ಕೊಪ್ಪಳ ಮಾರ್ಚ್ 20 ಗ್ರಾಹಕರು ಟಿ.ವಿ. ಮಾಧ್ಯಮ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಬರುವ ಸುಳ್ಳು ಜಾಹೀರಾತುಗಳನ್ನು ನೋಡಿ ಅದರಲ್ಲಿ ತೋರಿಸುವ ವಸ್ತುಗಳನ್ನು ಕೊಂಡು ಮೋಸಹೋಗಬಾರದು, ಹಾಗೊಂದು ವೇಳೆ ಮೋಸಹೋದರೆ ಸೂಕ್ತ ದಾಖಲೆಗಳೊಂದಿಗೆ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಿ ನ್ಯಾಯ ಪಡೆಯಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ಎಸ್ ದರಗದ್ ಹೇಳಿದರು.
ಅವರು ಗುರುವಾರ ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ಅಂಗಡಿಗಳ ಮಾಲೀಕರು ವಸ್ತುಗಳ ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ವಸ್ತುಗಳನ್ನು ಮಾರಾಟ ಮಾಡಿದರೆ, ನಾವು ಅವರಿಗೆ ಕಾನೂನಿನ ಮೂಲಕ ಮಾತನಾಡಬಹುದು. ಈ ಬಗ್ಗೆ ಗ್ರಾಹಕರ ಆಯೋಗದ ಮೂಲಕ ವಸ್ತು ಅಥವಾ ಸೇವೆಯಲ್ಲಿನ ಕೊರತೆ, ನ್ಯೂನತೆಯನ್ನು ನಿವಾರಿಸಿಕೊಳ್ಳಬಹುದು. ಮಾರಾಟಗಾರರು ಗರಿಷ್ಠ ಮಾರಾಟ ಬೆಲೆ (ಎಂ.ಆರ್.ಪಿ.) ಗಿಂತ ಹೆಚ್ಚು ಬೆಲೆ ಪಡೆದರೆ ಕೂಡಲೇ ದೂರು ದಾಖಲಿಸಬಹುದು. ಯಾವುದೇ ವಸ್ತುವನ್ನು ಕೊಂಡುಕೊಳ್ಳುವ ಮೊದಲು ಗ್ರಾಹಕರು, ಆ ವಸ್ತು ಅಥವಾ ಸಾಮಗ್ರಿಯ ಗುಣಮಟ್ಟ ಉತ್ತಮವಾಗಿದೆಯೇ, ಕೊಂಡುಕೊಳ್ಳಲು ಯೋಗ್ಯವಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಐಎಸ್‌ಐ ಮಾರ್ಕ್ ನಂತಹ ಗುಣಮಟ್ಟ ಖಾತರಿಗೊಳಿಸುವ ಚಿಹ್ನೆಗಳು ಹಾಗೂ ಬಳಕೆಗೆ ಯೋಗ್ಯ ಇರುವ ಬಗ್ಗೆ ಖಾತ್ರಿ ಪಡಿಸುವ ದಿನಾಂಕ ನೋಡಿ ಖರೀದಿಸಬೇಕು ಎಂದರು.
ಇಂದಿನ ದಿನದಲ್ಲಿ ಜನರು ಆನ್‌ಲೈನ್ ವ್ಯಾಪಾರ ಮಾಡುತ್ತಾರೆ. ಇಂತಹ ವ್ಯಾಪಾರದಲ್ಲಿ ಏನಾದರೂ ಮೋಸ ಆದರೆ, ಅದಕ್ಕೂ ಪರಿಹಾರ ಕೊಂಡುಕೊಳ್ಳಲು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಇದೆ. ಇವರಲ್ಲಿ ದೂರನ್ನು ಸಲ್ಲಿಸಿ, ಪರಿಹಾರ ಪಡೆದುಕೊಳ್ಳಬಹುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಸೌಭಾಗ್ಯ ಲಕ್ಷ್ಮೀ ಅವರು ಮಾತನಾಡಿ, ಗ್ರಾಹಕರು ಮೊಬೈಲ್, ಟಿವಿ ಹಾಗೂ ಇನ್ನಾವುದೇ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳ ಖರೀಯಲ್ಲಿ ತಮಗೆ ಅನ್ಯಾಯವಾದರೆ 2 ವರ್ಷಗಳ ಅವಧಿಯೊಳಗೆ ಪಕ್ಕಾ ಅಥವಾ ತಮ್ಮ ವಸ್ತುಗಳ ಖರೀದಿಯ ವ್ಯಾಲಿಡಿಟಿ ಒಳಗಡೆ ಅಗತ್ಯ ದಾಖಲೆಗಳೊಂದಿಗೆ ತಮ್ಮ ಸಮಸ್ಯೆಗಳನ್ನು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಬಗೆಹರಿಸಿಕೊಳ್ಳ ಬಹುದು. ಆದ್ದರಿಂದ ಪ್ರತಿಯೊಬ್ಬರೂ ಗ್ರಾಹಕರ ಆಯೋಗದ ಕುರಿತು ಮಾಹಿತಿ ಪಡೆದುಕೊಳ್ಳಬೇಕು ಎಂದರು.
ಗ್ರಾಹಕನು ತನಗೆ ಬೇಕಾದ ವಸ್ತುಗಳನ್ನು ಯೋಗ್ಯ ಮತ್ತು ಪೈಪೋಟಿ ದರದಲ್ಲಿ ಅವಶ್ಯವೆನಿಸಿದಾಗ ಪಡೆಯುವ ಹಕ್ಕು. ಜೀವನಕ್ಕೆ ಮತ್ತು ಆಸ್ತಿ ಪಾಸ್ತಿಗಳಿಗೆ ಅಪಾಯವನ್ನುಂಟು ಮಾಡುವ ಸರಕುಗಳ ಮಾರಾಟ ವಿರುದ್ಧ ರಕ್ಷಣೆ ಪಡೆಯುವ ಹಕ್ಕು. ಗ್ರಾಹಕನು ತಾನು ಕೊಳ್ಳುವ ವಸ್ತುವಿನ ಯೋಗ್ಯ ಬೆಲೆ, ಗುಣಮಟ್ಟ, ಉಪಯುಕ್ತತೆ ಬಗ್ಗೆ ಮಾಹಿತಿ ಪಡೆಯುವ ಹಕ್ಕು. ಅನುಚಿತ ವ್ಯಾಪಾರ ವ್ಯವಹಾರದಿಂದ ರಕ್ಷಣೆ ಪಡೆಯುವ ಹಕ್ಕು. ಗ್ರಾಹಕ ತನ್ನ ಕುಂದು ಕೊರತೆಗಳನ್ನು ಸಂಬಂಧಿಸಿದ ಗ್ರಾಹಕರ ಆಯೋಗಗಳಿಂದ ಪರಿಹಾರಿಸಿಕೊಳ್ಳುವ ಹಕ್ಕು ಮತ್ತು ಗ್ರಾಹಕ ಶಿಕ್ಷಣ ಪಡೆಯುವ ಹಕ್ಕು ಹೀಗೆ ಆರು ವಿಧದ ಹಕ್ಕುಗಳು ಎಲ್ಲಾ ಗ್ರಾಹಕರಿಗೆ ಇವೆ ಎಂದು ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿಸಿದರು.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರು ಹಾಗೂ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಕೊಪ್ಪಳ ಜಿಲ್ಲಾ ವ್ಯವಸ್ಥಾಪಕ ಸೋಮಶೇಖರ್ ಬಿರಾದರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಈ ಬಾರಿಯ ಗ್ರಾಹಕರ ದಿನಾಚರಣೆಯನ್ನು “ಸುಸ್ಥಿರ ಜೀವನ ಶೈಲಿಗೆ ಒಂದು ಸರಳ ಪರಿವರ್ತನೆ’’ ಎನ್ನುವ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ.
ಮಾರುಕಟ್ಟೆ ನಿಂತಿರುವುದೇ ಗ್ರಾಹಕರಿಂದ, ವಸ್ತು ಅಥವಾ ಸೇವೆ ಪಡೆದುಕೊಳ್ಳಲು ಗ್ರಾಹಕರು ಹಣ ನೀಡುತ್ತಾರೆ. ಅದೇ ರೀತಿ ಅಂಗಡಿಗಳ ಮಾಲೀಕರು ಗ್ರಾಹಕರಿಗೆ ಸರಿಯಾದ ಸೇವೆಯನ್ನು ಒದಗಿಸಬೇಕು. ಗ್ರಾಹಕರು ಮೋಸಕ್ಕೆ ಒಳಗಾದರೆ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಹುದು ಎಂದರು.
ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ರಾಜು ಎನ್. ಮೇತ್ರಿ, ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗ ಮುಖ್ಯಸ್ಥರಾದ ಡಾ.ವರುಣಿ , ಕೊಪ್ಪಳ ಜಿಲ್ಲಾ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಶಶಿಕಾಂತ ರಜಪೂತ, ಆಹಾರ ಇಲಾಖೆ ಸಹಾಯಕ ನಿರ್ದೇಶಕ ದೇವರಾಜ ಹಾಗೂ ಕಾಲೇಜಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.