ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಲ್ಲಿ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಇಳಿ ವಯಸ್ಸಿನಲ್ಲಿ ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಅಪಾಯ ತಂದುಕೊಳ್ಳಬೇಡಿ

Vijayanagara Vani
ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಲ್ಲಿ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಇಳಿ ವಯಸ್ಸಿನಲ್ಲಿ ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಅಪಾಯ ತಂದುಕೊಳ್ಳಬೇಡಿ
ಚಿತ್ರದುರ್ಗಜುಲೈ09:
18 ವರ್ಷದ ಒಳಗಡೆ ಇಳಿ ವಯಸ್ಸಿನಲ್ಲಿ ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಅಪಾಯ ತಂದುಕೊಳ್ಳಬೇಡಿ. ಅಂತರದ ಹೆರಿಗೆ, ಕುಟುಂಬ ಯೋಜನೆ, ಚಿಕ್ಕ ಕುಟುಂಬದ ಆದರ್ಶ ಪಾಲಿಸಬೇಕ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಹೇಳಿದರು.
ಇಲ್ಲಿನ ನೆಹರು ನಗರದ ನಗರ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ನಡೆದ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಲ್ಲಿ ಮಾಹಿತಿ ಶಿಕ್ಷಣ ನೀಡಿ ಅವರು ಮಾತನಾಡಿದರು.
ಬಾಲಿಕಾ ಗರ್ಭಧಾರಣೆ ನಿಯಂತ್ರಿಸಲುಪೋಷಕರು ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು. ಬಾಲ್ಯ ವಿವಾಹದಂತಹ ಸಾಮಾಜಿಕ ಪಿಡುಗು ನಿಲ್ಲಿಸದಿದ್ದಲ್ಲಿ ತಾಯಿ ಮರಣ, ಶಿಶು ಮರಣ ಪ್ರಮಾಣ ಹೆಚ್ಚಾಗುತ್ತದೆ ಎಂದರು.
ತೊಡಕಿನ ಗರ್ಭಿಣಿಯರು ಆಸ್ಪತ್ರೆಯಲ್ಲಿ ಮೂರು ಬಾರಿ ಸುರಕ್ಷಿತ ಮಾತೃತ್ವ ಅಭಿಯಾನ ಕಾರ್ಯಕ್ರಮದಲ್ಲಿ ಪರೀಕ್ಷೆಗೆ ಒಳಪಟ್ಟರೆ ಒಟ್ಟು ರೂ.300/ಗಳನ್ನು ಫಲಾನುಭವಿಯ ಬ್ಯಾಂಕ್ ಖಾತೆಗೆ ಸೇವಾ ಸಿಂಧು ಪೋರ್ಟಲ್ನಿಂದ ಅರ್ಜಿ ಸಲ್ಲಿಸಿದವರಿಗೆ ಜಮಾ ಮಾಡಲಾಗುವುದು ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ ಮಾತನಾಡಿ, ಸರ್ಕಾರದ ಯೋಜನೆಗಳು ಗ್ರಾಮಾಂತರ ಪ್ರದೇಶದ ಕಟ್ಟ ಕಡೆಯ ತಾಯಿಗೂ ತಲುಪಿಸುವ ನಿಟ್ಟಿನಲ್ಲಿ ಜನನಿ ಸುರಕ್ಷಾ ಯೋಜನೆ, ಜೆಎಸ್ಎಸ್ಕೆ ಇವು ಸರ್ಕಾರದ ಉಪಯುಕ್ತ ಯೋಜನೆಗಳಾಗಿದ್ದು, ಗರ್ಭಿಣಿ ತಾಯಂದಿರು ಪ್ರತಿ ತಿಂಗಳು 9ನೇ ತಾರೀಖು ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆಗೊಳಪಟ್ಟು ಇದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.
ಮಧುಮೇಹ, ರಕ್ತದೊತ್ತಡ, ಅಸ್ತಮಾ, ಹಿಂದಿನ ಹೆರಿಗೆ ಸಿಜರಿನ್ ಆದವರು, ಅವಳಿ ಮಕ್ಕಳ ಹೊಂದಿದವರು, ಇಂಥವರಿಗೆ ಪ್ರತಿ ತಿಂಗಳು 24ನೇ ತಾರೀಖು ವಿಶೇಷ ಗರ್ಭಿಣಿಯರ ತಪಾಸಣೆ ಮತ್ತು ಸೂಕ್ತ ಚಿಕಿತ್ಸೆ ಉಚಿತವಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುವುದು. ರಕ್ತಹೀನತೆ ತಡೆಯಲು ಕಬ್ಬಿನಾಂಶಗಳ ಮಾತ್ರೆ ಇತರೆ ಸೇವಾ ಸೌಲಭ್ಯಗಳನ್ನು ಪಡೆದು ತಾಯಂದಿರು ಆರೋಗ್ಯವಂತ ಮಗುವನ್ನು ಹೆತ್ತು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಹಿರಿಯ ಆರೋಗ್ಯ ಸುರಕ್ಷತಾಧಿಕಾರಿ ವನಜಾಕ್ಷಿ ಮಾತನಾಡಿ, ಗರ್ಭಿಣಿ ತಾಯಂದಿರು ಆಸ್ಪತ್ರೆಯಲ್ಲಿ ವೈದ್ಯರಲ್ಲಿ ಪರೀಕ್ಷೆ ಮಾಡಿಸಿದ ದಾಖಲೆಗಳನ್ನು ಒಂದೆಡೆ ಜೋಪಾನವಾಗಿ ಇಟ್ಟುಕೊಂಡು ಪ್ರತಿದಿನ ಮಧ್ಯಾಹ್ನ ಎರಡು ತಾಸು ಎಡ ಮೊಗ್ಗುಲಲ್ಲಿ ಮಲಗುವುದರ ಮುಖಾಂತರ ಗರ್ಭದಲ್ಲಿ ಬೆಳೆಯುವ ಮಗುವಿಗೂ ಕೂಡ ವಿರಾಮ ಸಿಗುವಂತೆ ಅವಕಾಶ ಮಾಡಿಕೊಡಬೇಕು ಎಂದರು.
ಉಪ್ಪು ನೀರಿನಿಂದ ಸ್ವಚ್ಛಗೊಳಿಸಿ ಹಸಿ ತರಕಾರಿಗಳಾದ ಕ್ಯಾರೆಟ್, ಮೂಲಂಗಿ, ಸೌತೆಕಾಯಿ, ಈರುಳ್ಳಿ, ಮೆಂತೆ ಸೊಪ್ಪು ಹಾಗೂ ಮೊಳಕೆ ಕಾಳುಗಳು ಮತ್ತು ದಾವಣಗೆರೆ ಮಿಕ್ಸ್ ಶೇಂಗಾ, ಬೆಲ್ಲ, ಹುರಿಗಡಲೆ, ವಡ್ರಾಗಿ ಹಿಟ್ಟು, ಸಮ ಪ್ರಮಾಣದಲ್ಲಿ ಬೆರೆಸಿ ಗಂಜಿ ಮಾಡಿಕೊಂಡು ಇಲ್ಲವೇ ಉಂಡೆ ಮಾಡಿಕೊಂಡು ಪ್ರತಿದಿನ ಬಳಕೆ ಮಾಡಿದರೆ ಕೆಂಪು ರಕ್ತ ಕಣಗಳ ವೃದ್ಧಿಯಾಗುವುದಲ್ಲದೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹೆರಿಗೆ ಸಮಯದಲ್ಲಿ ಯಾವುದೇ ಅಡ್ಡಿ ಆತಂಕ ಬರುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಫಾರ್ಮಸಿ ಅಧಿಕಾರಿ ಆಸಿಯಾ, ಪ್ರಯೋಗಶಾಲಾ ತಂತ್ರಜ್ಞೆ ಪೂರ್ಣಿಮಾ, ಶುಶ್ರೂಷಾಣಾಧಿಕಾರಿ ಮನು, ಆಶಾ ಕಾರ್ಯಕರ್ತೆಯರಾದ ಭಾಗ್ಯಮ್ಮ, ಕೆಂಚಮ್ಮ ಲಿಖಿತಾ ಹಾಗೂ ಗರ್ಭಿಣಿಯರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article
error: Content is protected !!