ರಾಜ್ಯದಲ್ಲಿ ಹಲವೆಡೆ ಸದ್ಯ ಮಳೆಯಾಗುತ್ತಿದ್ದರು ಕಳೆದ ಕೆಲ ತಿಂಗಳಿನಿಂದ ಇದ್ದ ಬಿಸಿಲ ಝಳ ಮಾತ್ರ ಹಾಗೇ ಇದೆ. ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲ ಬಿಸಿ ಇನ್ನೂ ಕಡಿಮೆ ಆಗಿಲ್ಲ. ತಾಪಮಾನ ಹೆಚ್ಚಾಗಿರುವುದರಿಂದ ಮದ್ಯ ಮಾರಾಟ ಕೂಡ ಭರದಿಂದ ಸಾಗಿದೆ.
ಹೌದು… ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲೇ ಅತಿಹೆಚ್ಚು ಬಿಸಿಲು ಇರುವುದೇ ರಾಯಚೂರು ಜಿಲ್ಲೆಯಲ್ಲಿ. ಈ ಬಾರಿ ಎರಡು ತಿಂಗಳು ಗರಿಷ್ಠ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲೇ ಇತ್ತು. ಬಿಸಿಲಿನ ಝಳಕ್ಕೆ ದೇಹವನ್ನು ತಂಪಾಗಿಸಿ ಇಟ್ಟುಕೊಳ್ಳುವುದೇ ಒಂದು ಸವಾಲಾಗಿತ್ತು. ಹೀಗಾಗಿ ಜಿಲ್ಲೆಯ ಮದ್ಯ ಪ್ರಿಯರು ದಾಖಲೆಯ ಬಿಯರ್ ಸೇವಿಸಿ ದೇಹ ತಂಪು ಮಾಡಿಕೊಂಡಿದ್ದಾರೆ.
ಕಳೆದ ಒಂದು ವರ್ಷದಲ್ಲಿ ಕುಡಿದಷ್ಟು ಬಿಯರ್ ಅನ್ನು ಈ ವರ್ಷದ ಬೇಸಿಗೆಯಲ್ಲೇ ಕುಡಿದು ಜಿಲ್ಲೆಯಲ್ಲಿ ದಾಖಲೆ ಮಾಡಿದ್ದಾರೆ. 2023ರ ಜೂನ್ ನಲ್ಲಿ 69,488 ಬಾಕ್ಸ್‌ಗಳು ಹಾಗೂ ಡಿಸೆಂಬರ್‌ನಲ್ಲಿ 62,164 ಬಿಯರ್ ಬಾಕ್ಸ್ ಮಾರಾಟವಾಗಿದ್ದವು. ಪ್ರಸಕ್ತ ವರ್ಷದ ಏಪ್ರಿಲ್ ತಿಂಗಳೊಂದರಲ್ಲೇ 70,209 ಬಾಕ್ಸ್ ಬಿಯರ್ ಬಾಕ್ಸ್‌ಗಳು ಮಾರಾಟವಾಗಿವೆ. ಬಿಸಿಲಿನಿಂದಾಗಿ ಅನೇಕರು ತಂಪು ಪಾನಿಯಾ, ಎಳನೀರು ಸೇವನೆ ಮಾಡುವುದು ಸಹಜ. ಆದರೆ , ಈ ಬಾರಿ ಮದ್ಯ ಪ್ರಿಯರ ಮೊದಲ ಆಯ್ಕೆ ಬಿಯರ್ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೇಸಿಗೆಯಲ್ಲಿ ನಿರೀಕ್ಷೆಯಷ್ಟು ಮದ್ಯ ಮಾರಾಟವಾಗಿಲ್ಲ. ಆದರೆ ಬಿಯರ್ ಕುಡಿಯುವವರ ಸಂಖ್ಯೆ 2023 ಕ್ಕಿಂತ 2024ರಲ್ಲಿ ಹೆಚ್ಚು ಇದೆ.
ಒಂದೇ ತಿಂಗಳಲ್ಲಿ 70,209 ಬಾಕ್ಸ್ ಬಿಯರ್ ಮಾರಾಟ ಮಾನ್ವಿ, ರಾಯಚೂರು ಹಾಗೂ ದೇವದುರ್ಗ ತಾಲ್ಲೂಕು ರಾಯಚೂರು ಡಿಪೊ ವ್ಯಾಪ್ತಿಯಲ್ಲಿವೆ. ಮೂರು ತಾಲ್ಲೂಕುಗಳಲ್ಲಿ ಏಪ್ರಿಲ್ ನಲ್ಲಿ ಒಟ್ಟು 94,957 ಬಾಕ್ಸ್ ಮದ್ಯ ಮಾರಾಟವಾಗಿದೆ. 70,209 ಬಾಕ್ಸ್ ಬಿಯರ್ ಮಾರಾಟವಾಗಿದೆ. 2023ರ ಏಪ್ರಿಲ್ನಲ್ಲಿ 94,896 ಬಾಕ್ಸ್ ಮದ್ಯ ಹಾಗೂ 46,553 ಬಾಕ್ಸ್ ಬಿಯರ್ ಮಾರಾಟವಾಗಿತ್ತು.
ಜಿಲ್ಲೆಯಲ್ಲಿ ಫೆಬ್ರುವರಿಯಿಂದಲೇ ರಣ ಬಿಸಿಲು ಕಾಣಸಿಕೊಂಡಿದೆ. ಹೀಗಾಗಿ ಮದ್ಯಪ್ರಿಯರು ಬಾರ್ ಮತ್ತು ರೆಸ್ಟೊರೆಂಟ್ ಗಿಂತ ಹೊಲ ಹಾಗೂ ಗುಡ್ಡಗಾಡು, ಅರಣ್ಯ ಪ್ರದೇಶಗಳಲ್ಲಿ ತಂಡೋಪ ತಂಡವಾಗಿ ಮದ್ಯ ಪಾನ ಮಾಡುವುದು ಸಾಮಾನ್ಯವಾಗಿದೆ. 2024ರ ಫೆಬ್ರುವರಿ, ಮಾರ್ಚ್ ಹಾಗೂ ಏಪ್ರಿಲ್ ನಲ್ಲಿ ಅನುಕ್ರಮವಾಗಿ 63,464, 62,679 ಹಾಗೂ 70,209 ಬಾಕ್ಸ್ ಬಿಯರ್ ಮಾರಾಟವಾಗಿದೆ.
1,10,527, 1,03,888 ಹಾಗೂ 94957 ಬಾಕ್ಸ್ ಮದ್ಯ ಮಾರಾಟವಾಗಿದೆ. 2023ರಲ್ಲಿ ಜನವರಿ, ಫೆಬ್ರುವರಿ, ಮಾರ್ಚ್, ಎಪ್ರಿಲ್ ಹಾಗೂ ಮೇ ನಲ್ಲಿ ಅನುಕ್ರಮವಾಗಿ 47,379, 62,417, 58,190, ಎಪ್ರಿಲ್ 46553 ಹಾಗೂ ಮೇ ನಲ್ಲಿ 53,965 ಬಿಯರ್ ಮಾರಾಟವಾಗಿತ್ತು. ಕಳೆದ ಡಿಸೆಂಬರ್ ನಲ್ಲಿ ಹೊಸ ವರ್ಷವನ್ನು ಸ್ವಾಗತಿಸುವ ನೆಪದಲ್ಲಿ 1,25,497 ಗರಿಷ್ಠ ಮದ್ಯ ಮಾರಾಟವಾದರೆ 62,164 ಬಿಯರ್ ಬಾಕ್ಸ್ ಪಾನಪ್ರಿಯರ ಹೊಟ್ಟೆ ಸೇರಿದೆ. 2023 ವರ್ಷದಲ್ಲಿ ಮದ್ಯದಿಂದ ₹52,522 ಲಕ್ಷ ಹಾಗೂ ₹1,087 ಲಕ್ಷ ಬಿಯರ್ ನಿಂದ ಅಬಕಾರಿ ಇಲಾಖೆಯ ಖಜಾನೆಗೆ ಸೇರಿದೆ ಎನ್ನುತ್ತಿವೆ ಇಲಾಖೆಯ ದಾಖಲೆಗಳು.
ಆರೋಗ್ಯ ದೃಷ್ಟಿಯಿಂದ ಬಿಯರ್ ಕುಡಿಯುವವರ ಸಂಖ್ಯೆ ಹೆಚ್ಚಳ ರಾಯಚೂರು ಆಂದ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯದ ಗಡಿಭಾಗದಲ್ಲಿರುವ ಕಾರಣ ಪಕ್ಕದ ರಾಜ್ಯಗಳ ಮದ್ಯ ಇಲ್ಲಿ ಕಡಿಮೆ ದರದಲ್ಲಿ ದೊರೆಯುತ್ತಿವೆ. ಮತ್ತೊಂದೆಡೆ ಹೊರ ರಾಜ್ಯದಿಂದ ಕಲಬೆರಕೆ ಮದ್ಯವು ಅಲ್ಲಲ್ಲಿ ಮಾರಾಟವಾಗುತ್ತದೆ. ಹೀಗಾಗಿ ಆರೋಗ್ಯದ ದೃಷ್ಟಿಯಿಂದ ಮದ್ಯ ಬಿಟ್ಟು ಬಿಯರ್ ಸೇವಿಸಿದ್ದಾರೆ ಎಂದು ಪಾನಪ್ರಿಯರು ವಿಶ್ಲೇಷಿಸುತ್ತಾರೆ. ‘ಯಾವುದೇ ಮದ್ಯ ಸೇವೆನೆ ಹಾನಿಕಾರಕ ಹೌದು. ಆದರೆ ಬಿಯರ್ ನಲ್ಲಿ ಕಡಿಮೆ ಪ್ರಮಾಣದ ಅಲ್ಕೋಹಾಲ್ ಇರುವ ಕಾರಣ ಹಾಗೂ ಅದರಲ್ಲೂ ಬೇಸಿಗೆಯಲ್ಲಿ ಬಿಯರ್ ಕುಡಿಯುವ ಟ್ರೆಂಡ್ ರಾಯಚೂರು ಜಿಲ್ಲೆಯಲ್ಲಿ ಇದೆ. ಇದೇ ಕಾರಣಕ್ಕೆ ಬಿಯರ್ ಮಾರಾಟ ಹೆಚ್ಚಾಗಲು ಕಾರಣ’ ಎಂದು ಅಬಕಾರಿ ಇಲಾಖೆಯ ಉಪ ಆಯುಕ್ಷ ರಮೇಶ ಹೇಳುತ್ತಾರೆ.