ಬಳ್ಳಾರಿ,ಮಾ.09
ಕರ್ನಾಟಕ ರಾಜ್ಯ ಪೊಲೀಸ್ ರನ್-2025 ಕಾರ್ಯಕ್ರಮ ಅಂಗವಾಗಿ ಬಳ್ಳಾರಿ ಜಿಲ್ಲಾ ಪೊಲೀಸ್ ವತಿಯಿಂದ ‘ನಮ್ಮೆಲ್ಲರ ಸದೃಡತೆ ಮತ್ತು ಡಗ್ಸ್ ಮುಕ್ತ ಕರ್ನಾಟಕ ನಿರ್ಮಾಣ’ ಎಂಬ ಧ್ಯೇಯವಾಕ್ಯದೊಂದಿಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನಗರದ ಕನಕ ದುರ್ಗಮ್ಮ ದೇವಸ್ಥಾನ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ 5ಕೆ ಪೊಲೀಸ್ ರನ್ ಕಾರ್ಯಕ್ರಮಕ್ಕೆ ಬಳ್ಳಾರಿ ವಲಯ ಪೊಲೀಸ್ ಮಹಾನಿರೀಕ್ಷಕರಾದ ಬಿ.ಎಸ್.ಲೋಕೇಶ್ ಕುಮಾರ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಬಳಿಕ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಸ್ಥ, ಸದೃಢ ಮತ್ತು ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಯುವ ಸಮುದಾಯವು ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಕರೆ ನೀಡಿದರು.
ಸಾರ್ವಜನಿಕರು ರಸ್ತೆ ಸುರಕ್ಷತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಾಹನ ಚಾಲನೆಯಲ್ಲಿ ತಮ್ಮ ಸುರಕ್ಷತೆಗಾಗಿ ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ತಪ್ಪದೇ ಧರಿಸಬೇಕು. ಸೈಬರ್ ವಂಚಕರಿಂದ ಸುರಕ್ಷತೆಯ ಅರಿವು ಹೊಂದಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮಾತನಾಡಿ, ಪ್ರತಿಯೊಬ್ಬರು ಸಧೃಡ ಆರೋಗ್ಯ ಕಾಪಾಡಿಕೊಳ್ಳಲು ದಿನನಿತ್ಯ ನಿಯಮಿತವಾಗಿ ದೈಹಿಕ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮೆಲರ ಸದೃಢತೆ ಹಾಗೂ ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು 5ಕೆ ಪೊಲೀಸ್ ರನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಳ್ಳಾರಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಹೆಚ್.ಸೂರ್ಯವಂಶಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೆ.ಪಿ ರವಿಕುಮಾರ್, ನವೀನ್ ಕುಮಾರ್, ಎಸ್.ಬಿ.ಐ ಬಳ್ಳಾರಿ ಪ್ರಾದೇಶೀಕ ಮುಖ್ಯ ವ್ಯವಸ್ಥಾಪಕ ಇರ್ಷಾದ್ ಆಲಂ ಸೇರಿದಂತೆ ಜಿಲ್ಲಾ ಪೊಲೀಸ್ ಇಲಾಖೆಯ ಅಧಿಕಾರಿಗಳು, ನಿವೃತ್ತ ಯೋಧರು, ಅಥ್ಲೆಟ್ಸ್, ವಿವಿಧ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಸಾರ್ವಜನಿಕರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಸ್ಪರ್ಧಿಗಳು ಭಾಗವಹಿಸಿದ್ದರು.
ಮ್ಯಾರಥಾನ್ ಓಟದಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನ ಮತ್ತು ಟ್ರೋಫಿ ವಿತರಣೆ ಮಾಡಲಾಯಿತು.
*ಮಹಿಳೆಯರ ವಿಭಾಗ:*
ಪ್ರಥಮ-ಸಿರೀಷಾ(ಬಳ್ಳಾರಿ)
ದ್ವಿತೀಯ-ವಿಜಯಲಕ್ಷ್ಮಿ(ಧಾರವಾಡ)
ತೃತೀಯ-ಜಾಹಿದ(ಬಳ್ಳಾರಿ).
*ಪುರುಷರ ವಿಭಾಗ:*
ಪ್ರಥಮ-ಶಿವಾನಂದ.ಸಿ(ಬೆಳಗಾವಿ)
ದ್ವಿತೀಯ-ರಾಜೇಶ್ ಕುಮಾರ್(ಬೆಂಗಳೂರು)
ತೃತೀಯ-ಮಣಿಕಂಠ(ಧಾರವಾಡ).
ಬಳ್ಳಾರಿ ಪೊಲೀಸ್ 5ಕೆ ರನ್ ದುರುಗಮ್ಮ ದೇವಸ್ಥಾನದ ಆವರಣದಿಂದ ಪ್ರಾರಂಭಗೊಂಡು ಗಡಗಿ ಚೆನ್ನಪ್ಪ ವೃತ್ತ, ಹಳೇ ಡಿಸಿ ಕಚೇರಿ ಮುಂಭಾಗದಿಂದ ಹೆಚ್.ಆರ್.ಗವಿಯಪ್ಪ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮಾರ್ಗವಾಗಿ ವಾಲ್ಮೀಕಿ ವೃತ್ತ (ಎಸ್.ಪಿ ಸರ್ಕಲ್), ತಾಳೂರು ರಸ್ತೆ ಕ್ರಾಸ್ ಮೂಲಕ ಮರಳಿ ಕನಕ ದುರ್ಗಮ್ಮ ದೇವಸ್ಥಾನದ ಆವರಣಕ್ಕೆ ತಲುಪಿ ಅಂತ್ಯಗೊಂಡಿತು.