆಯುತ್ತಾರೆ. ಪಂಚಮಹಾಭೂತಗಳನ್ನು ತನ್ನ ವಶದಲ್ಲಿ ಇರಿಸಿಕೊಂಡಿರುವ ಷಣ್ಮುಖ ಓರ್ವ ನಿಜವಾದ ಯೋಗಿ ಎನಿಸಿರುವನು. ಆರೋಗ್ಯ ಮತ್ತು ಶಕ್ತಿಯ ಸಂಚಯವಾದ ಷಣ್ಮುಖನನ್ನು ಆತನ ತಾಯಿ ಪಾರ್ವತಿ ದೇವಿಯೊಂದಿಗೆ ಪೂಜಿಸುವುದಕ್ಕೆ ನವರಾತ್ರಿಯ ಐದನೇ ದಿನ ಅತ್ಯಂತ ಪ್ರಶಸ್ತವಾಗಿದೆ.
ಓಂ ಐ0 ಹ್ರೀ0 ಶ್ರೀ0 ಸ್ಕಂದಮಾತಾಯೇ ನಮಃ
ನವರಾತ್ರಿ ಹಬ್ಬದ ಐದನೇ ದಿನದ ಶುಭಾಶಯಗಳು
ವೀಣಾ ಹೇಮಂತಗೌಡ ಪಾಟೀಲ್ ಮುಂಡರಗಿ ಗದಗ್