Ad image

ಭಾರತೀಯ ಶಾಸ್ತ್ರೀಯ ನೃತ್ಯ…..ವಿವಿಧ ಆಯಾಮಗಳಲ್ಲಿ

Vijayanagara Vani
ಭಾರತೀಯ ಶಾಸ್ತ್ರೀಯ ನೃತ್ಯ…..ವಿವಿಧ ಆಯಾಮಗಳಲ್ಲಿ

ಭಾರತೀಯ ಶಾಸ್ತ್ರೀಯ ನೃತ್ಯವು ಶ್ರೀಮಂತ ಭಾವನಾತ್ಮಕ ಕಲೆಯಾಗಿದ್ದು ಧಾರ್ಮಿಕ ಮತ್ತು ಸಾಂಸ್ಕೃತಿಕ ಮೇಳವಿಕೆಯನ್ನು ಅಳವಡಿಸಿಕೊಂಡಿದೆ. ಶಾಸ್ತ್ರೀಯ ನೃತ್ಯದಲ್ಲಿ ಹಲವಾರು ವಿಧಗಳಿದ್ದು ಪ್ರತಿಯೊಂದು ವಿಧವು ತನ್ನದೇ ಆದ ವಿಶಿಷ್ಟ ಶೈಲಿಗಳನ್ನು ಹೊಂದಿದ್ದು ವೈವಿಧ್ಯಮಯ ಗುಣಗಳನ್ನು ತನ್ನದಾಗಿಸಿಕೊಂಡಿದೆ.

ಪ್ರತಿಯೊಂದು ಶೈಲಿಗೂ ಅದರದ್ದೇ ಆದ ಭಾವ ಭಂಗಿ, ಗತ್ತು, ನಡಿಗೆ ಮತ್ತು ಲಯಗಳಿವೆ.

ಕಥಕ್, ಭರತನಾಟ್ಯ, ಓಡಿಸ್ಸಿ, ಮಣಿಪುರಿ, ಕುಚಿಪುಡಿ ನೃತ್ಯಗಳು, ಯಕ್ಷಗಾನ ನೃತ್ಯ ನಮ್ಮ ಪೌರಾಣಿಕ, ಜಾನಪದ ಕಥೆ ಮತ್ತು ದೈನಂದಿನ ಜೀವನದ ವಿಷಯಗಳನ್ನು ನೃತ್ಯಗಳಲ್ಲಿ ಅಳವಡಿಸಿಕೊಂಡಿದ್ದು ಪ್ರದರ್ಶಿಸುವವರ ಕೌಶಲ್ಯ, ಸೌಂದರ್ಯ ಮತ್ತು ನೃತ್ಯದ ಪರಿಭಾಷೆಯನ್ನು ನವರಸಗಳ ಹದವಾದ ಪಾಕವನ್ನು ಒಳಗೊಂಡಿರುತ್ತದೆ. ಗೆಜ್ಜೆಯ ಲಯಬದ್ಧ ಶಬ್ದ,,ತಟ್ಟುವಿಕೆ ದೇಹದ ಅಂಗಗಳ ಚಲನೆ ಮತ್ತು ಕಣ್ಣುಗಳ ಭಾವಾಭಿವ್ಯಕ್ತಿಯ ಅಭಿನಯ ನೋಡುಗರನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತದೆ.
ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ತರಬೇತುಗೊಂಡು ಕರ್ನಾಟಕ ರಾಜ್ಯವಷ್ಟೇ ಅಲ್ಲದೇ ದೇಶದ ಮತ್ತು ಪ್ರಪಂಚದ ವಿವಿಧ ಭಾಗಗಳಲ್ಲಿ ತಂಡವಾಗಿ ಪ್ರದರ್ಶಿತವಾಗುವ ಯಕ್ಷಗಾನ ಕಲೆಯಲ್ಲಿ
ನೃತ್ಯ, ತಾಳ ಮದ್ದಲೆಯ ಜೊತೆ ಜೊತೆಗೆ ಭಾಗವತಿಕೆ ಅಂದರೆ ರಾಗಬದ್ಧವಾಗಿ ಕಥೆಯನ್ನು ಕೊಂಡೊಯ್ಯುವ ಕತೆಗಾರರು ಕೂಡ ಅಷ್ಟೇ ಮುಖ್ಯವಾಗುತ್ತಾರೆ. ಇನ್ನು ಯಕ್ಷಗಾನದ ವೇಷ ಹಾಕುವುದು ಅಷ್ಟು ಸುಲಭವಲ್ಲ. ಭಾರವಾದ ವಸ್ತ್ರವಿನ್ಯಾಸ, ಕಿರೀಟ ಮತ್ತು ಢಾಳಾದ ಬಣ್ಣಗಳನ್ನು ಬಳಸಿ ಮಾಡಿದ ಮೇಕಪ್ ನೃತ್ಯಕ್ಕೆ ಮೆರುಗನ್ನು ನೀಡುವುದು.
ಭಾರತೀಯ ನೃತ್ಯ ಕಲೆಯು ಅತ್ಯಂತ ವಿಶಿಷ್ಟವಾಗಿದ್ದು ಸಂಗೀತ ವಾದ್ಯಗಳ ತಾಳಕ್ಕೆ ತಕ್ಕಂತೆ ಕಥೆಯನ್ನು ನವರಸಗಳ ವಿಶಿಷ್ಟ ಶೈಲಿಯ ಮೂಲಕ ಜನರಿಗೆ ಪರಿಚಯಿಸುತ್ತಿದ್ದು ನೃತ್ಯದಲ್ಲಿ ಬಳಸುವ ಉಡುಗೆ ತೊಡುಗೆಗಳು ಕೂಡ ಸಾಂಪ್ರದಾಯಿಕವಾಗಿ ಶತಶತಮಾನಗಳಿಂದ ಬಳಸಲ್ಪಟ್ಟಿದ್ದು ಪ್ರತಿಯೊಂದು ಉಡುಗೆಯ ಹಿಂದೆಯೂ ಅದರದ್ದೇ ಆದ ವಿಶಿಷ್ಟತೆ ಇದೆ. ನೃತ್ಯದ ಮೂಲಕ ಕಥೆಯ ವಿವರವನ್ನು ಹೇಳುವ, ಭಾವಾಭಿನಯದ ಮೂಲಕ ರಸವತ್ತಾಗಿ ವರ್ಣಿಸುವ ಕಲೆ ನಮ್ಮ ನೃತ್ಯ ಪರಂಪರೆಯನ್ನು ಜಗತ್ತಿನೆಲ್ಲೆಡೆ ಪಸರಿಸಿದೆ.
ವಿಶೇಷವಾಗಿ ನೃತ್ಯಗಾತಿಯರು ಹೆಣ್ಣುಮಕ್ಕಳೇ ಆಗಿರುತ್ತಾರೆ. ಚಿತ್ರಕಲೆಯಲ್ಲೂ ಕೂಡ ಹಿಂದುಸ್ತಾನಿ ಶಾಸ್ತ್ರೀಯ ನೃತ್ಯದ ಹಲವಾರು ತೈಲವರ್ಣ ಚಿತ್ರಗಳು ಲಭ್ಯವಾಗಿರುವುದು ಈ ಕಾರಣಕ್ಕೆ ಇರಬಹುದು. ನೃತ್ಯಗಾರರ ಭಾವ, ಭಂಗಿ, ಅಭಿನಯ ಪ್ರತಿಭೆ ಮತ್ತು ಶಕ್ತಿಯನ್ನು ತೋರಿಸುವ ದೃಷ್ಟಿಯಲ್ಲಿ ವರ್ಣಚಿತ್ರಕಾರರು ಹಿಂದೆ ಬಿದ್ದಿಲ್ಲ. ಗಾಢವಾದ ಕೆಂಪು,ತಿಳಿಯಾದ ನೀಲಿ,ಕಡು ಕಪ್ಪು, ಚಿನ್ನದ ವರ್ಣ ಮತ್ತು ಬೂದು ಬಣ್ಣಗಳು ಭಾರತೀಯ ವರ್ಣ ಚಿತ್ರಗಳಲ್ಲಿ ನೃತ್ಯಗಾತಿಯರ ಸ್ತ್ರೀತ್ವವನ್ನು, ಈ ಕ್ಷೇತ್ರದಲ್ಲಿ ಅವರ ಬಲಿಷ್ಠತೆಯನ್ನು ಮತ್ತು ಭಾರತೀಯ ಕಲೆ ಮತ್ತು ಸಂಸ್ಕೃತಿಯ ಔನ್ಯತ್ಯವನ್ನು ಸಾರುತ್ತವೆ. ಈ ಬಣ್ಣಗಳು ಕೇವಲ ನೃತ್ಯದ ಸೊಬಗನ್ನು ಹೆಚ್ಚಿಸಲು ಮಾತ್ರವಲ್ಲ ಬದಲಾಗಿ ನೃತ್ಯದಲ್ಲಿ ಪ್ರಕಟವಾಗುವ ಭಾವ ಮತ್ತು ನರ್ತಕರ ಮನಸ್ಥಿತಿ ಮತ್ತು ಅವರು ಪ್ರತಿಪಾದಿಸುತ್ತಿರುವ ನೃತ್ಯದ ಕುರಿತಾದ ಥೀಮ್ ಇಲ್ಲವೇ ವಿಷಯವನ್ನು ಕುರಿತು ಹೇಳುತ್ತದೆ.
ಛಾಯಾ ಚಿತ್ರಗಾರರು ಕೂಡ ಭಾರತೀಯ ನೃತ್ಯ ಕಲೆಯನ್ನು ಜೀವಂತಿಕೆಗೆ ಕಾರಣರಾಗಿದ್ದಾರೆ. ಛಾಯಾ ಚಿತ್ರದ ಮಸೂರಗಳ ಮೂಲಕ ನೃತ್ಯದ ವಿವಿಧ ಭಂಗಿಗಳನ್ನು ಸೆರೆ ಹಿಡಿಯುವ ಅವರು ನೃತ್ಯಗಾರರ ಅತಿ ಸೂಕ್ಷ್ಮ ಭಾವನಾತ್ಮಕ ಅಭಿವ್ಯಕ್ತಿಯನ್ನು ತಮ್ಮ ಕ್ಯಾಮರಾದ ಕಣ್ಣುಗಳಲ್ಲಿ ಸೆರೆ ಹಿಡಿಯುತ್ತಾರೆ. ವೈವಿಧ್ಯಮಯ ನೃತ್ಯದ ಉಡುಗೆ ತೊಡುಗೆಗಳ ಜೊತೆಗೆ ಕಪ್ಪು ಬಿಳುಪಿನ, ಬಹುವರ್ಣದ ಛಾಯಾ ಚಿತ್ರಗಳು ಫೋಟೋ ತೆಗೆಯುತ್ತಿರುವ ಛಾಯಾಗ್ರಾಹಕನ ಮಾನಸಿಕ ಸ್ಥಿತಿಯನ್ನು ನೃತ್ಯದೆಡೆಗಿನ ಆತನ ತಾದಾತ್ಮ ಭಾವವನ್ನು ಸೂಚಿಸುತ್ತವೆ. ಛಾಯಾಗ್ರಾಹಕ ತೆಗೆಯುವ ಪ್ರತಿಯೊಂದು ಚಿತ್ರವೂ ಕೂಡ ಒಂದು ಮಹೋನ್ನತ ಭಾವಾಭಿವ್ಯಕ್ತಿಯ ಕಲಾಕೃತಿಯಂತೆ ತೋರುತ್ತದೆ. ಛಾಯಾಚಿತ್ರದ ಸೌಂದರ್ಯವನ್ನು ಹೆಚ್ಚಿಸುವ ನೆರಳು ಬೆಳಕುಗಳು ಛಾಯಾಗ್ರಹಣ ಮಾಡಲು ಬಳಸುವ ಮಸೂರಗಳು ಮತ್ತು ವಿವಿಧ ಕೋನಗಳಲ್ಲಿ ಈ ಕಲೆಯ ಅಭಿವ್ಯಕ್ತಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಿಂಬಿಸಲು ಸಾಧ್ಯ.

ಭಾರತೀಯ ಶಾಸ್ತ್ರೀಯ ನೃತ್ಯ ಮತ್ತು ಅದನ್ನು ಪ್ರಸ್ತುತಪಡಿಸುವ ಮಹಿಳೆಯ ನೃತ್ಯ ಪ್ರತಿಭೆಯ ಕಲೆಗಾರಿಕೆಯ ಸಮ್ಮಿಳನವು ಛಾಯಾಚಿತ್ರಗ್ರಾಹಕನ ಶಕ್ತಿಯುತವಾದ ಸೆರೆ ಹಿಡಿಯುವಿಕೆಯಲ್ಲಿ ಅಡಗಿದೆ ಎಂದರೆ ತಪ್ಪಲ್ಲ. ಸೌಂದರ್ಯ, ಬುದ್ಧಿವಂತಿಕೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಎನ್ನುವುದು ಕಾಲಾತೀತವಾದ ಸಂಪ್ರದಾಯ ಕ್ರಮವಾಗಿದ್ದು ನೋಡುವವರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.

ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ ಗದಗ್

Share This Article
error: Content is protected !!
";