Ad image

ಕಂಪ್ಲಿ ತಾಲ್ಲೂಕು ವ್ಯಾಪ್ತಿಯಲ್ಲಿ ಸಂಭ್ರಮದ ಕಾರಹುಣ್ಣಿಮೆ ಎತ್ತುಗಳನ್ನು ಅಲಂಕರಿಸುವಲ್ಲಿ, ಎತ್ತುಗಳ ಶೃಂಗಾರದ ವಸ್ತುಗಳನ್ನು ಕೊಳ್ಳುವಲ್ಲಿ ನಿರತರಾದ ಅನ್ನದಾತರು.

Vijayanagara Vani
ಕಂಪ್ಲಿ ತಾಲ್ಲೂಕು ವ್ಯಾಪ್ತಿಯಲ್ಲಿ ಸಂಭ್ರಮದ ಕಾರಹುಣ್ಣಿಮೆ ಎತ್ತುಗಳನ್ನು ಅಲಂಕರಿಸುವಲ್ಲಿ, ಎತ್ತುಗಳ ಶೃಂಗಾರದ ವಸ್ತುಗಳನ್ನು ಕೊಳ್ಳುವಲ್ಲಿ ನಿರತರಾದ ಅನ್ನದಾತರು.

ಕಂಪ್ಲಿ- ಆಕಾಶದಲ್ಲಿ ಮುಂಗಾರಿನ ಮೋಡಗಳು ದಟ್ಟಯಿಸುತ್ತಿರುವುದು ಒಂದೆಡೆಯಾದರೆ ಇನ್ನೊಂದೆಡೆ ರೈತರು ಮುಂಗಾರು ಬಿತ್ತನೆಯಲ್ಲಿ ತೊಡಗಿರುವುದು ಇನ್ನೊಂದೆಡೆ, ಈ ಮಧ್ಯೆ ರೈತರ ಪ್ರಮುಖ ಹಬ್ಬವೆಂದೇ ಗುರುತಿಸಲಾಗಿರುವ ಹಾಗೂ ರೈತನ ಜೀವನ ಸಂಗಾತಿಗಳಾದ ಎತ್ತುಗಳನ್ನು ಶೃಂಗರಿಸಿ ಓಡಿಸುವ ಕಾರಹುಣ್ಣಿಮೆ ಹಬ್ಬವೂ ಬಂದಿದೆ.ಮು0ಗಾರು ಹಂಗಾಮಿನ ಕೃಷಿ ಚಟುವಟಿಕೆಗಳಲ್ಲಿ ತೊಡಗುವ ಮುನ್ನ ರೈತರು ತಮ್ಮ ಜೀವನ ಸಂಗಾತಿಗಳಾದ ಎತ್ತುಗಳನ್ನು ಶೃಂಗರಿಸಿ,ಕರಿಹರಿಸಿ ಸಂಭ್ರಮಿಸುವ ಹಬ್ಬ ಬಂದಿದೆ.
ಪಟ್ಟಣಗಳಲ್ಲಿ ಮತ್ತು ನಗರಗಳಲ್ಲಿ ನಮ್ಮ ಸಂಸ್ಕೃತಿಯ ಪ್ರತೀಕಗಳಾದ ಕಲೆ, ಸಂಸ್ಕೃತಿ,ಹಬ್ಬಗಳ ಆಚರಣೆಗಳು ಕಣ್ಮರೆಯಾಗಿದ್ದರೂ ಸಹಿತ ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬಗಳು ಇಂದಿಗೂ ಜೀವಂತ ಇವೆ ಎನ್ನುವುದಕ್ಕೆ ಇನ್ನು ಆಚರಿಸಿಕೊಂಡು ಬರುತ್ತಿರುವ ಹಬ್ಬಗಳೇ ಸಾಕ್ಷಿಯಾಗಿವೆ. ಇದಕ್ಕೊಂದು ಉದಾಹರಣೆ ಎಂದರೆ ಇಂದಿಗೂ ಗ್ರಾಮೀಣ ಹಾಗೂ ಕೆಲವು ಪಟ್ಟಣ ಪ್ರದೇಶಗಳಲ್ಲಿ ಸಂಭ್ರಮದಿ0ದ ಆಚರಿಸಿಕೊಂಡು ಬರುತ್ತಿರುವ “ಕಾರಹುಣ್ಣಿಮೆ” ಹಬ್ಬವಾಗಿದೆ.
ನೇಗಿಲ ಯೋಗಿಗಳ ಸಂಗಾತಿಗಳಾದ ಎತ್ತುಗಳಿಗೆ ಸಂಬ0ಧಿಸಿದ ಹಬ್ಬವೇ ಈ ಕಾರಹುಣ್ಣಿಮೆಯಾಗಿದ್ದು, ಗ್ರಾಮೀಣ ಜನರಲ್ಲಿ ಒಂದು ನಾಣ್ನುಡಿ ಇದೆ, ಕಾರಹುಣ್ಣಿಮೆ ಬಂತೆ0ದೆರೆ ಸಾಕು ಹಿಂದುಗಳ ಸಾಲು ಸಾಲು ಹಬ್ಬಗಳೇ ಬರುತ್ತವೆ ಎಂದು ಗ್ರಾಮೀಣ ಜನತೆ ಹೇಳುತ್ತಾರೆ. ಹೌದು ಕಾರಹುಣ್ಣಿಮೆಯಿಂದಲೇ ಹಿಂದೂಗಳ ಸಾಲು ಸಾಲು ಪವಿತ್ರ ಹಬ್ಬಗಳು ಒಂದರ ಹಿಂದೊ0ದರ0ತೆ ಬರುತ್ತವೆ.
ಅಂತೆಯೇ ಇಂದು ಪಟ್ಟಣವೂ ಸೇರಿದಂತೆ ಕಂಪ್ಲಿ ತಾಲ್ಲೂಕು ವ್ಯಾಪ್ತಿಯ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲಿ ನೋಡಿದರೂ ರೈತರು ತಮ್ಮ ಸಂಗಾತಿಗಳಾದ ಎತ್ತುಗಳನ್ನು ಸ್ವಚ್ಛವಾಗಿ ತೊಳೆದು ಅವುಗಳ ಕೋಡು(ಕೊಂಬು)ಗಳನ್ನು ಕೆತ್ತಿಸಿ ಅವುಗಳಿಗೆ ಕೋಡಣಸು,ಗಗ್ರಿಗಳನ್ನು ಜೋಡಿಸಿ ನಂತರ ಗ್ರಾಮದಲ್ಲಿ ಮೊದಲಿನಿಂದಲೂ ಬಣ್ಣ ಹಚ್ಚುವವರ ಹತ್ತಿರ ಎತ್ತಿನ ಕೋಡುಗಳಿಗೆ ವೈವಿದ್ಯಮಯ ಬಣ್ಣಗಳಿಂದ ವಿವಿಧ ಚಿತ್ರಗಳನ್ನು ಬಿಡಿಸುತ್ತಾರೆ. ಅದರಲ್ಲೂ ಎತ್ತುಗಳ ಕೋಡುಗಳ ಮೇಲೆ ಮದುವೆ ಸಂದರ್ಭದಲ್ಲಿ ಉಪಯೋಗಿಸುವ ಬಾಸಿಂಗದ ಚಿತ್ರವನ್ನು ಬಿಡಿಸುವುದು ಸಾಮಾನ್ಯವಾಗಿರುತ್ತದೆ. ಹಾಗೂ ನವಿಲು ಮತ್ತು ಗಿಳಿಗಳ ಚಿತ್ರಗಳನ್ನು ಬಿಡಿಸುತ್ತಾರೆ. ಹೀಗೆ ಬಣ್ಣಗಳಿಂದ ಶೃಂಗರಿಸಿದ ಎತ್ತುಗಳನ್ನು ಮನೆಗೆ ಹೊಡೆದುಕೊಂಡು ಬಂದು ಮನೆಯ ಎತ್ತುಗಳ ಗ್ವಾದಲಿಯಲ್ಲಿ ಅವುಗಳನ್ನು ಕಟ್ಟಿ ಅವುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಅಕ್ಕಿ ಬೆಲ್ಲ ಮತ್ತು ಹೋಳಿಗೆಯನ್ನು ನೈವೇದ್ಯ ಮಾಡಿ ಅದನ್ನು ಅವುಗಳಿಗೆ ತಿನ್ನಿಸುತ್ತಾರೆ.
ಸಂಜೆ ಎತ್ತುಗಳನ್ನು ಗೆಜ್ಜೆ, ಗೊಂಡೆ, ದಾಂಡು, ಹಣೆಕಟ್ಟು, ಟೊಂಕಬಾರು, ಗೆಜ್ಜೆ, ಜಂಗು, ಹಣೆಬಾರು, ಚಿಣಿಚಿಣಿ, ಹಣಿಗೆಜ್ಜೆ, ಕಾಲ್ಗೆಜ್ಜೆ, ಶಂಖರಿ (ಶಂಖ ಹಣೆಕಟ್ಟು), ಜೂಲು, ಸೇರಿದಂತೆ ಗೊಂಡೇವುಗಳಿ0ದ ಶೃಂಗರಿಸಿ ಗ್ರಾಮದ ಅಗಸೆ ಬಾಗಿಲಿನಲ್ಲಿ ಊರ ಬುಡ್ಡೆ ಕಲ್ಲಿನ ಹತ್ತಿರ ಎತ್ತುಗಳನ್ನು ಕರಿ ಬಿಡುತ್ತಾರೆ. ಈ ಅಗಸೆ ಬಾಗಿಲಿನ ಹತ್ತಿರದ ಬುಡ್ಡೆ ಕಲ್ಲಿನ ಹತ್ತಿರ (ಅಗಸಿ ದ್ವಾರದಲ್ಲೀ) ಗ್ರಾಮದ ನೂರಾರು ಸಾರ್ವಜನಿಕರು, ಮಹಿಳೆಯರು, ಮಕ್ಕಳು ಎತ್ತುಗಳ ಓಟದ ಸ್ಪರ್ಧೆಯನ್ನು ನೋಡಲು ಸೇರಿರುತ್ತಾರೆ. ಸುಮಾರು ಒಂದರಿ0ದ ಎರಡು ತಾಸುಗಳವರೆಗೂ ಎತ್ತುಗಳನ್ನು ಭರ್ಜರಿಯಾಗಿ ಓಡಾಡಿಸಿ ಕೊನೆಗೆ ಎಲ್ಲಾ ಎತ್ತುಗಳನ್ನು ಒಟ್ಟಿಗೆ ಸಾಲಾಗಿ ನಿಲ್ಲಿಸಿ ಏಕಕಾಲಕ್ಕೆ ಓಟದ ಸ್ಪರ್ಧೆಯಲ್ಲಿ ಬಿಡುತ್ತಾರೆ. ಈ ಓಟದಲ್ಲಿ ಯಾವ ಎತ್ತು ಮೊದಲಿಗೆ ಬುಡ್ಡೆಕಲ್ಲನ್ನು ದಾಟುತ್ತದೆಯೋ ಆ ಎತ್ತು ಗೆದ್ದಿದೆ ಎಂದು ಗ್ರಾಮದ ಮುಖಂಡರು ಘೋಷಿಸುತ್ತಾರೆ.
ಸ್ಪರ್ಧೆಯಲ್ಲಿ ಯಾವ ಬಣ್ಣದ ಎತ್ತು ಗೆಲ್ಲುತ್ತದೆಯೋ ಆ ಫಸಲಿಗೆ ಉತ್ತಮ ಧಾರಣೆ ಹಾಗೂ ಒಳ್ಳೆಯ ಇಳುವರಿ ಬರುತ್ತದೆ ಎನ್ನುವ ನಂಬಿಕೆ ಗ್ರಾಮೀಣ ಜನರಲ್ಲಿದೆ.ಕರಿಬಿಡುವುದು ಮುಗಿದ ನಂತರ ಕರಿಯಲ್ಲಿ ಗೆದ್ದ ಎತ್ತುಗಳನ್ನು ವೈವಿದ್ಯಮಯ ಹೂಗಳಿಂದ ಶೃಂಗರಿಸಿ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡುತ್ತಾರೆ.. ಹೀಗೆ ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ನಮ್ಮ ಪುರಾತನ ಕಾಲದ ಹಬ್ಬಗಳು ಜೀವಂತ ಇವೆ.ಆದರೆ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿರುವುದು ರೈತರಲ್ಲಿ ಉತ್ಸಾಹವನ್ನು ಇಮ್ಮಡಿಗೊಳಿಸಿದ್ದ ರೈತರು ಸಂಭ್ರಮದಿ0ದ ಹಬ್ಬದಲ್ಲಿ ಭಾಗವಹಿಸಿದ್ದರು.
ಇನ್ನು ಪಟ್ಟಣದಲ್ಲಿ ಕೃಷಿ ಸಾಮಾನುಗಳನ್ನು ಎತ್ತುಗಳಿಗೆ ಶೃಂಗರಿಸುವ ಅಂಗಡಿಗಳು ರೈತರಿಂದ ತುಂಬಿ ಹೋಗಿದ್ದವು. ರೈತರು ತಮ್ಮ ಎತ್ತುಗಳ ಶೃಂಗಾರಕ್ಕೆ ಬೇಕಾದ ಗೊಂಡೆ, ದಾಂಡು, ಹಣೆಕಟ್ಟು, ಟೊಂಕಬಾರು, ಗೆಜ್ಜೆ, ಜಂಗು, ಹಣೆಬಾರು, ಚಿಣಿಚಿಣಿ, ಹಣಿಗೆಜ್ಜೆ, ಕಾಲ್ಗೆಜ್ಜೆ, ಶಂಖರಿ (ಶಂಖ ಹಣೆಕಟ್ಟು), ಜೂಲು, ಸೇರಿದಂತೆ ಸಾಮಾನುಗಳನ್ನು ಖರೀದಿಸುವಲ್ಲಿ ನಿರತರಾಗಿರುವುದು ಕಂಡು ಬಂತು.

Share This Article
error: Content is protected !!
";