ಕವಿತಾಳ : ಸಮೀಪದ ಬಾಗಲವಾಡ ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ರಾಷ್ಟ್ರೀಯ ಗುಣಮಟ್ಟದ ಭರವಸೆ ತಂಡ ಗುರುವಾರ ಭೇಟಿ ನೀಡಿ, ಸಮುದಾಯ ಆರೋಗ್ಯದ ಕುರಿತಾದ ಮೌಲ್ಯಮಾಪನ ಕಾರ್ಯವನ್ನು ಕೈಗೊಂಡಿತು.
ತಾಲೂಕು ಆರೋಗ್ಯಾಧಿಕಾರಿ
ಡಾ. ಶರಣಬಸವರಾಜ ಪಾಟೀಲ ಮಾತನಾಡಿ, ಆಸ್ಪತ್ರೆ ಮತ್ತು ಆರೋಗ್ಯ ಕ್ಷೇಮ ಕೇಂದ್ರಗಳಲ್ಲಿ ಉತ್ತಮ ಕಾರ್ಯಕ್ಷಮತೆ, ಸೌಲಭ್ಯಗಳನ್ನು ಗುರುತಿಸುವ ಜೊತೆಗೆ ಸಮುದಾಯದಲ್ಲಿ ಸಾರ್ವಜನಿಕ ಆಸ್ಪತ್ರೆಗಳ ವಿಶ್ವಾಸಾರ್ಹತೆಯನ್ನು ಸುಧಾರಣೆ ಮಾಡುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಾಷ್ಟ್ರೀಯ ಗುಣಮಟ್ಟದ ಭರವಸೆಯ ಕಾರ್ಯಕ್ರಮವನ್ನು ಪ್ರಾರಂಭಿಸಿದೆ ಎಂದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಶಿವುಕುಮಾರ ಮಾತನಾಡಿ, ಉಪ ಕೇಂದ್ರದ ಬಾಹ್ಯ ಮತ್ತು ಆಂತರಿಕ ಮೌಲ್ಯಮಾಪನವನ್ನು ಕೈಗೊಳ್ಳಲಾಗುತ್ತದೆ. ಮೌಲ್ಯಮಾಪನ ತಂಡವು ವಿವಿಧ ವಿಭಾಗಗಳನ್ನು ಪರೀಕ್ಷಿಸುತ್ತದೆ.ಸೋಂಕು ನಿಯಂತ್ರಣ ಅಭ್ಯಾಸಗಳು, ರೋಗಿಗಳ ಹಾರೈಕೆ, ರೋಗಿಗಳ ಪ್ರತಿಕ್ರಿಯೆ, ಕ್ಲಿನಿಕಲ್ ಸೇವೆಗಳು, ಗುಣಮಟ್ಟ ನಿರ್ವಹಣೆ ಸೇರಿದಂತೆ ಇನ್ನೂ ಅನೇಕ ಅಂಶಗಳ ಕುರಿತು ಮೌಲ್ಯಮಾಪನವನ್ನು ಮಾಡುತ್ತದೆ ಎಂದರು.
ಮೌಲ್ಯಮಾಪನ ತಂಡದ ಹಿರಿಯ ಮೌಲ್ಯಮಾಪಕರಾದ ಡಾ. ಸುಬ್ರಮಣಿಯನ್ ಅವರು ಆರೋಗ್ಯ ಸೇವೆಗಳನ್ನು ಸಮುದಾಯಕ್ಕೆ ಮುಟ್ಟಿಸಿರುವ ಬಗ್ಗೆ ಸಮುದಾಯ ಆರೋಗ್ಯಾಧಿಕಾರಿ ಡಾ. ಮಹೇಶ ಅವರಿಂದ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಸಮುದಾಯಕ್ಕೆ ಮುಟ್ಟಿಸುತ್ತಿರುವ ರೀತಿ ಮತ್ತು ಸಾರ್ವಜನಿಕರ ಅಭಿಪ್ರಾಯ ಬಗ್ಗೆ ಮಾಹಿತಿ ಪಡೆದರು. ಕ್ಷಯರೋಗ, ಕುಷ್ಠರೋಗದ ಬಗ್ಗೆ ಅರಿವು, ಜಾಗೃತಿ ಮೂಡಿಸಿ ಚಿಕಿತ್ಸೆ ನೀಡುವುದು ಮುಖ್ಯವಾಗಿದೆ ಎಂದರು.
ತಂಡದ ಇನ್ನೋರ್ವ ಮುಖ್ಯಸ್ಥರಾದ ಡಾ.ಮಹ್ಮಮದ್ ರಿಜ್ವಾನ್ ಅಲಿ ಅವರು ತಾಯಿಯ ಮತ್ತು ಮಕ್ಕಳ ಆರೋಗ್ಯ ಸೇವೆಗಳ ಕುರಿತು, ಮಕ್ಕಳಿಗೆ ನೀಡುವ ಲಸಿಕೆ, ಗರ್ಭಿಣಿ ಮಹಿಳೆಯರಿಗೆ ನೀಡುವ ಲಸಿಕೆ ಹಾಗೂ ಆರೋಗ್ಯದ ಮಾಹಿತಿಯನ್ನು ಪಡೆದರು.
ಈ ಸಂದರ್ಭದಲ್ಲಿ ಮೌಲ್ಯಮಾಪನ ತಂಡದ ವ್ಯವಸ್ಥಾಪಕರಾದ ಹರೀಶ ಪಾಟ್ನೆ,ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ, ಸಮುದಾಯ ಆರೋಗ್ಯ ಅಧಿಕಾರಿ ಶರಣಯ್ಯ ಹಿರೇಮಠ, ಶಿವುಕುಮಾರ, ಪ್ರಯೋಗ ಶಾಲಾ ತಂತ್ರಜ್ಞಾನಾಧಿಕಾರಿ ಮನ್ವರ್ ಅಲಿ, ಫಾರ್ಮಸಿಸ್ಟ್ ಅಧಿಕಾರಿ ಉಪೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.