ಧಾರವಾಡ ಏ.28:* ಜಮಖಂಡಿಯ ನಿವಾಸಿಯಾದ ಪ್ರಕಾಶ ಚೌರಡ್ಡಿ ಇವರು 2010 ನೇ ಇಸವಿಯಲ್ಲಿ ಹುಬ್ಬಳ್ಳಿಯ ಗೋಲ್ಡನ್ ಹೋಮ್ಸ್ ಬಿಲ್ಡರ್ಸ್ ಇವರಿಂದ ರೂ.18 ಲಕ್ಷ ರೂಪಾಯಿ ಪಾವತಿಸಿ ಪ್ಲ್ಯಾಟ ನಂ.901 ನ್ನು ಖರೀದಿಸಿದ್ದರು. ಈ ಬಗ್ಗೆ ಉಭಯತರ ಮಧ್ಯ ಖರೀದಿ ಒಪ್ಪಂದ ಪತ್ರ ಆಗಿತ್ತು. ಪ್ಲ್ಯಾಟ ಕಟ್ಟಿಸಿ ಸ್ವಾಧೀನತೆಕೊಟ್ಟಿದ್ದರೂ ಸದರಿ ಬಿಲ್ಡ್ರ್ಸ್ ದೂರುದಾರರಿಗೆ ನೋಂದಾಯಿತ ಕ್ರಯ ಪತ್ರ ಮಾಡಿ ಕೊಟ್ಟಿರಲಿಲ್ಲ. ಆ ಕಾರಣದಿಂದ ಗೋಲ್ಡನ್ ಹೋಮ್ಸ್ ಬಿಲ್ಡ್ರ್ಸ್ರವರು ಸೇವಾ ನ್ಯೂನ್ಯತೆ ಎಸಗಿ ತಮಗೆ ಮೋಸ ಮಾಡಿದ್ದಾರೆ ಅಂತಾ ಹೇಳಿ ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:18/09/2024 ರಂದು ದೂರನ್ನು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಸದಸ್ಯರು, ದೂರುದಾರರು ಪೂರ್ತಿ ಹಣಕೊಟ್ಟ ಮೇಲೆ ಗೋಲ್ಡನ್ ಹೋಮ್ಸ್ ಬಿಲ್ಡ್ರ್ಸ್ರವರು ಪ್ಲ್ಯಾಟ ನಿರ್ಮಿಸಿ ದೂರುದಾರರಿಗೆ ಸ್ವಾಧೀನತೆಕೊಟ್ಟಿದ್ದರು. ಆ ಬಗ್ಗೆ ನೋಂದಾಯಿತ ಕ್ರಯ ಪತ್ರ ಮಾಡಿಕೊಡದೇ ಇರುವುದು ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ತೀರ್ಪು ನೀಡಿದ 45 ದಿವಸಗಳ ಒಳಗಾಗಿ ದೂರುದಾರರ ಪರವಾಗಿ ನೋಂದಾಯಿತ ಕ್ರಯ ಪತ್ರ ಮಾಡಿಕೊಡುವಂತೆ ಆದೇಶಿಸಿದೆ. ಅದಕ್ಕೆ ತಪ್ಪಿದ್ದಲ್ಲಿ ಕೋರ್ಟ ಕಮೀಷನರ್ ಮೂಲಕ ದೂರುದಾರರು ತಮ್ಮ ಸ್ವಂತ ಖರ್ಚಿನಲ್ಲಿ ನೋಂದಾಯಿತ ಕ್ರಯ ಪತ್ರ ಪಡೆಯಲು ಅರ್ಹರಿದ್ದಾರೆಂದು ಆಯೋಗ ತನ್ನ ತೀರ್ಪಿನಲ್ಲಿ ತಿಳಿಸಿದೆ.