ಬೆಂಗಳೂರು ಗ್ರಾಮಾಂತರ ಜಿಲ್ಲೆ,- ಕರ್ನಾಟಕವು ಮರುಬಳಕೆ ಮಾಡಬಹುದಾದ ಇಂಧನ ಉತ್ಪಾದನೆಗೆ ಒತ್ತು ಕೊಟ್ಟಿದ್ದು, ಸುಸ್ಥಿರ ಅಭಿವೃದ್ಧಿ ಸಾಧಿಸಲು ಇದೊಂದು ಪ್ರಮುಖ ಗುರಿಯಾಗಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ಜಿಲ್ಲೆಯ ದೊಡ್ಡಬಳ್ಳಾಪುರ ಸಮೀಪ ಅಮೆರಿಕಾ ಮೂಲದ ಓಮಿಯಮ್ ಕಂಪನಿಯು ಸ್ಥಾಪಿಸಿರುವ ದೇಶದ ಪ್ರಪ್ರಥಮ ಗ್ರೀನ್ ಹೈಡ್ರೋಜನ್ ಎಲೆಕ್ಟ್ರೋಲೈಜರ್ ಗಿಗಾ ಫ್ಯಾಕ್ಟರಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕೇಂದ್ರದ ನವೀಕರಿಸಬಹುದಾದ ಇಂಧನ ಇಲಾಖೆ ಸಚಿವ ಪ್ರಹ್ಲಾದ ಜೋಷಿ ಅವರು ಘಟಕಕ್ಕೆ ಚಾಲನೆ ನೀಡಿದರು.
ಓಮಿಯಂ ಕಂಪನಿಯು 2,000 ಕೋಟಿ ರೂಪಾಯಿ ಹೂಡಿಕೆ ಮಾಡಿ, ಈ ಕಂಪನಿಯನ್ನು ಪ್ರಾರಂಭಿಸಿರುವುದು ಸ್ವಾಗತಾರ್ಹವಾಗಿದೆ. ಇಲ್ಲಿ ಸದ್ಯಕ್ಕೆ ವರ್ಷಕ್ಕೆ 500 ಮೆಗಾವ್ಯಾಟ್ ಗ್ರೀನ್ ಹೈಡ್ರೋಜನ್ ಉತ್ಪಾದನೆ ಅಗಲಿದ್ದು, ಹಂತಹಂತವಾಗಿ 2,000 ಮೆಗಾವ್ಯಾಟ್ ಮಟ್ಟಕ್ಕೆ ಏರಿಸಲಾಗುವುದು. ಕಂಪನಿಯ ಉತ್ಪಾದನಾ ಚಟುವಟಿಕೆಯಿಂದ ಉದ್ಯೋಗಾವಕಾಶಗಳು ಕೂಡ ಸೃಷ್ಟಿಯಾಗಲಿವೆ ಎಂದರು.
ನೀರಿನಿಂದ ತಯಾರಾಗುವ ಗ್ರೀನ್-ಹೈಡ್ರೋಜನ್ ಅನ್ನು ಕಿಲೋಗ್ರಾಂ ಲೆಕ್ಕದಲ್ಲಿ ಅಳತೆ ಮಾಡಲಾಗುವುದು. ಇದರ ಸಂಗ್ರಹಣೆ ಮತ್ತು ಸಾಗಣೆ ಕೂಡ ಸುಲಭವಾಗಿದೆ. ಇದನ್ನು ರಸಗೊಬ್ಬರ ಮತ್ತು ಉಕ್ಕು ಉತ್ಪಾದನೆ, ವಾಹನಗಳಲ್ಲಿ ಎಥನಾಲ್ ಜತೆ ಮಿಶ್ರಣವಾಗಿ, ಸಂಸ್ಕರಣೆ ಪ್ರಕ್ರಿಯೆಗಳಲ್ಲಿ ಧಾರಾಳವಾಗಿ ಉಪಯೋಗಿಸಬಹುದು ಎಂದು ಅವರು ವಿವರಿಸಿದರು.
ರಾಜ್ಯವು ಕೈಗಾರಿಕಾ ಸ್ನೇಹಿಯಾಗಿದ್ದು, ಜಗತ್ತಿನ ಅತ್ಯುತ್ತಮ ಸಂಶೋಧನಾ ಸಂಸ್ಥೆಗಳು ಇಲ್ಲಿ ನೆಲೆಯೂರಿವೆ. ದೇಶದ ಆರ್ಥಿಕತೆಯನ್ನು 2030ರ ಹೊತ್ತಿಗೆ 5 ಟ್ರಿಲಿಯನ್ ಡಾಲರ್ ಮಟ್ಟಕ್ಕೆ ಕೊಂಡೊಯ್ಯುವ ಗುರಿಯಲ್ಲಿ ರಾಜ್ಯವು ನಿರ್ಣಾಯಕ ಪಾತ್ರ ವಹಿಸುತ್ತಿದೆ ಎಂದರು.
ರಾಜ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳು ಮತ್ತು ಪರಿಸರಸ್ನೇಹಿ ಹಾಗೂ ಮರುಬಳಕೆ ಮಾಡಬಹುದಾದ ಇಂಧನಗಳ ಉತ್ಪಾದನೆ ಭರದಿಂದ ನಡೆಯುತ್ತಿದೆ. ಇದನ್ನು ನಾವು ಪ್ರಮುಖ ವಲಯವಾಗಿ ಗುರುತಿಸಿದ್ದೇವೆ ಎಂದು ಅವರು ನುಡಿದರು.
ರಚನಾತ್ಮಕ ಉಪಕ್ರಮಗಳ ಫಲವಾಗಿ ರಾಜ್ಯವು 2016ರಿಂದಲೂ ಹೂಡಿಕೆ ಆಕರ್ಷಣೆಯಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಅವರು ವಿವರಿಸಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಗ್ರೀನ್ ಹೈಡ್ರೋಜನ್ ಉತ್ಪಾದನೆಗೆ ಭಾರತವು ಆದ್ಯತೆ ನೀಡಿದ್ದು, ಈ ಕ್ಷೇತ್ರದಲ್ಲಿ ಅಗ್ರಗಣ್ಯ ರಾಷ್ಟ್ರವಾಗಿದೆ. ಟಾಟಾ ಸಮೂಹ ಮತ್ತು ಎನ್ಟಿಪಿಸಿ ಕೂಡ ಇದರ ಲಾಭವನ್ನು ಮನಗಂಡಿವೆ ಎಂದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಧೀರಜ್ ಮುನಿರಾಜು, ಶಾಸಕರೂ ಆದ ಕ್ರೆಡೆಲ್ ಅಧ್ಯಕ್ಷ ರಾಜೇಗೌಡ, ಕಂಪನಿಯ ಉನ್ನತ ಅಧಿಕಾರಿಗಳಾದ ಅಮಿ ಬಾಲಟೈನ್, ಅಶ್ವಿನ್ ವರ್ಮಾ ಮುಂತಾದವರು ಉಪಸ್ಥಿತರಿದ್ದರು.