Ad image

11ನೇ ರಾಷ್ಟೀಯ ಕೈಮಗ್ಗ ದಿನಾಚರಣೆಯಲ್ಲಿ ಜಿ.ಪಂ. ಸಿಇಓ ಅಭಿಪ್ರಾಯ ಕೈಮಗ್ಗ, ನೇಕಾರರು ದೇಶದ ಅಸ್ತಿತ್ವ

Vijayanagara Vani
11ನೇ ರಾಷ್ಟೀಯ ಕೈಮಗ್ಗ ದಿನಾಚರಣೆಯಲ್ಲಿ ಜಿ.ಪಂ. ಸಿಇಓ ಅಭಿಪ್ರಾಯ ಕೈಮಗ್ಗ, ನೇಕಾರರು ದೇಶದ ಅಸ್ತಿತ್ವ
ದಾವಣಗೆರೆ (ಕರ್ನಾಟಕ ವಾರ್ತೆ)ಆ.08:
ಕೈಮಗ್ಗ ನೇಕಾರರು ಚರಕದಿಂದ ನೂಲುವ ಗುಡಿ ಕೈಗಾರಿಕೆ ದೇಶದ ಅಸ್ತಿತ್ವ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠಲ ರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ನೇಕಾರರ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾಗಿದ್ದ 11 ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ವಿದೇಶಿ ಉತ್ಪನ್ನಗಳ ಹಾವಳಿ, ದುಪ್ಪಟ್ಟು ದರ ಉಪಟಳ ಹೆಚ್ಚಾಯಿತು. ಇವುಗಳನ್ನು ಬಹಿಷ್ಕರಿಸಿ ದೇಶೀಯ ಸ್ಥಳೀಯ, ಕೈಮಗ್ಗ ಉತ್ಪನ್ನಗಳನ್ನು ಉತ್ತೇಜಿಸಲು ಗಾಂಧೀಜಿಯವರು 1905 ಆಗಸ್ಟ್ 7ರಂದು ಸ್ವದೇಶಿ ಚಳುವಳಿ ಆರಂಭಿಸಿದರು. ಈ ದಿನದ ನೆನಪಿಗಾಗಿ ಪ್ರತಿವರ್ಷ ಆಗಸ್ಟ್ 7 ರಂದು ಭಾರತದಲ್ಲಿ ರಾಷ್ಟ್ರೀಯ ಕೈಮಗ್ಗ ದಿನವನ್ನಾಗಿ ಆಚರಿಸಲಾಗುತ್ತದೆ. ಕೈಮಗ್ಗ ವಲಯವು ಸುಮಾರು 120 ವರ್ಷಗಳ ಶ್ರೀಮಂತವಾದ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ಈ ದಿನಾಚರಣೆಯ ಮೂಲಕ ಭಾರತೀಯ ಕೈಮಗ್ಗ ಉತ್ಪನ್ನಗಳ ಬಳಕೆಯನ್ನು ಪ್ರೋತ್ಸಾಹಿಸುವುದರೊಂದಿಗೆ, ಕೈಮಗ್ಗದ ಮಹತ್ವ ಮತ್ತು ಅದರ ಆರ್ಥಿಕ ಕೊಡುಗೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ದೇಶದಲ್ಲಿ ಇನ್ನೂ ನೇಕಾರರ ಸಂಖ್ಯೆ ಹೆಚ್ಚಾಗಿ ಅವರ ಕೌಶಲ್ಯತೆಗೆ ಅನುಗುಣವಾಗಿ ಗುಣಮಟ್ಟದ ಸ್ವದೇಶಿ ಉತ್ಪನ್ನಗಳಾದ ಮೈಸೂರು ಸಿಲ್ಕ್, ಬನಾರಸ್, ಧೋತಿ, ಪಂಚೆ, ಲುಂಗಿ, ಬೆಡ್ ಶೀಟ್, ಟವೆಲ್, ಕರವಸ್ತ್ರ, ಲುಂಗಿ ಹಾಗೂ ಹತ್ತಿಬಟ್ಟೆ ಸೇರಿದಂತೆ ಇನ್ನಿತರೆ ಉತ್ಪನ್ನಗಳನ್ನು ಕಲಾತ್ಮಕವಾಗಿ ತಯಾರಿಸಿ ತಮ್ಮ ಸ್ವದೇಶಿ ಉತ್ಪನ್ನಗಳನ್ನು ಸಂರಕ್ಷಿಸಬೇಕು.
ರಾಜ್ಯದ ಜನತೆ ತಮ್ಮ ಸ್ವದೇಶಿ ಉತ್ಪನ್ನ ತಯಾರಿಕೆ, ಕಲೆ, ಕೌಶಲ್ಯಗಳಿಂದ ದೇಶ-ವಿದೇಶಗಳಲ್ಲಿ ಗುರುತಿಸಿಕೊಂಡು ರಾಜ್ಯ, ದೇಶದ ಅಸ್ತಿತ್ವವನ್ನು ಉಳಿಸಲಾಗುತ್ತಿದೆ. ಇಂದು ದಾವಣಗೆರೆ ಜಿಲ್ಲೆಯ 4 ನೇಕಾರರಿಗೆ ರಾಷ್ಟ್ರಮಟ್ಟದಲ್ಲಿ ಸನ್ಮಾನಿಸಲಾಗುತ್ತಿದೆ. ಅದಕ್ಕಾಗಿ ಕೈಮಗ್ಗ ವಲಯದ ಸಮಗ್ರ ಅಭಿವೃದ್ಧಿಗೆ ಮತ್ತು ನೇಕಾರರಿಗೆ ಸಂಬಂಧಪಟ್ಟ ಇಲಾಖೆ ಮತ್ತು ಬ್ಯಾಂಕ್‌ಗಳಲ್ಲಿ ಹೆಚ್ಚಿನ ಸಹಾಯಧನ ಒದಗಿಸಿ ಆರ್ಥಿಕ, ಸಾಮಾಜಿಕವಾಗಿ ಸಬಲೀಕರಣಗೊಳಿಸಿ ಭವಿಷ್ಯವನ್ನು ಉಜ್ವಲಗೊಳಿಸಬೇಕಾಗಿದೆ. ನೇಕಾರರು ಸಹ ಇಲಾಖೆಯಲ್ಲಿನ ಯೋಜನೆಗಳ ಸದುಪಯೋಗ ಪಡೆದು ಉದ್ದಿಮೆಗಳನ್ನು ಸ್ಥಾಪಿಸಿ ತಮ್ಮ ಕಲೆ, ಕೌಶಲ್ಯಗಳ ಮೂಲಕ ಸಮಾಜದ ಮುನ್ನೆಲೆಗೆ ಬರಬೇಕು. ಇದರಿಂದ ದೇಶದಲ್ಲಿ ನೇಕಾರರಿಗೆ, ನೂಲುವ ಮತ್ತು ಚರಕ ಕೈಮಗ್ಗ ಸಮುದಾಯದ ಕುಟುಂಬಗಳಿಗೆ ಆರ್ಥಿಕ, ಸಾಮಾಜಿಕ ಭದ್ರತೆ ಜೊತೆಗೆ ಸ್ಥಳೀಯವಾಗಿ ಉದ್ಯೋಗ ಅವಕಾಶಗಳು ದೊರೆಯಲಿವೆ. ದಾವಣಗೆರೆ ಜಿಲ್ಲೆಯಲ್ಲಿ ಉತ್ಪಾದಿಸುವ ಕೈಮಗ್ಗ ಉತ್ಪನ್ನಗಳಾದ ಬೆಡ್ ಶೀಟ್, ಟವೆಲ್, ಕರವಸ್ತ್ರ, ಲುಂಗಿ ಹಾಗೂ ಹತ್ತಿಬಟ್ಟೆ ಉತ್ಪಾದನೆಯ ಕೌಶಲ್ಯ ಮತ್ತು ಕುಸುರಿ ಕಾರ್ಯಕ್ಕೆ ದೇಶ ವಿದೇಶಗಳಲ್ಲಿ ಕೊಂಡಾಡುವಂತಗಾಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಮಾತನಾಡಿ, ಇಲಾಖೆ ವ್ಯಾಪ್ತಿಯಲ್ಲಿನ ಯೋಜನೆಗಳು, ಸಾಲ ಮತ್ತು ಸಹಾಯಧನವನ್ನು ಫಲಾನುಭವಿಗಳಿಗೆ ವಿಳಂಬ ಮಾಡದೇ ತ್ವರಿತವಾಗಿ ಮಂಜೂರು ಮಾಡಬೇಕು. ನೇಕಾರರ ಸಮುದಾಯನ್ನು ಮುನ್ನೆಗೆಲೆ ತರಲು ಹೆಚ್ಚಿನ ಸಹಾಯಾಸ್ತ ನೀಡಿ ಆರ್ಥಿಕವಾಗಿ ಸದೃಢರನ್ನಾಗಿಸಬೇಕು. ಈ ಹಿಂದೆ ಸ್ವದೇಶಿ ಉತ್ಪನ್ನ ಬೇಕೆಂಬಂತೆ ಇಂದು ಊಟೋಪಚಾರದಿಂದ ತೊಡುವ ಬಟ್ಟೆಯವರೆಗೂ ಮೂಲತಃ ಸ್ವದೇಶಿ ಉತ್ಪನ್ನಗಳಿಗೆ ಮಾರು ಹೋಗುತ್ತಿದ್ದಾರೆ. ಹಾಗಾಗಿ ನೇಕಾರರು ತಮ್ಮ ಕೆಲಸವನ್ನು ಶ್ರದ್ದೆ ಮತ್ತು ಜವಬ್ದಾರಿಯುತವಾಗಿ ನಿಭಾಯಿಸಿದಲ್ಲಿ ಯಶಸ್ಸು ಸಿಗಲಿದೆ. ವಿಶೇಷವಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಎಂದು ಮನವಿ ಮಾಡಿದರು.
ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಶಿವಕುಮಾರ್ ಎನ್ ಕುಂಬಾರ ಮಾತನಾಡಿ, ರಾಜ್ಯದಲ್ಲಿ ಇತ್ತೀಚಿನ 4ನೇ ಕೈಮಗ್ಗ ಜನಗಣತಿಯ ಪ್ರಕಾರ 27,175 ಕೈಮಗ್ಗ ಮತ್ತು 27,616 ಮಗ್ಗ ಪೂರ್ವ ಕೈಮಗ್ಗ ನೇಯ್ಗೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದರಂತೆ ಜಿಲ್ಲೆಯಲ್ಲಿ 215 ಕೈಮಗ್ಗ, 110 ಮಗ್ಗ ಪೂರ್ವ ಕೈಮಗ್ಗ ನೇಯ್ಗೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಸ್ತುತ ನೂಲುವ, ಕೈಮಗ್ಗ, ಚರಕ ಸುತ್ತುವವರು ಸಿಗುವುದು ಕಷ್ಟ. ಸಿಗುವಂತಹವರಿಗೆ ತರಬೇತಿ ನೀಡಿ ಉದ್ದಿಮೆಗಳ ಸಹಾಯ ಯೋಜನೆಗಳಾದ ನೇಕಾರ ಸಮ್ಮಾನ್ ಯೋಜನೆ, ವಿಶೇಷ ಪ್ಯಾಕೇಜ್ ಯೋಜನೆ, ವಿದ್ಯುತ್ ಮಗ್ಗ ಯೋಜನೆ ಹೀಗೆ ವಿವಿಧ ಯೋಜನೆಗಳಡಿ ಉದ್ದಿಮೆ ಸ್ಥಾಪನೆಗೆ ಶೇ. 90ರಷ್ಟು ಸಬ್ಸಿಡಿ ನೀಡಲಾಗುವುದು. ಉದ್ದಿಮೆಗಳಲ್ಲಿ ತೊಡಗಿಸಿಕೊಳ್ಳುವವರು ಕೂಲಿ ಎಂದು ಪರಿಗಣಿಸದೇ ಉದ್ದಿಮೆಯಾಗಿ ಪ್ರಾರಂಭಿಸಿದಾಗ ಪ್ರತಿಯೊಬ್ಬರೂ ಯಶಸ್ವಿಯಾಗುವುದರ ಜತೆಗೆ ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ ಎಂದರು.
ಇದೇ ವೇಳೆ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಮಂಜೂರಾದ ಸಾಲ ಮಂಜೂರಾತಿ ಪತ್ರವನ್ನು ಸಾಂಕೇತಿಕವಾಗಿ ವಿತರಿಸಲಾಯಿತು.
ಈ ವೇಳೆ ನೇಕಾರ ಸೇವಾ ಕೇಂದ್ರದ ಉಪನಿರ್ದೇಶಕ ಪ್ರಭಾಕರ್, ರಾಷ್ಟ್ರೀಯ ಕೈಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಯುಗೇಂದ್ರ ದ್ವಿತಿ, ಕೇಂದ್ರ ರೇಷ್ಮೆ ಮಂಡಳಿ ಸಹಾಯಕ ಕಾರ್ಯದರ್ಶಿ ಹೇಮಾಶ್ರೀ, ನೇಕಾರ ಸಮಾಜ ಮುಖಂಡ ಶ್ರೀಕಾಂತ್ ಸೇರಿದಂತೆ ನೇಕಾರ ಸಮಾಜದ ಬಂದುಗಳು, ಫಲಾನುಭವಿಗಳು ಸೇರಿದಂತೆ ಜವಳಿ ಮತ್ತು ಕೈಮಗ್ಗ ಇಲಾಖೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

Share This Article
error: Content is protected !!
";