ಬಳ್ಳಾರಿ,ಜು.10
ಹನ್ನೆರಡನೇ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರಾಗಿದ್ದ ಶಿವಶರಣ ಹಡಪದ ಅಪ್ಪಣ್ಣನವರು, ತಮ್ಮ ವಚನಗಳ ಮೂಲಕ ಸಮಾಜದ ತಾರತಮ್ಯ ಹೋಗಲಾಡಿಸಿದ್ದವರು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮದಿರದಲ್ಲಿ ಏರ್ಪಡಿಸಿದ್ದ ಶಿವಶರಣ ಹಡಪದ ಅಪ್ಪಣ ಜಯಂತಿ ಕಾರ್ಯಕ್ರಮವನ್ನು ಹಡಪದ ಅಪ್ಪಣ ಅವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಹಡಪದ ಅಪ್ಪಣ್ಣನವರು ಬಸವಣ್ಣನವರ ಬಲಗೈ ಬಂಟನೆAದೇ ಹೆಸರು ಪಡೆದಿದ್ದವರು. ಬಸವಣ್ಣನವರಿಗೆ ಅಪ್ಪಣ್ಣನವರು ಪ್ರಾಣವೇ ಆಗಿದ್ದರೆಂಬುದಕ್ಕೆ ಕಲ್ಯಾಣಕ್ರಾಂತಿಯ ಕೊನೆಯ ದಿನಗಳನ್ನು ತಿಳಿದುಕೊಂಡರೆ ಗೊತ್ತಾಗುತ್ತದೆ. “ಅಪ್ಪಣ್ಣ ಪ್ರಿಯ ಚನ್ನಬಸವಣ್ಣ” ಎಂಬ ಅಂಕಿತನಾಮದಿAದ ಸುಮಾರು 250 ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ ಎಂದು ತಿಳಿಸಿದರು.
12 ನೇ ಶತಮಾನದ ಕಾಲದಲ್ಲಿ ಮೂಢನಂಬಿಕೆಯನ್ನು ಹೋಗಲಾಡಿಸುವುದಕ್ಕಾಗಿಯೇ ಬಸವಣ್ಣನವರು ಯಾರೇ ಬಂದರೂ ಮೊದಲು ಹಡಪದ ಅಪ್ಪಣ್ಣನವರನ್ನು ನೋಡಿಕೊಂಡು ಬರಬೇಕೆಂಬ ನಿಯಮವನ್ನೇ ಮಾಡಿದ್ದರೆಂಬ ಪ್ರತೀತಿ ಇದೆ. ಇವರ ಧರ್ಮಪತ್ನಿ ಲಿಂಗಮ್ಮನವರೂ ಸಹ ಮಹಾನ್ ವಚನಗಾರ್ತಿಯಾಗಿದ್ದರು. ಇವರ ಊರು ವಿಜಯಪುರ ಜಿಲ್ಲೆಯ ತಂಗಡಗಿಯಾಗಿದ್ದು, ಅಲ್ಲಿಯೇ ಇವರ ಸಮಾಧಿಯೂ ಸಹ ಇದೆ. ಸಮಾಜದ ಅಸ್ಪೃಶ್ಯತೆ ಮತ್ತು ತಾರತಮ್ಯವನ್ನು ವಚನಗಳ ಮೂಲಕ ತೊಡೆದುಹಾಕಿದ ಮಹನೀಯರ ಆದರ್ಶ ತತ್ವಗಳನ್ನು ಪಾಲಿಸೋಣ ಎಂದು ಹೇಳಿದರು.
ಬಳ್ಳಾರಿಯ ನಿವೃತ್ತಿ ಮುಖ್ಯಗುರುಗಳಾದ ಸಿ.ಕೊಟ್ರಪ್ಪ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಬಸವಣ್ಣನವರ ಬಾಲ್ಯದ ಒಡನಾಡಿಗಳಾಗಿದ್ದ ಅಪ್ಪಣ್ಣನವರು ವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಹೆಸರಾದ “ಅನುಭವ ಮಂಟಪ”ದಲ್ಲಿ ಬಸವಣ್ಣನವರಿಗೆ ಪ್ರಧಾನ ಕಾರ್ಯದರ್ಶಿಗಳಾಗಿ, ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿಸಿದರು.
ಹಡಪದ ಅಪ್ಪಣ್ಣನವರ ತಂದೆ ಚೆನ್ನವೀರಪ್ಪ ತಾಯಿ ದೇವಕಮ್ಮ ದಂಪತಿಗಳ ಮಗನಾಗಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದಲ್ಲಿ ಜನಿಸಿದರು. ಇವರ ಕಾಲವನ್ನು ಕ್ರಿ.ಶ 1,160 ಎಂದು ಗುರುತಿಸಲಾಗುತ್ತದೆ. ಅನುಭವ ಮಂಟಪದ ಮಹಾನುಭಾವಿಯಾದ ಅಪ್ಪಣ್ಣನವರ ವಚನಗಳಲ್ಲಿ ಷಟಸ್ಥಲದ ವಿಷಯಗಳು ಪ್ರಮುಖವಾಗಿ ಪ್ರಸ್ತಾಪವಾಗಿವೆ. ಪ್ರಭುದೇವ, ಅಕ್ಕಮಹಾದೇವಿ ಇನ್ನಿತರ ಮಹಾನ್ ಶರಣರಂತೆ ಅಪ್ಪಣ್ಣ ಸಹ ಬೆಡಗಿನ ವಚನಗಳನ್ನು ರಚಿಸಿದ್ದು, ಕಾಯಕನಿಷ್ಠೆ, ದಾಸೋಹನಿಷ್ಠೆ, ಭಕ್ತಿ, ವೈರಾಗ್ಯ, ಆಚಾರ- ವಿಚಾರಗಳನ್ನು ವೈಚಾರಿಕತೆಯ ನೆಲೆಯಲ್ಲಿ ವಿಡಂಬನಾತ್ಮಕವಾಗಿ ವಚನಗಳಲ್ಲಿ ರಚಿಸಿದ್ದಾರೆ. ಈ ವಚನಗಳು ಅಜ್ಞಾನಿಗಳಿಗೆ ಸನ್ಮಾರ್ಗವನ್ನು ತೋರಿಸುವ ದಾರಿದೀಪಗಳಾಗಿವೆ ಎಂದರು.
ಇದೇ ವೇಳೆ ಶ್ರೀ ಶಿವಲಿಂಗ ಶಿವಾಚಾರ್ಯ ಜಂಗಮ ಹೊಸಳ್ಳಿ ಅವರು ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಆರ್ಶೀವಚನ ನೀಡಿದರು.
ಕಾರ್ಯಕ್ರಮದಲ್ಲಿ ಸಿರುಗುಪ್ಪದ ವೀರೇಶ್ ದಳವಾಯಿ ಅವರ ತಂಡದಿ0ದ ವಚನ ಸಂಗೀತ ಪ್ರಸ್ತುತ ಪಡಿಸಿದರು ಹಾಗೂ ಸಿಂಧುವಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೋಲಾಟ ಕಲೆಯ ಪ್ರದರ್ಶನ ನೀಡಿದ ಮಕ್ಕಳಿಗೆ ಗಣ್ಯರಿಂದ ಸನ್ಮಾನಿಸಿಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಬಳ್ಳಾರಿ ಜಿಲ್ಲಾ ಹಡಪದ ಅಪ್ಪಣ್ಣ ಸೇವಾ ಸಮಿತಿ ಅಧ್ಯಕ್ಷ ಹೆಚ್.ರುದ್ರಪ್ಪ, ಕುರುಗೋಡು ತಾಲ್ಲೂಕು ಹಡಪದ ಅಪ್ಪಣ್ಣ ಸೇವಾ ಸಮಿತಿ ಅಧ್ಯಕ್ಷ ಹೆಚ್.ಮಂಜುನಾಥ, ಬಳ್ಳಾರಿ ತಾಲ್ಲೂಕು ಹಡಪದ ಅಪ್ಪಣ್ಣ ಸೇವಾ ಸಮಿತಿ ಅಧ್ಯಕ್ಷ ಸದಾಶಿವ ಸೇರಿದಂತೆ ಸಮಾಜದ ಮುಖಂಡರು, ಸಾರ್ವಜನಿಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
*ಸಂಭ್ರಮದ ಮೆರವಣಿಗೆ:*
ಶಿವಶರಣ ಹಡಪದ ಅಪ್ಪಣ್ಣ ಅವರ ಜಯಂತ್ಯೋತ್ಸವದ ಅಂಗವಾಗಿ ನಗರದಲ್ಲಿ ಸಂಭ್ರಮದ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಗಮನ ಸೆಳೆದವು.
ಮೆರವಣಿಗೆಯು ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಆರಂಭವಾಗಿ ಗಡಿಗಿ ಚೆನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಹಳೇ ಬ್ರೂಸ್‌ಪೇಟೆ ಪೊಲೀಸ್ ಠಾಣೆ ರಸ್ತೆ, ತೇರು ಬೀದಿ, ಹೆಚ್.ಆರ್.ಗವಿಯಪ್ಪ ವೃತದ ಮೂಲಕ ಡಾ.ಜೋಳದರಾಶಿ ದೊಡ್ಡನಗೌಡ ರಂಗಮದಿರದ ವೇದಿಕೆ ಸಭಾಂಗಣಕ್ಕೆ ತಲುಪಿ ಸಂಪನ್ನಗೊ0ಡಿತು.