ಚಿತ್ರದುರ್ಗ ತಹಶೀಲ್ದಾರ್ ಕಚೇರಿಯಲ್ಲಿ ಉಚಿತ ಕಾನೂನು ಸಲಹಾ ಕೇಂದ್ರ ಆರಂಭ

Vijayanagara Vani
ಚಿತ್ರದುರ್ಗ ತಹಶೀಲ್ದಾರ್ ಕಚೇರಿಯಲ್ಲಿ ಉಚಿತ ಕಾನೂನು ಸಲಹಾ ಕೇಂದ್ರ ಆರಂಭ
ಚಿತ್ರದುರ್ಗಆಗಸ್ಟ್.21:
ಚಿತ್ರದುರ್ಗ ತಾಲ್ಲೂಕು ತಹಶೀಲ್ದಾರ್ ಕಚೇರಿಯಲ್ಲಿ ಉಚಿತ ಕಾನೂನು ಸಲಹಾ ಕೇಂದ್ರ ಬುಧವಾರ ಆರಂಭವಾಯಿತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಚಿತ್ರದುರ್ಗ ತಾಲ್ಲೂಕಿನ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಉಚಿತ ಕಾನೂನು ಸಲಹಾ ಕೇಂದ್ರ ಪ್ರಾರಂಭ ಮಾಡಲಾಗಿದ್ದು, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ರೋಣ ವಾಸುದೇವ ಅವರು ಉದ್ಘಾಟಿಸಿದರು.
ಚಿತ್ರದುರ್ಗ ತಹಶೀಲ್ದಾರ್ ಕಚೇರಿಯಲ್ಲಿ ತೆರೆಯಲಾಗಿರುವ ಉಚಿತ ಕಾನೂನು ಸಲಹಾ ಕೇಂದ್ರದಲ್ಲಿ ಸೋಮವಾರ ಹಾಗೂ ಶುಕ್ರವಾರ ವಾರದಲ್ಲಿ ಎರಡು ದಿನಗಳ ಕಾಲ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಇಬ್ಬರು ವಕೀಲರು ಕಾರ್ಯ ನಿರ್ವಹಿಸುವರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಉಚಿತ ಕಾನೂನು ನೆರವು ಮತ್ತು ಸಲಹೆ ನೀಡಲಾಗುತ್ತದೆ. ಅರ್ಹ ವ್ಯಕ್ತಿಗಳಿಗೆ ಕಾನೂನು ಸಲಹೆಗಳನ್ನು ಉಚಿತವಾಗಿ ಕೊಡುವುದಲ್ಲದೆ ಆತನ ಪರವಾಗಿ ನ್ಯಾಯಾಲಯದಲ್ಲಿ ದಾವೆಯನ್ನು ದಾಖಲು ಮಾಡಲು ಅಥವಾ ಆತನ ವಿರುದ್ಧ ಹೂಡಿರುವ ದಾವೆಯಲ್ಲಿ ತನ್ನ ಪರವಾಗಿ ತನ್ನ ಹಕ್ಕನ್ನು ಪ್ರತಿಪಾದಿಸಲು ಅರ್ಹ ವ್ಯಕ್ತಿಗಳಿಗೆ ಕಾನೂನು ಸೇವೆಗಳ ಪ್ರಾಧಿಕಾರವು ಉಚಿತವಾಗಿ ವಕೀಲರನ್ನು ನೇಮಕ ಮಾಡುತ್ತದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು, ಕಾರ್ಖಾನೆಯ ಕಾರ್ಮಿಕರು, ಮಹಿಳೆ ಮತ್ತು ಮಕ್ಕಳು, ವಾರ್ಷಿಕ ಆದಾಯ ರೂ.3,00,000/-ಗಳಿಗಿಂತ ಕಡಿಮೆ ಇರುವ ಎಲ್ಲಾ ವರ್ಗದ ಜಾತಿಯ ಜನರು, ಮಾನಸಿಕ ಅಥವಾ ಬೇರಾವುದೇ ನ್ಯೂನತೆಯನ್ನು ಹೊಂದಿರುವವರು, ಗುಂಪು ಘರ್ಷಣೆ, ಗಲಭೆ, ಪ್ರವಾಹ, ಭೂಕಂಪ, ಕೈಗಾರಿಕಾ ವಿನಾಶ ಮುಂತಾದವುಗಳಿಗೆ ತುತ್ತಾದವರು, ದೈಹಿಕ ವ್ಯಾಪಾರ ಅಥವಾ ಜೀತಕ್ಕೊಳಗಾದವರು, ಶಿಕ್ಷಾ ಬಂಧಿಗಳು ಹಾಗೂ ವಿಚಾರಣಾಧೀನ ಬಂಧಿಗಳು, ರಕ್ಷಣಾ ಗೃಹ, ಮನೋರೋಗಿಗಳ ಆಸ್ಪತ್ರೆ ಮುಂತಾದವುಗಳಲ್ಲಿ ಅಭಿರಕ್ಷೆಯಲ್ಲಿರುವವರು, ಇದಲ್ಲದೆ ಕ್ರಿಮಿನಲ್ ಪ್ರಕರಣದಲ್ಲಿನ ಗಾಯಾಳು ಸಂತ್ರಸ್ಥರಿಗೆ ಕೂಡ ಉಚಿತ ಕಾನೂನು ಸಲಹೆ ಮತ್ತು ನೆರವು ನೀಡಲಾಗುವುದು.
ಉಚಿತ ಕಾನೂನು ನೆರವು ಅಥವಾ ಸಲಹೆ ಪಡೆಯಲು ಅರ್ಹರಾಗಿದ್ದಲ್ಲಿ ಸಮೀಪದ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ, ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಅರ್ಜಿಯನ್ನು ಸಲ್ಲಿಸಿ, ಉಚಿತ ಕಾನೂನು ನೆರವು ಅಥವಾ ಸಲಹೆ ಪಡೆಯಬಹುದು. ಈ ಅರ್ಜಿಗೆ ಯಾವುದೇ ಶುಲ್ಕ ಇರುವುದಿಲ್ಲ. ಉಚಿತ ದೂರವಾಣಿ ಸಂಖ್ಯೆ 15100 ಕ್ಕೆ ಕರೆ ಮಾಡಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ದೂರವಾಣಿ ಸಂಖ್ಯೆ 08194-222322 ಗೆ ಸಂಪರ್ಕಿಸಬಹುದಾಗಿದೆ.
ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ತಹಶೀಲ್ದಾರ್ ಡಾ.ನಾಗವೇಣಿ, ಗ್ರೇಡ್-2 ತಹಶೀಲ್ದಾರ್ ನಾಗರಾಜ್ ಸೇರಿದಂತೆ ಮತ್ತಿತರರು ಇದ್ದರು.
WhatsApp Group Join Now
Telegram Group Join Now
Share This Article
error: Content is protected !!