ಬೆಂಗಳೂರು, ಮೇ 01: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಿದ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿಯನ್ನು ನೀಡಲಾಗಿದೆ.
ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು. ಮಲ್ಲೇಶ್ವರಂ, ಬೆಂಗಳೂರ ಈ ಕುರಿತು ಟಿಪ್ಪಣಿ ಮೂಲಕ ಮಾಹಿತಿ ನೀಡಿದ್ದಾರೆ. ಅರ್ಜಿ ಸಲ್ಲಿಕೆ ಬಳಿಕ ಶುಲ್ಕ ಪಾವತಿ ಮಾಹಿತಿ ಅಪ್ಡೇಟ್ಗೆ ಸಂಬಂಧಿಸಿದಂತೆ ಈ ಮಾಹಿತಿ ನೀಡಲಾಗಿದೆ
ಟಿಪ್ಪಣಿಯ ವಿವರ: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿದ ನಂತರ ಶುಲ್ಕ ಮಾಹಿತಿಯು update ಆಗದಿದ್ದಲ್ಲಿ, ಇ–ಮೇಲ್ ವಿಳಾಸ [email protected]ಗೆ ಅರ್ಜಿ ಸಂಖ್ಯೆ ಹಾಗೂ ಶುಲ್ಕ ಪಾವತಿಸಿದ ವಿವರಗಳನ್ನು ಸಲ್ಲಿಸತಕ್ಕದ್ದು ಎಂದು ತಿಳಿಸಿದೆ.ಶುಲ್ಕ ಪಾವತಿಸಿದ ವಿವರಗಳನ್ನು ಇ–ಮೇಲ್ ಕಳುಹಿಸಿದ 2 ದಿನಗಳ ನಂತರ update ಮಾಡಲಾಗುತ್ತದೆ ನಂತರ ಅರ್ಜಿಯನ್ನು ಪ್ರಿಂಟ್ ಮಾಡಬಹುದಾಗಿದೆ ಎಂದು ಟಿಪ್ಪಣಿ ಮೂಲಕ ಅಭ್ಯರ್ಥಿಗಳಿಗೆ ಮಾಹಿತಿ ನೀಡಲಾಗಿದೆ
ಕೆಇಎ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ (ಸ್ಥಳೀಯ) ವೃಂದದಲ್ಲಿರುವ ಒಟ್ಟು 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ ಸಂಬಂಧ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 21,400-42,000 ರೂ. ವೇತನವನ್ನು ನಿಗದಿಗೊಳಿಸಲಾಗಿದೆ. ದ್ವಿತೀಯ ಪಿಯುಸಿ ಅಥವ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಕೆ ಮಾಡಬೇಕಿದೆ.
ಅರ್ಜಿಗಳನ್ನು ಸಲ್ಲಿಕೆ ಮಾಡುವ ಎಲ್ಲಾ ಅಭ್ಯರ್ಥಿಗಳಿಗೆ 18 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ, ಪ್ರವರ್ಗ 2ಎ, 2ಬಿ, 3ಎ, 3 ಬಿ ಅಭ್ಯರ್ಥಿಗಳಿಗೆ 38 ವರ್ಷಗಳು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1ರ ಅಭ್ಯರ್ಥಿಗಳಿಗೆ 40 ವರ್ಷದ ಗರಿಷ್ಠ ವಯೋಮಿತಿ ಇದೆ. ಆಸಕ್ತ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ಸೈಟ್ http://kea.kar.nic.in ನಲ್ಲಿ ತೋರಿಸುವ ಲಿಂಕ್ ಅನ್ನು ಆಯ್ಕೆ ಮಾಡಿ ಆನ್ ಲೈನ್ ಮುಖಾಂತರ ಅರ್ಜಿಯನ್ನು ಭರ್ತಿ ಮಾಡಬೇಕು.
ಅಭ್ಯರ್ಥಿಯು ಯಾವುದಾದರು ಒಂದು ಜಿಲ್ಲೆಗೆ ಮಾತ್ರ ಹುದ್ದೆ ಬಯಸಿ ಅರ್ಜಿಯನ್ನು ಸಲ್ಲಿಸತಕ್ಕದ್ದು. ಒಮ್ಮೆ ಸಲ್ಲಿಸಿದ ಅರ್ಜಿಯಲ್ಲಿನ ಯಾವುದೇ ಮಾಹಿತಿಯನ್ನು ಯಾವುದೇ ಹಂತದಲ್ಲಿ ಬದಲಾವಣೆ/ ತಿದ್ದು ಪಡಿಮಾಡಲು ಅವಕಾಶವಿರುವುದಿಲ್ಲ. ಆದ್ದರಿಂದ ಆಭ್ಯರ್ಥಿಗಳು ಎಚ್ಚರಿಕೆಯಿಂದ ಅಧಿಸೂಚನೆಯನ್ನು ಓದಿ ಅರ್ಥೈಸಿಕೊಂಡು ಅರ್ಜಿ ಸಲ್ಲಿಸಲು ಸೂಚಿಸಲಾಗಿತ್ತು.
ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಭರ್ತಿ ಮಾಡುವ ಮೊದಲು ಅರ್ಹತೆಗೆ ಸಂಬಂಧಿಸಿದ ಎಲ್ಲಾ ಸೂಚನೆಗಳನ್ನು ಓದಿಕೊಳ್ಳತಕ್ಕದ್ದು ಹಾಗೂ ನೀಡಿರುವ ಸೂಚನೆಗಳನ್ವಯ ಅರ್ಜಿಯನ್ನು ಭರ್ತಿ ಮಾಡತಕ್ಕದ್ದು. ತಪ್ಪು ಅಥವಾ ಸುಳ್ಳು ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಿದಲ್ಲಿ ಯಾವುದೇ ಸಮಯದಲ್ಲಿಯಾದರೂ ಅಭ್ಯರ್ಥಿತನವು ರದ್ದುಗೊಳ್ಳುವುದು ಹಾಗು ನಿಯಮಾನುಸಾರ ಅಂತಹವರ ವಿರುದ್ಧ ಸರ್ಕಾರವು/ ಪ್ರಾಧಿಕಾರ/ ಸಂಸ್ಥೆಯು ಕಾನೂನಿನನ್ವಯ ಸೂಕ್ತ ಕ್ರಮ ಕೈಗೊಳ್ಳುವುದು ಎಂದು ಎಚ್ಚರಿಕೆ ನೀಡಲಾಗಿತ್ತು.