ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಮನೆಗಳಲ್ಲಿಯೂ ಗಂಡಸರ ಒಂದೇ ಒಂದು ತಕರಾರು ಎಂದರೆ ತಮ್ಮ ಹೆಂಡತಿಯರು ಅತಿ ಹೆಚ್ಚು ಫೋನ್ ಬಳಸುತ್ತಾರೆ ಎಂದು. ಮನೆಯ ಯಾವುದೇ ಕೆಲಸಗಳಲ್ಲಿ ಏರುಪೇರಾದರೂ ಅದಕ್ಕೆ ಕಾರಣ ಹೆಂಡತಿಯರ ಕೈಯಲ್ಲಿರುವ ಮೊಬೈಲ್ ಫೋನ್ ಎಂದು ದೂಷಿಸುತ್ತಾರೆ. ಮತ್ತೆ ಕೆಲವರು ಹೆಣ್ಣು ಮಕ್ಕಳ ಕೈಯಲ್ಲಿ ಮೊಬೈಲ್ ಇದ್ದರೆ ಹೊತ್ತು ಹೋದದ್ದೇ ತಿಳಿಯುವುದಿಲ್ಲ ಅವರಿಗೆ ಎಂದು ತಮಾಷೆ ಮಾಡುತ್ತಲೇ ತಾವು ಕೂಡ ಮೊಬೈಲ್ನ ಸ್ಕ್ರೀನ್ ತೀಡುತ್ತಾರೆ… ಇದು ವಿಪರ್ಯಾಸವನ್ನು ಅದೇ ಮತ್ತೇನು?
ಒಂದೊಮ್ಮೆ ಮೊಬೈಲ್ ಕರೆಯಲ್ಲಿ ಮುಳುಗಿ ಹಾಲನ್ನು ಆಕೆ ಉಕ್ಕಿಸಿದರೆ ಇಡೀ ದಿನ ಮನೆಯಲ್ಲಿ ಅದನ್ನೇ ತಮಾಷೆ ಎಂಬಂತೆ ಹೇಳಿಕೊಂಡು ನಗುವ ಗಂಡ ಮತ್ತು ಮನೆಯ ಸದಸ್ಯರು ತಮ್ಮ ಮೇಲೆ ಮನೆಯನ್ನು ಬಿಟ್ಟು ಹೆಂಡತಿ ಯಾವುದಾದರು ಸಭೆ ಸಮಾರಂಭಗಳಿಗೆ ಹೋಗಿದ್ದರೆ ಅದೇ ಹಾಲಿನ ಪಾತ್ರೆ ಸೀದು ತಳ ಹಿಡಿಯುವವರೆಗೂ ನೋಡದೆ ಮೊಬೈಲ್ನಲ್ಲಿ ಮುಳುಗಿ ಹೋಗಿರುವುದಕ್ಕೆ ಸಮಜಾಯಿಶಿ ಕೊಡುತ್ತಾರೆ.
ತಪ್ಪು ಮಾಡುವುದು ಗಂಡಸಿನ ಜನ್ಮಸಿದ್ಧ ಹಕ್ಕೇ? ಎಂಬುದು ಒಂದು ಪ್ರಶ್ನೆಯಾದರೆ ಹೆಣ್ಣು ಮಕ್ಕಳಿಂದ ತಪ್ಪೇ ಆಗಬಾರದು ಎಂದು ಬಯಸುವುದು ಯಾವ ರೀತಿಯ ಮಾನವೀಯತೆ. ಕೊನೆಯಲ್ಲಿ ಸೀದು ಹೋದ ಪಾತ್ರೆಯನ್ನು ತಿಕ್ಕುವವಳೂ ಮಹಿಳೆಯೇ ಮತ್ತು ಉಕ್ಕಿದ ಹಾಲನ್ನು ಒರೆಸಿ ಸ್ವಚ್ಛ ಮಾಡುವವಳು ಕೂಡ ಮಹಿಳೆಯೇ ಹೊರತು ಪುರುಷರಲ್ಲ ಎಂಬ ಸತ್ಯ ಎಲ್ಲರಿಗೂ ಗೊತ್ತು.
ಕೆಲವೊಮ್ಮೆ ಕೆಲಸದ ಒತ್ತಡದಿಂದ ಗೊಣಗುತ್ತಲೇ ಮನೆಯ ಎಲ್ಲಾ ಕೆಲಸಗಳನ್ನು ಮುಗಿಸಿ ತುಸು ಕಾಲು ಚಾಚಿ ಹೆಂಡತಿ ಮೊಬೈಲ್ ಹಿಡಿದಾಗ ಬಹಳಷ್ಟು ಬಾರಿ ಗಂಡಸರು ಬಹಳ ದಣಿದವರಂತೆ ಮಾತಾಡಿ ಗೊಣಗುವ ನೀನು ರಾತ್ರಿ ಸರ ಹೊತ್ತಿನವರೆಗೆ ಮೊಬೈಲ್ ಹಿಡಿಯೋದ್ ಯಾಕೆ? ಎಂದು ಪ್ರಶ್ನಿಸುತ್ತಾರೆ.
ಕೆಲ ಹೆಣ್ಣು ಮಕ್ಕಳು ಗಂಡನ ಈ ಮಾತಿಗೆ ಕಣ್ಣಲ್ಲಿ ನೀರು ತುಂಬಿಕೊಂಡು ಏನನ್ನೂ ಉತ್ತರಿಸದೆ ಮುಸುಗಿಕ್ಕಿಕೊಂಡರೆ ಮತ್ತೆ ಕೆಲ ಹೆಂಗಸರು ನಾನು ಮೊಬೈಲ್ ಬಳಸುವುದರಿಂದ ಆಗುವ ತಪ್ಪಾದರೂ ಏನು ಎಂದು ಪ್ರಶ್ನಿಸುತ್ತಾರೆ. ಇದರಿಂದ ಮಾತಿಗೆ ಮಾತು ಬೆಳೆದು ಜಗಳವೂ ಆರಂಭವಾಗಬಹುದು.
ಆದರೆ ನಿಜವಾದ ಕಾರಣಗಳನ್ನು ಒಬ್ಬ ಪತ್ನಿಯಾಗಿ ತಾಯಿಯಾಗಿ, ಸೊಸೆಯಾಗಿ ಮನೆಯ ಸಮಸ್ತವನ್ನು ನಿರ್ವಹಿಸುವ ಗೃಹ ಸ್ವಾಮಿನಿಯಾಗಿ ಆಕೆ ಅನುಭವಿಸುವ ತುಮುಲಗಳನ್ನು ನಿಮ್ಮ ಮುಂದೆ ಇಡುತ್ತೇನೆ.
ಮಕ್ಕಳು ಅಮ್ಮ ಅಮ್ಮ ಎಂದು ಪದೇ ಪದೇ ತಾಯಿಯನ್ನು ಕರೆದು ಆಕೆ ಅವರ ಎಲ್ಲಾ ಅವಶ್ಯಕತೆಗಳಿಗೆ ಓಗೊಡುವುದು ಯಾವ ತಾಯಂದಿರಿಗೆ ಇಷ್ಟ ಇರೋದಿಲ್ಲ ಹೇಳಿ? ಆದರೆ ತನ್ನ ವೈಯುಕ್ತಿಕತೆಯನ್ನು ಸಂಪೂರ್ಣವಾಗಿ ಅಲ್ಲಗಳೆದು
ಒಂದು ನಿಮಿಷ ಕುಳಿತುಕೊಳ್ಳಲು ಬಿಡುವಿಲ್ಲದಂತೆ ಮಕ್ಕಳು ಕಾಡಿದಾಗ ಯಾವ ತಾಯಿಗೆ ಸಹನೆಯಾದೀತು?
ಅಂತೆಯೇ ರಾತ್ರಿಯ ನೀರವದಲ್ಲಿ ಮಕ್ಕಳ ನಿದ್ರೆಯ ಸಮಯದಲ್ಲಿ ಆಕೆ ಕೆಲ ನಿಮಿಷಗಳ ಕಾಲ ಮೊಬೈಲನ್ನು ಹಿಡಿಯಬಹುದು. ಆ ಸಮಯದಲ್ಲಿ ಆಕೆ ತಾಯಾಗಿರು ವುದಿಲ್ಲ. ತಾಯಿತನದ ಮತ್ತು ಮನೆಯ ಸಮಸ್ತ ಕೆಲಸ ಕಾರ್ಯಗಳ ಹೊರತಾಗಿಯೂ ಓರ್ವ ಹೆಣ್ಣು ಮಗಳಾಗಿ ಆಕೆ ತನ್ನದೇ ಆದ ಸಮಯವನ್ನು ಅನುಭವಿಸುತ್ತಾಳೆ. ಮಕ್ಕಳು ಮಲಗಿದಾಗಿನ ನೀರವ ಮೌನದಲ್ಲಿ ಆಕೆ ಸಂಪೂರ್ಣ ಏಕಾಂಗಿಯಾಗಿ ತನ್ನನ್ನು ತಾನು ಭಾವಿಸಿಕೊಳ್ಳುವ ತಾಯ್ತನ, ಗೃಹಿಣಿ ಎಂಬ ಪಾತ್ರಗಳಿಂದ ತನ್ನತನಕ್ಕೆ ಪರಕಾಯ( ಸ್ವಕಾಯ! ) ಪ್ರವೇಶ ಮಾಡುತ್ತಾಳೆ.
ಮಕ್ಕಳ ಪಾಲನೆ ಪೋಷಣೆಯಲ್ಲಿ ಆಕೆ ತನ್ನನ್ನು ತಾನು ಮರೆತು ಹೋಗಿದ್ದು ಈ ಉಳಿದು ಹೋದ ಕ್ಷಣಗಳಲ್ಲಿ ತನ್ನ ಅಸ್ಥಿತ್ವವನ್ನು ಗುರುತಿಸಿ ತನಗಾಗಿ ಸ್ವಲ್ಪ ಸಮಯ ಕಳೆದು ಹಗುರಾಗುತ್ತಾಳೆ.ಕೆಲ ಗಂಟೆಗಳ ನಿದ್ದೆ ಆಕೆಯ ದೈಹಿಕ ದಣಿವನ್ನು ನಿವಾರಿಸಬಲ್ಲದು, ಆದರೆ ಮಾನಸಿಕ ಮತ್ತು ಭಾವನಾತ್ಮಕ ದಣಿವನ್ನು ನೀಗಿಸಲು ಆಕೆ ಆಕೆಯಾಗಿ ಉಳಿಯುವುದು ಅತ್ಯವಶ್ಯಕ.
ತಾಯಿಯಾಗಿ ಒಂದು ಮನೆಯಲ್ಲೂ ನಡೆಸುವುದು ಅತ್ಯದ್ಭುತವಾದ ಸಂಗತಿ ಮಾತ್ರವಲ್ಲ ತನುವಿನ ಚೈತನ್ಯವೆಲ್ಲ ಸೋರಿ ಹೋಗುವಂತಹ ಕ್ರಿಯೆ.. ಒಬ್ಬ ತಾಯಿ ದೂರನ್ನು ಹೇಳುತ್ತಾಳೆ ಎಂದರೆ ಆಕೆಗೆ ಸಾಕಾಗಿದೆ ಎಂದರ್ಥವಲ್ಲ… ತಾಯ್ತನದ ಅದ್ಭುತ ಆದರೆ ಅಷ್ಟೇ ತ್ರಾಸದಾಯಕವಾದ ನಿರ್ವಹಣೆಯಿಂದ ಆಕೆ ತುಸು ವಿಶ್ರಾಂತಿ ಬಯಸುತ್ತಾಳೆ, ತನ್ನ ಮಾತನ್ನು ಯಾರಾದರೂ ಕೇಳಲಿ ಎಂದು ಆಶಿಸುತ್ತಾಳೆ ತನಗೆ ಭಾವನಾತ್ಮಕವಾಗಿ ಬೆಂಬಲ ನೀಡಲಿ ಎಂದು ಎದುರು ನೋಡುತ್ತಾಳೆ.
ಮನೆಯ ಎಲ್ಲರ ಕಾಳಜಿ ಮಾಡುವವರಿಗೆ ವೈಯಕ್ತಿಕ ಕಾಳಜಿಯ ಅವಶ್ಯಕತೆಯೂ ಇರುತ್ತದೆ ಎಂಬುದು ನೆನಪಿರಲಿ!
ಸಾಮಾಜಿಕ ಜಾಲತಾಣಗಳಿಂದ ಆಕೆ ಕಾಲನ ಚಕ್ರದಲ್ಲಿ ತನ್ನ ಕಳೆದು ಹೋದ ಬಾಲ್ಯದ ಸ್ನೇಹಿತೆಯರನ್ನು, ಸಂತಸದ ಗಳಿಗೆಗಳನ್ನು ಮತ್ತೆ ನೆನಪಿಸಿಕೊಳ್ಳುತ್ತಾಳೆ. ಒಬ್ಬಿ ಬ್ಬರು ಆತ್ಮೀಯ ಸ್ನೇಹಿತೆಯರ ಜೊತೆ ತನ್ನ ಮನದ ಮಾತುಗಳನ್ನು ಹಂಚಿಕೊಳ್ಳುತ್ತಾಳೆ. ಯಾರಲ್ಲೂ ಹೇಳಿಕೊಳ್ಳಲಾಗದ ತನ್ನ ವೈಯುಕ್ತಿಕ ಜೀವನದ ಹಳವಂಡಗಳನ್ನು ಅವರೊಂದಿಗೆ ಹೇಳಿಕೊಂಡು ಹಗುರಾಗುತ್ತಾಳೆ. ಎರಡು ಮೂರು ದಶಕಗಳ ಹಿಂದಿನ ಸ್ನೇಹಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪರಸ್ಪರ ನಂಬರ್ ಗಳನ್ನು ಹಂಚಿಕೊಂಡು ಮಾತನಾಡಿ ಸಂಭ್ರಮಿಸಿ ತಾವು ಓದಿದ ಶಾಲೆಯ ಶಿಕ್ಷಕರನ್ನು ಸ್ಮರಿಸಿ ಒಂದು ದಿನ ಅವರಿಗಾಗಿಯೇ ಮೀಸಲಿಟ್ಟು ಗುರುವಂದನೆ ಮಾಡುತ್ತಿರುವುದು ಇತ್ತೀಚೆಗೆ ವ್ಯಾಪಕವಾಗಿರುವುದು ಕಾರಣ ಅವರೆಲ್ಲರೂ ಮತ್ತೊಮ್ಮೆ ತಮ್ಮ ಬಾಲ್ಯದ ನೆನಪಿನ ಕಣಜವನ್ನು ಕೆದಕಿ ಬದುಕಿನ ಬಹುಮೂಲ್ಯ ಆಸ್ತಿಯನ್ನು ಮರಳಿ ಪಡೆಯುತ್ತಾರೆ. ಈ ಆಸ್ತಿ ಅವರ ಹೊಟ್ಟೆ ತುಂಬಿಸುವುದಿಲ್ಲ ನಿಜ ಆದರೆ ಮನಸ್ಸಿನ ಖಾಲಿತನವನ್ನು ಸ್ನೇಹ ಸಂಬಂಧಗಳೆಂಬ ಪ್ರೀತಿಯ ಬಂಧವನ್ನು ಕೊಡ ಮಾಡುತ್ತದೆ.
ಒಂದೊಮ್ಮೆ ಆಕೆ ತನ್ನ ತಂದೆ, ತಾಯಿ, ಅಕ್ಕ ತಂಗಿ ಅಣ್ಣ ತಮ್ಮಂದಿರಿಗೆ ಸ್ನೇಹಿತರಿಗೆ ಫೋನ್ ಮಾಡಿ ಮಾತನಾಡಿದರೆ ತಪ್ಪೇನು?
ಸಾಮಾನ್ಯವಾಗಿ ಹೆಣ್ಣು ಮಕ್ಕಳು ಭಾವುಕರು, ಸಂವೇದನಾಶೀಲರು, ಪ್ರೀತಿ ವಿಶ್ವಾಸಗಳಲ್ಲಿ ತುಸು ಹೆಚ್ಛೇ ನಂಬಿಕೆ ಇಟ್ಟವರು. ದೈನಂದಿನ ಸಂವಹನ ಅವರ ಪಾಲಿಗೆ ಆಕ್ಸಿಜನ್ ಇದ್ದಂತೆ.
ತಮ್ಮ ಕುಟುಂಬಕ್ಕಾಗಿ ತಾವೇನೇ ಮಾಡಿದರೂ ಅದನ್ನು ಪರಿಗಣಿಸದ ಗಂಡ, ಮಕ್ಕಳು, ಅತ್ತೆ, ಮಾವ ಇವರನ್ನು ಹೊರತುಪಡಿಸಿಯೂ ತನ್ನನ್ನು ಪ್ರೀತಿಸುವವರು ಇದ್ದಾರೆ ಎಂಬ ಭಾವವನ್ನು ತುಂಬಿಕೊಳ್ಳಬಯಸುವವರು..
ಪುರುಷರಂತೆ ಎಷ್ಟು ಬೇಕೋ ಅಷ್ಟೇ ಮಾತು ಎಂಬಂತಹ ವ್ಯಾವಹಾರಿಕತೆ ಅವರ ಪ್ರಪಂಚದಲ್ಲಿ ಇಲ್ಲ. ಅವಶ್ಯಕತೆಗಿಂತ ತುಸು ಹೆಚ್ಛೇ ಸಂವೇದನೆಗಳನ್ನು ಹೊಂದಿರುವಾಕೆ ಮಹಿಳೆ.
ಗಂಡಸರು ತಾವು ಫೋನ್ನಲ್ಲಿ ಮಾತನಾಡುವಾಗ ತಮ್ಮ ಪತ್ನಿಯಾಗಲಿ ಮಕ್ಕಳಾಗಲಿ ತಮ್ಮ ಬಳಿ ಏನನ್ನಾದರೂ ಮಾತನಾಡಲು ಬಂದರೆ ಸನ್ನೆಯಿಂದಲೇ ಅವರನ್ನು ಸುಮ್ಮನಾಗಿಸುತ್ತಾರೆ…. ಆದರೆ ಹೆಣ್ಣು ಮಕ್ಕಳು ಹಾಗೆ ಮಾತನಾಡುವಾಗ ಅನವಶ್ಯಕವಾಗಿ ಆಕೆಯನ್ನು ಮಾತನಾಡಿಸಲು ಹೋಗಿ ಆಕೆ ಅತ್ತ ಕಡೆ ಮಾತನಾಡುತ್ತಿರುವವರಿಗೆ ಆಮೇಲೆ ಮಾತನಾಡುತ್ತೇನೆ ಎಂದು ಹೇಳಿ ಬೇಸರದಿಂದ ಕರೆ ತುಂಡರಿಸಿ ಇವರ ಅವಶ್ಯಕತೆಗಳಿಗೆ ಓಗೊಡುತ್ತಾಳೆ. ಇಲ್ಲಿ ಸಂವೇದನಾ ಹೀನರು ಯಾರು ಎಂದು ನೀವೇ ಯೋಚಿಸಿ.
ತಮ್ಮಂತೆ ಆಕೆಯೂ ಮನುಷ್ಯಳು ಆಕೆಗೂ ಆಕೆಯ ಪಾಲಿಗೆ ಮುಖ್ಯವಾದ ಕರೆಗಳು ಬರುತ್ತವೆ ಎಂದು ಗಂಡಸರಿಗೆ ಅರ್ಥವಾಗುವುದು ಯಾವಾಗ?
ಇಂಥ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಭಾವನಾತ್ಮಕ ಮಾನಸಿಕ ಅವಶ್ಯಕತೆಗಳನ್ನು ಅರಿತುಕೊಂಡು ಅವರಿಗೆ ಅವರ ಪಾಡಿಗೆ ಬಿಟ್ಟುಬಿಡುವುದು ಉತ್ತಮ. ಜಾಣನಿಗೆ ಮಾತಿನ ಪೆಟ್ಟು ಸಾಕು ಎಂಬಂತೆ ಹೆಣ್ಣು ಮಕ್ಕಳಿಗೆ… ಅವರ ಫೋನ್ ಬಳಕೆ ಅತಿಯಾದಾಗ ಕೊಂಚ ಎಚ್ಚರಿಸಿದರೆ ಸಾಕು. ಅಷ್ಟಕ್ಕೂ ಮನೆಯ ಕೆಲಸ ಕಾರ್ಯಗಳನ್ನು ನಿರ್ವಹಿಸುವಾಗ ಅವರಿಗೆ ಫೋನ್ ಕಿವಿಯಲ್ಲಿದ್ದರೂ ಕೈ ತಂತಾನೆ ಕೆಲಸಗಳನ್ನು ಮಾಡುತ್ತಿರುತ್ತದೆ. ಎಷ್ಟೆಂದರೂ ಮಹಿಳೆ ಮಲ್ಟಿ ಟಾಸ್ಕಿಂಗ್ ಅಲ್ವೇ.
ಇತ್ತೀಚೆಗಂತು ಸಾಕಷ್ಟು ಮಹಿಳೆಯರು ಮೊಬೈಲ್ ಇಂಟರ್ನೆಟ್ ನ ಸಹಾಯದಿಂದ ಯೂಟ್ಯೂಬ್ ನಲ್ಲಿ ಬರುವ ಹಲವಾರು ವಿಡಿಯೋಗಳನ್ನು ನೋಡಿ ಹೊಸ ಹೊಸ ಅಡುಗೆಗಳನ್ನು, ಹೊಲಿಗೆ, ಕಸೂತಿ ಸಂಗೀತ ಮತ್ತು ಇತರ ಕರ ಕುಶಲ ವಸ್ತುಗಳನ್ನು ತಯಾರಿಸುವುದನ್ನು ಹಾಡು, ಹಸೆ, ಸಂಗೀತ, ಚಿತ್ರಕಲೆ, ಯೋಗ, ಧ್ಯಾನ ವ್ಯಾಯಾಮ ಮುಂತಾದ ತರಬೇತಿಗಳನ್ನು ಪಡೆದುಕೊಂಡು ಸ್ವಾವಲಂಬಿಗಳಾಗಿದ್ದಾರೆ. ತಾವು ಸಿದ್ಧಪಡಿಸಿದ ವಸ್ತುಗಳನ್ನು ಕೂಡ ಅಂತರ್ಜಾಲದ ಮೂಲಕ ಮಾರಾಟದ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಮೊಬೈಲ್ ಅವರ ಪಾಲಿಗೆ ಕೇವಲ ಹೊತ್ತು ಕಳೆಯುವ ಸಾಧನವಾಗಿರದೆ ವೃತ್ತಿಪರ ಬದುಕನ್ನು ಹೊಂದಲು ಆರ್ಥಿಕವಾಗಿ ಸಬಲರಾಗಲು ಮಾನಸಿಕ ಅಸ್ವಸ್ಥತೆಗಳನ್ನು ದೂರ ಮಾಡಲು ಸಹಾಯಕವಾಗಿದೆ. ಮನೆಯಲ್ಲಿಯೇ ಕುಳಿತು ಇಡೀ ವಿಶ್ವದ ಆಗುಹೋಗುಗಳನ್ನು ಅರಿಯುವ ಹೊಸ ಜಗತ್ತಿನ ಸವಾಲುಗಳನ್ನು ಎದುರಿಸುವ ಜಾತಿಯನ್ನು ಮೂಡಿಸಿದೆ
ಆದ್ದರಿಂದ ಗೃಹಿಣಿಯರು ಮೊಬೈಲ್ ನ ದಾಸರಲ್ಲ ಎಂಬುದನ್ನು ಅರಿತು ಅವರಿಗೂ ಅವರದೇ ಆದ ಸ್ವಂತಿಕೆಯನ್ನು ಹೊಂದಲು ಆಕೆ ಬಳಸುವ ಮೊಬೈಲ್ಗೆ ಕಡಿವಾಣ ಹಾಕದಿರಿ.
ನಿಮಗೆ ನನ್ನ ಮಾತಿನಲ್ಲಿ ಸಹಮತವಿದೆ ಎಂದು ಭಾವಿಸುವ
ವೀಣಾ ಹೇಮಂತ್ ಗೌಡ ಮಾರ್ಟ್ ಪಾಟೀಲ್ ಮುಂಡರಗಿ ಗದಗ್