Ad image

ಗೌರಿಗೆ ಗೊತ್ತೇ ಗಂಡಸರ ದುಃಖ!?

Vijayanagara Vani
ಗೌರಿಗೆ ಗೊತ್ತೇ ಗಂಡಸರ ದುಃಖ!?

ತಂದೆಯಾಗಿ, ಸೋದರನಾಗಿ, ಪತಿಯಾಗಿ, ಪ್ರೇಮಿಯಾಗಿ, ಸ್ನೇಹಿತನಾಗಿ, ಮಗನಾಗಿ ಹೀಗೆ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಜೀವನದ ಪ್ರಮುಖ ಪಾತ್ರಧಾರಿಯಾಗಿರುವ ಪುರುಷ ತನ್ನ ಜೊತೆಗಿರುವ ತಾಯಿ, ಸೋದರಿ, ಪತ್ನಿ, ಮಗಳು, ಸ್ನೇಹಿತೆ, ಪ್ರೇಮಿ ಹೀಗೆ ತನ್ನ ಜೀವನದಲ್ಲಿ ಬರುವ ಎಲ್ಲರನ್ನು ರಕ್ಷಿಸಲು ಬಯಸುವುದು ಸಹಜವಾಗಿದೆ. ಆದ್ದರಿಂದಲೇ ಹಲ ಕೆಲವು ವಿಷಯಗಳಲ್ಲಿ ಅವರು ಹೆಣ್ಣು ಮಕ್ಕಳನ್ನು ಕೆಲ ವಿಷಯಗಳನ್ನು ಮಾಡದಿರುವಂತೆ ವಿರೋಧಿಸುತ್ತಾರೆ ಕೂಡ.

ಪುರುಷರ ಈ ಮಾನಸಿಕತೆಯನ್ನು ಸಹಜವಾಗಿಯೇ ವಿರೋಧಿಸುವ ಹೆಣ್ಣು ಮಕ್ಕಳು ಪುರುಷರ ಪ್ರತಿಬಂಧಿಸುವಿಕೆಯ ಹಿಂದಿನ ಕಾರಣವನ್ನು ಅರಿಯಲು ಬಹಳಷ್ಟು ಬಾರಿ ಸೋಲುತ್ತಾರೆ. ನಾವು ಹೆಣ್ಣುಮಕ್ಕಳಾಗಿರುವುದರಿಂದಲೇ ನಮ್ಮನ್ನು ಹೀಗೆ ಕಂಟ್ರೋಲ್ ಮಾಡುತ್ತಾರೆ ಎಂಬ ಕೋಪ, ಅಸಹನೆ ಹೆಣ್ಣು ಮಕ್ಕಳನ್ನು ಕಾಡುತ್ತದೆಯೇ ಹೊರತು ಪುರುಷರ ಈ ಪ್ರತಿಬಂಧಿಸುವಿಕೆಯ ಹಿಂದೆ ಇರುವ ಪ್ರೀತಿ, ಅಕ್ಕರೆ ಮತ್ತು ಕಾಳಜಿಗಳನ್ನು ಗುರುತಿಸುವಲ್ಲಿ ಎಡವುತ್ತಾರೆ.

ಮಹಿಳಾಪರ ಚಿಂತನೆ ಮತ್ತು ಜಾಗೃತಿಗಳ ಕುರಿತು ಯೋಚಿಸುವ ಮಹಿಳೆಯರು ಕೂಡ ಈ ಮಾತಿಗೆ ತಮ್ಮ ಸಹಮತವನ್ನು ವ್ಯಕ್ತಪಡಿಸುತ್ತಾರೆ, ಕಾರಣ ಅತ್ಯಂತ ಸರಳ ಮತ್ತು ಸ್ಪಷ್ಟವಾಗಿದ್ದು ಪುರುಷನಾಗಿರುವುದು ಅಷ್ಟೊಂದು ಸುಲಭವಲ್ಲ.
ಚಿಕ್ಕಂದಿನಲ್ಲಿ ಅತ್ಯಂತ ಪ್ರೀತಿ ಅಕ್ಕರೆಗಳಲ್ಲಿ ಬೆಳೆಯುವ ಪುರುಷನಿಂದ ಈ ಸಮಾಜ ಬಹಳಷ್ಟನ್ನು ನಿರೀಕ್ಷಿಸುತ್ತದೆ.ಚೆನ್ನಾಗಿ ಓದಿ ಒಳ್ಳೆಯ ಅಂಕಗಳನ್ನು ಗಳಿಸಲೇಬೇಕು, ಬದುಕಿನ ಉತ್ತಮ ನಿರ್ವಹಣೆಗಾಗಿ ನೌಕರಿಯನ್ನು ಹಿಡಿಯಲೇಬೇಕು. ಅಕಸ್ಮಾತ್ ಉದ್ಯಮ ಇಲ್ಲವೇ ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ಪಾಲಕರು ಕಾರ್ಯನಿರ್ವಹಿಸುತ್ತಿದ್ದರೆ ಹದಿಹರೆಯಕ್ಕೆ ಬರುತ್ತಿದ್ದಂತೆ ಹೈಸ್ಕೂಲಿನಲ್ಲಿದ್ದಾಗ ರಜಾ ದಿನಗಳಲ್ಲಿ, ಕಾಲೇಜು ಕಲಿಯುವಾಗ ಕಾಲೇಜು ಅವಧಿ ಮುಗಿದ ಮೇಲೆ ಸ್ನೇಹಿತರ ಜೊತೆ ಸಿನಿಮಾ, ಸುತ್ತಾಟ ಎಂದು ಓಡಾಡುವುದನ್ನು ಬಿಟ್ಟು ಪಾಲಕರ ವ್ಯಾಪಾರ ವ್ಯವಹಾರಗಳಲ್ಲಿ, ಹೊಲಗದ್ದೆಗಳಲ್ಲಿ, ಒಕ್ಕಲುತನದ ಇತರ ಕೆಲಸಗಳಲ್ಲಿ ತಮ್ಮನ್ನು ತಾವು ಬಲವಂತವಾಗಿ ತೊಡಗಿಸಿಕೊಳ್ಳುತ್ತಾರೆ. ಡಿಗ್ರಿ ಮುಗಿದ ಮೇಲಂತೂ ಮತ್ತೆ ಯಾಕೆ ನೌಕರಿ ಹುಡುಕುವುದು ನಮ್ಮದೇ ಕೌಟುಂಬಿಕ ಉದ್ಯೋಗ, ವ್ಯವಹಾರವನ್ನು ಮುಂದುವರಿಸಿಕೊಂಡು ಹೋಗು ಎಂಬ ಪಾಲಕರ ಒತ್ತಾಯಕ್ಕೆ ಮಣಿದು ತಮ್ಮ ಕನಸುಗಳಿಗೆ ತಿಲಾಂಜಲಿ ನೀಡುತ್ತಾರೆ.

ಮನೆಯಲ್ಲಿ ಅಕಸ್ಮಾತ್ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರೆ ರಜಾ ದಿನಗಳಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿ ತಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ಹಣವನ್ನು ಹೊಂದಿಸುತ್ತಾರೆ. ಮನೆಯಲ್ಲಿ ಹಿರಿಯ ಮಗನಾಗಿದ್ದರಂತೂ ವಿದ್ಯಾಭ್ಯಾಸಕ್ಕೆ ಅರ್ಧದಲ್ಲಿಯೇ ಕೈ ಮುಗಿದು ತಂದೆ ತಾಯಿಯ ದುಡಿತಕ್ಕೆ ತಾವು ಕೂಡ ಕೈ ಜೋಡಿಸುತ್ತಾರೆ.

ಮತ್ತೆ ಕೆಲಬಾರಿ ಓದು ಮುಗಿಸಿ ನೌಕರಿಗಾಗಿ ಅಲ್ಲಲ್ಲಿ ಅರ್ಜಿ ಹಾಕಿ ಕಾಯುತ್ತಾ ಕುಳಿತಾಗ ಬೇರೆಯವರನ್ನು ಬಿಡಿ, ಸ್ವತಹ ತಮ್ಮ ಮನೆಯವರ ದೃಷ್ಟಿಯಲ್ಲಿ ಕೂಡ ದಂಡಪಿಂಡಗಳಂತೆ ತೋರುತ್ತಾರೆ. ಅಂತಹ ಸಮಯದಲ್ಲಿ ಅವರು ಹೆಚ್ಚಿನದೇನನ್ನಾದರೂ ಅಪೇಕ್ಷಿಸಿದರೆ ‘ದುಡಿಯಂಗಿಲ್ಲ ದುಃಖ ಪಡಂಗಿಲ್ಲ’ ಎಂಬ ಮೂದಲಿಕೆ ಖಂಡಿತಾ. ಒಟ್ಟಿನಲ್ಲಿ “ಉದ್ಯೋಗಂ ಪುರುಷ ಲಕ್ಷಣಂ” ಎಂಬ ಮಾತಿನಂತೆ ಆತ ಯಾವುದಾದರೊಂದು ವೃತ್ತಿಯಲ್ಲಿ ತೊಡಗಿಸಿಕೊಳ್ಳಲೇಬೇಕು.

ಕೆಲಸ ಬೇಗನೆ ದೊರೆಯದೆ ಹೋದಾಗ, ತನ್ನ ಕೆಲಸದಲ್ಲಿ ಹೆಚ್ಚಿನ ಪ್ರಗತಿಯನ್ನು ಆತ ಸಾಧಿಸದೆ ಇದ್ದಾಗ ಆತನನ್ನು ಹಂಗಿಸುವವರಿಗೇನು ಕಮ್ಮಿಯಿಲ್ಲ. ಆತನಿಗೂ ಮನಸ್ಸಿದ್ದು ಆತನೂ ತೊಂದರೆಗಳನ್ನು ಅನುಭವಿಸುತ್ತಾನೆ, ಆತನಿಗೂ ನೋವಾಗುತ್ತದೆ. ಆತನ ಕಣ್ಣುಗಳಲ್ಲಿಯೂ ನೀರು ತುಂಬುತ್ತದೆ,ಆದರೆ ಈ ಸಮಾಜ ಕಲಿಸಿರುವ ಗಂಡಸು ಅಳಬಾರದು, ಹೆಣ್ಣು ಹುಡುಗಿಯಂತೆ ಅಳುವ ‘ಹೆಣ್ಣಪ್ಪಿ’ ಎಂಬ ಹೀಯಾಳಿಕೆಯ ಪಾಠ ಆತನ ಕಣ್ಣೀರನ್ನು ಅಲ್ಲಿಯೇ ಇಂಗಿಸುವ ಮೂಲಕ ಆತನನ್ನು ಸಂವೇದನಾರಹಿತನನ್ನಾಗಿ ಮಾಡುತ್ತದೆ . ‘ಅಳುವ ಗಂಡಸನ್ನು ನಂಬಬಾರದು’ ಎಂಬ ಮಾತು ಆತನ ಕಣ್ಣೀರನ್ನು ಉಡಾಫೆ, ಗಂಭೀರ ಮತ್ತು ಕಠೋರತೆಯ ಮುಖವಾಡಗಳ ಹಿಂದೆ ಮುಚ್ಚಿಡುತ್ತದೆ. ಮನಃಸ್ಪೂರ್ತಿಯಾಗಿ ನಗಲು, ನೋವಾದಾಗ ಅಳಲು ಸಾಧ್ಯವಾಗದ ಪರಿಸ್ಥಿತಿಯನ್ನು ಹೊಂದಿರುವ ಪುರುಷ ‘ಕಲ್ಲು ಬಂಡೆ’ ಎಂದು ಕರೆಸಿಕೊಂಡು ಅದರಲ್ಲಿಯೇ ಸಮಾಧಾನದ ನಿಟ್ಟುಸಿರನ್ನು ಬಿಡುತ್ತಾನೆ

ತಾಯಿ, ಸೋದರಿ, ಸ್ನೇಹಿತೆ, ಪ್ರೇಮಿ, ಹೆಂಡತಿ, ಮಗಳು ಹೀಗೆ ಎಲ್ಲರ ಸಂತೋಷಕ್ಕೆ ಕಾರಣವಾಗುವ ಗಂಡಸು ವೈಯಕ್ತಿಕ ಆಸೆ, ಆಕಾಂಕ್ಷೆಗಳನ್ನು ಹೊಂದುವುದೇ ಇಲ್ಲ.ಮನೆಯ ಹೆಣ್ಣು ಮಕ್ಕಳಿಗೆ ರೇಷ್ಮೆ ಸೀರೆ, ಹೊಸ ಬಟ್ಟೆಗಳನ್ನು ಕೊಡಿಸುವ ಗಂಡಸು ವರ್ಷಕ್ಕೆ ಒಂದು ಜೊತೆ ಬಟ್ಟೆ ತೆಗೆದುಕೊಂಡರೆ ಅದೇ ಹೆಚ್ಚು. ತೂತಾದ ಬನಿಯನ್ ಗಳನ್ನು ಶರ್ಟ್ ಮರೆಮಾಚುತ್ತದೆ. ಮಕ್ಕಳಿಗಾಗಿ ಶಾಲೆ ಕಾಲೇಜುಗಳ ಓದಿಗಾಗಿ ಹಾಸ್ಟೆಲ್ ಗಾಗಿ ಲಕ್ಷ ಲಕ್ಷ ಫೀ ಕಟ್ಟುವ ತಂದೆ ಒಡೆದ ಕನ್ನಡಕವನ್ನು ರಿಪೇರಿ ಮಾಡಿಸಲು ಹರಿದ ಚಪ್ಪಲಿಯನ್ನು ಮೆಟ್ಟಿ ಹಳೆಯ ಬೈಕಿನಲ್ಲಿ ನಿಸ್ಸಂಕೋಚವಾಗಿ ಓಡಾಡುತ್ತಾನೆ.

ತನ್ನ ಬದುಕಿನದ್ದಕ್ಕೂ ಮನೆ, ಮಕ್ಕಳು, ಸಂಸಾರ ಎಂದು ದುಡಿದ ಪತ್ನಿಯ ಅನಾರೋಗ್ಯಕ್ಕೆ ಆತನ ಪಿ.ಎಫ್. ಹಣವನ್ನು ಮುರಿಯಲು ಆತ ಹಿಂಜರಿಯುವುದಿಲ್ಲ ಆದರೆ ಅನಿವಾರ್ಯವಲ್ಲದ ಹೊರತು ತನ್ನ ಮೊಣಕಾಲ ನೋವಿಗೆ ವೈದ್ಯರು ಆಪರೇಷನ್ ಮಾಡಿಸಲು ಸಲಹೆ ನೀಡಿದರೂ “ಅಯ್ಯೋ! ವೈದ್ಯರಿಗೇನು ಹೇಳೇ ಹೇಳ್ತಾರೆ” ಎಂದು ತಳ್ಳಿ ಹಾಕುವ ಆತ ತನ್ನ ನೋವನ್ನು ಯಾರೊಂದಿಗೂ ಹಂಚಿಕೊಳ್ಳಲು ಬಯಸುವುದಿಲ್ಲ.

ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗಸ್ಥರಾದರೆ ಕುಟುಂಬಕ್ಕೆ ಕೀರ್ತಿ ತಂದರೆಂದು ಇಡಿಯ ಊರಿಗೆ ಹೇಳಿ ಬರುವ ಅಪ್ಪ ಮಕ್ಕಳ ಮುಂದೆ ಮಾತ್ರ ಗಂಭೀರತೆಯ ಮುಖವಾಡ ಹಾಕುತ್ತಾನೆ.

ಒಂದು ಹಂತದ ವಿದ್ಯಾಭ್ಯಾಸ ಕೊಡಿಸಿ, ಪೈಸೆ ಪೈಸೆ ಹಣ ಜೋಡಿಸಿ ಹೆಣ್ಣು ಮಕ್ಕಳ ಮದುವೆ ಮಾಡುವ ಅಪ್ಪ ಆಕೆಯನ್ನು ಗಂಡನ ಮನೆಗೆ ಕಳಿಸಿಕೊಡುವಾಗ ಮಾತ್ರ ಎದೆಯ ಮೇಲೆ ಭಾರವಾದ ಕಲ್ಲು ಹೊತ್ತಂತೆ
ಭಾಸವಾಗುತ್ತಾನೆ… ಬಹುಶಃ ಆಗಲೇ ಆತನ ಕಣ್ಣಿಂದ ಮೊದಲ ಬಾರಿ ನಿಸ್ಸಂಕೋಚವಾಗಿ ನೀರು ಹರಿಯುತ್ತದೆ.

ಗಂಡು ಮಕ್ಕಳೊಂದಿಗೆ ತುಸು ಗಾಂಭೀರ್ಯದ ಬಿಗುಮಾನ ತೋರುವ ತಂದೆ ಹೆಣ್ಣು ಮಕ್ಕಳನ್ನು ಕಣ್ಣ ಗೊಂಬೆಯಂತೆ ಪ್ರೀತಿಸಿ ಕಾಪಾಡುತ್ತಾನೆ…. ಪಾಪದ ಗಂಡು ಮಕ್ಕಳು ತನ್ನ ಸಹೋದರಿಗೆ ದೊರೆಯುವ ಮಾನ್ಯತೆಯನ್ನು ಕಂಡು ಕರುಬುವುದನ್ನು ಬಿಟ್ಟು ಮತ್ತೇನು ಮಾಡಲು ಸಾಧ್ಯವಿಲ್ಲ… ಆದರೆ ಅಮ್ಮ ಹಾಗಲ್ಲ ಎಂಬುದೊಂದೇ ಆತನಿಗೆ ಸಮಾಧಾನದ ಸಂಗತಿ.

ತುಸು ವಯಸ್ಸಿಗೆ ಬರುತ್ತಿದ್ದಂತೆ ಅಮ್ಮನನ್ನು ಕಾಡಿ ಬೇಡಿ ಹಣ ವಸೂಲು ಮಾಡುವ ಮಕ್ಕಳ ಬೇಡಿಕೆಗಳನ್ನು ತಾಯಿ ಹುಸಿಮುನಿಸು ತೋರುತ್ತಲೇ
ಈಡೇರಿಸುತ್ತಾಳೆ. ಅಪ್ಪನ ಕೆಂಗಣ್ಣಿಗೆ ಗುರಿಯಾಗದಂತೆ ಮಗನನ್ನು ಕಾಪಾಡುತ್ತಾಳೆ. ಮಗನ ಪಾಲಿಗೆ ಅಮ್ಮನ ಪ್ರೀತಿಯ ಬ್ಯಾಂಕ್ ನ ಖಾತೆಯಲ್ಲಿ ಜಮೆಯಾಗಿರುವ ಪ್ರೀತಿ, ವಾತ್ಸಲ್ಯ, ಅಕ್ಕರೆ ಮತ್ತು ಹಣ ಎಂದೂ ಖಾಲಿಯಾಗುವುದಿಲ್ಲ. ತಾಯಿಯ ವಾತ್ಸಲ್ಯದಲ್ಲಿ ಬೆಳೆದ ಗಂಡು ಮಗ ಉದ್ಯೋಗ ದೊರೆತ ಕೂಡಲೇ ತನ್ನ ಮೊದಲ ಸಂಬಳದಲ್ಲಿ ತಾಯಿಗೆ ಮೊದಲ ಉಡುಗೊರೆ ತಂದು ಕೊಡುತ್ತಾನೆ. ಒಡಹುಟ್ಟಿದವರಿಗೂ, ತಂದೆಗೂ ಕೂಡ ತರುವ ಆತನಿಗೆ ಮನೆಯ ಜವಾಬ್ದಾರಿಯ ಅರಿವು ಆರಂಭವಾಗುವುದು ಈಗಲೇ.

ತಿಂಗಳ ಮೊದಲ 15 ದಿನಗಳಲ್ಲಿಯೇ ಐದಂಕಿಯ ತನ್ನ ಸಂಬಳ ಕರಗಿ ಹೋದಾಗ,ಅತ್ಯಂತ ಕಡಿಮೆ ಸಂಬಳದಲ್ಲಿ ಇಡೀ ಮನೆಯ ಎಲ್ಲ ಸದಸ್ಯರ ಬೇಕು ಬೇಡಗಳು,ವಿದ್ಯಾಭ್ಯಾಸದ ಖರ್ಚು,ಆರೋಗ್ಯ, ಮನೆಯ ಖರ್ಚು ಹೀಗೆ ಎಲ್ಲವನ್ನು ನಿಭಾಯಿಸಿದ ತಂದೆಯ ಕುರಿತು ಗೌರವ ಪೂರ್ವಕ ಮೆಚ್ಚುಗೆ ಮೂಡುತ್ತದೆ. ಅವರ ದರ್ಪದ ಹಿಂದಿನ ಕಾಳಜಿ, ಗಾಂಭೀರ್ಯದ ಹಿಂದಿನ ಅಕ್ಕರೆಯ ಅರಿವಾಗುತ್ತದೆ.
ಸಹೋದರಿಯರ ಮದುವೆಗೆ ತಾನು ಕೂಡ ತಂದೆಯ ಜವಾಬ್ದಾರಿಗೆ ಹೆಗಲು ಕೊಡುವುದಲ್ಲದೇ ತನಗಿಂತ ಚಿಕ್ಕ ಸೋದರ ಸೋದರಿಯರಿಗೆ ಅವರು ಬಯಸಿದ ಕೋರ್ಸುಗಳನ್ನು ಓದಲು ತಂದೆಯ ಬಳಿ ಶಿಫಾರಸು ಮಾಡುವಷ್ಟು ಆತ್ಮಸ್ಥೈರ್ಯವನ್ನು ಹೊಂದುತ್ತಾನೆ ಮಗರಾಯ.

ವಯಸ್ಸಿಗೆ ಬಂದ ಮಗನಿಗೆ ತಂದೆ ತಾಯಿ ಮೊದಲ ಬಾರಿಗೆ ಆತ ಯಾರನ್ನಾದರೂ ಪ್ರೀತಿಸಿದ್ದಾನೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಂಡು ಸೂಕ್ತವಾದ ಕನ್ಯಾನ್ವೇಷಣೆಗೆ ತೊಡಗುತ್ತಾರೆ.
ಹರೆಯಕ್ಕೆ ತಕ್ಕಂತಹ ಬಣ್ಣ ಬಣ್ಣದ ಕನಸುಗಳನ್ನು ಹೊಂದಿರುವ ಯುವಕ ಕೂಡ ತನ್ನ ವಿದ್ಯಾರ್ಹತೆಗೆ ತಕ್ಕಂತೆ ಒಳ್ಳೆಯ ಕುಟುಂಬದ ಹೆಣ್ಣನ್ನು ಮದುವೆಯಾಗಲು ಆಶಿಸುತ್ತಾನೆ.

ಇಲ್ಲಿಂದ ಶುರುವಾಗುತ್ತದೆ ನೋಡಿ ಆತನ ಎರಡು ದೋಣಿಯ ಪಯಣ. ಮನೆಗೆ ಬರುವ ಸೊಸೆ ಮನೆಯ ಎಲ್ಲ ಸದಸ್ಯರೊಂದಿಗೆ ಹೊಂದಾಣಿಕೆ ಮಾಡಿಕೊಂಡು, ಮನೆಯ ಎಲ್ಲಾ ಸದಸ್ಯರು ಆಕೆಯನ್ನು ತಮ್ಮಲ್ಲಿ ಒಬ್ಬಳು ಎಂದು ಭಾವಿಸಿ ನಡೆಸಿಕೊಂಡರೆ ಅಷ್ಟೇನು ಸಮಸ್ಯೆಯಾಗುವುದಿಲ್ಲ ಬಿಡಿ,ಆದರೆ ವಿಭಿನ್ನ ಕೌಟುಂಬಿಕ ಹಿನ್ನೆಲೆಯಲ್ಲಿ ಬೆಳೆದು ಬಂದ ಪತ್ನಿ, ಪತಿ ಕೇವಲ ತನ್ನವನಾಗಿರಬೇಕು ಮತ್ತು ತಮ್ಮಿಬ್ಬರ ಮಧ್ಯದಲ್ಲಿ ಬೇರಾರೂ ಇರಬಾರದು ಎಂಬ ಭಾವವನ್ನು ಹೊಂದಿದಾಗ ಮನೆಯಲ್ಲಿ ಮನಸ್ತಾಪಗಳು ಪ್ರಾರಂಭವಾಗಿ ಹೆಂಡತಿ ಮತ್ತು ಕುಟುಂಬದ ನಡುವೆ ಒದ್ದಾಡುವ ಗಂಡಸಿನ ತಲೆ ಕೆಟ್ಟು ಹೋಗುವುದಂತೂ ನಿಶ್ಚಿತ. ಕೊನೆಗೆ ಪಾಲಕರೇ ಅವರಿಬ್ಬರು ದಂಪತಿಗಳಾದರೂ ಸುಖವಾಗಿರಲಿ ಎಂದು ಮಗನಿಗೆ ಬೇರೆ ಮನೆ ಮಾಡಿಕೊಂಡು ಹೋಗಲು ತಿಳಿಸುತ್ತಾರೆ.

ಗೂಡಿನಿಂದ ಹಾರಿ ಹೊರಬಂದ ಪಕ್ಷಿಗಳಂತೆ ಪತಿ-ಪತ್ನಿಯರಿಬ್ಬರು ತಮ್ಮದೇ ಆದ ಮನೆಯಲ್ಲಿ
ವಾಸಿಸುತ್ತಾ ಮಕ್ಕಳನ್ನು ಪಡೆದು ಸಂಸಾರದ ಹೊಣೆ ಹೊರುತ್ತಾರೆ.ಆಗಾಗ ತನ್ನ ತಂದೆಯ ಮನೆಗೆ ಹೋಗಿ ಅವರ ಸುಖ ದುಃಖಗಳನ್ನು ವಿಚಾರಿಸುವ, ಹಬ್ಬ ಹರಿದಿನಗಳಲ್ಲಿ, ಶುಭ ಸಮಾರಂಭಗಳಲ್ಲಿ ಮಾತ್ರ ಬಂಧುವಿನಂತೆ ತನ್ನ ಕುಟುಂಬದೊಂದಿಗೆ ಭೇಟಿ ಕೊಡುವ ಮಗ ಮಾನಸಿಕ ಅಭದ್ರತೆಯನ್ನು, ತನ್ನ ಕುಟುಂಬಕ್ಕಾಗಿ ಏನೂ ಮಾಡಲಾಗದ ಮುಜುಗರ ಮತ್ತು ಅಸಹಾಯಕತೆಗಳಲ್ಲಿ ತೊಳಲಾಡುತ್ತಾನೆ. ಮಾಡಲಾದರೂ ಹೇಗೆ ಸಾಧ್ಯ? ಏರುತ್ತಿರುವ ಮನೆ ಬಾಡಿಗೆ,ಖರ್ಚು ವೆಚ್ಚಗಳು,ಮಕ್ಕಳ ವಿದ್ಯಾಭ್ಯಾಸ ಆರೋಗ್ಯತೊಂದರೆ, ಹೊಸದಾಗಿ ಕೊಂಡಿರುವ ಮನೆ,ಕಾರಿನ ಸಾಲಗಳು ಆತನ ಕೈ ಬಾಯಿಯನ್ನು ಕಟ್ಟಿಹಾಕಿ ಬಿಟ್ಟಿರುತ್ತವೆ.

ಇದರ ಜೊತೆ ಬ್ಯಾಂಕಿನಿಂದ ತೆಗೆದುಕೊಂಡ ಸಾಲಗಳ ಕಂತುಗಳು ಬಕಾಸುರನಂತೆ ಬಾಯಿ ತೆರೆದು ನಿಂತಿದ್ದರೆ,ಮಕ್ಕಳು ಬೆಳೆದು ಎದೆಯೆತ್ತರ ನಿಂತು ಅವರ ಮುಂದಿನ ವಿದ್ಯಾಭ್ಯಾಸ,ಮದುವೆ ಕುರಿತ ಯೋಚನೆಗಳು ಆತನನ್ನು ಹಣ್ಣು ಮಾಡುತ್ತವೆ. ಮಧ್ಯ ವಯಸ್ಸಿನಲ್ಲಿಯೇ ವೃದ್ಯಾಪ್ಯದ ಮೆಟ್ಟಿಲನ್ನು ಏರುವ ಆತನಿಗೆ ನಿಧಾನವಾಗಿ ವಯೋ ಸಹಜ ಆರೋಗ್ಯ ತೊಂದರೆಗಳು ಕಾಣಿಸಿಕೊಳ್ಳುತ್ತವೆ.

ತನಗೆ ಅನುಕೂಲಕರವಾಗಿ ಮನೆಯನ್ನು ತೂಗಿಸಿಕೊಂಡು ಹೋಗುವ ಪತ್ನಿ ಇದ್ದರೆ ಆತನ ಬಾಳು ಬಂಗಾರ… ಆಕೆಯೂ ತನ್ನ ನೆರೆಹೊರೆಯವರ ಸಿರಿತನವನ್ನು ಕಂಡು ಹೆಚ್ಚಿನದಕ್ಕೆ ಆಸೆ ಪಟ್ಟರೆ ಮಾತ್ರ ಆತನಿಗೆ ಭೂಲೋಕದಲ್ಲಿಯೇ ನರಕ ದರ್ಶನವಾಗುವುದು ಖಚಿತ.ಇದ್ದುದರಲ್ಲಿಯೇ ಮನೆಯನ್ನು ನಡೆಸಿಕೊಂಡು ಹೋಗು ಎಂದು ಹೇಳುವ ಪತಿ ಆಕೆಯ ಕಣ್ಣಿಗೆ ಕೈಲಾಗದವನಂತೆ ತೋರಿ, ತನ್ನ ಅಸಹನೆಯನ್ನು ಚಾಟಿ ಏಟಿನಂತಹ ಮಾತುಗಳ ಮೂಲಕ ಬೀಸುವ ಪತ್ನಿಯನ್ನು ಅನುನಯಿಸಲು ಸಾಧ್ಯವಾಗದೆ ಪತಿ ಒದ್ದಾಡುತ್ತಾನೆ. ಮತ್ತೆ ಕೆಲವರು ತಮ್ಮ ಚಾಣಾಕ್ಷತೆಯಿಂದ ಪತ್ನಿಯ ಮನವೊಲಿಸಲು ಸಾಧ್ಯವಾಗಿಸಿಕೊಳ್ಳುತ್ತಾರೆ.

ಹೆಣ್ಣು ಮಕ್ಕಳು ಚೆನ್ನಾಗಿ ಓದದಿದ್ದರೆ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳೋಣ ಎಂದುಕೊಳ್ಳುವ ಪಾಲಕರಿಗೆ ಗಂಡು ಮಕ್ಕಳು ಓದದಿದ್ದರೂ ಉದ್ಯೋಗ ಇಲ್ಲವೇ ವ್ಯವಹಾರ ಮಾಡುವುದು ಬದುಕಿಗೆ ಅನಿವಾರ್ಯ ಎಂಬ ನಿಷ್ಠುರ ಸತ್ಯವನ್ನು ಅರಿತು ಕೈಯಲ್ಲಿರುವ ಬಂಡವಾಳ ಹಾಕಿ ಅವರು ವ್ಯಾಪಾರ ವ್ಯವಹಾರ ಮಾಡಲು, ಮಕ್ಕಳ ಬದುಕಿಗೆ ದಾರಿ ಮಾಡಿ ಕೊಡುತ್ತಾನೆ. ಇಲ್ಲಿಯೂ ಕೂಡ ಆತನಿಗೆ ಕೆಲವೊಮ್ಮೆ ವ್ಯಾಪಾರ ಕೈ ಹಿಡಿಯುವುದಿಲ್ಲ, ಪದೇ ಪದೇ ಪೆಟ್ಟು ತಿನ್ನುತ್ತಾ ಮತ್ತೆ ಮೇಲೇಳುತ್ತಾ ಕೊನೆಗೆ ಬದುಕಿನ ನಿರ್ವಹಣೆಗೆ ಸಾಕಾಗುವಷ್ಟು ಹಣ ಸಂಪಾದಿಸುವಲ್ಲಿ ಯಶಸ್ವಿಯಾದರೆ ಸಾಕಪ್ಪ ಎಂಬಲ್ಲಿಗೆ ಆತ ಬಂದು ನಿಲ್ಲುತ್ತಾನೆ.

 

ಅದೆಷ್ಟೇ ಆರ್ಥಿಕ, ಸಾಮಾಜಿಕ ಮತ್ತು ಕೌಟುಂಬಿಕ ವಲಯಗಳಲ್ಲಿ ಪುರುಷ ಪೆಟ್ಟು ತಿಂದರೂ ಆತನ ಕುಟುಂಬದ ಸದಸ್ಯರು ಮತ್ತೆ ಆತನ ಆತ್ಮಬಲವನ್ನು ಎತ್ತಿ ಹಿಡಿಯುವ ಮೂಲಕ ಆತನಲ್ಲಿ ಚೈತನ್ಯವನ್ನು ತುಂಬುತ್ತಾರೆ. ಆದರೂ ಕೂಡ ಭಾರತೀಯ ಸಮಾಜದಲ್ಲಿ 80ಕ್ಕೂ ಹೆಚ್ಚು ಜನ ಪುರುಷರು ಮಹಿಳಾ ವಿರೋಧಿಗಳಾಗಿದ್ದು ಹೆಣ್ಣು ಮಕ್ಕಳನ್ನು ತನ್ನ ಗುಲಾಮರೆಂಬಂತೆ ನಡೆಸಿಕೊಳ್ಳುವುದು ಸರ್ವೇಸಾಮಾನ್ಯವಾಗಿದೆ. ಓರ್ವ ಅತಿ ದೊಡ್ಡ ವಿಜ್ಞಾನಿ, ಡಾಕ್ಟರ್, ಇಂಜಿನಿಯರ್, ಪ್ರೊಫೆಸರ್ ರಿಂದ ಹಿಡಿದು ಕೂಲಿ ಮಾಡುವ ವ್ಯಕ್ತಿ ಕೂಡ ಮನೆಯಲ್ಲಿ ತನ್ನ ಪತ್ನಿಗೆ,ತಾಯಿಗೆ ಕನಿಷ್ಠ ಗೌರವವನ್ನು ಕೊಡದೆ ಇರುವ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣಮುಂದಿವೆ.

ತನ್ನ ಮಹಿಳಾ ಮೇಲಧಿಕಾರಿಯ ಬುದ್ಧಿಶಕ್ತಿಯನ್ನು ಸಂಶಯಿಸುವ, ಆಕೆಯ ನಿರ್ಧಾರಗಳನ್ನು ವ್ಯಂಗ್ಯವಾಡುವ ಆದರೆ ಆಕೆಯ ಅಧಿಕಾರದ ಮುಂದೆ ‘ಎಸ್ ಬಾಸ್’ ಎಂಬಂತೆ ಗೋಣು ಹಾಕುವ ಪುರುಷರು ಮನೆಯಲ್ಲಿ ಪತ್ನಿ ಮತ್ತು ಮಕ್ಕಳನ್ನು ಗುಲಾಮರಂತೆ ನಡೆಸಿಕೊಳ್ಳುವುದನ್ನು ಕೂಡ ನಾವು ಕಾಣುತ್ತಿದ್ದೇವೆ. ಮಹಿಳೆಯರ ಕುರಿತು ಅತ್ಯಂತ ಹೀನಾಯವಾಗಿ ಮಾತನಾಡುವ ಗಂಡಸರು, ಆಕೆಯ ನೈತಿಕತೆಯನ್ನು ಪ್ರಶ್ನಿಸುವ ಮೂಲಕ ಆಕೆಯನ್ನು ಬಗ್ಗುಬಡಿಯಲು ಕೂಡ ಪ್ರಯತ್ನಿಸುತ್ತಾರೆ. ತಾನು ಮದುವೆಯಾಗುವ ಹೆಣ್ಣು ತನ್ನನ್ನು ಅನುಸರಿಸಿಕೊಂಡು ಹೋಗಲಿ ಎಂದು ಬಯಸುವ ಪತಿ ಎಂದೂ ಆಕೆಯನ್ನು ಒಂದೆರಡು ವಿಷಯಗಳಲ್ಲಿಯೂ ಅನುಸರಿಸಿಕೊಂಡು ಹೋಗುವುದಿಲ್ಲ. ಪುರುಷ ಅಹಂಕಾರದ ಪ್ರತಿರೂಪವಾಗಿರುವ ಭಾರತೀಯ ಗಂಡಸರು ಸಾಮಾಜಿಕವಾಗಿ ಬಹಳವೇ ಹಿಂದುಳಿದಿದ್ದಾರೆ.

ತಮ್ಮ ಮನೆಯ ಹೆಣ್ಣು ಮಕ್ಕಳ ಕುರಿತು ರಕ್ಷಣಾತ್ಮಕ ಭಾವವನ್ನು ಹೊಂದಿರುವ ಎಷ್ಟೋ ಯುವಕರು ತಮ್ಮೊಂದಿಗೆ ಒಡನಾಡುವ ಹೆಣ್ಣು ಮಕ್ಕಳ ಕುರಿತು ಅಸಭ್ಯವಾಗಿ ಮಾತನಾಡುತ್ತಾರೆ.
ಬಲಾತ್ಕಾರದ ಹಲವಾರು ಪ್ರಕರಣಗಳನ್ನು ಅಧ್ಯಯನ ಮಾಡಿದಾಗ ಅತ್ಯಾಚಾರಕ್ಕೊಳಗಾದ ಯುವತಿಯ ಮೇಲೆ ದುಷ್ಕೃತ್ಯವನ್ನು ಎಸಗಿದವರು ಬಹಳಷ್ಟು ಬಾರಿ ಆಕೆಗೆ ಗೊತ್ತಿರುವವರೇ ಆಗಿರುತ್ತಾರೆ.
ತನ್ನ ಕುಟುಂಬದ ಮಹಿಳೆಯರ ಕುರಿತು ಸೂಕ್ಷ್ಮ ಸಂವೇದನೆಗಳನ್ನು ಹೊಂದಿರುವ ವ್ಯಕ್ತಿ ಬೇರೆ ಹೆಣ್ಣು ಮಕ್ಕಳ ಕುರಿತು ಕೆಟ್ಟದಾಗಿ ಯೋಚಿಸುವುದು ಎಷ್ಟು ಮಟ್ಟಿಗೆ ಸರಿ ಎಂದು ಯೋಚಿಸಬೇಕಲ್ವೇ!?. ಎಲ್ಲರೂ ಹಾಗಿರುವುದಿಲ್ಲ ಎಂದುಕೊಂಡರೂ ಭಯ ಇದ್ದೇ ಇರುತ್ತದೆ. ತುಸು ಆತ್ಮೀಯತೆಯಿಂದ ಮಾತನಾಡಿದರೂ ಎಲ್ಲಿ ಬೇರೆ ಅರ್ಥ ಕಲ್ಪಿಸಿ ತಪ್ಪು ತಿಳಿಯುತ್ತಾರೆ ಎಂಬ ಭಯದಲ್ಲಿ ಬಹಳಷ್ಟು ಹೆಣ್ಣು ಮಕ್ಕಳು ಒದ್ದಾಡುತ್ತಾರೆ.

ಹೀಗೆ ಎಲ್ಲ ರೀತಿಯಿಂದಲೂ ವಿಶ್ಲೇಷಿಸಿದಾಗ ಪುರುಷ ಎಂದರೆ ಪ್ರೀತಿ ವಾತ್ಸಲ್ಯ ಅಕ್ಕರೆ ಸ್ನೇಹ ಎಂಬ ಸಕಾರಾತ್ಮಕ ಗುಣಗಳ ಜೊತೆಗೆ ಉಡಾಫೆ, ಅಹಂಕಾರಿ, ಸಹನೆ ಇಲ್ಲದ, ಸ್ವಾರ್ಥಿ ಎಂಬ ನಕಾರಾತ್ಮಕ ಗುಣಗಳು ಕೂಡ ಕಾಣುತ್ತವೆ.

ಒಟ್ಟಿನಲ್ಲಿ ಒಂದೇ ತಾಯಿಯ ಮಕ್ಕಳಾಗಿ ಹುಟ್ಟಿರುವ ಸ್ತ್ರೀ ಪುರುಷರೆಲ್ಲರೂ ಯಾವುದೇ ಭೇದವಿಲ್ಲದೆ ಪರಸ್ಪರ ವಿಶ್ವಾಸ, ನಂಬಿಕೆ, ಗೌರವ,ಭ್ರಾತೃತ್ವ ಮತ್ತು ಸ್ನೇಹ ಭಾವದಿಂದ ವರ್ತಿಸಲಿ ಎಂಬ ಆಶಯ ಎಲ್ಲಾ ಹೆಣ್ಣು ಮಕ್ಕಳದು.

ಮೀನಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

Share This Article
error: Content is protected !!
";