ದಾವಣಗೆರೆ.ಆ.01 ಜಲಜೀವನ್ ಮಿಷನ್ ಯೋಜನೆಯಡಿ ಮುಕ್ತಾಯವಾಗಿರುವ ಕಾಮಗಾರಿಗಳಿಂದ ನೀರು ಸರಬರಾಜು ಮಾಡಲು ಮತ್ತು ಶಿಥಿಲಗೊಂಡಿರುವ ಅಂಗನವಾಡಿ ಹಾಗೂ ಶಾಲಾ ಕಟ್ಟಡ, ಶೌಚಾಲಯಗಳ ಕಾಮಗಾರಿಗಳನ್ನು ತಿಂಗಳಲ್ಲಿ ಪೂರ್ಣಗೊಳಿಸಿ ಜನರ ಬಳಕೆಗೆ ಮುಕ್ತವಾಗಿಸಬೇಕೆಂದು ಮಾಯಕೊಂಡ ಶಾಸಕರಾದ ಕೆ. ಎಸ್.ಬಸವಂತಪ್ಪ ಅಧಿಕಾರಿಗಳಿಗೆ ತಿಳಿಸಿದರು.
ಅವರು ಗುರುವಾರ ಜಿಲ್ಲಾ ಪಂಚಾಯತ್‌ನ ಎಸ್.ಎಸ್ ಮಲ್ಲಿಕಾರ್ಜುನ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಇಲಾಖೆಗಳಿಂದ ಕೈಗೊಳ್ಳಲಾಗಿರುವ ಕ್ಷೇತ್ರದ ಅಭಿವೃದ್ದಿ ಕಾಮಗಾರಿಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಕ್ಷೇತ್ರದಲ್ಲಿ ವಿವಿಧ ಇಲಾಖೆಗಳಿಂದ ಅನುಷ್ಠಾನ ಮಾಡುತ್ತಿರುವ ಕಾಮಗಾರಿಗಳನ್ನು ಪೂರ್ಣಗೊಳಿಸದೇ ಬಾಕಿ ಉಳಿಸಿಕೊಳ್ಳಲಾಗಿದೆ, ಕುಡಿಯುವ ನೀರು, ಚರಂಡಿ, ಶಾಲಾ ಕಟ್ಟಡ, ರಸ್ತೆ, ಅಂಗನವಾಡಿ ಸೇರಿದಂತೆ ಗ್ರಾಮಗಳಿಗೆ ಅಗತ್ಯವಿರುವ ಕಾಮಗಾರಿಗಳಿದ್ದು ಈ ಎಲ್ಲಾ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕಾಗಿದೆ ಎಂದರು.
ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ, ಮನೆ ಮನೆಗೆ ಕಲ್ಪಿಸಿರುವ ನಲ್ಲಿ ನೀರು ಸಂಪರ್ಕದ ಬಗ್ಗೆ ಗ್ರಾಮೀಣ ನೀರು ಪೂರೈಕೆ ವಿಭಾಗದ ಇಂಜಿನಿಯರ್‌ರಿAದ ಮಾಹಿತಿ ಪಡೆದರು. ನರೇಗಾ ಯೋಜನೆಯಡಿ ಶಾಲೆಯಲ್ಲಿನ ಮಕ್ಕಳ ಭೋಜನಾಲಯ ಮತ್ತು ನೀರು ನಿರ್ವಹಣಾ ಕಾಮಗಾರಿಗಳನ್ನು ತೆಗೆದುಕೊಂಡು ಪೂರ್ಣಗೊಳಿಸಲು ಇಂಜಿನಿಯರ್‌ಗೆ ತಿಳಿಸಿದರು.
ಮನೆಗಳಿಗೆ ನಲ್ಲಿ ಅಳವಡಿಸುವಾಗ ಪ್ರತಿಯೊಂದು ಮನೆಗಳ ಸರ್ವೇ ಮಾಡಿ ನಲ್ಲಿ ಸಂಪರ್ಕ ಕಲ್ಪಿಸಬೇಕು. ನಲ್ಲಿ ಅಳವಡಿಸುವಾಗ ಗುಣಮಟ್ಟದ ಪೈಪ್ ಅಳವಡಿಸಬೇಕು ಮತ್ತು ಪೈಪ್‌ಲೈನ್ ಮಾಡಿದ ನಂತರ ಗುಂಡಿಯನ್ನು ಸರಿಯಾಗಿ ಮುಚ್ಚಿ ಕಾಂಕ್ರೀಟ್ ರಸ್ತೆಗಳಾಗಿದ್ದಲ್ಲಿ ಪುನಃ ಕಾಂಕ್ರೀಟ್ ಹಾಕಬೇಕು. ಕಳಪೆ ಕಾಮಗಾರಿ ಕೈಗೊಂಡಲ್ಲಿ ಸಂಬAಧಿಸಿದ ಅಧಿಕಾರಿಗಳ ಮೇಲೆ ಮತ್ತು ಗುತ್ತಿಗೆದಾರರ ಮೇಲೆ ಕ್ರಮಕ್ಕೆ ಒತ್ತಾಯಿಸಲಾಗುತ್ತದೆ ಎಂದರು.
ಜೆಜೆಎಂ ಯೋಜನೆಯಡಿ ಮೊದಲ ಹಂತದ ಕಾಮಗಾರಿಯಲ್ಲಿ 14 , 2 ರಲ್ಲಿ 39, 3 ರಲ್ಲಿ 27, 4 ರಲ್ಲಿ 5 ಕಾಮಗಾರಿಗಳು ಮುಕ್ತಾಯಗೊಂಡಿವೆ ಎಂದು ಗ್ರಾಮೀಣ ಕುಡಿಯುವ ನೀರು ವಿಭಾಗದ ಇಂಜಿನಿಯರ್ ಸಭೆಗೆ ತಿಳಿಸಿದಾಗ ಬಾಕಿ ಇರುವ 46 ಕಾಮಗಾರಿಗಳನ್ನು ಒಂದೂವರೆ ತಿಂಗಳ ಅವಧಿಯಲ್ಲಿ ಮುಗಿಸಬೇಕೆಂದು ಶಾಸಕರು ತಿಳಿಸಿ ಕಾಮಗಾರಿಗಳ ಟೆಂಡರ್ ಆಗಿದ್ದರೂ ತ್ವರಿತವಾಗಿ ಪ್ರಾರಂಭಿಸುತ್ತಿಲ್ಲ ಏಕೆ ಎಂದು ಪ್ರಸ್ತಾಪಿಸಿ ಟೆಂಡರ್ ಮಾಡಿದ ಎಲ್ಲಾ ಕಾಮಗಾರಿಗಳನ್ನು ಪ್ರಾರಂಭಿಸುವ ಮುನ್ನ ನನ್ನ ಗಮನಕ್ಕೆ ತಂದು ತ್ವರಿತವಾಗಿ ಅನುಷ್ಟಾನ ಮಾಡಬೇಕೆಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಮಾತನಾಡಿ ಗ್ರಾಮ ಪಂಚಾಯತಿಗಳಲ್ಲಿ ಎಷ್ಟು ಖಾತೆಗಳಿವೆ ಎಂಬುದನ್ನು ಪರಿಶೀಲಿಸಿ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿಕೊಳ್ಳಬೇಕು. ಬ್ಯಾಂಕ್ ಖಾತೆಯಲ್ಲಿನ ಹಣವನ್ನು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇರುವುದರಿಂದ ಪರಿಶೀಲನೆ ಮಾಡಿಕೊಳ್ಳಲು ತಿಳಿಸಿದರು.
ಸಭೆಯಲ್ಲಿ ಉಪಕಾರ್ಯದರ್ಶೀ ಕೃಷ್ಣನಾಯ್ಕ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.