Ad image

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆ ಕೃಷಿ ಬಲವರ್ಧನೆಗೆ ಮತ್ತು ಲಾಭದಾಯಕ ಕೃಷಿ ಪ್ರೋತ್ಸಾಹಿಸಲು ಖಾಸಗಿ ಕೃಷಿ ಕಾಲೇಜುಗಳ ಸ್ಥಾಪನೆಗೆ ಅವಕಾಶ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ

Vijayanagara Vani
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆ ಕೃಷಿ ಬಲವರ್ಧನೆಗೆ ಮತ್ತು ಲಾಭದಾಯಕ ಕೃಷಿ ಪ್ರೋತ್ಸಾಹಿಸಲು ಖಾಸಗಿ ಕೃಷಿ ಕಾಲೇಜುಗಳ ಸ್ಥಾಪನೆಗೆ ಅವಕಾಶ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ
ಧಾರವಾಡ  ಅ.10: ಕೃಷಿ ಕ್ಷೇತ್ರದಲ್ಲಿ ಸಂಶೋಧನೆ ಹಾಗೂ ಕೃಷಿ ವಿಸ್ತರಣಾ ಕಾರ್ಯಚಟುವಟಿಕೆಗಳನ್ನು ಉತ್ತೇಜಿಸಲು ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳು ನಿರಂತರವಾಗಿ ಸಂಶೋಧನಾ ಕಾರ್ಯಗಳನ್ನು ಕೈಗೊಳ್ಳುತ್ತಿವೆ. ಕೃಷಿ ವಿಶ್ವವಿದ್ಯಾಲಯಗಳಿಗೆ ಪೂರಕವಾಗಿ ಖಾಸಗಿ ಕೃಷಿ ಕಾಲೇಜುಗಳನ್ನು ಸ್ಥಾಪಿಸುವ ಮೂಲಕ ಕೃಷಿ ಶೈಕ್ಷಣಿಕ ಚಟುವಟಿಕೆಗಳನ್ನು ವಿಸ್ತರಿಸಿ, ಪ್ರೋತ್ಸಾಹಿಸಲು ರಾಜ್ಯ ಸರ್ಕಾರವು ಕ್ರಮ ವಹಿಸಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಹೇಳಿದರು.
ಅವರು ಇಂದು (ಅ.10) ಬೆಳಿಗ್ಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ವಿಶ್ವವಿದ್ಯಾಲಯದ 39 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ದೇಶದಲ್ಲಿ 70 ಕ್ಕೂ ಹೆಚ್ಚು ಕೃಷಿ ವಿಶ್ವವಿದ್ಯಾಲಯಗಳಿವೆ. ಕರ್ನಾಟಕದ ಕೃಷಿ ವಿಶ್ವವಿದ್ಯಾಲಯಗಳು ರಾಷ್ಟ್ರಕ್ಕೆ ಮಾದರಿಯಾಗುವ ಸಂಶೋಧನೆಗಳನ್ನು, ಉತ್ತಮ ಬೀಜದ ತಳಿಗಳನ್ನು ಸಂಶೋಧಿಸಿ ಕೃಷಿ ವಲಯಕ್ಕೆ ನೀಡಿವೆ. ವಿಶೇಷವಾಗಿ ಧಾರವಾಡ ಮತ್ತು ಬೆಂಗಳೂರು ಕೃಷಿ ವಿಶ್ವವಿದ್ಯಾಲಯಗಳು ಹೆಚ್ಚು ಶ್ರಮ ವಹಿಸಿವೆ ಎಂದು ಅವರು ಹೇಳಿದರು.
ದೇಶದಲ್ಲಿಯೇ ಪ್ರತಿಷ್ಠಿತ ರೈತರ ವಿಶ್ವವಿದ್ಯಾಲಯವೆಂದೇ ಪ್ರಖ್ಯಾತಿ ಹೊಂದಿರುವ ಧಾರವಾಡ ಕೃಷಿ ವಿಶ್ವವಿದ್ಯಾಲಯವು ಅಕ್ಟೋಬರ್ 1, 1986 ರಂದು ಕರ್ನಾಟಕದಲ್ಲಿ 2ನೇ ಕೃಷಿ ವಿಶ್ವವಿದ್ಯಾಲಯವಾಗಿ ಸ್ಥಾಪಿತವಾಗಿದ್ದು, ಈವರೆಗೆ 36 ವರ್ಷಗಳನ್ನು ಪೂರೈಸಿದ ಈ ಅವಿಸ್ಮರಣೀಯ ದಿನವನ್ನು ಸಂಸ್ಥಾಪನಾ ದಿನವಾಗಿ ಆಚರಿಸುತ್ತಿರುವುದು ವಿಶೇಷವಾಗಿದೆ.
ಕಳೆದ ಮೂರೂವರೆ ದಶಕಗಳ ಅವಧಿಯಲ್ಲಿ ಶೈಕ್ಷಣಿಕ, ಸಂಶೋಧನಾ ಹಾಗೂ ವಿಸ್ತರಣಾ ಕಾರ್ಯಗಳಲ್ಲಿ ಈ ವಿಶ್ವವಿದ್ಯಾಲಯದಿಂದ ಗಣನೀಯ ಪ್ರಮಾಣದಲ್ಲಿ ಪ್ರಗತಿಯನ್ನು ದಾಖಲಿಸಿದೆ.
ಭಾರತೀಯ ಕೃಷಿ ಸಂಶೋಧನಾ ಮಂಡಳಿಯು (ಐ.ಸಿ.ಎ.ಆರ್.) ಐದು ವರ್ಷಗಳ ಅಂದರೆ 2024-2029 ಅವಧಿಗಾಗಿ ಈ ವಿಶ್ವವಿದ್ಯಾಲಯಕ್ಕೆ ಎ ದರ್ಜೆಯೊಂದಿಗೆ ಮಾನ್ಯತೆ ಪಡೆದಿರುವುದನ್ನು ಅಭಿನಂದಿಸುತ್ತೇನೆ.
ಇದೇ ಪ್ರಥಮ ಬಾರಿಗೆ ಕೃಷಿ ವಿಶ್ವವಿದ್ಯಾಲಯ, ಧಾರವಾಡದಿಂದ ಖಾಸಗಿ ಕೃಷಿ ಮಹಾವಿದ್ಯಾಲಯವನ್ನು ಆರಂಭಿಸಲು ಕೆ.ಎಲ್.ಇ. ಸಂಸ್ಥೆಗೆ ಅನುಮೋದನೆ ನೀಡಿದ್ದು, ಸವದತ್ತಿ ತಾಲ್ಲೂಕಿನ ತೆನಿಕೊಳ್ಳ ಗ್ರಾಮದಲ್ಲಿ ಪದವಿ ಪ್ರಾರಂಭವಾಗಲಿದೆ.
ಪ್ರತಿ ವರ್ಷ ಜೆ.ಆರ್.ಎಫ್., ಎಸ್.ಆರ್., ಎಫ್. ಹಾಗೂ ಎ.ಆರ್.ಎಸ್. ಪರೀಕ್ಷೆಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾಗಿ ರಾಷ್ಟ್ರದಲ್ಲಿ ಅನೇಕ ಬಾರಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆಯುತ್ತಾ ಬಂದಿರುವುದರಿಂದ ಈ ವಿಶ್ವವಿದ್ಯಾಲಯದಲ್ಲಿ ಕಲಿಕೆಗೆ ಸೂಕ್ತ ಪರಿಸರ ರೂಪುಗೊಂಡಿದೆ.
ವಿಶ್ವವಿದ್ಯಾಲಯದಿಂದ ಇಲ್ಲಿಯವರೆಗೆ ಬೆಳೆ ಸುಧಾರಣೆಯಲ್ಲಿ ಒಟ್ಟು 267 ವಿವಿಧ ಬೆಳೆಗಳ ತಳಿಗಳು, 241 ಉತ್ಪಾದನ ತಂತ್ರಜ್ಞಾನಗಳು ಹಾಗೂ ಬೆಳೆ ಸಂರಕ್ಷಣೆ ವಿಭಾಗದಲ್ಲಿ ಒಟ್ಟು 331 ತಾಂತ್ರಿಕತೆಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ಒಟ್ಟಾರೆ 1139 ತಂತ್ರಜ್ಞಾನಗಳು ಅಭಿವೃದ್ಧಿಗೊಂಡಿವೆ ಎಂದು ಕೃಷಿ ಸಚಿವರು ತಿಳಿಸಿದರು.
ವಿಶ್ವವಿದ್ಯಾಲಯದಿಂದ 2006 ರಲ್ಲಿ ಬಿಡುಗಡೆಯಾಗಿರುವ ಜಗತ್ತಿನಲ್ಲಿಯೇ ಮೊಟ್ಟಮೊದಲ ಹೈಬ್ರಿಡ್ ವರಲಕ್ಷ್ಮಿ ಹಾಗೂ ಜಯಲಕ್ಷ್ಮಿ ಹತ್ತಿ ತಳಿಗಳು ಈ ಭಾಗದ ರೈತರ ಆರ್ಥಿಕ ಸ್ವಾವಲಂಬನೆಗೆ ಗಣನೀಯ ಕೊಡುಗೆ ನೀಡಿವೆ.
ಅದೇ ರೀತಿ ಈ ಭಾಗದ ಮುಖ್ಯ ಬೆಳೆಗಳಾದ ಕಡಲೆ, ಹೆಸರು, ಹಿಂಗಾರಿ ಜೋಳ, ಕುಸುಬೆ ಮುಂತಾದ ಬೆಳೆಗಳ ಅಧಿಕ ಇಳುವರಿ ನೀಡುವ ಹಾಗೂ ಸೋಯಾಬಿನ್ ಬೆಳೆಯಲ್ಲಿ ರೋಗ ನಿರೋಧಕ ತಳಿಗಳಾದ ಆSಃ-21 ಹಾಗೂ ಆSಅ-34 ತಳಿಗಳು ಲಕ್ಷಾಂತರ ರೈತರಿಗೆ ವರದಾನವಾಗಿವೆ ಎಂದರು.
ಸಾವಯವ ಕೃಷಿಯನ್ನು ಪ್ರೊತ್ಸಹಿಸಲು ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ 2006 ರಲ್ಲಿ ದೇಶದಲ್ಲಿಯೇ ಮೊಟ್ಟಮೊದಲ ಸಾವಯವ ಕೃಷಿ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಈ ಸಂಸ್ಥೆಯು ತಯಾರಿಸುವ ಜೈವಿಕ ಗೊಬ್ಬರಗಳು ಹಾಗೂ ಜೈವಿಕ ರೋಗ, ಕೀಟನಾಶಕಗಳಿಗೆ ರೈತರಿಂದ ಭಾರಿ ಬೇಡಿಕೆಯಿದ್ದು, ಸಾವಿರಾರು ರೈತರು ಅವುಗಳ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.
ವಿಶ್ವವಿದ್ಯಾಲಯದಲ್ಲಿ 2018-19 ರಲ್ಲಿ ಸ್ಥಾಪಿತವಾದ ಕೃಷಿಕ್-ನವೋದ್ಯಮ ಪೊಷಣ ಕೇಂದ್ರದ ವತಿಯಿಂದ ಈವರೆಗೆ ಒಟ್ಟು 10 ತಂಡಗಳಿಗೆ ತರಬೇತಿ ನೀಡಲಾಗಿದ್ದು, 111 ಸ್ಮಾರ್ಟ್ ಅಪ್ಗಳಿಗೆ ರೂ. 12 ಕೋಟಿ ಅನುದಾನ ಶಿಫಾರಸು ಮಾಡಲಾಗಿದ್ದು, ಈವರೆಗೆ ರೂ. 8.19 ಕೋಟಿ ವಿತರಿಸಲಾಗಿದೆ. ಇವುಗಳು ಒಟ್ಟಾರೆಯಾಗಿ ರೂ. 20 ಕೋಟಿ ಆದಾಯ ಗಳಿಸಿದ್ದು, ಕೃಷಿ ಹಾಗೂ ಸಂಬಂಧಿತ ವಲಯಗಳಲ್ಲಿ 957 ಉದ್ಯೋಗಗಳನ್ನು ಸೃಷ್ಟಿಸಿವೆಯಲ್ಲದೇ 25 ಮಹಿಳಾ ನೇತೃತ್ವದ ಸ್ಮಾರ್ಟ್ ಅಪ್ಗಳು 11 ಪೇಟೆಂಟ್ಗಳನ್ನು ಕೂಡಾ ಪಡೆದುಕೊಂಡಿವೆ ಎಂದರು.
ಆಕ್ಸಿಯೋಮ್-4 ಮಿಷನ್ ಅಡಿಯಲ್ಲಿ ಬಾಹ್ಯಾಕಾಶಕ್ಕೆ ಕೃಷಿ: ವಿಶ್ವವಿದ್ಯಾಲಯ, ಧಾರವಾಡದಿಂದ ಸಂಶೋಧನಾ ಪ್ರಯೋಗಕ್ಕಾಗಿ ಕಳುಹಿಸಿದ ಹೆಸರು ಮತ್ತು ಮೆಂತೆ ಕಾಳುಗಳ ಮೊಳಕೆ ಪರೀಕ್ಷೆ ಯಶಸ್ವಿಯಾಗಿದ್ದು, ಸಂಶೋಧನೆ ಮುಂದುವರೆದಿದೆ. ಈ ಯಶಸ್ಸಿಗಾಗಿ ನಮ್ಮ ವಿಶ್ವವಿದ್ಯಾಲಯದ ವಿಜ್ಞಾನಿ ಡಾ. ರವಿಕುಮಾರ ಹೊಸಮನಿಯವರನ್ನು ಹಾಗೂ ಕುಲಪತಿಗಳಾದ ಡಾ. ಪಿ.ಎಲ್. ಪಾಟೀಲ್ ಇವರನ್ನು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನಿಸಲಾಗಿದೆ.
ರೈತರ ಅನುಕೂಲಕ್ಕಾಗಿ ವಿಶ್ವವಿದ್ಯಾಲಯವು ಬೀಜ ಘಟಕವನ್ನು 2000 ರಲ್ಲಿ ಪ್ರಾರಂಭಿಸಲಾಗಿದ್ದು, ಡಾ. ಎಸ್. ಎ. ಪಾಟೀಲ ರವರ ಸತತ ಪ್ರಯತ್ನದ ಫಲವಾಗಿ ಬೀಜಗ್ರಾಮ ಯೋಜನೆ ದೇಶದಲ್ಲಿಯೇ ಧಾರವಾಡ ಮಾಡೆಲ್ ಬೀಜ ಘಟಕವೆಂದು ಪ್ರಖ್ಯಾತಿ ಗಳಿಸಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ವಿಶ್ವವಿದ್ಯಾಲಯವು ಸರಕಾರಿ ಸಂಸ್ಥೆಗಳಡಿಯಲ್ಲಿನ ಬೀಜ ಉತ್ಪಾದನೆಗಾಗಿ ದೇಶದಲಿಯೇ ಪ್ರಥಮ ಸ್ಥಾನದಲಿದ್ದು, 2024-25ನೇ ಸಾಲಿಗೆ ಒಟ್ಟು 6,389 ಕ್ವಿಂಟಾಲ್ ಬೀಜೋತ್ಪಾದನೆ ಮಾಡಿ, ರೈತರಿಗೆ ತಲುಪಿಸಿದ್ದಕ್ಕೆ ಬೀಜ ಘಟಕಕ್ಕೆ ಅಭಿನಂದನೆ ಸಲ್ಲಿಸಿದರು.
ವಿಶ್ವವಿದ್ಯಾಲಯದ ಕಾರ್ಯಚಟುವಟಿಕೆಗಳನ್ನು ಮೆಚ್ಚಿ ಭಾರತ ಸರ್ಕಾರವು ದೇಶದ 14 ಕೇಂದ್ರಗಳ ಪೈಕಿ ವಿಶ್ವವಿದ್ಯಾಲಯವನ್ನು ನೈಸರ್ಗಿಕ ಕೃಷಿ ತರಬೇತಿ ಕೇಂದ್ರವನ್ನಾಗಿ ಆಯ್ಕೆ ಮಾಡಿದ್ದು, ಗೋವಾ ಹಾಗೂ ಕರ್ನಾಟಕ ರಾಜ್ಯಗಳ ವಿವಿಧ ಅಧಿಕಾರಿಗಳಿಗೆ ನೈಸರ್ಗಿಕ ಕೃಷಿ ಕುರಿತು ಹಲವಾರು ತರಬೇತಿಗಳನ್ನು ನೀಡಲಾಗಿದೆ.
ಭಾರತೀಯ ಜೇನು ಮಂಡಳಿಯ ಅನುದಾನದಡಿಯಲ್ಲಿ ಜೇನುತುಪ್ಪ ವಿಶ್ಲೇಷಣೆ ಪ್ರಯೋಗಾಲಯವನ್ನು ಕೃಷಿ ಕೀಟಶಾಸ್ತ್ರ ವಿಭಾಗದಲ್ಲಿ ಸ್ಥಾಪಿಸಲಾಗಿದೆ. ಅದೇ ರೀತಿ ಕೃಷಿ ವಿಜ್ಞಾನ ಕೇಂದ್ರ, ಇಂಡಿಯಲ್ಲಿ ಲಿಂಬೆ, ಹಣ್ಣು ಸಂಸ್ಕರಣೆ, ಜೋಳ ಮತ್ತು ಇತರೆ ಸಿರಿಧಾನ್ಯಗಳಿಗಾಗಿ ಇನಕ್ಕೂಬೇಷನ್ ಕೇಂದ್ರ ನಿರ್ಮಾಣ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಧಾರವಾಡ ವಿಶ್ವವಿದ್ಯಾಲಯವು ಕೃಷಿ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಹೊಸ ತಳಿಗಳ ಅಭಿವೃದ್ಧಿ, ರೋಗ ಮುಕ್ತ ಬೆಳೆಗಳ ಉತ್ಪಾದನೆ ಮತ್ತು ಸುಧಾರಿತ ಕೃಷಿ ಪದ್ಧತಿಗಳ ಕುರಿತು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಈ ಎಲ್ಲದರ ಅಂತಿಮ ಉದ್ದೇಶ ರೈತರಿಗೆ ಲಾಭದಾಯಕ ಕೃಷಿಯನ್ನು ಖಚಿತಪಡಿಸುವುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್.ಪಾಟೀಲ ಅವರು ಮಾತನಾಡಿದರು.
ವೇದಿಕೆಯಲ್ಲಿ ಶಾಸಕರಾದ ರವಿ ಗಣಿಗ, ಮಧು ಜಿ. ಮಾದೇಗೌಡ, ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ ಪಾರ್ವತಿ ಎಸ್. ಕುರಲೇ, ಬಸವರಾಜ ಕುಂದಗೋಳಮಠ, ವೀರನಗೌಡ ಪೊಲೀಸಪಾಟೀಲ್, ರವಿಕುಮಾರ ಮಾಳಿಗೇರ, ಮಾಲತೇಶ ಜಿ. ಶ್ಯಾಗೋಟಿ ಸೇರಿದಂತೆ ಇತರ ಸದಸ್ಯರು, ಕುಲಸಚಿವೆ ಜಯಶ್ರೀ ಶಿಂತ್ರಿ ಇದ್ದರು.
ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಹಾಗೂ ಪುಸ್ತಕ ಬಿಡುಗಡೆ ಮಾಡಲಾಯಿತು. ಹಾಗೂ ಕ್ರೀಡೆ, ಸಾಂಸ್ಕøತಿಕ, ಅತ್ಯುತ್ತಮ ಸಿಬ್ಬಂದಿ ವರ್ಗ, ಸಂಶೋಧನೆ ಮತ್ತು ವಿಸ್ತರಣೆ ವಿಜ್ಞಾನಿಗಳಿಗೆ, ಯುವ ವಿಜ್ಞಾನಿ ಪ್ರಶಸ್ತಿ ಹಾಗೂ ಇತರೆ ವಿಭಾಗಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಡಾ. ಬಿ. ಡಿ. ಬಿರಾದರ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಗೂ ಡಾ. ಎಂ.ಬಿ ಮಂಜುನಾಥ ಅವರು ವಂದಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು, ಡೀನ್ರು, ಪ್ರಾಧ್ಯಾಪಕರು ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿವಿಧ ಸಂಶೋಧನಾ ಕೇಂದ್ರಗಳ, ಮಹಾವಿದ್ಯಾಲಯಗಳ, ಕ್ಯಾಂಪಸ್ಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.
*

Share This Article
error: Content is protected !!
";