ವಿಜಯನಗರ(ಹೊಸಪೇಟೆ), ಜು.03: .ರಾಷ್ಟ್ರೀಯ ಅಂಧತ್ವ ನಿಯಂತ್ರಣಾ ಕಾರ್ಯಕ್ರಮದಡಿಯಲ್ಲಿ ಅಂಧತ್ವ ಪ್ರಮಾಣ ದರವನ್ನು ಇಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಆಶಾಕಿರಣ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಜಿಲ್ಲೆಯಲ್ಲಿ ಒಟ್ಟು 12 ದೃಷ್ಟಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರಿಗೆ ಸೇವೆ ಆರಂಭಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಂಕರ ನಾಯ್ಕ.ಎಲ್.ಆರ್ ತಿಳಿಸಿದ್ದಾರೆ.
ನಗರದ ಸರ್ಕಾರಿ ಸಾರ್ವಜನಿಕ ನೂರು ಹಾಸಿಗೆ ಆಸ್ಪತ್ರೆ ಆವರಣದಲ್ಲಿ ನೂತನ ಆಶಾಕಿರಣ ದೃಷ್ಟಿಕೇಂದ್ರವನ್ನು ಉದ್ಘಾಟಿಸಿ ಅವರು ಗುರುವಾರ ಮಾತನಾಡಿದರು. ಸಾರ್ವಜನಿಕರಲ್ಲಿ ಕಣ್ಣಿನ ಪೊರೆ ಮತ್ತು ವಕ್ರೀಕಾರಕ ದೋಷಗಳಿಂದ ದೃಷ್ಟಿ ಸಮಸ್ಯೆಗಳ ಸಂಭವನ್ನು ಕಡಿಮೆ ಮಾಡಲು ಮತ್ತು ದೃಷ್ಟಿ ಕೇಂದ್ರಗಳಲ್ಲಿ ಕಣ್ಣಿನ ತಪಾಸಣೆ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ನಡೆಸುವುದು ಇವುಗಳ ಉದ್ದೇಶವಾಗಿದೆ. ಈಗಾಗಲೇ ತಾಲೂಕಿನ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಕೂಡ್ಲಿಗಿ, ಹಡಗಲಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹಾಗೂ ಹಂಪಸಾಗರ, ಇಟಿಗಿ. ತೆಲಗಿ, ಅರಸೀಕೆರಿ, ಚಿಕ್ಕಜೋಗಿಹಳ್ಳಿ, ಕೊಟ್ಟೂರು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ದೃಷ್ಟಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಶಸ್ತ್ರ ಚಿಕಿತ್ಸೆಗಳು ಮತ್ತು ಇತರೆ ಕಣ್ಣಿನ ಚಿಕಿತ್ಸೆಗಳಿಗೆ ಉಚಿತ ವ್ಯವಸ್ಥೆ ಕಲ್ಪಿಸುವುದು. ಕ್ಷೇತ್ರ ಸಿಬ್ಬಂದಿಗಳಾದ ಆಶಾ ಮತ್ತು ಸಮುದಾಯ ಆರೋಗ್ಯ ಅಧಿಕಾರಿಗಳು ದಿನನಿತ್ಯದ ಚಟುವಟಿಕೆಯಡಿಯಲ್ಲಿ ಮನೆ, ಮನೆ ಭೇಟಿ ನೀಡಿ ಜನರ ಪ್ರಾಥಮಿಕ ತಪಾಸಣೆ ನಡೆಸಿ ಶಂಕಿತ ಪ್ರಕರಣಗಳು ಕಂಡು ಬಂದಲ್ಲಿ ಹೆಚ್ಚಿನ ಕಣ್ಣಿನ ತಪಾಸಣೆಗೆ ಸಮೀಪದ ದೃಷ್ಠಿ ಕೇಂದ್ರಗಳಿಗೆ ಹೋಗಲು ಸಲಹೆ ನೀಡಲಿದ್ದಾರೆ. ದೃಷ್ಠಿ ಕೇಂದ್ರಗಳಲ್ಲಿ ಅಗತ್ಯವಿದ್ದ ಫಲಾನುಭವಿಗಳಿಗೆ ಪರೀಕ್ಷೆ ನಡೆಸಿ ಉಚಿತವಾಗಿ ಕನ್ನಡಕಗಳನ್ನು ನೀಡಲಾಗುತ್ತದೆ. ಹಾಗೂ ಶಸ್ತ್ರಚಿಕಿತ್ಸೆ ಅಗತ್ಯ ಇದ್ದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ನೇತ್ರಾಧಿಕಾರಿಗಳು ಆಶಾಕಿರಣ ದೃಷ್ಟಿ ಕೇಂದ್ರಗಳಿಗೆ ಹಾಜರಾಗುವ ಎಲ್ಲಾ ಫಲಾನುಭವಿಗಳಿಗೆ ವಕ್ರೀಕಾರಕ ದೋಷ ತಪಾಸಣೆಯನ್ನು ನಡೆಸುತ್ತಾರೆ. ವಕ್ರೀಕಾರಕ ದೋಷವುಳ್ಳ ಫಲಾನುಭವಿಯ ಮಾಹಿತಿಯನ್ನು ನೇತ್ರಾಧಿಕಾರಿಗಳು ನಮೂದಿಸಲಿದ್ದಾರೆ. 2024-25ನೇ ಸಾಲಿನಲ್ಲಿ ಶಾಲಾ ಮಕ್ಕಳಿಗೆ ಒಟ್ಟು 4333 ಕನ್ನಡಕಗಳನ್ನು ಉಚಿತವಾಗಿ ವಿತರಿಸಿದ್ದೇವೆ. ಹಾಗೂ 2024-25ನೇ ಸಾಲಿನಲ್ಲಿ ವಿಜಯನಗರ ಜಿಲ್ಲೆಯಲ್ಲಿ 1580 ಕನ್ನಡಕಗಳನ್ನು ಉಚಿತವಾಗಿ ಫಲಾನುಭವಿಗಳಿಗೆ ವಿತರಿಸಲಾಗಿದೆ. 2025-26ನೇ ಸಾಲಿನಲ್ಲಿ ಸುಮಾರು 10,500 ಜನ ಫಲಾನುಭವಿಗಳನ್ನು ಗುರುತಿಸಿ ಉಚಿತವಾಗಿ ಕನ್ನಡಕಗಳನ್ನು ವಿತರಿಸುವ ಗುರಿ ಹೊಂದಲಾಗಿದೆ ಎಂದರು.
ಈ ವೇಳೆ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿಗಳು ಡಾ.ಕೆ.ರಾಧಿಕಾ, ಜಿಲ್ಲಾ ಕ್ಷಯರೋಗ ನಿರ್ಮೂಲಾಧಿಕಾರಿಗಳು ಡಾ.ಡಿ.ಭಾಸ್ಕರ್, ಮುಖ್ಯ ವೈದ್ಯಾಧಿಕಾರಿ ಡಾ.ಹರಿಪ್ರಸಾದ್, ನೇತ್ರ ತಜ್ಞರು ಡಾ.ರಾಜಶೇಖರ್, ಡಾ.ರಾಘವೇಂದ್ರ, ಡಾ.ಕೊಟ್ರೇಶ್, ಜಿಲ್ಲಾ ಕುಷ್ಠರೋಗ ಸಲಹೆಗಾರರು ಮತ್ತು ನೇತ್ರಾಧಿಕಾರಿ ನಜಬುನ್ನಿಸಾ ಬೇಗಂ, ವಾಣಿಶ್ರೀ ಹಾಗೂ ಜಿಲ್ಲಾ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ವೆಂಕಟೇಶ್, ಹನುಮಂತರೆಡ್ಡಿ, ಗಿಡ್ಡ ಗಂಗಪ್ಪ, ಗುಂಡಿ ರಾಘು ಸೇರಿದಂತೆ ಆಸ್ಪತ್ರೆ ಸಿಬ್ಬಂದಿಗಳು ಭಾಗವಹಿಸಿದ್ದರು.