Ad image

ಸಾಂಪ್ರದಾಯಿಕ ಬೆಳೆಗಳ ಜತೆಗೆ ತೋಟಗಾರಿಕೆ ಬೆಳೆ ಬೆಳೆಯಿರಿ

Vijayanagara Vani
ಚಿತ್ರದುರ್ಗಜುಲೈ18:
ರೈತರು ತಮ್ಮ ಸಾಂಪ್ರದಾಯಿಕ ಬೆಳೆಗಳ ಜೊತೆಗೆ ತೋಟಗಾರಿಕೆ ಬೆಳೆಗಳನ್ನು ಬೆಳೆಯಬೇಕು ಎಂದು ಬೆಂಗಳೂರು ವಿಶ್ವವಿದ್ಯಾನಿಲಯ ರಾಮನಗರ ಸ್ನಾತಕೋತ್ತರ ಕೇಂದ್ರದ ಸಮಾಜ ಕಾರ್ಯ ವಿಭಾಗದ ಅಧ್ಯಾಪಕರು ಹಾಗೂ ಶಿಬಿರದ ಸಂಯೋಜಕಿ ಡಾ.ಜಿ.ಎಂ.ರಶ್ಮಿ ಸಲಹೆ ನೀಡಿದರು.
ಚಳ್ಳಕೆರೆ ತಾಲ್ಲೂಕಿನ ನೆಲಗೇತನಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮದುರ್ಗ ಗ್ರಾಮದಲ್ಲಿ ಗುರುವಾರ ಬೆಂಗಳೂರು ವಿಶ್ವವಿದ್ಯಾಲಯದ ರಾಮನಗರ ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ವಿಭಾಗದ ವತಿಯಿಂದ ಕಿಲಾರಿ ಪಶುಪಾಲಕ ಅನನ್ಯತೆ-ಸಮುದಾಯದಿಂದ ಸಮಾಜದೆಡೆಗೆ 10 ದಿನಗಳ ಸಮಾಜಕಾರ್ಯ ಶಿಬಿರದ ಮೂರನೇ ದಿನದ ಕಾರ್ಯಕ್ರಮದಲ್ಲಿ ರೈತರು ದೇಶದ ಬೆನ್ನೆಲುಬು ಎಂಬ ವಿಷಯದ ಚಿಂತನ-ಮಂಥನದಲ್ಲಿ ಅವರು ಮಾತನಾಡಿದರು.
ಸಮುದಾಯದ ಯುವಕರು ಇದನ್ನು ನಿರ್ವಹಿಸುವಲ್ಲಿ ಪ್ರಮುಖ ವಹಿಸಬೇಕು. ಸಮುದಾಯದ ಮಹಿಳೆಯರು, ರೈತಾಪಿ ಜನರು ಸಮುದಾಯದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಕರೆ ಕೊಟ್ಟರು.
ತೋಟಗಾರಿಕೆ ಸಹಾಯಕ ತೋಟಗಾರಿಕೆ ಅಧಿಕಾರಿ ಬಸವರಾಜ್ ಅವರು, ತೋಟಗಾರಿಕೆ ಇಲಾಖೆಯ ಯೋಜನೆ ಮತ್ತು ಸೌಲಭ್ಯಗಳ ಬಗ್ಗೆ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಸಮಾಜ ಕಾರ್ಯವಿಭಾಗದ ಅಧ್ಯಾಪಕ ಡಾ.ಗಂಗಾಧರ್ ರೆಡ್ಡಿ ಅವರು ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವಲ್ಲಿ ಸಮುದಾಯದ ಪಾತ್ರ ಎಂಬ ವಿಷಯಗಳ ಕುರಿತು ಮಾತನಾಡಿದರು.
ಶಿಬಿರದ ಸಂಯೋಜಕ ಡಾ.ದೇವಿಂದ್ರಪ್ಪ ಮಾತನಾಡಿ, ರಾಮದುರ್ಗ ಗ್ರಾಮದ ಸಾಮಾಜಿಕ ನಕ್ಷೆಯನ್ನು ನಮ್ಮ ಶಿಬಿರಾರ್ಥಿಗಳು ಗ್ರಾಮ ಪರಿವೀಕ್ಷಣೆ ಮಾಡಿ ವೇದಿಕೆಯ ಪಕ್ಕದಲ್ಲಿ ಬಿಡಿಸಿದ್ದಾರೆ. ಅದರಲ್ಲಿ ಗ್ರಾಮದ ಕಚ್ಚಾ ಮನೆಗಳು, ಪಕ್ಕ ಮನೆಗಳು, ಗುಡಿಸಲುಗಳು ಹೀಗೆ ಹಲವು ಮಾಹಿತಿಯನ್ನು ವಿವರವಾಗಿ ಬಿಡಿಸಿದ್ದಾರೆ ಎಂದು ತಿಳಿಸಿದ ಅವರು, ಶಿಬಿರಾರ್ಥಿಗಳೊಂದಿಗೆ ಗ್ರಾಮದ ಜನರು ಚರ್ಚೆ ಮಾಡಿ ಎಂದು ಗ್ರಾಮಸ್ಥರಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಬಂಗಾರಪ್ಪ ಸೇರಿದಂತೆ ಗ್ರಾಮದ ಮುಖಂಡರು, ಶಿಬಿರಾರ್ಥಿಗಳು ಇದ್ದರು

Share This Article
error: Content is protected !!
";