ಬಳ್ಳಾರಿ,ಜೂ.18
ಮಕ್ಕಳು ದೇಶದ ಆಸ್ತಿ, ಅವರ ಸುರಕ್ಷತೆಗೆ ರಕ್ಷಣೆ ಕಲ್ಪಿಸುವುದು ಎಲ್ಲಾ ಅಧಿಕಾರಿಗಳ ಮುಖ್ಯ ಕರ್ತವ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಕೆ.ನಾಗಣ್ಣ ಗೌಡ ಅವರು ಹೇಳಿದರು.
ಬುಧವಾರ ನಗರದ ಜಿಲ್ಲಾ ಪಂಚಾಯತ್‌ನ ನಜೀರ್ ಸಾಬ್ ಸಭಾಂಗಣದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರು ಮತ್ತು ಎಲ್ಲಾ ಸದಸ್ಯರ ಉಪಸ್ಥಿತಿಯಲ್ಲಿ ಆರ್.ಟಿ.ಇ-2009, ಪೋಕ್ಸೋ-2012 ಹಾಗೂ ಬಾಲ ನ್ಯಾಯ ಕಾಯ್ದೆ-2015 ರ ಅನುಷ್ಠಾನದ ಕುರಿತು ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮಕ್ಕಳ ಪಾಲನಾ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಮಕ್ಕಳಿಗೆ ಸಂಬAಧಿಸಿದ ಕಾರ್ಯಕ್ರಮ, ಯೋಜನೆಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳ ಕುರಿತು ಕಾರ್ಯನಿರ್ವಹಿಸುವ ಎಲ್ಲಾ ಇಲಾಖೆಗಳು ಮಕ್ಕಳ ಹಕ್ಕುಗಳ ರಕ್ಷಣೆಗೆ ಮತ್ತು ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕಿದೆ ಎಂದರು.
ಜಿಲ್ಲೆಯಲ್ಲಿ 2024 ಏಪ್ರಿಲ್ ನಿಂದ 2025 ಮಾರ್ಚ್ ವರೆಗೆ ಒಟ್ಟು 123 ಬಾಲ್ಯವಿವಾಹ ಪ್ರಕರಣ ತಡೆಯಲಾಗಿದೆ. ಅದರಲ್ಲಿ 11 ಬಾಲ್ಯವಿವಾಹ ಪ್ರಕರಣ ನಡೆದಿದ್ದು, 11 ಪ್ರಕರಣಗಳಿಗೆ ಎಪ್‌ಐಆರ್ ದಾಖಲಿಸಲಾಗಿದೆ. ಅದರಂತೆ 2025 ರ ಏಪ್ರಿಲ್ ನಿಂದ ಮೇ ವರೆಗೆ ಒಟ್ಟು 45 ಬಾಲ್ಯವಿವಾಹ ಪ್ರಕರಣ ತಡೆಯಲಾಗಿದೆ. ಅದರಲ್ಲಿ 11 ಬಾಲ್ಯವಿವಾಹ ಪ್ರಕರಣ ನಡೆದಿದ್ದು, 04 ಪ್ರಕರಣಗಳಿಗೆ ಎಪ್‌ಐಆರ್ ದಾಖಲಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ಎಳೆ ನಾಗಪ್ಪ ಸಭೆಗೆ ವಿವರಿಸಿದರು.
ಇದಕ್ಕೆ ಅಧ್ಯಕ್ಷರು ಪ್ರತಿಕ್ರಿಯಿಸಿ, ಬಾಲ್ಯ ವಿವಾಹ ಘಟನೆ ನಡೆದಲ್ಲಿ ತಕ್ಷಣವೇ ಸಂಬAಧಿಸಿದ ಅಧಿಕಾರಿಗಳು, ಹುಡುಗ-ಹುಡುಗಿಯ ಮನೆಗೆ ಭೇಟಿ ನೀಡಿ ಪೋಷಕರ ಜೊತೆ ಆಪ್ತಸಮಾಲೋಚನೆ ನಡೆಸಿ, ಮುಚ್ಚಳಿಕೆ ಪತ್ರ ಬರೆಸಿಕೊಳ್ಳಿ, ಸುಖ-ಸಂಸಾರ ಜೀವನಕ್ಕಾಗಿ 18 ವಷÀð ತುಂಬಿದ ನಂತರವೇ ವಿವಾಹ ಮಾಡಿಸಬೇಕು ಎಂದು ತಿಳಿಯಪಡಿಸಬೇಕು. ಈ ಕುರಿತು ಆಯಾ ಗ್ರಾಪಂ ಪಿಡಿಒ, ತಾಲ್ಲೂಕು ತಹಶೀಲ್ದಾರ್, ಇಒ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಮಕ್ಕಳ ರಕ್ಷಣಾ ಘಟಕ ಅಧಿಕಾರಿಗಳು ಸಮನ್ವಯತೆ ಹೊಂದಬೇಕು. ಒಂದು ವೇಳೆ ಬಾಲ್ಯವಿವಾಹ ಘಟನೆ ನಡೆದಿದ್ದಲ್ಲಿ ಎಪ್‌ಐಆರ್ ದಾಖಲಿಸುವಲ್ಲಿ ಪ್ರಕ್ರಿಯೆ ವಿಳಂಬವಾಗಬಾರದು ಎಂದು ನಿರ್ದೇಶನ ನೀಡಿದರು.
*ಪೊಲೀಸ್ ಪರಿಶೀಲನಾ ಪ್ರಮಾಣ ಪತ್ರ:*
ಜಿಲ್ಲೆಯಲ್ಲಿ ವಿವಿಧ ಶೈಕ್ಷಣಿಕ ಸಂಸ್ಥೆಗಳು, ವಿವಿಧ ವಸತಿ ನಿಲಯಗಳಲ್ಲಿ ನೇಮಕಗೊಳ್ಳುವ ಅತಿಥಿ ಶಿಕ್ಷಕರು, ಹೊರಗುತ್ತಿಗೆ ನೌಕರರ ಕುರಿತು ಪೊಲೀಸ್ ಪರಿಶೀಲನಾ ಪ್ರಮಾಣ ಪತ್ರ ಕಡ್ಡಾಯವಾಗಿ ಪರಿಶೀಲಿಸಬೇಕು. ಈ ಕುರಿತು ಸರ್ಕಾರದ ನಿರ್ದೇಶನವಿದೆ ಎಂದರು.
*ವಿದ್ಯುತ್ ತಂತಿ ತೆರವುಗೊಳಿಸಿ:*
ಶಾಲೆ ಮತ್ತು ವಸತಿ ನಿಲಯಗಳ ಮೇಲೆ ವಿದ್ಯುತ್ ತಂತಿಗಳು ಹಾದುಹೋಗಿರುವ ಬಗ್ಗೆ ಸಮೀಕ್ಷೆ ಕೈಗೊಳ್ಳಬೇಕು. ಇದರಿಂದ ಸಾಕಷ್ಟು ಮಕ್ಕಳ ಮರಣ ಘಟನೆ ಸಂಭವಿಸಿವೆ. ಒಂದು ವೇಳೆ ಹಾದುಹೋಗಿದ್ದಲ್ಲಿ ತೆರವುಗೊಳಿಸುವ ಕಾರ್ಯಮಾಡಲು ಸಂಬAಧಿಸಿದ ಅಧಿಕಾರಿಗಳು ಜೆಸ್ಕಾಂ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಬೇಕು ಎಂದರು.
ಪ್ರಸ್ತುತದಲ್ಲಿ ಮಕ್ಕಳಿಗೆ ಅನ್‌ಲೈನ್ ಚಟುವಟಿಕೆಗಳು ಮತ್ತು ಮಾದಕ ವಸ್ತುಗಳು ವಿಪರೀತ ಮಾರಕವಾಗಿವೆ. ಅಧಿಕಾರಿಗಳು ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದರು.
ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಡಾ.ಕೆ.ಟಿ ತಿಪ್ಪೇಸ್ವಾಮಿ ಅವರು ಮಾತನಾಡಿ, ಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಕಾನೂನಾತ್ಮಕ ದಾಖಲೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಕಡತಗಳ ಮೇಲೆ ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ ಎಂಬ ಟ್ಯಾಗ್‌ಲೈನ್ ಮುದ್ರಿಸುವಂತೆ ರಾಜ್ಯ ಸರ್ಕಾರದ ಸುತ್ತೋಲೆ ಇದೆ. ಇದರಿಂದ ಸಾರ್ವಜನಿಕರು ಸರ್ಕಾರಿ ದಾಖಲೆ ಪಡೆದುಕೊಂಡಾಗ ಅದನ್ನು ನೋಡಿದಾಗ ಅವರಿಗೆ ಮನದಟ್ಟಾಗುತ್ತದೆ ಎಂದು ಹೇಳಿದರು.
ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಿಂದ ನಿರ್ಮಿತಗೊಂಡ ಕೃಷಿ ಹೊಂಡಗಳು, ಬೊರವೆಲ್‌ಗಳು ಸುತ್ತ ಸೂಕ್ತ ರಕ್ಷಣಾ ವ್ಯವಸ್ಥೆ ಕಲ್ಪಿಸಬೇಕು. ವಿಫಲಗೊಂಡ ಬೊರವೆಲ್‌ಗಳನ್ನು ಮುಚ್ಚದೇ ಅವಘಡಗಳು ಸಂಭವಿಸಿದರೇ ಅಧಿಕಾರಿಗಳನ್ನು ನೇರಹೊಣೆಗಾರರನ್ನಾಗಿಸಿ ಪ್ರಕರಣ ದಾಖಲಿಸಲಾಗುವುದು ಎಂದರು.
ಆಯೋಗದ ಸದಸ್ಯರಾದ ವೆಂಕಟೇಶ್ ಮಾತನಾಡಿ, ರಾಜ್ಯದಲ್ಲಿ ಬಾಲ ನ್ಯಾಯ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಎಲ್ಲಾ ಇಲಾಖೆ ಅಧಿಕಾರಿಗಳಿಗೆ ತರಬೇತಿ ನೀಡುವ ಅಗತ್ಯವಿದೆ. ಪೋಕ್ಸೋ ಪ್ರಕರಣಗಳು, ಬಾಲ್ಯ ವಿವಾಹಗಳು ನಿಯಂತ್ರಿಸಲು ಸರ್ಕಾರದ ಸುತ್ತೋಲೆಗಿಂತ ಮಾನವೀಯ ನೆಲೆಗಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕಿದೆ. ಎಲ್ಲಾ ಶಾಲೆಗಳಲ್ಲಿ ಮಕ್ಕಳ ರಕ್ಷಣಾ ನೀತಿ ಬಗ್ಗೆ ಸರ್ಕಾರದ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳು(ಎಸ್‌ಓಪಿ)ಗಳನ್ನು ಎಲ್ಲಾ ಇಲಾಖೆ ಅಧಿಕಾರಿಗಳು ಅರಿತು ತಮ್ಮ ಇಲಾಖೆ ಸಿಬ್ಬಂದಿಗಳಿಗೆ ಜಾಗೃತಿ ಮೂಡಿಸಬೇಕಿದೆ ಎಂದು ತಿಳಿಸಿದರು.
ಆಯೋಗದ ಸದಸ್ಯ ಶಶಿಧರ ಕೊಸಂಬೆ ಮಾತನಾಡಿ, ಪೋಕ್ಸೋದಂತಹ ಪ್ರಕರಣಗಳಿಗೆ ನಿಯಂತ್ರಿಸಲು ಶಿಕ್ಷಣ ಇಲಾಖೆ ಅನೇಕ ಮುಂಜಾಗೃತ ಕ್ರಮಗಳನ್ನು ಪಾಲಿಸಬೇಕಿದೆ. ಅನಧಿಕೃತ ಕೋಚಿಂಗ್ ಸೆಂಟರ್‌ಗಳ ಕಡಿವಾಣ ಹಾಕಬೇಕಿದೆ. ಎಲ್ಲಾ ಶಿಕ್ಷಣ ಸಂಸ್ಥೆಗಳ ಕಚೇರಿ ಆವರಣದಲ್ಲಿ ಕಡ್ಡಾಯವಾಗಿ ಮಕ್ಕಳ ಸಹಾಯವಾಣಿ ಸಂಖ್ಯೆ ಮತ್ತು ಬಾಲ್ಯ ವಿವಾಹ ಕುರಿತು ನಾಮಫಲಕ, ಗೋಡೆ ಬರಹ ಬರೆಸಬೇಕು ಎಂದು ಸೂಚಿಸಿದರು.
ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕಡ್ಡಾಯವಾಗಿ ಮಕ್ಕಳ ಸಹಾಯವಾಣಿ ಸಂಖ್ಯೆ ಅಳವಡಿಸಬೇಕು. ವಸತಿ ನಿಲಯಗಳಲ್ಲಿ ಮಕ್ಕಳಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ಸಮರ್ಪಕವಾಗಿ ವಿತರಿಸಬೇಕು. ಬಾಲಕಿಯರ ವಸತಿ ನಿಲಯಗಳಲ್ಲಿ ಮಹಿಳಾ ವಾರ್ಡನ್‌ಗಳನ್ನು ನೇಮಿಸಬೇಕು. ಆರೋಗ್ಯ ಇಲಾಖೆ ಆರ್‌ಬಿಎಸ್‌ಕೆ ತಂಡವನ್ನು ಬಳಸಿಕೊಂಡು ಅಪೌಷ್ಠಿಕತೆಯ ಮಕ್ಕಳಿಗೆ ಗುಣಮಟ್ಟದ ಪೋಷಣೆ ನೀಡುವಲ್ಲಿ ಅಂಗನವಾಡಿ, ಶಿಶು ಅಭಿವೃದ್ಧಿ ಕಲ್ಯಾಣ ಇಲಾಖೆಯೊಂದಿಗೆ ಕೈಜೋಡಿಸಬೇಕಿದೆ ಎಂದರು.
ಜಿಲ್ಲೆಯಲ್ಲಿ 2024 ಏಪ್ರಿಲ್ 1 ರಿಂದ 2025 ಮಾರ್ಚ್ 31 ರವರೆಗೆ 897 ಬಾರಿ ದಾಳಿ ನಡೆಸಿದ್ದು, ಅದರಲ್ಲಿ 44 ಬಾಲ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ರಕ್ಷಿಸಲಾಗಿದ್ದು, ಒಟ್ಟು 30 ಪ್ರಕರಣ ಕಂಡುಬAದಿವೆ. 30 ಪ್ರಕರಣಗಳನ್ನು ಎಪ್‌ಐಆರ್ ದಾಖಲಿಸಲಾಗಿದೆ. 9 ಪ್ರಕರಣಗಳಿಗೆ ಶಿಕ್ಷೆ ಆಗಿದೆ. ಇದರಿಂದ 1.80 ಲಕ್ಷ ದಂಡ ವಸೂಲು ಮಾಡಲಾಗಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಸಭೆಗೆ ತಿಳಿಸಿದರು.
ಇದಕ್ಕೆ ಆಯೋಗದ ಸದಸ್ಯರಾದ ಶೇಖರಗೌಡ ರಾಮತ್ನಾಳ ಪ್ರತಿಕ್ರಿಯಿಸಿ, 14 ವರ್ಷದೊಳಗಿನ ಮಗು ಶಾಲೆಯಿಂದ ವಂಚಿತರಾಗಿದ್ದಲ್ಲಿ ಗುರುತಿಸಬೇಕು. ಬಾಲಕಾರ್ಮಿಕ ಪದ್ದತಿಯಿಂದ ರಕ್ಷಿಸಿದ ಮಕ್ಕಳನ್ನು ಶಾಲಾ ಮುಖ್ಯವಾಹಿನಿಗೆ ತರಲು ಅಗತ್ಯ ಕ್ರಮವಹಿಸಬೇಕು ಎಂದರು.
ಅಬಕಾರಿ ಇಲಾಖೆ ಗ್ರಾಮೀಣ ಭಾಗಗಳಲ್ಲಿ ಅಕ್ರಮ ಮದ್ಯ ಮಾರಾಟದ ವಿರುದ್ಧ ಕ್ರಮ ವಹಿಸಬೇಕು. ಇಲಾಖೆಯಿಂದ ಮೇಲ್ವಿಚಾರಣೆ ಹೆಚ್ಚಿಸಬೇಕು ಎಂದು ಸೂಚಿಸಿದರು.
ಈ ವೇಳೆ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ವಿಜಯಲಕ್ಷ್ಮಿ ಮೈದೂರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೈರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ರಾಮಕೃಷ್ಣ ನಾಯಕ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಳೆ ನಾಗಪ್ಪ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.