ಧಾರವಾಡ ಜೂ.06: ಕಲಘಟಗಿ ತಾಲ್ಲೂಕಿನ ಆಲದಕಟ್ಟಿ ನಿವಾಸಿ ಫಕೀರಪ್ಪ ಹರಿಜನ ಇವರು 2020ರಲ್ಲಿ ಟಾಟಾಟ್ರಕ್ನ್ನು ಖರೀದಿಸಿದ್ದರು. ಅದಕ್ಕೆ ಎದುರುದಾರರ ಎಚ್.ಡಿ.ಎಫ್.ಸಿ.ಯರಗೊ ಜನರಲ್ ವಿಮಾಕಂಪನಿಯಲ್ಲಿ ಪಾಲಸಿ ಮಾಡಿಸಿದ್ದರು. ಪಾಲಸಿಯು ಅವಧಿಯಲ್ಲಿದ್ದಾಗ ದೂರುದಾರರ ಟ್ರಕ್ ಮುಂಡರಗಿ ತಾಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ಅಪಘಾತಕ್ಕೀಡಾಗಿ ಟ್ರಕ್ ಜಖಮ್ ಆಗಿರುತ್ತದೆ. ನಂತರ ಆ ಟ್ರಕ್ನ್ನು ಮನೀಕಬಾಗ ಅಟೋ ಮೂಬೈಲ್ಸ್ ಹುಬ್ಬಳ್ಳಿ ಇವರಲ್ಲಿ ರಿಪೇರಿ ಮಾಡಲು ಬಿಟ್ಟಾಗ ಅವರು ಅದರ ರಿಪೇರಿ ಖರ್ಚು ರೂ.10,02,322 ಅಂತಾ ಹೇಳಿರುತ್ತಾರೆ. ಆದರೆ ಎದುರುದಾರ ಎಚ್.ಡಿ.ಎಫ್.ಸಿ.ಯರಗೊ ಜನರಲ್ ವಿಮಾ ಕಂಪನಿಯ ಸರ್ವೇಯರ್ ಅದರ ರಿಪೇರಿ ಬೆಲೆ ರೂ.8,47,565 ಅಂತಾ ರಿಪೋರ್ಟನ್ನು ಕೊಟ್ಟಿರುತ್ತಾರೆ. ಅದರಂತೆ ದೂರುದಾರರು ತಮ್ಮ ವಾಹನವನ್ನು ಮಾನಿಕಬಾಗ ಅಟೋ ಮೂಬೈಲ್ಸ್ ಹತ್ತಿರ ರಿಪೇರಿಗೆ ಬಿಟ್ಟಿರುತ್ತಾರೆ.
ನಂತರ ವಾಹನದ ವಿಮಾ ಮೊತ್ತವನ್ನು ಕೊಡುವಂತೆ ಎದುರುದಾರರಲ್ಲಿ ಕೇಳಿಕೊಂಡಾಗ ಅವರು ಅದನ್ನು ಕೊಡದೇ ದೂರುದಾರರ ಕ್ಲೇಮನ್ನು ನಿರಾಕರಿಸಿರುತ್ತಾರೆ. ಎದುರುದಾರರ ಅಂತಹ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ಮೇಲೆ ಕ್ರಮಕೈಗೊಂಡು ಪರಿಹಾರಕೊಡಿಸುವಂತೆ ದೂರುದಾರರು ದಿ.13/05/2024 ರಂದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಸದಸ್ಯರು, ದೂರುದಾರರು ತಮ್ಮ ವಾಹನಕ್ಕೆ ಎದುರುದಾರರಿಂದ ವಿಮಾ ಪಾಲಸಿ ಮಾಡಿಸಿರುವುದು ಒಪ್ಪಿತ ವಿಷಯವಿದೆ. ಸದರಿ ಪಾಲಸಿ ಅಪಘಾತ ಕಾಲಕ್ಕೆ ಚಾಲ್ತಿಯಿರುವುದು ಒಪ್ಪಿತ ವಿಷಯವಿದೆ. ಮಾನಿಕಬಾಗ ಅಟೋ ಮೂಬೈಲನವರು ವಾಹನ ರಿಪೇರಿ ವೆಚ್ಚ ರೂ.10,02,322 ಆಗುತ್ತದೆ ಅಂತಾ ವರದಿಕೊಟ್ಟಿದ್ದಾರೆ. ಎದುರುದಾರ ವಿಮಾಕಂಪನಿಯ ಸರ್ವೆಯರ ಆ ವಾಹನ ರಿಪೇರಿ ವೆಚ್ಚ ರೂ.8,47,565 ಅಂತಾ ವರದಿಕೊಟ್ಟಿದ್ದಾರೆ.
ಆದರೆ ಎದುರುದಾರರು ವಾಹನ ರಿಪೇರಿ ವೆಚ್ಚ ಅಂತಾ ಕೇವಲ ರೂ.4,90,169 ಸಂದಾಯ ಮಾಡಿದ್ದಾರೆ. ಆ ಬಗ್ಗೆ ವಿಮಾ ಕಂಪನಿಯವರು ಸರಿಯಾದ ಕಾರಣ ನೀಡಿಲ್ಲ. ಆದ್ದರಿಂದ ವಿಮಾ ಕಂಪನಿಯ ಕೋರಿಕೆಯನ್ನು ಆಯೋಗ ತಳ್ಳಿಹಾಕಿ ವಾಹನ ದುರಸ್ತಿ ವೆಚ್ಚವನ್ನು ರೂ.8,31,992 ರೂಪಾಯಿಗೆ ನಿಗದಿಪಡಿಸಿ ಅಷ್ಟು ಹಣಕ್ಕೆ ದೂರುದಾರರ ಕ್ಲೇಮು ಹಣಕೊಡುವಂತೆ ಆಯೋಗ ಆದೇಶಿಸಿದೆ. ಅದರಲ್ಲಿ ಈಗಾಗಲೇ ಕೊಟ್ಟಿರುವ ರೂ.4,90,169 ವಜಾ ಮಾಡಿ ಉಳಿದ ರೂ.3,45,000 ಮತ್ತು ಅದರ ಮೇಲೆ ದಿ:28/06/2024ರಿಂದ ಶೇ. 10 ರಂತೆ ಬಡ್ಡಿ ಲೆಕ್ಕ ಹಾಕಿ ದೂರುದಾರ ಗ್ರಾಹಕನಿಗೆ ಸಂದಾಯ ಮಾಡುವಂತೆ ಆಯೋಗ ವಿಮಾ ಕಂಪನಿಗೆ ನಿರ್ದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗೆ ರೂ.50,000 ಪರಿಹಾರ ಹಾಗೂ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.10,000 ಕೊಡುವಂತೆ ಎದುರುದಾರರಾದ ಎಚ್.ಡಿ.ಎಫ್.ಸಿ.ಯರಗೊ ವಿಮಾ ಕಂಪನಿಗೆ ಆಯೋಗ ನಿರ್ದೇಶಿಸಿದೆ.