ವಿಜಯನಗರ (ಹೊಸಪೇಟೆ), ಫೆಬ್ರವರಿ.26 :
ಹಂಪಿ ಉತ್ಸವದ ನಿಮಿತ್ತ ಬುಧವಾರ ಸಂಜೆ ಶ್ರೀವಿರೂಪಾಕ್ಷೇಶ್ವರ ದೇವಸ್ಥಾನ ಹಿಂಭಾಗದ ನದಿ ತಟದಲ್ಲಿ ತುಂಗಭದ್ರೆಗೆ ತುಂಗಾರತಿ ಮಾಡುವ ಮೂಲಕ ನಾಡಿನ ಸುಭೀಕ್ಷೆಗೆ ಪ್ರಾರ್ಥಿಸಲಾಯಿತು.
ನಾಡಮಾತೆ ಶ್ರೀಭುವನೇಶ್ವರಿ ದೇವಿಗೆ ಕುಂಕುಮಾರ್ಚನೆ ಹಾಗೂ ಅಭಿಷೇಕ ನೆರವೇರಿಸಲಾಯಿತು.
ವಸತಿ, ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಸೇರಿದಂತೆ ಗಣ್ಯಮಾನ್ಯರು ತುಂಗಾಭದ್ರ ನದಿಗೆ ಪುಷ್ಪ, ಕ್ಷೀರ, ತುಪ್ಪ, ಮರದ ಬಾಗಿನ ಸಮರ್ಪಿಸಿದರು. ಗಂಗೆ ಸೇರಿದಂತೆ ನಾಡಿನ ಪವಿತ್ರ ನದಿಗಳು, ವರುಣ ದೇವನನ್ನು ಸ್ಮರಿಸಿ ತುಂಗಾರತಿ ಕೈಗೊಳ್ಳಲಾಯಿತು.ಈ ಬಾರಿ ನಾಡಿನಾದ್ಯಂತ ಉತ್ತಮ ಮಳೆಯಾಗಿ, ಎಲ್ಲ ನದಿಗಳು ತುಂಬಿ ಹರಿಯಲಿ. ಜಲಾಶಯಗಳು ಭರ್ತಿಯಾಗಿ, ರೈತರು ಉತ್ತಮ ಬೆಳೆ ಬೆಳೆದು ನಾಡು ಸುಭೀಕ್ಷವಾಗಲಿ ಎಂದು ಹಂಪಿ ವಿರೂಪಾಕ್ಷ ಸೇರಿದಂತೆ ಸಮಸ್ತ ದೇವತೆಗಳಲ್ಲಿ ಪ್ರಾರ್ಥಿಸಲಾಯಿತು.
ಶ್ರೀವಿದ್ಯಾರಣ್ಯ ಗುರುಗಳು, ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಾಥ ಹಾಗೂ ಮೋಹನ್ ಜೋಶಿ ನೇತೃತ್ವದ ತಂಡ ತುಂಗರಾತಿ ಕಾರ್ಯಕ್ರಮವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿತು.
ಶಾಸಕ ಹೆಚ್.ಆರ್.ಗವಿಯಪ್ಪ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ದಂಪತಿ ಸಮೇತವಾಗಿ ತುಂಗಾರತಿ ಸಂಕಲ್ಪ ಕೈಗೊಂಡರು.
ಜಿ.ಪಂ.ಸಿಇಓ ನೋಂಗ್ಜಾಯ್ ಮೋಹಮ್ಮದ್ ಅಲಿ ಅಕ್ರಮ್ ಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು.ಬಿ.ಎಲ್ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಸಹಾಯಕ ಆಯುಕ್ತ ವಿವೇಕಾನಂದ, ತಹಶೀಲ್ದಾರ್ ಶೃತಿ ಮಾಳಪ್ಪ ಗೌಡ, ಡಿಹೆಚ್‌ಓ ಶಂಕರ್ ನಾಯ್ಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣನವರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ತುಂಗಾರತಿ ಅಂಗವಾಗಿ ಬಾನಂಗಳದಲ್ಲಿ ಪಟಾಕಿ ಸಿಡಿಸಿ ಸಂತಸ ಹಂಚಿಕೊಳ್ಳಲಾಯಿತು. ಹೊಸಪೇಟೆ ನಗರದ ಗಗನ ಮತ್ತು ಅವರ ತಂಡ ಭರತನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಗಳನ್ನು ಪ್ರಸ್ತುತ ಪಡಿಸಿದರು.
=======