ಧಾರವಾಡ ಮಾರ್ಚ 21: ಧಾರವಾಡ ಕೇಂದ್ರ ಕಾರಾಗೃಹ, ಸಾಧನಾ ಸಂಸ್ಥೆ ಮತ್ತು ಪ್ರಿಜನ್ ಮಿನಿಸ್ಟರಿ ಆಫ್ ಇಂಡಿಯಾ ಇವರ ಸಹಯೋಗದಲ್ಲಿ ಮಾರ್ಚ್ 18, 2025 ರ ಮಂಗಳವಾರದಂದು ಬೆಳಿಗ್ಗೆ 10 ಗಂಟೆಗೆ ಕಾರಾಗೃಹದ ಮಹಿಳಾ ವಿಭಾಗದಲ್ಲಿರುವ ಮಹಿಳಾ ಬಂದಿಗಳಿಗಾಗಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಾಧನಾ ಸಂಸ್ಥೆಯ ಮುಖ್ಯಸ್ಥೆ ಇಸಾಬೆಲ್ ಕ್ಸೆವಿಯರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಧನಾ ಸಂಸ್ಥೆಯು ಕಾರಾಗೃಹದ ಮಹಿಳಾ ಬಂದಿಗಳಿಗಾಗಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಏರ್ಪಡಿಸಿದ್ದು, ಮಹಿಳಾ ಬಂದಿಗಳು ಯಾವುದೇ ರೀತಿಯ ಮಾನಸಿಕ ಒತ್ತಡಗಳಿಗೆ ಒಳಗಾಗದಂತೆ ಆರೋಗ್ಯಕರ ಜೀವ ರೂಪಿಸಿಕೊಳ್ಳಲು ಹಲವಾರು ಚಟುವಟಿಕೆಗಳನ್ನು ಬಂದಿಗಳಿಗಾಗಿ ರೂಪಿಸಿ ಅವುಗಳನ್ನು ಕಾರ್ಯಗತಗೊಳಿಸಲು ಸದಾ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.
ಬೆಥನಿ ಕನ್ಯಾಸ್ರ್ತೀಯರ ಸಂಸ್ಥೆಯ ಪ್ರಾಂತ್ಯಾಧಿಕಾರಿ ಸಿಸ್ಟರ್ ಸಾಲಿ ಡಿಸೋಜಾ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಪ್ಪು ಮಾಡಿ ಕೆಲವರು ಬಂದಿಖಾನೆ ನಿವಾಸಿಗಳಾಗಿದ್ದು, ಕಾರಾಗೃಹವಾಸದಲ್ಲಿದ್ದಾರೆ. ಕೆಲವರು ತಪ್ಪು ಮಾಡಿಯೂ ಕಾನೂನಿಂದ ತಪ್ಪಿಸಿಕೊಂಡು ಹೊರಗಡೆ ಇದ್ದಾರೆ. ಕಾರಾಗೃಹವು ಮನಃಪರಿವರ್ತನೆಗಿರುವ ಒಂದು ಅವಕಾಶ ಎಂದು ಅರಿತುಕೊಳ್ಳಬೇಕು. ಜೊತೆಯಲ್ಲಿದ್ದವರನ್ನು ಪ್ರೀತಿಸಿ, ಗೌರವಿಸುವುದು ಮುಖ್ಯವಾಗಿದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಡಾ. ಸಂಗೀತಾ ಮಾನೆ, ಸಿಸ್ಟರ್ ಅಲ್ಫಿನಾ ರೋಡ್ರಿಕ್ಸ್, ಸಂಸ್ಥೆಯ ಜೈಲರ ಮಹಾದೇವಿ ಮರಕಟ್ಟಿ ಅವರು ಉಪಸ್ಥಿತರಿದ್ದರು.
ಮಹಿಳಾ ಬಂದಿ ಸುನಂದಾ ಹುಬ್ಬಳ್ಳಿ ಅವರು ಪ್ರಾರ್ಥಿಸಿದರು. ಶಿಕ್ಷಕ ಪಿ.ಬಿ.ಕುರಬೆಟ್ಟ ಅವರು ಸ್ವಾಗತಿಸಿದರು. ಸಂಸ್ಥೆಯ ವೈಶಾಲಿ ನಾಯ್ಕ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಕಾರಾಗೃಹ ವಾಸಿಗಳಾದ ಮಹಿಳೆಯರು, ಕಾರಾಗೃಹ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.