ಬೀದರ್: ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಜನಾರೋಗ್ಯದ ದೃಷ್ಟಿಯಿಂದ ಕೂಡಲೇ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕುಡಿಯುವ ನೀರು ಸರಬರಾಜು ಟ್ಯಾಂಕ್ ಸೇರಿದಂತೆ ಎಲ್ಲ ನೀರಿನ ಘಟಕಗಳ ಹಾಗೂ ಚರಂಡಿಗಳ ಸ್ವಚ್ಛತೆ ಕೈಗೊಳ್ಳಬೇಕೆಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಸೂಚಿಸಿದ್ದಾರೆ.
ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಬೀದರ್ ಹಾಗೂ ಚಿಟಗುಪ್ಪಾ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ(ಇಒ) ಗಳಿಗೆ ಪತ್ರ ಬರೆದಿರುವ ಶಾಸಕರು, ಆದಷ್ಟು ಬೇಗ ಎಲ್ಲ ಗ್ರಾಮ ಪಂಚಾಯಿತಿ ಪಿಡಿಒಗಳ ಸಭೆ ನಡೆಸಿ ಈ ಕುರಿತು ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು. ಮಳೆ ಬರುವ ಮುನ್ನ ಸ್ವಚ್ಛತಾ ಕಾರ್ಯ ಮುಗಿಸುವಂತೆ ನೋಡಿಕೊಳ್ಳಬೇಕು. ಈ ಕಾರ್ಯ ಸಮರ್ಪಕವಾಗಿ ನಡೆಯುವಂತೆ ಮೇಲುಸ್ತುವಾರಿ ವಹಿಸುವಂತೆ ನಿರ್ದೇಶನ ನೀಡಿದ್ದಾರೆ.
ಮಳೆಗಾಲದಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ವ್ಯವಸ್ಥೆಗೆ ಮೊದಲ ಆದ್ಯತೆ ನೀಡಬೇಕಾಗುತ್ತದೆ. ಅಶುದ್ಧ ನೀರು ಸರಬರಾಜು ಆದರೆ ಜನರು ಕಾಲರಾ, ವಾಂತಿಭೇದಿ, ಹೊಟ್ಟೆನೋವು ಇನ್ನಿತರೆ ಸಾಂಕ್ರಾಮಿಕ ರೋಗ ಎದುರಿಸುವ ಅಪಾಯವಿರುತ್ತದೆ. ಇನ್ನು ಚರಂಡಿ ಹೊಲಸು ಸಹ ನೀರಿನ ಪೈಪ್ ಲೈನ್ ಗೆ ಸೇರಿದರೆ ಮತ್ತಷ್ಟು ಸಮಸ್ಯೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಟ್ಯಾಂಕ್ ಶುಚಿಗೊಳಿಸುವ ಜೊತೆಗೆ ಚರಂಡಿ ಸಹ ಸ್ವಚ್ಛತೆ ಮಾಡಬೇಕು ಎಂದು ಹೇಳಿದ್ದಾರೆ.
ನನ್ನ ಮತಕ್ಷೇತ್ರ ಸಂಪೂರ್ಣ ಹಳ್ಳಿಗಳಿಂದ ಕೂಡಿದೆ. ನಾನು ಶಾಸಕನಾದ ಬಳಿಕ ಕಳೆದ ಬಾರಿ ಮಳೆಗಾಲದಲ್ಲಿ ಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲಿರುವ ನೀರಿನ ಟ್ಯಾಂಕ್ ಗಳನ್ನು ಶುಚಿಗೊಳಿಸಲು ಸೂಚನೆ ನೀಡಿರುತ್ತೇನೆ. ಈ ಸೂಚನೆಗೆ ಅಧಿಕಾರಿಗಳು ಸ್ಪಂದಿಸಿ ನೀರು ಪೂರೈಕೆ ಮಾಡುವ ಎಲ್ಲ ಟ್ಯಾಂಕ್ ಗಳನ್ನು ಒಂದೆರಡು ವಾರಗಳಲ್ಲೇ ಚಕಾಚಕ್ ಎಂಬಂತೆ ಶುಚಿಗೊಳಿಸಿದ್ದರು. ನನ್ನ ಮತಕ್ಷೇತ್ರದಲ್ಲಿ ಜನಾರೋಗ್ಯದ ದೃಷ್ಟಿಯಿಂದ ಉತ್ತಮ ಹಾಗೂ ಮಾದರಿ ಕಾರ್ಯ ನಡೆದಿತ್ತು. ಇದಕ್ಕೆ ಜನಸಾಮಾನ್ಯರು ಬಹಳ ಹರ್ಷ ವ್ಯಕ್ತಪಡಿಸಿದ್ದರು. ನಾನು ಎಲ್ಲ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಸಲವೂ ಎಲ್ಲರೂ ಇದನ್ನು ಆದ್ಯತೆ ಮೇಲೆ ಮಾಡಿ ಜನರ ಹಿತ ಕಾಪಾಡಬೇಕು ಎಂದು ತಿಳಿಸಿದ್ದಾರೆ.
ಸದ್ಯ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಚುನಾವಣಾ ಆಯೋಗದ ಆದೇಶದ ಪ್ರಕಾರ ಎಲ್ಲರ ಸಭೆ ಕರೆದು ಚರ್ಚೆ ಮಾಡಲು ಅವಕಾಶ ಇಲ್ಲ. ಹೀಗಾಗಿ ಇಒಗಳಿಗೆ ಪತ್ರ ಬರೆದು ಸೂಚನೆ ನೀಡಲಾಗಿದೆ. ಎಲ್ಲ ಗ್ರಾಮದಲ್ಲಿರುವ ಓವರ್ ಹೆಡ್ ಟ್ಯಾಂಕ್, ಕರ್ಸಿ, ತೆರೆದ ಬಾವಿಗಳು ಸ್ವಚ್ಛತೆ ಮಾಡಬೇಕು ಮತ್ತು ಎಲ್ಲ ಗ್ರಾಮಗಳಲ್ಲಿ ಚರಂಡಿ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಂಡು ರೋಗ ಹರಡಂತೆ ನೋಡಿಕೊಳ್ಳಬೇಕು.
ಶುಚಿತ್ವ ಕಾರ್ಯ ಮುಗಿದ ಬಳಿಕ ಎಲ್ಲ ಪಿಡಿಒಗಳು ಕಳೆದ ಬಾರಿಯಂತೆಯೇ ಸ್ವಚ್ಛತೆಗೊಂಡ ಕೆಲಸದ ಚಿತ್ರವನ್ನು ನಮ್ಮ ವಾಟ್ಸಾಪ್ ಗ್ರೂಪ್ ಗೆ ಹಂಚಿಕೊಂಡು ಸಂಪೂರ್ಣ ಮಾಹಿತಿ ನೀಡಲು ಸೂಚಿಸಿದ್ದೇನೆ. ಶೀಘ್ರದಲ್ಲೇ ನಾನು ಸಹ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಆಗಿರುವ ಕೆಲಸಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸುವೆ ಎಂದು ಶಾಸಕರು ತಿಳಿಸಿದ್ದಾರೆ.