ಶಿವಮೊಗ್ಗ.ಮಾ.24
ದೂರುದಾರರಾದ ಯಶೋಧಮ್ಮ ಇವರು ಎದುರುದಾರ ಆಥರೈಸ್ಡ್ ಸಿಗ್ನೇಟರಿ, ಯೂನಿವರ್ಸಲ್ ಸೋಂಪೊ ಜನರಲ್ ಇನ್ಶೂರೆನ್ಸ್ ಕಂಪೆನಿ, ಮುಂಬಯಿ ಮಹಾರಾಷ್ಟç ಇವರ ವಿರುದ್ದ ವಿಮಾ ಸೌಲಭ್ಯ ನೀಡುವಲ್ಲಿನ ಸೇವಾ ನ್ಯೂನತೆ ಕುರಿತು ಸಲ್ಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ವಿಮಾ ಕಂಪೆನಿಯು ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ.
ಯಶೋಧಮ್ಮನ ಪತಿಯು ಹುಂಚ ಪಂಚಾಯ್ತಿ ವ್ಯಾಪ್ತಿಯಲ್ಲಿ ನೀರುಗಂಟಿ ಮತ್ತು ಬೀದಿ ದೀಪಗಳನ್ನು ಬದಲಿಸುವ ಕೆಲಸ ಮಾಡುತ್ತಿದ್ದು ಕರ್ನಾಟಕ ಬ್ಯಾಂಕ್ ಲಿ., ಹುಂಚ ಇಲ್ಲಿ ಪತಿಯ ಉಳಿತಾಯ ಖಾತೆಯೊಂದಿಗೆ ಗ್ರೂಪ್ ಪರ್ಸನಲ್ ಆಕ್ಸಿಡೆಂಟ್ ಪಾಲಿಸಿ ಇರುತ್ತದೆ. ಪತಿ ಬೀದಿ ದೀಪಗಳನ್ನು ಬದಲಿಸುವಾಗ ಕೆರೆಂಟ್ ತಗುಲಿ ಮರಣ ಹೊಂದಿದ್ದು ನಂತರ ಪಾಲಿಸಿ ಇರುವ ವಿಷಯ ತಿಳಿದು ಕರ್ನಾಟಕ ಬ್ಯಾಂಕ್‌ನ್ನು ಸಂಪರ್ಕಿಸಿದಾಗ ಅವರು ಎದುರುದಾರರಿಗೆ ವಿಷಯ ತಿಳಿಸಿರುತ್ತಾರೆ.
ನಂತರ ಎದುರುದಾರರು ಘಟನೆಗೆ ಸಂಬOಧಿಸಿದ ಎಲ್ಲಾ ದಾಖಲೆಗಳನ್ನು ತರಿಸಿಕೊಂಡು, ದೂರುದಾರರ ಪತಿಯು ಕೆಲಸದ ಸಮಯದಲ್ಲಿ ಸರಿಯಾದ ಸುರಕ್ಷಿತ ಕ್ರಮವನ್ನು ಅನುಸರಿಸಿರುವುದಿಲ್ಲ ಮತ್ತು ಬೀದಿ ದೀಪಗಳನ್ನು ಬದಲಿಸುವಾಗ ಕಬ್ಬಿಣದ ಏಣಿಯನ್ನು ಉಪಯೋಗಿಸಿದ ಕಾರಣ ಕರೆಂಟ್ ತಗುಲಿ ಮೃತಪಟ್ಟಿರುವುದರಿಂದ ಕ್ಲೇಮನ್ನು ತಿರಸ್ಕರಿಸುವುದಾಗಿ ತಿಳಿಸಿರುವ ಕಾರಣ ಯಶೋಧಮ್ಮ ಆಯೋಗದಲ್ಲಿ ದೂರನ್ನು ಸಲ್ಲಿಸಿರುತ್ತಾರೆ.
ದೂರು ದಾಖಲಾದ ನಂತರ ಆಯೋಗವು ಎದುರುದಾರರಿಗೆ ನೋಟಿಸ್ ಕಳುಹಿಸಿದ್ದು ಎದುರುದಾರರ ವಕೀಲರು ಹಾಜರಾಗಿ ಆಕ್ಷೇಪಣೆಯನ್ನು ಸಲ್ಲಿಸಿ ದೂರುದಾರರ ಪತಿಯು ಕೆಲಸ ಮಾಡುವ ಹತ್ತಿರ 11 ಕೆ ವಿ ವಿದ್ಯುತ್ ವೈರ್ ಇರುವುದು ತಿಳಿದೂ ಸಹ ಕಬ್ಬಿಣದ ಏಣಿಯನ್ನು ಬಳಸಿ ಬಲ್ಬ್ಗಳನ್ನು ಬದಲಿಸುತ್ತಿದ್ದುದೇ ಘಟನೆಗೆ ಕಾರಣವೆಂದು ಮತ್ತು ಸರಿಯಾದ ಸುರಕ್ಷತಾ ಕ್ರಮವನ್ನು ಅನುಸರಿಸಿಲ್ಲವಾದ್ದರಿಂದ ಮತ್ತು ಸದರಿ ಘಟನೆಯು ಪಾಲಿಸಿ 5(ಎ) ರನ್ವಯ ‘ಇಂಟೆನ್ಶನಲ್ ಸೆಲ್ಫ್ ಇನ್‌ಪ್ಲಿಕ್ಟೆಡ್ ಇಂಜ್ಯುರಿ’ ಆಗಿರುವ ಕಾರಣ ಕ್ಲೇಮನ್ನು ತಿರಸ್ಕರಿಸುವುದಾಗಿ ಮತ್ತು ಇದರಲ್ಲಿ ಯಾವುದೇ ಸೇವಾ ನ್ಯೂನತೆಯಾಗಿರುವುದಿಲ್ಲವೆಂದು ಅರ್ಜಿಯನ್ನು ವಜಾ ಮಾಡಲು ಕೋರಿರುತ್ತಾರೆ.
ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವ ಪ್ರಮಾಣಪತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ ಮತ್ತು ಉಭಯ ಪಕ್ಷಗಾರರ ವಕೀಲರ ವಾದವನ್ನು ಆಲಿಸಿ, ಎದುರುದಾರರು ಕ್ಲೇಮನ್ನು ತಿರಸ್ಕರಿಸಲು ನೀಡಿರುವ ಷರತ್ತು ಮತ್ತು ನಿಬಂಧನೆಯ 5(ಎ) ಒಳಗೊಂಡ ಪಾಲಿಸಿಯನ್ನು ಆಯೋಗದ ಮುಂದೆ ಹಾಜರು ಮಾಡಿರುವುದಿಲ್ಲವಾದ್ದರಿಂದ ಮತ್ತು ಪ್ರಪೊಸಲ್ ಫಾರಂ ನಲ್ಲಿ ಈ ತರಹದ ಯಾವುದೇ ಷರತ್ತು ಸಹ ಕಂಡು ಬಂದಿಲ್ಲವಾದ್ದರಿOದ ಎದುರುದಾರರು ಕ್ಲೇಮನ್ನು ತಿರಸ್ಕರಿಸಿರುವುದು ಸೇವಾ ನ್ಯೂನತೆಯಾಗಿರುವುದಾಗಿ ಪರಿಗಣಿಸಿ ದೂರುದಾರರ ದುರನ್ನು ಭಾಗಶಃ ಪುರಸ್ಕರಿಸಿ ದೂರುದಾರರಿಗೆ ಎದುರುದಾರರು ಕೆಬಿಎಲ್ ಸುರಕ್ಷಾ ಪಾಲಿಸಿಯಡಿಯಲ್ಲಿ ರೂ.10,00,000/- ಗಳನ್ನು ಶೇ.9 ರಂತೆ ಬಡ್ಡಿಯನ್ನು ಸೇರಿಸಿ ಕ್ಲೇಮನ್ನು ತಿರಸ್ಕರಿಸಿ ದಿನಾಂಕ : 09-02-2024 ರಿಂದ ಪೂರ್ತಿ ಹಣ ನೀಡುವವರೆಗೂ ಈ ಆದೇಶವಾದ 45 ದಿನಗಳ ಒಳಗೆ ನೀಡಲು, ತಪ್ಪಿದಲ್ಲಿ ಈ ಆದೇಶವಾದ ದಿನಾಂಕದಿOದ ಶೇ.12 ರಂತೆ ಸದರಿ ಮೊತ್ತಕ್ಕೆ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ನೀಡುವಂತೆ ಹಾಗೂ ರೂ.30,000 ಗಳನ್ನು ಮಾನಸಿಕ ಹಿಂಸೆಗಾಗಿ ಮತ್ತು ರೂ.10,000 ಗಳನ್ನು ವ್ಯಾಜ್ಯದ ಖರ್ಚಾಗಿ ನೀಡಬೇಕೆಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಮಾ.19 ರಂದು ಆದೇಶಿಸಿದೆ ಎಂದು ಆಯೋಗದ ಸಹಾಯಕ ರಿಜಿಸ್ಟಾçರ್ ಹಾಗೂ ಸಹಾಯಕ ಆಡಳಿತಾಧಿಕಾರಿ ತಿಳಿಸಿದ್ದಾರೆ.