ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಶೇ.100 ರಷ್ಟು ಅನುಷ್ಠಾನಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಿಕ್ಕಲಿಂಗಯ್ಯ ಅವರು ಹೇಳಿದರು.
ಇಂದು (ಮಾ.10) ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಡ ಜನರಿಗೆ ಗ್ಯಾರಂಟಿ ಯೋಜನೆಗಳು ಶಕ್ತಿಯನ್ನು ತುಂಬಿದೆ, ಇಂತಹ ಒಂದು ಮಹತ್ವಾಕಾಂಕ್ಷೆಯ ಯೋಜನೆಯ ಬಗ್ಗೆ ಸಾರ್ವಜನಿಕವಾಗಿ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ ಎಂದರು.
ಗೃಹ ಲಕ್ಷ್ಮಿ ಯೋಜನೆಯಡಿ 45 ಲಕ್ಷಕ್ಕೂ ಹೆಚ್ಚು ಅರ್ಹ ಫಲಾನುಭವಿಗಳಿದ್ದೂ ಅಕ್ಟೋಬರ್ ಮಾಹೆಯ ವರೆಗೆ ಶೇ 99.28 % ರಷ್ಟು ಮಹಿಳೆಯರಿಗೆ ಹಣ ವರ್ಗಾವಣೆ ಮಾಡಲಾಗಿದೆ, ನವೆಂಬರ್ ಮತ್ತು ಡಿಸೆಂಬರ್ ಮಾಹೆಯ ಹಣವನ್ನು ಈಗಾಗಲೇ ಬಿಡುಗಡೆಗೊಳಿಸಿದ್ದು ಶೀಘ್ರವೇ ಅರ್ಹ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಲಿದೆ ಎಂದು ತಿಳಿಸಿದರು.
ಐ ಟಿ/ ಜಿ.ಎಸ್.ಟಿ ತೆರಿಗೆದಾರರಲ್ಲವೆಂದು 1246 ಫಲಾನುಭವಿಗಳು ದೃಢೀಕರಣ ನೀಡಿದ್ದಾರೆ, ಇದನ್ನು ಸರ್ಕಾರದ ಗಮನಕ್ಕೆ ತರಲಾಗುವುದು, ಹಳ್ಳಿಗಳಲ್ಲಿ ಗೃಹ ಲಕ್ಷ್ಮಿ ಯೋಜನೆಯಡಿ ಇನ್ನೂ ನೊಂದಣಿಯಾಗದವರ ಮಾಹಿತಿ ಕಲೆಹಾಕಿ ಹಾಗೂ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು ಸಮಸ್ಯೆಯಿದ್ದಲ್ಲಿ ಶೀಘ್ರವಾಗಿ ಬಗೆಹರಿಸಿ ಗೃಹ ಲಕ್ಷ್ಮೀ ಯೋಜನೆ ತಲುಪಿಸುವಂತೆ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅನ್ನ ಭಾಗ್ಯ ಯೋಜನೆಯಡಿ 44 ಲಕ್ಷಕ್ಕೂ ಹೆಚ್ಚಿನ ಫಲಾನುಭವಿಗಳು ಜಿಲ್ಲೆಯಲ್ಲಿ ಇದ್ದು, ನ್ಯಾಯ ಬೆಲೆ ಅಂಗಡಿಯ ಮಾಲೀಕರು ನಿಗಧಿ ಪಡಿಸಿರುವ ಸಮಯದಲ್ಲಿ ಪಡಿತರ ವಿತರಣೆ ಮಾಡಲಾಗುತ್ತಿದೆಯಾ, ಸರಿಯಾದ ಪ್ರಮಾಣದಲ್ಲಿ ತೂಕ ಮಾಡಿ ಪಡಿತರ ನೀಡಲಾಗುತ್ತಿದೆಯೇ ಎಂದು ತಾಲ್ಲೂಕು ಮಟ್ಟದ ಆಹಾರ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ನ್ಯಾಯ ಬೆಲೆ ಅಂಗಡಿ ಮಾಲೀಕರು ಅನಧಿಕೃತವಾಗಿ ಹಣ ವಸೂಲಿ ಮಾಡುತ್ತಿದ್ದಲ್ಲಿ ಅಥವಾ ಗ್ರಾಹಕರ ಮೇಲೆ ದರ್ಪ ತೋರುತ್ತಿದ್ದಲ್ಲಿ ಅಂತವರ ವಿರುದ್ಧ ಗ ಸೂಕ್ತ ಕ್ರಮ ಕೈಗೊಳ್ಳಬೇಕು, ಪ್ರತಿ ನ್ಯಾಯ ಬೆಲೆ ಅಂಗಡಿಯ ಮುಂದೆ ಸಹಯವಾಣಿ ಸಂಖ್ಯೆಯನ್ನು ಅನಾವರಣಗೊಳಿಸಬೇಕು ಎಂದು ಹೇಳಿದರು.
ಅನ್ನಭಾಗ್ಯ ಯೋಜನೆಯಡಿ ಫೆಬ್ರವರಿ ಮಾಹೆಯಿಂದ ನಗದು ಬದಲು ಅಕ್ಕಿ ವಿತರಿಸಲು ಸರ್ಕಾರ ತೀರ್ಮಾನ ಕೈಗೊಂಡಿರುವುದರಿಂದ ಫೆಬ್ರವರಿ ಮಾಹೆಯ ಹೆಚ್ಚುವರಿ ಅಕ್ಕಿಯನ್ನು ಮಾರ್ಚ್ ಮಾಹೆಯಲ್ಲಿ ವಿತರಿಸಲಾಗುವುದು ಎಂದು ತಿಳಿಸಿದರು.
ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಡಿಸೆಂಬರ್ ಮಾಹೆಯಿಂದ ಫೆಬ್ರವರಿ ಮಾಹೆಯವರೆಗೂ 1 ಕೋಟಿ 80 ಲಕ್ಷಕ್ಕೂ ಅಧಿಕ ಟೀಕೆಟ್ ಗಳನ್ನು ಮಹಿಳಾ ಪ್ರಯಾಣಿಕರಿಗೆ ನೀಡಲಾಗಿದೆ, ಪರೀಕ್ಷಾ ಸಮಯವಾದ್ದರಿಂದ ಚಾಲಕರು ಹಾಗೂ ನಿಯಂತ್ರಕರು ವಿಶೇಷ ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಗೆ ಕೋರಿಕೆ ನಿಲುಗಡೆ ನೀಡುವ ವ್ಯವಸ್ಥೆ ಆಗಬೇಕು ಎಂದರು.
ಜಿಲ್ಲೆಯಲ್ಲಿ ಗೃಹಜೋತಿ ಯೋಜನೆಯಡಿ ಸುಮಾರು 5 ಲಕ್ಷಕ್ಕೂ ಹೆಚ್ಚಿನ ಫಲಾನುಭವಿಗಳಿದ್ದು ಈ ಯೋಜನೆಯನ್ನು ಶೇ 97.09 ರಷ್ಟು ಯೋಜನೆಯನ್ನು ತಲುಪಿಸಲಾಗಿದೆ ಹಾಗೂ ಯುವನಿಧಿ ಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ತಾಲೂಕುವಾರು ತಂಡಗಳನ್ನು ರಚಿಸಿ ತಾಲ್ಲೂಕಿನ ಎಲ್ಲಾ ಪದವಿ ವೃತ್ತಿಪರ ಕಾಲೇಜುಗಳಿಗೆ ಭೇಟಿ ನೀಡಿ ಪ್ರಚಾರ ಪಡಿಸಿ, ಈಗಾಗಲೇ ಜನವರಿ ಮಾಹೆಯ ವರೆಗೆ ಒಟ್ಟು 3998 ಅರ್ಹ ಫಲಾನುಭವಿಗಳಿಗೆ ಹಣ ಡಿ.ಬಿ.ಟಿ ಮೂಲಕ ವರ್ಗಾವಣೆಯಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷರುಗಳಾದ ಪ್ರಶಾಂತ್ ಬಾಬು ಕೆ ಸಿ, ರಾಜೇಂದ್ರ ಎಸ್.ಹೆಚ್, ಶಿವಣ್ಣ, ಕೆ ಹನುಮಂತಯ್ಯ, ಜಿಲ್ಲಾ ಪಂಚಾಯತ್ ನ ಮುಖ್ಯ ಯೋಜನಾಧಿಕಾರಿ ಧನುಷ್ ಎಸ್,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಜಮೂರ್ತಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.