ಶಿವಮೊಗ್ಗ : ಜುಲೈ 31 : ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಿಲ್ಲೆಯ ನಗರ ಮತ್ತು ಗ್ರಾಮಾಂತರ ಪ್ರದೇಶಗಳ ವ್ಯಾಪ್ತಿಯ ರಸ್ತೆಯ ಇಕ್ಕೆಲಗಳಲ್ಲಿ ಧೈತ್ಯಾಕಾರವಾಗಿ ಬೆಳೆದ ನಿಂತ, ಬೀಳುವ ಹಂತದಲ್ಲಿರುವ ಹಾಗೂ ಸಾರ್ವಜನಿಕ ಸಂಚಾರಕ್ಕೆ ಅಡಚಣೆ ತರುವ ರೀತಿಯಲ್ಲಿ ಹರಡಿಕೊಂಡಿರುವ ರಂಬೆ-ಕೊoಬೆಗಳನ್ನು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ತ್ವರಿತವಾಗಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಶಿವಮೊಗ್ಗ ಮಹಾನಗರಪಾಲಿಕೆ ಆಯುಕ್ತರು ಹಾಗೂ ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ನಗರ ಮತ್ತು ಗ್ರಾಮಾಂತರ ಪ್ರದೇಶಗಳ ರಸ್ತೆಯ ಇಕ್ಕೆಲಗಳಲ್ಲಿ ದುರ್ಬಲ ಮರಗಳಿಂದಾಗುವ ಸಂಭಾವ್ಯ ಅನಾಹುತವನ್ನು ನಿಯಂತ್ರಿಸುವ ಸಂಬoಧ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ದುರ್ಬಲವಾದ ಮರಗಳು ಯಾವುದೇ ಕ್ಷಣದಲ್ಲಿ ಬಿರುಗಾಳಿ-ಮಳೆಗೆ ಬಿದ್ದು ಜೀವಹಾನಿಯಾಗಬಹುದಾದ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಈ ಕಚೇರಿಗೆ ಬಂದಿವೆ ಎಂದವರು ನುಡಿದರು.
ಅವಸಾನದ ಅಂಚಿನಲ್ಲಿರುವ ತುಂಬಾ ಹಳೆಯದಾದ ದೈತ್ಯವಾದ ಹಾಗೂ ದುರ್ಬಲಗೊಂಡಿರುವ ಮರಗಳ ಸ್ಥಿತಿ-ಗತಿಗಳನ್ನು ಗಮನಿಸಿ, ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಅವರು, ಈಗಾಗಲೇ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 112ಮರಗಳು ಹಾಗೂ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ 1200ಮರಗಳನ್ನು ಗುರುತಿಸಿರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಅವುಗಳನ್ನು ತಕ್ಷಣದಲ್ಲಿ ತೆರವುಗೊಳಿಸುವಂತೆ ಪಾಲಿಕೆ ಆಯುಕ್ತರು ಹಾಗೂ ಅರಣ್ಯಾಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.
ಅರಣ್ಯಾಧಿಕಾರಿಗಳು ಹಾಗೂ ಪಾಲಿಕೆ ಆಯುಕ್ತರು ಮುಂದಿನ ಮೂರು ದಿನಗಳೊಳಗಾಗಿ ಮರಗಳನ್ನು ಗುರುತಿಸುವುದಲ್ಲದೇ ಅವುಗಳ ಸ್ಥಿತಿಗತಿಯನ್ನಾಧರಿಸಿ, ದುರ್ಬಲವಾಗಿದ್ದಲ್ಲಿ, ಒಣಗಿದ್ದು ಬೀಳುವಂತಿದ್ದಲ್ಲಿ, ರೆಂಬೆಕೊoಬೆಗಳು ಹರಡಿಕೊಂಡಿದ್ದಲ್ಲಿ ತೆರವುಗೊಳಿಸಲು ತಕ್ಷಣದ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ ಅವರು, ದುರ್ಬಲ ಮರಗಳ ಹನನ ಮಾಡುವ ಪೂರ್ವದಲ್ಲಿ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸುವಂತೆಯೂ ಅವರು ಸಲಹೆ ನೀಡಿದರು.
ಈ ಮರಗಳ ಹನನ ಮಾಡುವ ಮುನ್ನ ದುರ್ಬಲ ಮರಗಳಿಂದಾಗುವ ಅನಾಹುತದ ಬಗ್ಗೆ, ಆಕಸ್ಮಿಕ ಅಪಘಾತದ ಬಗ್ಗೆ, ಸಂಭಾವ್ಯ ಜೀವಹಾನಿಗಳ ಬಗ್ಗೆಯೂ ಜನರಿಗೆ ಮನವರಿಕೆ ಮಾಡುವಂತೆ ಅಧಿಕಾರಿಗಳು ಗಮನಹರಿಸಬೇಕು. ಅಲ್ಲದೇ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಕ್ರಮ ಅನಿವಾರ್ಯವೆಂಬುದನ್ನು ತಿಳಿಸುವಂತೆಯೂ ಅವರು ನುಡಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಮಹಾನಗರಪಾಲಿಕೆಯ ಆಯುಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್ ಸೇರಿದಂತೆ ಅರಣ್ಯಾಧಿಕಾರಿಗಳು ಉಪಸ್ಥಿತರಿದ್ದರು.