ಮನುಷ್ಯನಿಗೆ ಸಂತೋಷವನ್ನು ನೀಡುವುದು ಯಾವುದು?
ಯಶಸ್ಸು, ಪ್ರೀತಿ ಅಥವಾ ಸಂತೃಪ್ತ ಜೀವನ ಎಂದು ನೀವು ಕೇಳಿದರೆ ಅದು ಒಂದು ಮಟ್ಟಿಗೆ ನಿಜ ಮಾತ್ರ.
ಆದರೆ ಈ ವ್ಯಕ್ತಿ ಹೇಳುವುದು ಬೇರೆಯೇ. ನೀವು ಊಹಿಸಲಾಗದ ಸಂಗತಿಗಳು ನಿಮ್ಮ ಬದುಕಿನಲ್ಲಿ ನಡೆಯುತ್ತಿದ್ದಾಗ ಮಾತ್ರ ಇಂತಹ ಉತ್ತರಗಳು ನಿಮಗೆ ಹೊಳೆಯಬಹುದು.
ಅತ್ಯಂತ ಹಸಿವಿನಿಂದ ಬಳಲುತ್ತಿರುವ ವ್ಯಕ್ತಿಗೆ ಒಂದು ಹೊತ್ತಿನ ಊಟ ಸಂತೋಷವನ್ನು ಕೊಡುತ್ತದೆ.
ಕಲಿಯಲೇ ಬೇಕೆಂಬ ಹಂಬಲವನ್ನು ಹೊತ್ತ ವ್ಯಕ್ತಿಗೆ
ಓದು ಸಂತೋಷವನ್ನು ಕೊಡುತ್ತದೆ.
ಸದಾ ಉಸಿರುಗಟ್ಟಿಸುವ ವಾತಾವರಣದಲ್ಲಿ ಕೆಲಸ ಮಾಡುವ ವ್ಯಕ್ತಿಗೆ ಊರ ಹೊರಗಿನ ತಂಗಾಳಿ ಸಂತೋಷವನ್ನು ಕೊಡುತ್ತದೆ.
ಜನಜಂಗುಳಿಯಿಂದ ಕೂಡಿರುವ ಸ್ಥಳಗಳಲ್ಲಿ ಕಾರ್ಯನಿರ್ವಹಿಸುವವರಿಗೆ ತಣ್ಣಗಿನ ನೀರವ ವಾತಾವರಣ ಸಂತೋಷವನ್ನು ಕೊಡಬಹುದು.
ಹೀಗೆ ಸಾಮಾನ್ಯವಾಗಿ ಬದುಕನ್ನು ನಡೆಸುವ ನಮ್ಮಂತವರು ಎಡ್ಡಿ ಜಾಕು ಹೇಳುವ ವಿಷಯವನ್ನು ಕೇಳಿದರೆ ತಮ್ಮ ಹುಬ್ಬೇರಿಸಬಹುದು. ತನ್ನನ್ನು ತಾನು ಜಗತ್ತಿನ ಅತ್ಯಂತ ಸಂತುಷ್ಟ ವ್ಯಕ್ತಿ ಎಂದು ಕರೆದುಕೊಳ್ಳುವ “ದ ಹ್ಯಾಪಿಯೆಸ್ಟ್ ಮ್ಯಾನ್ ಆನ್ ಅರ್ತ್” ಎಂಬ ಪುಸ್ತಕದ ಕರ್ತೃ ಹೋಲೊಕಾಸ್ಟ್ ನಲ್ಲಿ ಬದುಕುಳಿದು ಬಂದ ವ್ಯಕ್ತಿ ಈ ಎಡ್ಡಿ ಜಾಕು.
ತನ್ನ ತುಂಬು ಕುಟುಂಬವನ್ನು, ಸ್ವಾತಂತ್ರ್ಯವನ್ನು ಹಾಗೂ ತನ್ನ ಬದುಕಿನ ಬಹು ಮುಖ್ಯ ಭಾಗವನ್ನು ಕಳೆದುಕೊಂಡ ವ್ಯಕ್ತಿ ತಾನೇ ಜಗತ್ತಿನ ಅತ್ಯಂತ ಸಂತುಷ್ಟ ವ್ಯಕ್ತಿ ಎಂದು ಹೇಳುತ್ತಾನೆ ಎಂದರೆ ಅದರ ಹಿಂದಿನ ಮರ್ಮವೇನು? ಎಂದು ನಾವು ಪ್ರಶ್ನಿಸಬಹುದು.
ಹೌದು ! ತನ್ನನ್ನು ತಾನು ಸಂತುಷ್ಟ ವ್ಯಕ್ತಿ ಎಂದು ಕರೆದುಕೊಳ್ಳುವ ಆತ ನಗುತ್ತಾನೆ, ಕ್ಷಮಿಸುತ್ತಾನೆ, ತನ್ನ ಬದುಕಿನ ಕೊನೆಯ ದಿನಗಳಲ್ಲಿ ಈ ಜಗತ್ತಿನಲ್ಲಿ ತಾನು ಪಡೆದ ಸುಂದರವಾದ ಜೀವನವನ್ನು ಕುರಿತು ನೆನಪಿಸಿಕೊಂಡು ಆತ ಪುಸ್ತಕವನ್ನು ಬರೆಯುತ್ತಾನೆ ಎಂದರೆ ಆತನ ಮಾನಸಿಕ ಸಾಮರ್ಥ್ಯದ ಅರಿವು ನಮಗೆ ಆಗುತ್ತದೆ.
ಎಡ್ಡಿ ಹುಟ್ಟಿದ್ದು 1920 ರಲ್ಲಿ… ಜರ್ಮನಿ ದೇಶದ ಲೀಪ್ ಜಿಗ್ ಎಂಬಲ್ಲಿ. ತನ್ನ ದೇಶವನ್ನು ಬಹುವಾಗಿ ಪ್ರೀತಿಸಿದ ಆತ ಕಲಿಕೆಯನ್ನು ಕೂಡ ಅಷ್ಟೇ ಇಷ್ಟಪಟ್ಟು ಇಂಜಿನಿಯರಿಂಗ್ ಮುಗಿಸಿದ.ಜರ್ಮನಿಯಲ್ಲಿ ಹಿಟ್ಲರ್ ಅಧಿಕಾರಕ್ಕೆ ಬಂದಾಗ ಎಡ್ಡಿ ಯಹೂದಿಯಾಗಿದ್ದ ಎಂಬ ವಿಷಯವೇ ಆತನನ್ನು ಬಂಧಿಸಲು ಕಾರಣವಾಗಿತ್ತು.
1938ರ ನವಂಬರ್ 9ರಂದು ಮನೆಗೆ ಬಂದ ಎಡ್ಡಿಗೆ
ಕ್ರಿಸ್ಟಲ್ ನಾಚ್ ಎಂಬ ಸೌಮ್ಯ ಪದದ ಮೂಲಕ ನಾಜಿಗಳು ಗದಾ ಪ್ರಹಾರವನ್ನೇ ನೀಡಿದ್ದರು ಯಹೂದಿ ಗಳನ್ನು ಸೆರೆ ಹಿಡಿಯುವ, ಅಮಾನುಷವಾಗಿ ಅವರ ಹುಟ್ಟಡಗಿಸುವ ಕೆಲಸ ಆರಂಭವಾಯಿತು. ಯುವಕರು ಜೀವ ಉಳಿಸಿಕೊಳ್ಳಲು ಮತ್ತು ಯುವತಿಯರು ಮಾನ ಉಳಿಸಿಕೊಳ್ಳಲು ಅಡಗಿಕೊಳ್ಳುವಂತಹ ಪರಿಸ್ಥಿತಿ ಉಂಟಾಗಿತ್ತು. ಆ ಸಮಯದಲ್ಲಿ ತನ್ನ ಊರಿಗೆ ಬಂದ ಎಡ್ಡಿಗೆ ಆತನ ಕುಟುಂಬದ ಯಾವೊಬ್ಬ ಸದಸ್ಯರೂ ಕಾಣಲಿಲ್ಲ. ಅವರೆಲ್ಲರೂ ಎಲ್ಲೋ ಅಡಗಿಕೊಂಡಿದ್ದರು ಆತನನ್ನು ಅಪ್ಯಾಯಮಾನವಾಗಿ ಬರಮಾಡಿಕೊಳ್ಳುತ್ತಿದ್ದ ಮನೆಯ ಪ್ರತಿಯೊಂದು ಮೂಲೆಯೂ ಒಂದು ಅಸಹನೀಯ ಮೌನವನ್ನು ಧರಿಸಿದಂತೆ ಆತನಿಗೆ ಭಾಸವಾಗುತ್ತಿತ್ತು.
ಕೇವಲ 18ರ ವಯಸ್ಸಿನ ಎಡ್ಡಿ ಯನ್ನು ಬಂಧಿಸಿದ ಎಸ್ ಎಸ್ ಆಫೀಸರ್ಗಳು ಆತನನ್ನು ಸಾಕಷ್ಟು ಹಣ್ಣುಗಾಯಿ ನೀರುಗಾಯಿ ಮಾಡಿದರು. ಆತನನ್ನು ಬುಚೆನ್ ವಾಡ್ ಕಾನ್ಸಂಟ್ರೇಶನ್ ಕ್ಯಾಂಪ್ಗೆ ಕಳುಹಿಸಲಾಯಿತು ನಂತರ ಆಸ್ಟವಿಟ್ಜ್ ಗೆ ಸ್ಥಳಾಂತರ ಮಾಡಲಾಯಿತು.
ಅಲ್ಲಿ ಆತ ಹಸಿವು ನೀರಡಿಕೆಯಿಂದ ಬಳಲಿ ತನ್ನ ಹಲವಾರು ಸ್ನೇಹಿತರು ನರಳಿ ಸಾಯುವುದನ್ನು ನೋಡಿದನು. ಹಿಟ್ಲರ್ ನ ಸೈನಿಕರು ಹಲವಾರು ಮೈಲುಗಳ ದೂರವನ್ನು ಡೆತ ಮಾರ್ಚ್ ಎಂಬ ಹೆಸರಿನಲ್ಲಿ ಬರಿಗಾಲಿನಲ್ಲಿ ಮಂಜಿನಲ್ಲಿ ನಡೆಸಿಕೊಂಡು ಹೋದರು.
ಪರಕೀಯರ ಆಜ್ಞೆಯಂತೆ ತನ್ನದೇ ಜನರ ಸಮಾಧಿಗಳಿಗೆ ನೆಲವನ್ನು ಅಗೆದು ಮಣ್ಣು ತೋಡಿದನು. ಆತನಿಗೆ ಹಲವಾರು ಬಾರಿ ಜೀವದಾನ ದೊರೆಯಿತು. ಇಷ್ಟೆಲ್ಲಾ ಸಂಕಟ, ಕಷ್ಟಗಳ ನಡುವೆಯೂ ಎಡ್ಡಿ ಬದುಕಿದನು
ಇಷ್ಟೆಲ್ಲಾ ನೋವು, ಸಂಕಟ, ಹಸಿವು, ಚಿತ್ರ ಹಿಂಸೆಗಳ ನಡುವೆಯೂ ಬದುಕಲು ಸಾಧ್ಯವೇ ಎಂದು ನೀವು ಕೇಳಬಹುದು. ಮುಕ್ತವಾಗಿ ನಗಬಹುದೇ? ಎಂದು ಆಶ್ಚರ್ಯ ಪಡಬಹುದು
ಹೌದು ಎಡ್ಡಿ ಮಾಡಿದ್ದು ಕೂಡ ಇದನ್ನೇ ಆತ ನೂರಾರು ಬಾರಿ ಈ ಕುರಿತು ತನ್ನನ್ನು ತಾನು ಪ್ರಶ್ನಿಸಿಕೊಂಡನು. ತುಂಬಾ ದಿನಗಳವರೆಗೆ ವರ್ಷಗಳವರೆಗೆ ಆತ ಸಿಟ್ಟಾಗಿದ್ದ ಆತನ ಮನಸ್ಸು ಹತೋಟಿ ಕಳೆದುಕೊಂಡು ಮುರಿದು ಹೋಗಿತ್ತು.
ನಿಧಾನವಾಗಿ ಆತ ತನ್ನನ್ನು ತಾನು ವಾಸ್ತವಕ್ಕೆ ತೆರೆದುಕೊಂಡ. ಆತನ ಆಯ್ಕೆ ವಿಭಿನ್ನವಾಗಿತ್ತು. ಆತ ದ್ವೇಷಕ್ಕೆ ಬದಲಾಗಿ ಪ್ರೀತಿಯನ್ನು, ತಾನುಂಡ ಕಹಿಗೆ ಬದಲಾಗಿ ಧನ್ಯತೆಯನ್ನು, ನೋವಿಗೆ ಬದಲಾಗಿ ಸಂತೋಷವನ್ನು ಆಯ್ದುಕೊಂಡ.
ಎರಡನೇ ಮಹಾಯುದ್ಧದ ನಂತರ ಎಡ್ಡಿ ಆಸ್ಟ್ರೇಲಿಯಾ ಗೆ ತೆರಳಿದ. ಅಲ್ಲಿ ಆತ ತನ್ನದೇ ಬದುಕನ್ನು ಕಟ್ಟಿಕೊಂಡ ಮದುವೆಯಾದ ಶೂನ್ಯದಿಂದ ಬದುಕನ್ನು ಆರಂಭಿಸಿ ಯಶಸ್ವಿಯಾದ.ದಶಕಗಳ ಕಾಲ ಆತ ಸಿಡ್ನಿ ನಗರದಲ್ಲಿರುವ ಯಹೂದಿಗಳ ಸಂಗ್ರಹಾಲಯದಲ್ಲಿ ತನ್ನ ಕಥೆಯನ್ನು ಹೇಳುತ್ತಾ ಕಾಲ ಕಳೆದ. ಹಾಗೆ ಆತ ತನ್ನ ಕಥೆಯನ್ನು ಹೇಳಲು ಕಾರಣ ಆತನ ನೋವು ಮತ್ತು ನಿರಾಶೆಯ ಬದುಕನ್ನು ಅನಾವರಣಗೊಳಿಸಲು ಖಂಡಿತ ಅಲ್ಲ ಬದಲಾಗಿ ಹೇಗೆ ಬದುಕನ್ನು ಸರಳವಾಗಿಸಿಕೊಳ್ಳಬೇಕು, ಬದುಕಿನಲ್ಲಿ ಹೇಗೆ ಮುನ್ನಡೆಯಬೇಕು ಎಂಬುದನ್ನು ಕಲಿಸಲು.
ತನ್ನನ್ನು ಭೇಟಿಯಾಗಲು ಬಂದ ಶಾಲೆಯ ಮಕ್ಕಳಿಗೆ ಆತ ಹೇಳುತ್ತಿದ್ದದ್ದು ಒಂದೇ ಸಂತೋಷ ಎನ್ನುವುದು ಆಕಾಶದಿಂದ ಬಂದು ಬೀಳುವುದಿಲ್ಲ… ಅದು ನಿಮ್ಮ ಕೈಯಲ್ಲಿಯೇ ಇದೆ ಎಂದು
“ ಜೀವನವನ್ನು ಸುಂದರಗೊಳಿಸಿಕೊಳ್ಳುವುದು ನಮ್ಮ ಕೈಯಲ್ಲಿಯೇ ಇದೆ.
ಇನ್ನು ತಾನು ಹೇಳಿದಂತೆಯೇ ಆತ ಬದುಕಿದನಲ್ಲ ಅದುವೇ ಅತ್ಯಂತ ವಿಶೇಷವಾದದ್ದು. ನಾನೆಂದೂ ಎಡ್ಡಿಯನ್ನು ಭೇಟಿಯಾಗುವುದಿಲ್ಲ ನಿಜ, ಆದರೆ ಆತನ ‘ಹ್ಯಾಪಿಯೆಸ್ಟ್ ಮ್ಯಾನ್ ಆನ್ ಅರ್ತ್’ ಎಂಬ ಪುಸ್ತಕವನ್ನು ಓದಿದಾಗ ನಿಜವಾಗಿಯೂ ಕಣ್ಣಾಲಿಗಳಲ್ಲಿ ನೀರು ತುಂಬಿತ್ತು.
ಸಣ್ಣ ಸಣ್ಣ ಕಾರಣಗಳಿಗೆ ನಾವು ಬದುಕಿನಿಂದ ವಿಮುಖರಾಗುತ್ತೇವೆ. ಹದಿಹರೆಯದ ಮಕ್ಕಳಂತೂ ತಂದೆ ತಾಯಿ ಬೈದರೆಂದು, ಮೊಬೈಲ್ ಕೊಡುವುದಿಲ್ಲ ಎಂದು, ಸಾಮಾಜಿಕ ಜಾಲತಾಣಗಳನ್ನು ಬಳಸುವುದಕ್ಕೆ ಅಡ್ಡಿ ಮಾಡಿದರೆಂದು, ಪ್ರೇಮ ವೈಫಲ್ಯವಾಯಿತೆಂದು, ಪ್ರೀತಿಸಿದ ಸಂಗಾತಿ ಕೈ ಕೊಟ್ಟರೆಂದು, ಎಷ್ಟೆಲ್ಲಾ ಓದಿದರೂ ನೌಕರಿ ಸಿಗಲಿಲ್ಲವೆಂದು, ನೌಕರಿ ಸಿಕ್ಕರೂ ತನ್ನಿಚ್ಛೆಯ ಬದುಕನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು, ತನ್ನ ಸ್ನೇಹಿತರನ್ನು ನೋಡಿ ಅವರಂಥಾಗಲಿಲ್ಲವೆಂದು ಹೀಗೆ ಅತ್ಯಂತ ಸಣ್ಣ ಪುಟ್ಟ ಕಾರಣಗಳಿಗೆ ಬದುಕಿನೊಂದಿಗೆ ಮುನಿಸಿಕೊಳ್ಳುವ, ಬದುಕನ್ನೇ ಮುಗಿಸಿಕೊಳ್ಳುವ ಹುನ್ನಾರಕ್ಕೆ ಕೈ ಹಾಕುವ ಜನರನ್ನು ನಾವು ನೋಡುತ್ತೇವೆ.
ರಸ್ತೆಯಲ್ಲಿ ಹೋಗುವಾಗ ವಿಪರೀತ ಟ್ರಾಫಿಕ್ ನ ಕುರಿತು, ಜನರ ದುರಭ್ಯಾಸಗಳ ಕುರಿತು, ಮಳೆ, ಚಳಿ, ಬಿಸಿಲು ವಾತಾವರಣಗಳ ಕುರಿತು, ನಮ್ಮ ಪಾಲಕರು, ಸ್ನೇಹಿತರು, ಒಡಹುಟ್ಟಿದವರ ಕುರಿತು, ಸಂಗಾತಿ, ಉದ್ಯೋಗ, ಮಕ್ಕಳು ಹೀಗೆ ದೂರಲು ನಮಗೆ ಹತ್ತು ಹಲವು ಸಂಗತಿಗಳನ್ನು ಹುಡುಕುತ್ತೇವೆ.
ಭೌತಿಕ ಜಗತ್ತಿನಲ್ಲಿ ಸಿಗದ ಸಂತಸವನ್ನು ಭ್ರಾಮಕ ಜಗತ್ತಿನಲ್ಲಿ ಪಡೆಯುವ ಆಶಯದಿಂದ ನಮ್ಮ ಕೈಯಲ್ಲಿನ ಮೊಬೈಲಿನಲ್ಲಿ ಒಂದರ ಹಿಂದೆ ಒಂದರಂತೆ ಸಾಮಾಜಿಕ ಜಾಲತಾಣಗಳ ಸೈಟುಗಳಿಗೆ ಭೇಟಿ ಕೊಡುವ ಮೂಲಕ ಸಮಯ ಕಳೆಯುತ್ತೇವೆ. ನಿಮಿಷಗಳು ಗಂಟೆಗಳಾಗಿ ಗಂಟೆಗಳು ದಿನಗಳಾಗುವ ಹೊತ್ತಿಗೆ ನಮ್ಮ ಬದುಕಿನ ಎಷ್ಟೋ ಮುಖ್ಯವಾದ ವಿಷಯಗಳು ನಮಗೆ ನಿಲುಕದೆ ಹೋಗಿರುತ್ತವೆ ಎಂಬುದನ್ನು ಅರಿಯದೆ ಮತ್ತೆ ಬದುಕಿನ ಕುರಿತು ಮುನಿಸಿಕೊಳ್ಳುತ್ತೇವೆ.
ಪ್ರತಿಕ್ಷಣವೂ ಸಾವಿನ ದವಡೆಯಲ್ಲಿ ಸಿಲುಕಿಕೊಂಡು ಜೀವನ್ಮರಣಗಳ ನಡುವೆ ಹೋರಾಡಿ ಬದುಕಿ ಬಂದ ನಂತರ ತಮಗೆ ಈ ರೀತಿಯ ಬದುಕನ್ನು ಕರುಣಿಸಿದ ಬದುಕಿನ ಕುರಿತು ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಅಚ್ಚರಿಯ ವಿಷಯ ಅಲ್ವೇ.
ಬದುಕಿನ ಸಂತಸ ಶುದ್ಧವಾದ ಮುಂಜಾವುಗಳಲ್ಲಿದೆ… ನಾವು ಕುಡಿಯುವ ಒಂದು ಕಪ್ಪು ಚಹಾದಲ್ಲಿದೆ, ನಾವು ಹಂಚಿಕೊಳ್ಳುವ ಒಂದು ಪುಟ್ಟ ಮುಗುಳ್ನಗೆಯಲ್ಲಿವೆ ಪ್ರತಿದಿನ ಮುಂಜಾನೆ ಎದ್ದು ಮನೆಯವರೊಂದಿಗೆ ಕುಳಿತು ಸಂತಸದಿಂದ ತಿಂಡಿ ತಿನ್ನುವುದರಲ್ಲಿದೆ. ವಿರಾಮದ ಸಮಯವನ್ನು ಕುಟುಂಬ, ಸ್ನೇಹಿತರು ಮತ್ತು ಮಕ್ಕಳೊಂದಿಗೆ ಕಳೆಯುವುದರಲ್ಲಿದೆ ಎಂಬುದು ನಮಗೆ ಗೊತ್ತಿಲ್ಲದೇ ಇಲ್ಲ ಆದರೆ ಅದರಲ್ಲಿ ಯಾವುದೇ ರೀತಿಯ ಕಿಕ್ ಇಲ್ಲ. ನಾವು ಬಯಸುವುದು ಶೀಘ್ರ ಮತ್ತು ಅತಿರೇಕದ ಸಂತಸಗಳನ್ನು. ಬದುಕಿನಲ್ಲಿ ಮನರಂಜನೆ ಇರಬೇಕೆ ಹೊರತು ಮನರಂಜನೆಯೇ ಬದುಕಾಗಬಾರದು.
ಎಡ್ಡಿಯಿಂದ ನಾವು ಕಲಿಯಬೇಕಾಗಿರುವುದು ಪ್ರೀತಿಯ ಪಾಠವನ್ನು. ಕ್ರೂರಿ ಹಿಟ್ಲರ್ ನಿಗಿಂತ ಹೆಚ್ಚು ಕಾಲ ಬದುಕಿದ, ದ್ವೇಷವನ್ನು ಸೋಲಿಸಿ ಬದುಕಿದ ಎಡ್ಡಿ ನಮಗೆ ಬಿಟ್ಟು ಹೋಗಿರುವುದು ಬದುಕಿನಲ್ಲಿ ಭರವಸೆಯನ್ನು ಹೊಂದುವುದನ್ನು.
ಜಗತ್ತಿನಲ್ಲಿ ಬದುಕು ಭಾರವೆನಿಸಿದಾಗ, ದಣಿವಾದಂತೆ ಭಾಸವಾದಾಗ, ಉದ್ವೇಗಕ್ಕೆ ಒಳಗಾದಾಗ, ಅಂದುಕೊಂಡ ಕೆಲಸಗಳಾವುದೂ ನಾವು ಅಂದುಕೊಂಡಂತೆ ಆಗದೆ ಹೋದಾಗ ಎಡ್ಡಿ ಜಾಕುವನ್ನು ನೆನಪಿಸಿಕೊಳ್ಳಿ.
ಆತ ಸಾಮಾನ್ಯ ವ್ಯಕ್ತಿಯಾಗಿದ್ದ ಎಂದಲ್ಲ…. ಆತ ಮಾನವನಾಗಿದ್ದ. ನಾವೆಲ್ಲರೂ ನಂಬಲೇಬೇಕಾದಂತಹ ಸತ್ಯವೊಂದನ್ನು ಆತ ಸಾಬೀತು ಪಡಿಸಿದ್ದ.
ನಮ್ಮ ಬದುಕಿನಲ್ಲಿ ಅತ್ಯಂತ ಗಾಢವಾದ ಕತ್ತಲೆ ತುಂಬಿದ ಸಮಯದಲ್ಲಿ, ಇನ್ನು ಬದುಕಲು ಸಾಧ್ಯವೇ ಇಲ್ಲ ಎಂಬ ನೋವಿನಿಂದ ಒದ್ದಾಡುವಾಗ ಕೂಡ ಸಂತಸದಿಂದ ಇರಲು ಸಾಧ್ಯವಾಗುತ್ತದೆ
ಹಾಗೆ ಬದುಕು ಮತ್ತೆ ಆರಂಭವಾಗುವುದು ಸಂತಸದಿಂದ ಇರಬೇಕು ಎಂಬ ಆಯ್ಕೆಯೊಂದಿಗೆ…. ಏನಂತೀರಾ ಸ್ನೇಹಿತರೇ
ವೀಣಾ ಹೇಮಂತಗೌಡ ಪಾಟೀಲ್ ಮುಂಡರಗಿ ಗದಗ್



 
		 
		

 
                    
 
    