ಆರೋಗ್ಯ ಸಿಂಚನ’ ಕಾರ್ಯಕ್ರಮದಲ್ಲಿ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಹೇಳಿಕೆ ಶಾಲಾ ಮಕ್ಕಳು ಶಿಕ್ಷಣದ ಜೊತೆಗೆ ಆರೋಗ್ಯ ಕಾರ್ಯಕ್ರಮಗಳ ಅರಿವು ಹೊಂದಬೇಕು

Vijayanagara Vani
ಆರೋಗ್ಯ ಸಿಂಚನ’ ಕಾರ್ಯಕ್ರಮದಲ್ಲಿ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಹೇಳಿಕೆ ಶಾಲಾ ಮಕ್ಕಳು ಶಿಕ್ಷಣದ ಜೊತೆಗೆ ಆರೋಗ್ಯ ಕಾರ್ಯಕ್ರಮಗಳ ಅರಿವು ಹೊಂದಬೇಕು
ಬಳ್ಳಾರಿ,ಆ.06
ಮಕ್ಕಳು ಶಾಲೆಯಲ್ಲಿ ಶಿಕ್ಷಣ ಪಡೆಯುವುದಲ್ಲದೇ ಆರೋಗ್ಯ ಕಾರ್ಯಕ್ರಮಗಳ ಶಿಕ್ಷಣದ ಅರಿವು ಹೊಂದಬೇಕು. ಈ ಮೂಲಕ ವಿದ್ಯಾರ್ಥಿಗಳು ಎಲ್ಲಾ ವಿಷಯವನ್ನು ತಿಳಿದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಗ್ರಾಮ ಪಂಚಾಯತಿಗಳ ಸಹಯೋಗದೊಂದಿಗೆ ಬಳ್ಳಾರಿ ತಾಲ್ಲೂಕಿನ ಕೊಳಗಲ್ಲು ಗ್ರಾಮದ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ “ಆರೋಗ್ಯ ಸಿಂಚನ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದಲ್ಲಿಯೇ ಬಳ್ಳಾರಿ ಜಿಲ್ಲೆಯಲ್ಲಿ “ಆರೋಗ್ಯ ಸಿಂಚನ” ಕಾರ್ಯಕ್ರಮದಡಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ 713 ಶಾಲೆಗಳಲ್ಲಿ 7 ರಿಂದ 10 ನೇ ತರಗತಿ ಓದುತ್ತಿರುವ ಎಲ್ಲಾ ಸರ್ಕಾರಿ ಅನುದಾನಿತ, ಅನುದಾನ ರಹಿತ ಶಾಲಾ ಮಕ್ಕಳಿಗೆ ಆರೋಗ್ಯ ಜಾಗೃತಿ ಮೂಡಿಸುವ ‘ಆರೋಗ್ಯ ಸಿಂಚನ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಇಂದಿನ ಪೀಳಿಗೆಯು ಸದೃಢವಾಗಬೇಕೆಂದರೆ ಶಾಲಾ ಮಕ್ಕಳು ಆರೋಗ್ಯದ ಬಗ್ಗೆ ಹೆಚ್ಚು ಅರಿವು ಮತ್ತು ಜಾಗೃತಿ ಹೊಂದಬೇಕು. ಹಾಗೆಯೇ ತಮ್ಮ ನೆರೆಹೊರೆಯವರಿಗೂ ಇದರ ಕುರಿತು ತಿಳಿಸಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್‌ಬಾಬು ಅವರು ಮಾತನಾಡಿ, ಮಕ್ಕಳಲ್ಲಿ ಆರೋಗ್ಯ ಜಾಗೃತಿ ನೀಡುವುದರ ಜೊತೆಗೆ ಡೆಂಗ್ಯು, ಕ್ಷಯರೋಗ, ಕುಷ್ಠರೋಗ, ಬಾಲ್ಯವಿವಾಹ, ಋತುಚಕ್ರ ನಿರ್ವಹಣೆ, ಕೈತೊಳೆಯುವ ವಿಧಾನಗಳು, ತ್ಯಾಜ್ಯ ನಿರ್ವಹಣೆಗಳ ಮಾಹಿತಿ ಪ್ರತಿಯೊಬ್ಬರೂ ಪಡೆಯಬೇಕು. ಡೆಂಗ್ಯೂ, ಚಿಕಿನ್ ಗುನ್ಯಾ ಮುಂತಾದ ಸೊಳ್ಳೆಗಳಿಂದ ಹರಡುವ ಕಾಯಿಲೆಗಳ ಕುರಿತು ಜನಜಾಗೃತಿ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಲು 17 ವಿಡಿಯೋ ತುಣುಕುಗಳನ್ನು ಸಿದ್ಧಪಡಿಸಲಾಗಿದ್ದು, ಶಾಲಾ ಮಕ್ಕಳಿಗೆ ಪ್ರದರ್ಶಿಸುವ ಕಾರ್ಯಕ್ರಮ ಇದಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್‌ಕುಮಾರ್ ಅವರು ಮಾತನಾಡಿ, ಬಾಲ್ಯ ವಿವಾಹ ನಿಷೇಧ ಹಾಗೂ ಬಾಲ್ಯ ವಿವಾಹದಿಂದ ಉಂಟಾಗುವ ಮಾರಕ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳು ಅರಿವು ಹೊಂದಬೇಕು. ನಿಮ್ಮ ಸುತ್ತಮುತ್ತಲಿನಲ್ಲಿ ಬಾಲ್ಯ ವಿವಾಹಗಳು ನಡೆಯುವುದು ಕಂಡುಬAದಲ್ಲಿ 1098 ಗೆ ಕರೆ ಮಾಡಿ ತಿಳಿಸಬಹುದು. ದೂರು ನೀಡಿದವರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು, ಆರೋಗ್ಯ ಜಾಗೃತಿ ಕಾರ್ಯಕ್ರಮಗಳ ಕುರಿತು ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು.
ನಂತರದಲ್ಲಿ ವಿದ್ಯಾರ್ಥಿಗಳಿಗೆ ಹದಿಹರೆಯದ ಆರೋಗ್ಯ, ಬಾಲ್ಯವಿವಾಹ ದುಷ್ಪರಿಣಾಮಗಳು, ಡೆಂಗ್ಯೂ, ಕಾಲರಾ, ಕ್ಷಯರೋಗ, ತ್ಯಾಜ್ಯ ನಿರ್ವಹಣೆ, 108 ಅಂಬ್ಯುಲೆನ್ಸ್, ಅನೀಮಿಯಾ, ಐಯೋಡಿನ್ ಮುಂತಾದವು ಸೇರಿದಂತೆ 17 ವಿಡಿಯೋ ತುಣುಕುಗಳನ್ನು ಪ್ರದರ್ಶಿಸಲಾಯಿತು.
ಈ ವೇಳೆ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಳೆನಾಗಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೋಹನಕುಮಾರಿ, ಕೊಳಗಲ್ಲು ಏಕಲವ್ಯ ಮಾದರಿ ವಸತಿ ಶಾಲೆಯ ಪ್ರಾಚಾರ್ಯರಾದ ಅಮೃತ, ಕುರುಗೋಡು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಂಜುನಾಥ ಜವಳಿ, ಸಿದ್ದಮ್ಮನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದಿವ್ಯಾ, ಬಳ್ಳಾರಿ ತಾಲ್ಲೂಕು ಅಂಗನವಾಡಿ ಮೇಲ್ವಿಚಾರಕಿ ಕಲ್ಯಾಣಮ್ಮ, ಕುರುಗೋಡು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜುಶೆಟ್ಟಿ, ಕೊಳಗಲ್ಲು ಗ್ರಾಪಂ ಅಭಿವೃದ್ಧಿ ಅಧಿಕಾರಿ ಶೇಕ್ಷಾವಲಿ ಸೇರಿದಂತೆ ಆಶಾಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಇನ್ನೀತರರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article
error: Content is protected !!