Ad image

ಖಾಸಗಿ ಕೃಷಿ ಕಾಲೇಜು ಆರಂಭಿಸಲು ಅರ್ಜಿ ಆಹ್ವಾನ

Vijayanagara Vani
ಖಾಸಗಿ ಕೃಷಿ ಕಾಲೇಜು ಆರಂಭಿಸಲು ಅರ್ಜಿ ಆಹ್ವಾನ
ಚಿತ್ರದುರ್ಗ)ಜೂ.17:
ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ 2025-26ನೇ ಶೈಕ್ಷಣಿಕ ವರ್ಷಕ್ಕೆ ಖಾಸಗಿ ಕೃಷಿ ಕಾಲೇಜುಗಳ ಸಂಯೋಜನೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಜುಲೈ 7 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ರಾಜ್ಯದಲ್ಲಿ ಖಾಸಗಿ ಕೃಷಿ ವಿಜ್ಞಾನಗಳ ಕಾಲೇಜುಗಳಿಗೆ ಅಫಿಲಿಯೇಶನ್ ನೀಡಲು ನಿರ್ಧರಿಸಿ, ರಾಜ್ಯದಲ್ಲಿ ಕಳೆದ ಸಾಲಿನಿಂದ ಕೃಷಿ ವಿಜ್ಞಾನಗಳ ಖಾಸಗಿ ಕಾಲೇಜುಗಳಿಗೆ ಅಫಿಲಿಯೇಶನ್ ಕೊಡಲಾಗುತ್ತಿದೆ. ಕೃಷಿ ಮತ್ತು ಕೃಷಿ ಸಂಬಂಧಿತ ಪದವಿ ಓದಲು ಬಯಸುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ ಹಾಗೂ ಲಭ್ಯ ಸೀಟುಗಳು ಕಡಿಮೆ ಇವೆ. ರಾಜ್ಯದಲ್ಲಿ ಪ್ರತಿ ವರ್ಷ ಸುಮಾರು 1 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾಲಯಗಳಲ್ಲಿ ಪದವಿ ಕಾರ್ಯಕ್ರಮಕ್ಕೆ ದಾಖಲಾಗಲು ಅರ್ಜಿ ಸಲ್ಲಿಸಿರುತ್ತಾರೆ. ಅದರಲ್ಲಿ ಕೇವಲ 3 ಸಾವಿರ ವಿದ್ಯಾರ್ಥಿಗಳಿಗೆ ಕೃಷಿ ಹಾಗೂ ಕೃಷಿ ಸಂಬಂಧಿತ ಪದವಿ ಸೀಟುಗಳು ಹಂಚಿಕೆಯಾಗುತ್ತಿದೆ ಹಾಗೂ ಉಳಿದ ವಿದ್ಯಾರ್ಥಿಗಳಿಗೆ ಈ ಪದವಿಗಳಿಗೆ ಪ್ರವೇಶ ಪಡೆಯಲು ಅವಕಾಶವಿಲ್ಲದಂತಾಗಿದೆ. ಈ ಹಿನ್ನಲೆಯಲ್ಲಿ ಕೃಷಿ ವಿಜ್ಞಾನ ವಿಶ್ವವಿದ್ಯಾಲಯಗಳ ಕಾಯ್ದೆ 2009ರಲ್ಲಿ (ವಿಭಾಗ 44 ರಿಂದ 51) ವಿವರಿಸಿರುವಂತೆ, ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಖಾಸಗಿ ಕಾಲೇಜುಗಳಿಗೆ ಅಫಿಲಿಯೇಶನ್ (Affiliation) ನೀಡಲು ಅವಕಾಶ ಇರುವುದನ್ನು ಬಳಸಿಕೊಂಡು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಈ ಸಾಲಿನಲ್ಲಿ ಅಫಿಲಿಯೇಟೆಡ್ ಖಾಸಗಿ ಕೃಷಿ ವಿಜ್ಞಾನಗಳ ಕಾಲೇಜುಗಳನ್ನು ಪ್ರಾರಂಭಿಸಲು ಪ್ರಕಟಣೆ ನೀಡಿರುತ್ತದೆ.
ಆಸಕ್ತಿ ಹೊಂದಿರುವ ಹಾಗೂ ಕರ್ನಾಟಕದ ಸೊಸೈಟಿ ನೊಂದಣಿ ಕಾಯ್ದೆಯಡಿಯಲ್ಲಿ ನೊಂದಾಯಿಸಲಾದ ಮಂಡಳಿಗಳು/ಸೊಸೈಟಿಗಳು/ಟ್ರಸ್ಟ್ಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಸಂಸ್ಥೆಗಳು ಬಿ.ಎಸ್ಸಿ. (ಹಾನರ್ಸ್) ಕೃಷಿ, ಬಿ.ಟೆಕ್ ಕೃಷಿ ಇಂಜಿನಿಯರಿಂಗ್, ಬಿ.ಟೆಕ್. ಕೃಷಿ ಬಯೋಟೆಕ್ನಾಲಜಿ, ಬಿ.ಟೆಕ್. ಫುಡ್ ಟೆಕ್ನಾಲಜಿ, ಬಿ.ಎಸ್ಸಿ. (ಹಾನರ್ಸ್) ಅರಣ್ಯ, ಬಿ.ಎಸ್ಸಿ. (ಹಾನರ್ಸ್) ಕಮ್ಯೂನಿಟಿ ವಿಜ್ಞಾನ, ಬಿ.ಎಸ್ಸಿ. (ಹಾನರ್ಸ್) ಫುಡ್ ನ್ಯೂಟ್ರೇಶನ್ ಮತ್ತು ಡೈಯಟಿಕ್ಸ್, ಬಿ.ಎಸ್ಸಿ. (ಹಾನರ್ಸ್) ತೋಟಗಾರಿಕೆ ಮತ್ತು ಬಿ.ಎಸ್ಸಿ. (ಹಾನರ್ಸ್) ರೇಷ್ಮೆ ಕೃಷಿ ಪದವಿ ಪ್ರಾರಂಭಿಸಲು ಅರ್ಜಿ ಸಲ್ಲಿಸಬಹುದಾಗಿದೆ. ಈ ಸಂಬಂಧ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಅಫಿಲಿಯೇಶನ್ಗಾಗಿ ಕನಿಷ್ಟ ಮಾನದಂಡಗಳನ್ನು (KSNUAHS-MSACR 2025) www.uahs.edu.in ಜಾಲತಾಣದಲ್ಲಿ ಪ್ರಕಟಿಸಿದೆ. ಅಧಿಸೂಚಿಸಿದ ಮಾನದಂಡಗಳಂತೆ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯವು 2025-26 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವ (ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ, ಕೊಡಗು, ಉಡುಪಿ ಮತ್ತು ದಕ್ಷಿಣ ಕನ್ನಡ) ಜಿಲ್ಲೆಗಳಲ್ಲಿ ಕಾಲೇಜು ಅಫಿಲಿಯೇಶನ್ ಬಯಸುವ ಹಾಗೂ ಕಾನೂನು ಬದ್ದ ಶೈಕ್ಷಣಿಕ ಸಂಸ್ಥೆಗಳು ಅರ್ಜಿಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ (KSNUAHS-MSACR 2025) ರ ಪ್ರಕಾರ ಅವುಗಳನ್ನು ಪರೀಶೀಲಿಸಿ ನಿಯಮದಂತೆ ಪ್ರಕ್ರಿಯೆ ನಡೆಸಲಾಗುವುದು.
ಅತ್ಯುತ್ತಮ ಶೈಕ್ಷಣಿಕ ಪರಿಸರ ಹಾಗೂ ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆ ಮಾಡಿರುವ ಶಿವಮೊಗ್ಗದ ಈ ವಿಶ್ವವಿದ್ಯಾಲಯವು ದಿನಾಂಕ: 21-09-2012 ರಂದು ಕರ್ನಾಟಕ ಸರ್ಕಾರದ ವಿಶೇಷ ಶಾಸನದ ಮೂಲಕ ಅಂಗೀಕರಿಸಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ ಹಾಗೂ ಕರ್ನಾಟಕ ಸರ್ಕಾರವು ದಿನಾಂಕ 26-07-2021ರಲ್ಲಿ, ಈ ವಿಶ್ವವಿದ್ಯಾಲಯದ ಹೆಸರನ್ನು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ (ಕೆ.ಸಿ.ನಾ.ಕೃ.ತೋ.ವಿ.ವಿ.) ಎಂದು ಮರುನಾಮಕರಣ ಮಾಡಿ ಆದೇಶ ಹೊರಡಿಸಿರುತ್ತದೆ.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ರಾಜ್ಯದ ಪ್ರತಿಷ್ಟಿತ ಸಮಗ್ರ ಕೃಷಿ ವಿಶ್ವವಿದ್ಯಾಲಯವಾಗಿದ್ದು, ಇದರ ಅಡಿಯಲ್ಲಿ ಪ್ರಸ್ತುತ 5 ಮಹಾವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಈ ವಿಶ್ವವಿದ್ಯಾಲಯದಿಂದ ಕಳೆದ ಒಂದು ದಶಕದಲ್ಲಿ ಕೃಷಿ, ತೋಟಗಾರಿಕೆ ಮತ್ತು ಆರಣ್ಯ ವಿಷಯಗಳಲ್ಲಿ ಒಟ್ಟು 4,366 ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ. ಇವರಲ್ಲಿ, 3,316 ಸ್ನಾತಕ, 935 ಸ್ನಾತಕೋತ್ತರ ಮತ್ತು 115 ಪಿಹೆಚ್.ಡಿ. ವಿದ್ಯಾರ್ಥಿಗಳಾಗಿರುತ್ತಾರೆ. ಜೊತೆಗೆ ಅಸಾಧಾರಣ ಪ್ರತಿಭೆಯಿಂದ ಗುರುತಿಸಿಕೊಂಡು, ಅತ್ಯುತ್ತಮವಾದ ಸಾಧನೆಗೈದ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಒಟ್ಟು 329 ಚಿನ್ನದ ಪದಕಗಳನ್ನು ವಿಶ್ವವಿದ್ಯಾಲಯವು ನೀಡಿರುತ್ತದೆ.
ಈ ವಿಶ್ವವಿದ್ಯಾಲಯದಡಿಯಲ್ಲಿ ಅಫಿಲಿಯೇಟೆಡ್ ಕಾಲೇಜು ಪ್ರಾರಂಭಿಸಲು ಅಧಿಸೂಚನೆಯನ್ನು ಹೊರಡಿಸಿ ಅರ್ಜಿಯನ್ನು ಕರೆಯಲಾಗಿರುತ್ತದೆ ಹಾಗೂ ಅಫಿಲಿಯೇಶನ್ಗಾಗಿ ದಿನಾಂಕ: 07-07-2025ರೊಳಗೆ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ. ಸಲ್ಲಿಸಿದ ಅರ್ಜಿಗಳನ್ನು ಆಗಾಗ್ಗೆ ಪರಿಶೀಲಿಸಲಾಗುವುದು. ಅರ್ಜಿ ಸಲ್ಲಿಸುವ ಮುನ್ನ ನಿಂಬಂಧನೆಗಳನ್ನು ಸಂಪೂರ್ಣ ಪರಾಮರ್ಶಿಸಿ ಅದರಂತೆ ಅರ್ಜಿ ಸಲ್ಲಿಸುವುದು ಅಪೂರ್ಣ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹಾಗೂ ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಈ ಸಾಲಿಗೆ ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ವಿವರ ಹಾಗೂ ನಿಬಂಧನೆಗಳನ್ನು ಮತ್ತು ಅರ್ಜಿಗಾಗಿ ಜಾಲತಾಣಕ್ಕೆ ಭೇಟಿ ನೀಡಬಹುದು ಎಂದು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಸಚಿವರು ತಿಳಿಸಿದ್ದಾರೆ.

Share This Article
error: Content is protected !!
";