*ಜೂ.24 ರಿಂದ 29 ರವರೆಗೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಜಿಲ್ಲಾಧಿಕಾರಿಗಳಿಂದ ಜನಸ್ಪಂದನಾ ಆಯೋಜನೆ; ಸಾರ್ವಜನಿಕರ ಅಹವಾಲುಗಳ ಆಲಿಕೆ, ಸ್ಥಳದಲ್ಲಿ ಪರಿಹಾರಕ್ಕೆ ಜಿಲ್ಲಾಧಿಕಾರಿಗಳಿಂದ ಕ್ರಮ*

Vijayanagara Vani
*ಜೂ.24 ರಿಂದ 29 ರವರೆಗೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಜಿಲ್ಲಾಧಿಕಾರಿಗಳಿಂದ ಜನಸ್ಪಂದನಾ ಆಯೋಜನೆ; ಸಾರ್ವಜನಿಕರ ಅಹವಾಲುಗಳ ಆಲಿಕೆ, ಸ್ಥಳದಲ್ಲಿ ಪರಿಹಾರಕ್ಕೆ ಜಿಲ್ಲಾಧಿಕಾರಿಗಳಿಂದ ಕ್ರಮ*
ಧಾರವಾಡ ಜೂ.23: ಸಾರ್ವಜನಿಕರ ದೂರು, ಅಹವಾಲಗಳನ್ಬು ಆಲಿಸಿ, ಸಾಧ್ಯವಾದಷ್ಟು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಮತ್ತು ಉಳಿದವುಗಳನ್ನು ಕಡಿಮೆ ಕಾಲಮಿತಿಯಲ್ಲಿ ಪರಿಹರಿಸಿ, ಉತ್ತಮ ಆಡಳಿತ ನೀಡಲು ಮತ್ತು ಸರಕಾರದ ಕಲ್ಯಾಣ ಕಾರ್ಯಕ್ರಮಗಳನ್ನು ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ತಲುಪುವಂತೆ ತಾಲೂಕು ಆಡಳಿತಗಳನ್ನು ಇನ್ನಷ್ಟು ಕ್ರಿಯಾಶೀಲಗೊಳಿಸುವ ಜಿಲ್ಲಾಧಿಕಾರಿಗಳ ಜನಸ್ಪಂದನ ಕಾರ್ಯಕ್ರಮವನ್ನು ಸರಕಾರದ ಮಾರ್ಗದರ್ಶನದಂತೆ ಧಾರವಾಡ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಆಯೋಜಿಸಲು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ನಿರ್ಧರಿಸಿದ್ದಾರೆ.
ಅದರಂತೆ ಬರುವ ಜೂ.24 ರಿಂದ 29 ರ ವರೆಗೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಜಿಲ್ಲಾಧಿಕಾರಿಗಳ ಜನಸ್ಪಂದನ ಕಾರ್ಯಕ್ರಮ ಜರುಗಲಿದೆ.
ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, ನಾಳೆ ಜೂ.24 ರಂದು ಬೆಳಿಗ್ಗೆ 11 ಗಂಟೆಗೆ ಕುಂದಗೋಳ ಪಟ್ಟಣದ ಸವಾಯಿ ಗಂಧರ್ವ ಸಭಾಭವನದಲ್ಲಿ ಕುಂದಗೋಳ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮ ಜರುಗಲಿದೆ. ಜೂ.26 ರಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆಯುವ ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಚಿವರೊಂದಿಗೆ ಧಾರವಾಡ ತಾಲೂಕು ಸೇರಿದಂತೆ ಸ್ವೀಕೃತವಾಗುವ ಎಲ್ಲ ಅಹವಾಲುಗಳನ್ನು ಸ್ವೀಕರಿಸಿ, ಸಚಿವರ ನಿರ್ದೇಶನದಂತೆ ಪರಿಹಾರಕ್ಕೆ ಕ್ರಮವಹಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಜೂ.27 ರಂದು ನವಲಗುಂದ ಪಟ್ಟಣದಲ್ಲಿ ನವಲಗುಂದ ತಾಲೂಕು ಮಟ್ಟದ ಜನಸ್ಪಂದನ, ಜೂ.28 ರಂದು ಅಣ್ಣಿಗೇರಿ ಪಟ್ಟಣದಲ್ಲಿ ಅಣ್ಣಿಗೇರಿ ತಾಲೂಕುಮಟ್ಟದ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಜೂ. 29 ರಂದು ಕಲಘಟಗಿ ಮತ್ತು ಅಳ್ನಾವರ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮ ಹಮ್ನಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕರ ಕುಂದು-ಕೊರತೆಗಳನ್ನು ಶೀಘ್ರವಾಗಿ ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜಂಟಿಯಾಗಿ ತಾಲ್ಲೂಕು ಮಟ್ಟದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕುಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಿ, ಜನರ ಅಹವಾಲುಗಳಿಗೆ ಪರಿಹಾರ ಕಾಣುವಲ್ಲಿ ಸಹಕಾರ ನೀಡಲು ಜಿಲ್ಲಾಧಿಕಾರಿಗಳು ಈಗಾಗಲೇ ನಿರ್ದೇಶನ ನೀಡಿದ್ದಾರೆ.
*ಸಿಎಂ ಸೂಚನೆ:* ಜನರ ಮನೆ ಬಾಗಿಲಿಗೆ ಆಡಳಿತ ಯಂತ್ರ ತಲುಪಬೇಕು. ಅವರ ಅಹವಾಲುಗಳನ್ನು ಕೇಳಿ, ಸಾಧ್ಯವಾಷ್ಟು ಸ್ಥಳದಲ್ಲಿಯೇ ಅಥವಾ ಕಡಿಮೆ ಕಾಲಮಿತಿಯಲ್ಲಿ ಪರಿಹರಿಸುವ ಮೂಲಕ ಜನರಿಗೆ ಉತ್ತಮ ಆಡಳಿತ ನೀಡುವ ನಿಟ್ಟಿನಲ್ಲಿ, ಮಾನ್ಯ ಮುಖ್ಯಮಂತ್ರಿಗಳವರು ನೀಡಿರುವ ಸೂಚನೆಯಂತೆ ಮಾಡಲಾಗುತ್ತಿದೆ.
ಜನಸ್ಪಂದನಾ ಕಾರ್ಯಕ್ರಮದಲ್ಲಿ ಸ್ವೀಕೃತವಾದ ಸಾರ್ವಜನಿಕರ ಒಟ್ಟು ಮನವಿ, ಕೋರಿಕೆ, ಅಹವಾಲುಗಳು ಮತ್ತು ಅವುಗಳ ಮೇಲೆ ಕೈಗೊಂಡ ಕ್ರಮದ ಬಗ್ಗೆ ಮಾಸಾಂತ್ಯದಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿ ಪೂರ್ಣಗೊಳಿಸಿ, ಜುಲೈ 15 ರೊಳಗಾಗಿ ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ವರದಿ ನೀಡಲು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿರವರ ಕಛೇರಿಗೆ ಪ್ರತಿಯನ್ನು ನೀಡಲು ಅವರು ಸೂಚಿಸಿದ್ದಾರೆ.
ಜನಸ್ಪಂದನಾ ಕಾರ್ಯಕ್ರಮವನ್ನು ತಾಲ್ಲೂಕಿನ ತಹಶೀಲ್ದರಾರರು ಶಿಷ್ಟಾಚಾರಕ್ಕೆ ಅನುಗುಣವಾಗಿ ಅವಶ್ಯವಿರುವ ಎಲ್ಲಾ ರೂಪು ರೇಷೆಗಳನ್ನು ಸಿದ್ದಪಡಿಸಿಕೊಂಡು ಹಾಗೂ ಸಾರ್ವಜನಿಕರಿಂದ ಸ್ವೀಕೃತವಾಗುವ ಕುಂದುಕೊರತೆಗಳನ್ನು, ನಿರ್ವಹಣಾ ವ್ಯವಸ್ಥೆ (IPGRS) ತಂತ್ರಾಂಶದಲ್ಲಿ ನಮೂದು ಮಾಡಿ, ಅರ್ಜಿಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಿ, ನಿಗದಿತ ಕಾಲಾವದಿಯೊಳಗೆ ವಿಲೇವಾರಿ ಮಾಡಿ, ನಿಯಮಾನುಸಾರ ಪರಿಹಾರ ಕೈಗೊಂಡು, ಅನುಪಾಲನಾ ವರದಿಯನ್ನು ಕಛೇರಿಗೆ ಕಳುಹಿಸಲು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಜನಸ್ಪಂದನಾ ಕಾರ್ಯಕ್ರಮದಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಿ, ಸಾರ್ವಜನಿಕರ ಅಹವಾಲುಗಳನ್ನು ಪರಿಶೀಲಿಸಿ ವಿಲೇವಾರಿ ಮಾಡಲು ಮತ್ತು ಈಗಾಗಲೇ ತಮ್ಮ ಇಲಾಖೆಗೆ ಸಂಬಂದಿಸಿದಂತೆ ಸಾರ್ವಜನಿಕರಿಂದ ಅಹವಾಲು, ಕೋರಿಕೆ, ದೂರುಗಳು ಸಲ್ಲಿಕೆ ಆಗಿದ್ದರೇ ಅವುಗಳಿಗೆ ಸೂಕ್ತ ಪರಿಹಾರ ಕ್ರಮದೊಂದಿಗೆ ಸಭೆಗೆ ಆಗಮಿಸುವಂತೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article
error: Content is protected !!