Ad image

ಜೆನ್ ಜೀ ಮಕ್ಕಳು ಮತ್ತು ವಿಪರೀತ ಪಾಲಕತ್ವ

Vijayanagara Vani
ಜೆನ್ ಜೀ ಮಕ್ಕಳು ಮತ್ತು ವಿಪರೀತ ಪಾಲಕತ್ವ

 

ಹಿಂದಿಯ ಪ್ರಸಿದ್ಧ ಶೋ ಕೌನ್ ಬನೇಗಾ ಕರೋಡ ಪತಿಯಲ್ಲಿ ಇತ್ತೀಚೆಗೆ ಓರ್ವ ಪುಟ್ಟ ಬಾಲಕ ಫಾಸ್ಟೆಸ್ಟ್ ಫಿಂಗರ್ ಫಸ್ಟ್ ನಲ್ಲಿ ಮೊದಲಿಗನಾಗಿ ಹಾಟ್ ಸೀಟ್ನಲ್ಲಿ ಬಂದು ಕುಳಿತುಕೊಂಡನು.

ಸಾಮಾನ್ಯವಾಗಿ ಇಂತಹ ಕಾರ್ಯಕ್ರಮಗಳಲ್ಲಿ ಹಲವಾರು ಜನ ಸ್ಪರ್ಧಿಗಳ ನಡುವೆ ಆಯ್ಕೆಯಾಗಿ ಬರುವ ಜನರು ಮೇಲೆ ಕೈ ಎತ್ತಿ ಮುಗಿದು, ಇಲ್ಲವೇ ವೀಕ್ಷಕರತ್ತ ಕೈ ಬೀಸಿ ಕೃತಜ್ಞತೆ ವ್ಯಕ್ತಪಡಿಸುವುದನ್ನು, ಅಮಿತಾಬ್ ಬಚ್ಚನ್ ರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿಕ್ಕ ಅವಕಾಶವನ್ನು ಕುರಿತು ಸಂತಸ ವ್ಯಕ್ತಪಡಿಸುತ್ತಾರೆ. ಮತ್ತೆ ಕೆಲವರಲ್ಲಿ ಕೃತಜ್ಞತಾ ಭಾವ ಸ್ಫುರಿಸುತ್ತದೆ, ಉದ್ವೇಗದಿಂದ, ಸಂತಸ ಭಾವೋಗ್ವೇದದಿಂದ ಕಣ್ಣೀರಾಗುತ್ತಾರೆ. ಮತ್ತೆ ಕೆಲವರು ಗಂಭೀರವಾಗಿ ಸಮಚಿತ್ತತೆಯಿಂದ ಕಾರ್ಯಕ್ರಮದಲ್ಲಿ ತಮ್ಮ ಸಂತಸವನ್ನು ಬಾಯಿ ಮಾತಿನಲ್ಲಿ ವ್ಯಕ್ತಪಡಿಸುತ್ತಾರೆ. ಲೋಕೋಭಿನ್ನ ರುಚಿಃ ಎಂದು ಹೇಳುವ ಹಾಗೆ ಅವರವರ ಭಾವ ಅವರದ್ದು.

ಆದರೆ ಇದೇ ಕಾರ್ಯಕ್ರಮದಲ್ಲಿ ಪುಟ್ಟ ಬಾಲಕ ಇಷಿತ್ ಭಟ್ ಆಯ್ಕೆಯಾದಾಗ ಆತನ ಮುಖದಲ್ಲಿ ಸಂತಸಕ್ಕಿಂತ ಹೆಚ್ಚಾಗಿ ಉದ್ವೇಗವಿತ್ತು. ಓಡೋಡಿ ಬಂದು ಹಾಟ್ ಸೀಟ್ ಅನ್ನು ತಾನೇ ಏರಿದ ಆ ಬಾಲಕ ಅಂತಿಂಥ ಪ್ರತಿಭೆ ನಾನಲ್ಲ ನನ್ನಂತ ಪ್ರತಿಭೆ ಇನ್ನಿಲ್ಲ…ನೀವು ಪ್ರಶ್ನೆ ಕೇಳಿ ನಾನು ಉತ್ತರ ಕೊಡ್ತಾ ಹೋಗ್ತೀನಿ ಎನ್ನುವ ರೀತಿಯಲ್ಲಿ ಆತ ವರ್ತಿಸುತ್ತಿದ್ದ.

ಗುಜರಾತ್ ರಾಜ್ಯದ ಗಾಂಧಿನಗರದ ಶಾಲೆಯೊಂದರಲ್ಲಿ ಐದನೇ ತರಗತಿಯಲ್ಲಿ ಓದುತ್ತಿರುವ ಈ ಬಾಲಕ ಇತ್ತೀಚೆಗೆ ಈ ಕಾರ್ಯಕ್ರಮದ ಮಕ್ಕಳ ಸ್ಪರ್ಧೆಯಲ್ಲಿ ಭಾಗವಹಿಸಿದ್ದ.
ತನಗಿಂತ ಎಂಟುಪಟ್ಟು ಹಿರಿಯರಾದ ಹಿಂದಿ ಚಲನಚಿತ್ರದ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಬಾಲಕನ ಕುರಿತು ಪರಿಚಯ ನೀಡುವಾಗಲೂ ಕೂಡ ತನ್ನ ಮೂಗು ತೂರಿಸಿದ ಬಾಲಕ ನಂತರ ನೀವು ನಿಯಮಗಳನ್ನು ಹೇಳುವುದೇನು ಬೇಡ ನನಗೆ ಎಲ್ಲವೂ ಗೊತ್ತಿದೆ ನೇರವಾಗಿ ಪ್ರಶ್ನೆಗಳನ್ನು ಕೇಳಿ ಎಂದು ಉದ್ದಟತನದಿಂದ ಹೇಳಿದ. ಕಸಿವಿಸಿಯಾದರೂ ಕೂಡ ಕೊಂಚವೂ ಅದನ್ನು ಮುಖದಲ್ಲಿ ವ್ಯಕ್ತಪಡಿಸದ ಅಭಿಜಾತ ಕಲಾವಿದರೂ ಕಾರ್ಯಕ್ರಮದ ನಿರೂಪಕರೂ ಆದ ಅಮಿತಾಬ್ ಬಚ್ಚನ್ ನಕ್ಕು ಬಾಲಕನ ಮಾತನ್ನು ತಳ್ಳಿ ಹಾಕಿ ಮೊದಲ ಪ್ರಶ್ನೆಯನ್ನು ಕೇಳಿದರು. ಅವರಿನ್ನೂ ಆಯ್ಕೆಗಳನ್ನು ಹೇಳುವ ಮುನ್ನವೇ ಬಾಲಕ ಉತ್ತರವನ್ನು ಹೇಳಿದ್ದು ಆತನ ಜಾಣ್ಮೆ ಎಂದು ನಮಗೆ ಮೇಲ್ನೋಟಕ್ಕೆ ತೋರಿದರೂ ಇದೇನು ಮಹಾ! ಎಂಬಂತಹ ಆತನ ಭಾವವೇ ಎದ್ದು ಕಾಣುತ್ತಿತ್ತು. ಪ್ರಶ್ನೆಗಳಿಗೆ ನೀವು ಆಯ್ಕೆಗಳನ್ನು ಹೇಳುವುದೇ ಬೇಡ ನನಗೆ ಉತ್ತರ ಗೊತ್ತಿದೆ ಎಂದು ಆ ಬಾಲಕ ಉತ್ತರಗಳನ್ನು ಹೇಳಿದ್ದ. ಅದಾಗ್ಯೂ ಒಂದೆಡೆ ಅಮಿತಾಭ ಬಚ್ಚನ್ ಆತನಿಗೆ ಆಯ್ಕೆಗಳನ್ನು ಹೇಳಲೇಬೇಕಾದದ್ದು ಕಾರ್ಯಕ್ರಮದ ಒಂದು ನಿಯಮ ಎಂದು ಬಾಲಕನಿಗೆ ಹೇಳಲು ಪ್ರಯತ್ನಿಸಿದರು. ಆದರೆ ಬಾಲಕ ಇದಾವುದನ್ನು ಕೇಳುವ ಮನಸ್ಥಿತಿಯಲ್ಲಿ ಇರಲಿಲ್ಲ.

ಎರಡನೇ ಪ್ರಶ್ನೆಗೂ ಕೂಡ ಆತ ಹೀಗೆಯೇ ಆಯ್ಕೆಗಳನ್ನು ಹೇಳುವ ಮುನ್ನವೇ ಉತ್ತರಿಸಿ ಎಲ್ಲರ ಚಪ್ಪಾಳೆ ಗಿಟ್ಟಿಸಿದನಾದರೂ ಅಲ್ಲಿ ಆತನ ಅಹಂಭಾವ ಎದ್ದು ಕಾಣುತ್ತಿತ್ತು. ಮೂರನೆಯ ಪ್ರಶ್ನೆಗಾದರೂ ಅಷ್ಟೇ… ಆಯ್ಕೆಗಳನ್ನು ಹೇಳುವ ಮುನ್ನವೇ ಉತ್ತರ ಕೊಟ್ಟ ಬಾಲಕ
ನಿರೂಪಕರು ಇನ್ನೂ ಮಾತನಾಡುತ್ತಿರುವಾಗಲೇ ಉತ್ತರವನ್ನು ನಾಲ್ಕು ಬಾರಿ ಲಾಕ್ ಮಾಡಿ ಸರ್ ಎಂದನಲ್ಲದೇ ಮುಂದಿನ ಪ್ರಶ್ನೆ ಕೇಳಿ ಎಂದು ಜೋರು ಮಾಡಿದ. ಸುಮ್ಮನೆ ಮಾತನಾಡಿ ಟೈಮ್ ಯಾಕೆ ವೇಸ್ಟ್ ಮಾಡ್ತೀರಿ ಎಂಬಂತೆ ಆತನ ವರ್ತನೆ ಇತ್ತು. ಅದನ್ನು ಕೂಡ ಅಲ್ಲಿದ್ದ ವೀಕ್ಷಕರು ಮಗುವಿನ ಪಾಲಕರು ಮತ್ತು ಸ್ವತಹ ನಿರೂಪಕರಾದ ಅಮಿತಾಭ ಬಚ್ಚನ್ ಮಗುವಿನ ಅವಸರದ ನಡೆ ಎಂಬಂತೆ ನಗುತ್ತಾ ಸ್ವೀಕರಿಸಿದರು.

ನಾಲ್ಕನೆಯ ಪ್ರಶ್ನೆಯನ್ನು ಕೇಳಿದಾಗ ಅಮಿತಾಭ ಬಚ್ಚನ್ ಅವರು ಆಯ್ಕೆಗಳನ್ನು ಕೊಡುವ ಮುನ್ನ ಮಾತನಾಡಲು ಆರಂಭಿಸಿದಾಗ ಆಯ್ಕೆಗಳನ್ನು ಕೊಡಿ ಎಂದು ಕೇಳುವ ಅನಿವಾರ್ಯತೆ ಬಾಲಕನಿಗೆ ಉಂಟಾಯಿತು ಕಾರಣ ಆತನಿಗೆ ಉತ್ತರದ ಆಯ್ಕೆಯಲ್ಲಿ ಅನುಮಾನಗಳಿತ್ತು. ಇದೀಗ ಅಮಿತಾಬ ಬಚ್ಚನ್ ಬಾಲಕನನ್ನು ಸರಿಪಡಿಸುವ
ನಿಟ್ಟಿನಲ್ಲಿ ಕಂಪ್ಯೂಟರ್ ಗೆ ಕೂಡ ನಿಮ್ಮಂತಹ ಜಾಣರಿಗೆ ಹೇಗೆ ಪ್ರಶ್ನೆ ಕೇಳಬೇಕು ಎಂಬುದು ಗೊತ್ತಿರುತ್ತದೆ ಎಂದು ಬಾಲಕನ ಕಾಲೆಳೆದರು. ನಂತರ ಅವರು ಆಯ್ಕೆಯನ್ನು ನೀಡಿದಾಗ ತಪ್ಪಾದ ಆಯ್ಕೆಯನ್ನು ಮಾಡಿದ ಕಾರಣ ಬಾಲಕ ಸ್ಪರ್ಧೆಯಿಂದ ಹಿಂದೆ ಸರಿಯುವಂತಹ ಪರಿಸ್ಥಿತಿ ಉಂಟಾಯಿತು. ಇಡೀ 5 ರಿಂದ 6 ನಿಮಿಷದ ಕಾರ್ಯಕ್ರಮದಲ್ಲಿ ವೀಕ್ಷಕರಿಗೆ ತೋಚಿದ್ದು ಮಗುವಿನ ಉದ್ಧಟತನದ ವರ್ತನೆ.

ಬಾಲಕ ತುಂಬಾ ಎಕ್ಸೈಟ್ ಆಗಿದ್ದಾನೆ ಎಂಬುದಕ್ಕಿಂತ ಆತ ತನ್ನ ಪ್ರತಿಭೆಯನ್ನು ತೋರಲು ಕಾತರನಾಗಿದ್ದಾನೆ ಎಂದೇ ತೋರುತ್ತಿತ್ತು. ನನ್ನಷ್ಟು ಜಾಣರು ಯಾರೂ ಇಲ್ಲ ಎಂಬ ಅಹಂಭಾವ ಆತನ ವರ್ತನೆಯಲ್ಲಿತ್ತು. ತನ್ನಷ್ಟು ಜಾಣರು ಯಾರೂ ಇಲ್ಲ ಎಂಬುದು ತಪ್ಪಲ್ಲ ಆದರೆ ನಮ್ಮ ಹಿರಿಯರು ಹೇಳುವ ಹಾಗೆ “ವಿದ್ಯಾ ವಿನಯೇನ ಶೋಭತೆ” ಎಂಬ ವಿನಯದ ಪಾಠ ಆ ಮಗುವಿಗೆ ಪಾಲಕರು ಕಲಿಸಿಲ್ಲವೇನೋ ಎಂದು ವೀಕ್ಷಕರಿಗೆ ಅನಿಸಿದ್ದರಲ್ಲಿ ಯಾವುದೇ ತಪ್ಪಿಲ್ಲ.

ಮೇಲ್ನೋಟಕ್ಕೆ ಆತನ ಕಾತರವನ್ನು ಮಾತ್ರ ಕಾಣುವ ನಾವು ಅದನ್ನು ಪ್ರೋತ್ಸಾಹಿಸಬಹುದು ಅಥವಾ ನಕ್ಕು ಸುಮ್ಮನಾಗಬಹುದು. ಆದರೆ ಆಳವಾಗಿ ಯೋಚಿಸಿ ನೋಡಿದಾಗ ಆ ಮಗುವಿನಲ್ಲಿ ಎಳವೆಯಲ್ಲಿಯೇ ಹುಟ್ಟಿರುವ ಈ ಅಹಂಭಾವವನ್ನು ಮೊಳಕೆಯಲ್ಲಿ ಚಿವುಟಿ ಹಾಕದೆ ಹೋದರೆ ಇದರ ಅತ್ಯಂತ ಕೆಟ್ಟ ಪರಿಣಾಮಗಳನ್ನು ನಾವು ನೋಡಬಹುದು.

ಕೆಲ ವರ್ಷಗಳ ಹಿಂದೆ ನನ್ನ ಬಳಿ ಅಬಾಕಸ್ ತರಬೇತಿಗೆಂದು ಬರುತ್ತಿದ್ದ ಓರ್ವ ಬಾಲಕ ತನಗಿಂತ ಕಡಿಮೆ ಹಂತಗಳಲ್ಲಿ ತರಬೇತಿ ಪಡೆಯುತ್ತಿದ್ದ ಮಕ್ಕಳನ್ನು ನೋಡಿ ತಮಾಷೆ ಮಾಡುತ್ತಿದ್ದ. ಅವನು ಎಲ್ಲ ರೀತಿಯಲ್ಲಿ ಅತ್ಯುತ್ತಮವಾಗಿ ತರಬೇತಿ ಪಡೆಯುತ್ತಿದ್ದ, ಜಾಣನೂ ಆಗಿದ್ದ ನಿಜ…. ಹೊಸದಾಗಿ ಬಂದ ಮಕ್ಕಳು ಆ ವಿಷಯದಲ್ಲಿ ತರಬೇತಿ ಪಡೆಯುವಾಗ ಸಹಜವಾಗಿಯೇ ಎದುರಾಗುವ ಸವಾಲುಗಳನ್ನು ಕುರಿತು ನನ್ನ ಬಳಿ ತೋರಿಸಿ ಲೆಕ್ಕಗಳನ್ನು ಮಾಡುತ್ತಿರುವಾಗಲೇ ನಂತರದ ಅವಧಿಗೆ ತರಬೇತಿಗೆ ಬರುವ ಆ ಬಾಲಕ ಅವರನ್ನು ಕುರಿತು ಏನು ಮೇಡಂ, ಇಷ್ಟು ಕೂಡ ಮಾಡೋಕೆ ಬರೋದಿಲ್ಲ ಇವರಿಗೆ ಎಂದಾಗ ನನಗೆ ಕೂಡ ಆತನ ವರ್ತನೆಯ ಕುರಿತು ಬೇಸರವಾಗುತ್ತಿತ್ತು.

ತರಗತಿಯಲ್ಲಿ ಕುಳಿತ ಉಳಿದ ಮಕ್ಕಳು “ಈ ಅಣ್ಣ ಯಾಕಾದ್ರೂ ಬರ್ತಾನೋ” ಎಂಬಂತ ಭಾವವನ್ನು ವ್ಯಕ್ತಪಡಿಸುತ್ತಿದ್ದರು. ಸೂಕ್ಷ್ಮವಾಗಿ ಒಂದೆರಡು ಬಾರಿ ತಿಳಿಹೇಳಿದ ನಾನು ಅದಕ್ಕೆ ಆ ಬಾಲಕ ಬಗ್ಗದೆ ಹೋದಾಗ, ತರಗತಿಯ ಹೊರಗೆ ಇರುವ ಹಾಲ್ ನಲ್ಲಿ ಕುಳಿತುಕೊಳ್ಳಲು ಹೇಳುತ್ತಿದ್ದೆ. ಮುಂದೆಂದೂ ಬೇರೆಯ ಬ್ಯಾಚ್ನ ವಿದ್ಯಾರ್ಥಿಗಳಿಗೆ ತರಗತಿ ನಡೆಯುವಾಗ ಆ ಬಾಲಕನನ್ನು ತರಗತಿಯ ಒಳಗೆ ಬಂದು ಕುಳಿತುಕೊಳ್ಳಲು ಅವಕಾಶ ನೀಡುತ್ತಿರಲಿಲ್ಲ.

ಈ ರೀತಿಯ ಅಹಂಭಾವವನ್ನು ಕೆಲವೇ ಕೆಲವು ವಿದ್ಯಾರ್ಥಿಗಳಲ್ಲಿ ನಾವು ನೋಡುತ್ತೇವೆ. ಇಂತಹ ವಿದ್ಯಾರ್ಥಿಗಳು ತಮಗೆ ವಿಷಯ ಸಂಪೂರ್ಣವಾಗಿ
ಅರ್ಥವಾಗದೇ ಇದ್ದಾಗಲೂ ಎಲ್ಲವೂ ತಮಗೆ ಅರ್ಥವಾಗಿದೆ ಎಂಬಂತೆ ವರ್ತಿಸುತ್ತಾರೆ…. ತಮಗೆ ಅರ್ಥವಾಗಲಿಲ್ಲ ಎಂದರೆ ಅವಮಾನವಾಗುತ್ತದೆ ಎಂಬ ಭಾವ ಅವರದು ಎಂಬುದನ್ನು ಇಷ್ಟು ವರ್ಷಗಳ ತರಬೇತಿಯ ವೇಳೆಯಲ್ಲಿ ನಾನು ಕಂಡುಕೊಂಡಿದ್ದೇನೆ. ಆದ್ದರಿಂದ ಸಾಮಾನ್ಯವಾಗಿ ಎಲ್ಲ ವಿದ್ಯಾರ್ಥಿಗಳನ್ನು ಉದ್ದೇಶಿಸಿ ‘ನಾನು ಗೊತ್ತಿಲ್ಲದೇ ಇರುವುದನ್ನು ಗೊತ್ತಿಲ್ಲ ಎಂದು ಹೇಳಿ ಮತ್ತೊಮ್ಮೆ ತಿಳಿದುಕೊಂಡು ಮಾಡುವುದರಲ್ಲಿ ಅರ್ಥವಿದೆ. ನನಗೆ ವಿಷಯ ಅರಿವಾಗುತ್ತಿಲ್ಲ ಎಂದು ಹೇಳಿದರೆ ನೀವು ದಡ್ಡರಲ್ಲ, ಆದರೆ ನಿಮಗೆ ತಿಳಿಯುತ್ತಿಲ್ಲ ಎಂದಾಗಲೂ ಕೂಡ ನೀವು ಅದನ್ನು ಹೇಳದೆ ಹೋದರೆ ಖಂಡಿತವಾಗಿಯೂ ನೀವು ದಡ್ಡರಾಗುತ್ತೀರಿ” ಎಂದು ಅವರಿಗೆ ನಾನು ತಿಳಿಸಿ ಹೇಳುತ್ತೇನೆ.

ಮತ್ತೇ ಕೆಲ ಮಕ್ಕಳು ಇದೇ ರೀತಿಯ ಅಹಂ ಭಾವದಲ್ಲಿ ಬೆಳೆದು ಫಾಲ್ಸ್ ಪ್ರೆಸ್ಟೀಜ್( ಪೊಳ್ಳು ಅಹಂಭಾವ ) ಬೆಳೆಸಿಕೊಳ್ಳುತ್ತಾರೆ. ಅವರನ್ನು ಸರಿದಾರಿಗೆ ತರಲು ಯತ್ನಿಸಿದ ಶಿಕ್ಷಕರನ್ನೇ ಅವರು ಟಾರ್ಗೆಟ್ ಮಾಡಿ ತನಗೆ ಅವರು ಭೇದ ಮಾಡುತ್ತಾರೆ ಎಂದು ತಮ್ಮ ಪಾಲಕರಲ್ಲಿ ಹೋಗಿ ದೂರುತ್ತಾರೆ. ಸಹಜವಾಗಿಯೇ ತಮ್ಮ ಮಕ್ಕಳ ಮಾತನ್ನು ನಂಬುವ ಪಾಲಕರು ಆ ಶಿಕ್ಷಕರು ಸರಿಯಾಗಿ ಪಾಠ ಮಾಡೋದಿಲ್ಲ ನಮ್ಮ ಹುಡುಗನನ್ನು ಸದಾದರು ಇರುತ್ತಾರೆ ಎಂಬ ಭಾವವನ್ನು ತಾಳುತ್ತಾರೆ. ಶಿಕ್ಷಕರಿಗೇನು ಒಂದೆರಡು ಬಾರಿ ತಿದ್ದಲು ಪ್ರಯತ್ನಿಸಿ ಕೈಬಿಡಬಹುದು ಆದರೆ ಬದುಕಿನುದ್ದಕ್ಕೂ ನಡೆಯಬೇಕಾದವರು ಆ ಮಗು ಮತ್ತು ಪಾಲಕರು ತಾನೆ? ಇಂತಹ ಸಮಯದಲ್ಲಿ ಮಗುವಿನ ಅತಿರೇಕದ ವರ್ತನೆಯನ್ನು ಕಂಡರೆ ನಾನು ಅವರ ಪಾಲಕರಲ್ಲಿ ಪ್ರತ್ಯೇಕವಾಗಿ ಮಾತನಾಡಿ ಮಗುವಿನ ಕಾಳಜಿ ಮಾಡಲು ಕೇಳಿಕೊಳ್ಳುತ್ತೇನೆ. ಅವರು ಕೂಡ ಮಗುವಿನ ಈ ಸ್ವಭಾವವನ್ನು ಈಗಾಗಲೇ ಗುರುತಿಸಿದ್ದು ಈ ಕುರಿತು ಏನು ಮಾಡಬೇಕು ಎಂದು ಕೇಳಿದರೆ ಅವರಿಗೆ
ಸಮಾಲೋಚನೆಯ ಮೂಲಕ ಸಲಹೆ ನೀಡುತ್ತೇನೆ.

ಮತ್ತೆ ಕೆಲ ತರಬೇತಿಗಳಿಗೆ ಸೇರುವ ಮಕ್ಕಳು ಆರಂಭ ಶೂರರಾಗಿದ್ದು ತಾವು ಕಲಿಯುತ್ತಿರುವ ವಿಷಯದಲ್ಲಿ ಆಸಕ್ತಿಯನ್ನು ಕಳೆದುಕೊಂಡಾಗ ಶಿಕ್ಷಕರು ಸರಿಯಾಗಿ ಹೇಳುವುದಿಲ್ಲ ಎಂದು ದೂರುತ್ತಾರೆ. ಎಲ್ಲಾ ಬಾರಿಯೂ ಶಿಕ್ಷಕರದೇ ತಪ್ಪಿರುವುದಿಲ್ಲ ಹಾಗೂ ಪ್ರತಿ ಬಾರಿ ಮಗು ಸರಿಯಾಗಿ ಮಾತನಾಡುತ್ತದೆ ಎಂಬುದಕ್ಕೆ ಯಾವುದೇ ಖಾತರಿ ಇಲ್ಲ. ಇಂತಹ ಸಮಯದಲ್ಲಿ ಪಾಲಕರು ತಮ್ಮ ಮಕ್ಕಳ ವರ್ತನಾ ದೋಷಗಳನ್ನು ಸೂಕ್ಷ್ಮವಾಗಿ ಗಮನಿಸಿ ಎಳವೆಯಲ್ಲಿಯೇ ಅವರನ್ನು ತಿದ್ದಲು ಪ್ರಯತ್ನಿಸಬೇಕು.

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬಂತೆ…. ಇಂತಹ ಮಕ್ಕಳು ಎಳವೆಯಲ್ಲಿ ಬಾಗದೆ ಹೋದರೆ ದೊಡ್ಡವರಾದ ಮೇಲೆ ಮುರಿದು ಹೋಗುವುದೇ ಜಾಸ್ತಿ. ಅದರ ಪೆಟ್ಟು ಕೂಡ ಅವರಿಗೆ ತಾನೇ ಬೀಳುವುದು ಎಂಬ ಅರಿವು ಪಾಲಕರಿಗೆ ಇರಬೇಕು.

ಪಾಲಕರಾಗಲಿ, ಶಿಕ್ಷಕರೇ ಇರಲಿ ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಅವರಿಬ್ಬರ ಪಾತ್ರಗಳು ಇದ್ದು, ಅವರಿಬ್ಬರೂ ಪರಸ್ಪರರನ್ನು ದೂರದೆ ಒಬ್ಬರಿಗೊಬ್ಬರು ಪೂರಕವಾಗಿ ಮಗುವಿನ ಬೆಳವಣಿಗೆಯಲ್ಲಿ ಕಾರ್ಯನಿರ್ವಹಿಸಬೇಕು. ಪಾಲಕರು ಮತ್ತು ಶಿಕ್ಷಕರ ನಡುವೆ ಸಹಮತ ಇಲ್ಲದೆ ಹೋದಲ್ಲಿ ಮಕ್ಕಳು ಇದರ ಲಾಭವನ್ನು ಪಡೆಯುತ್ತಾರೆ ಎಂಬುದನ್ನು
ನೆನಪಿನಲ್ಲಿಡಿ.

ವಿಪರೀತ ಪಾಲನೆ ಎಂಬ ಹೊಸ ಪದವನ್ನು ಇತ್ತೀಚೆಗೆ ಬಳಸಲಾಗುತ್ತಿದ್ದು, ಅಜ್ಜ ಅಜ್ಜಿ ತಂದೆ ತಾಯಿ ಹೀಗೆ ಮನೆಯ ಸಮಸ್ತ ಜನರಿಗೆ ಮಗು ಒಂದೇ ಕೇಂದ್ರಿತವಾದರೆ, ಮಗು ಹೇಳುವ ಎಲ್ಲದಕ್ಕೂ ಹೂ ಗುಟ್ಟುವ ಪಾಲಕರು ಇದ್ದರೆ ಮಗು ಸ್ವಕೇಂದ್ರಿತವಾಗಿ ಬೆಳೆಯುತ್ತದೆ. ಬೇರೆಯವರ ಭಾವನೆಗಳ ಕುರಿತು ಅದು ತಲೆ ಕೆಡಿಸಿಕೊಳ್ಳುವುದಿಲ್ಲ. ಹೀಗೆ ವೈಯುಕ್ತಿಕ ನೆಲೆಯಲ್ಲಿ ಮಗು ಬೆಳಗರೆ ಅದು ಸ್ವಾರ್ಥಪರ ವ್ಯಕ್ತಿತ್ವವನ್ನು ರೂಡಿಸಿಕೊಳ್ಳುತ್ತದೆ. ಆದ್ದರಿಂದ ಮಗು ಹೇಳಿದ್ದೇ ವೇದ ವಾಕ್ಯ ಎಂಬಂತೆ ಮಕ್ಕಳನ್ನು ಖಂಡಿತವಾಗಿಯೂ ಬೆಳೆಸಬಾರದು. ಸೂಕ್ತ ಸಮಯದಲ್ಲಿ ಮಗುವಿಗೆ ತಿಳಿ ಹೇಳಲೇಬೇಕು ಅದು ಪಾಲಕರ ಆದ್ಯ ಕರ್ತವ್ಯ.

ಮಕ್ಕಳನ್ನು ವಿಪರೀತ ಮುದ್ದು ಮಾಡಿ ಬೆಳೆಸಿದಾಗ ಮಕ್ಕಳಲ್ಲಿ ಈ ರೀತಿಯ ವರ್ತನಾದೋಷಗಳು ಕಾಣಿಸಿಗುತ್ತವೆ. ನೀನು ಜಾಣ ಎಂದು ಮಕ್ಕಳಿಗೆ ಹೇಳುವ ಮೂಲಕ ಅದನ್ನು ಸಕಾರಾತ್ಮಕ ಕಾರ್ಯತಂತ್ರವಾಗಿ ಬಳಸಿಕೊಳ್ಳಬಹುದು.ಆದರೆ ಕೇವಲ ನೀನೊಬ್ಬನೇ ಜಾಣ ಎಂಬ ಮಾತಿನಂತೆ ಅದು ಧ್ವನಿಸಬಾರದು. ನಿನ್ನನ್ನು ಬಿಟ್ಟು ಉಳಿದೆಲ್ಲರೂ ದಡ್ಡರು ಎಂಬ ಭಾವ ಕೂಡ ಸಲ್ಲದು. ಅಕಸ್ಮಾತ್ ಹಾಗೆ ಬೆಳೆಸಿದ್ದೇ ಆದರೆ ಇವೆಲ್ಲವೂ ಸ್ವಕೇಂದ್ರಿತ ಹಿತಾಸಕ್ತಿಯನ್ನು ಮಗುವಿನಲ್ಲಿ ಬಿತ್ತಲಿಕ್ಕೂ ಸಾಕು…. ಇದು ಅಪಾಯಕ್ಕೆ ದಾರಿಯಾಗುತ್ತದೆ.

ನಾನು ಸರಿ ಎಂಬುದು ಸ್ವಲ್ಪ ಮಟ್ಟಿಗೆ ಸರಿ, ನಾನೊಬ್ಬನೇ ಸರಿ ಎಂಬುದು ತಪ್ಪಾದ ಹೇಳಿಕೆ, ನನ್ನನ್ನು ಬಿಟ್ಟು ಬೇರೆ ಯಾರೂ ಸರಿ ಇರಲು ಸಾಧ್ಯವಿಲ್ಲ ಎಂಬುದು ಅತಿರೇಕದ ವರ್ತನೆ.
ಈ ಮೂರರಲ್ಲಿ ತಮ್ಮ ಮಕ್ಕಳ ಬೆಳವಣಿಗೆಗೆ ಯಾವುದು ಒಳ್ಳೆಯದು ಎಂಬುದನ್ನು ಅರಿತು ಪಾಲಕರು ತಮ್ಮ ಮಕ್ಕಳನ್ನು ಬೆಳೆಸಬೇಕು.ಓದು ಒಕ್ಕಾಲು ಬುದ್ದಿ ಮುಕ್ಕಾಲು ಎಂದು ನಮ್ಮ ಹಿರಿಯರು ಈ ಕಾರಣಕ್ಕೆ
ಹೇಳಿರುವುದಲ್ಲವೇ?

ಕೆ ಬಿ ಸಿ ಯಲ್ಲಿ ಈ ಮುನ್ನವೂ ಸಾಕಷ್ಟು ಜನ ಮಕ್ಕಳು ಸ್ಪರ್ಧಿಸಲು ಬಂದಿದ್ದಾರೆ. ಕೆಲ ಮಕ್ಕಳ ವರ್ತನೆ ತುಂಬಾ ಚೇತೋಹಾರಿಯಾಗಿತ್ತು… ಮನಸ್ಸಿಗೆ ತೃಪ್ತಿಯನ್ನು ಕೂಡ ಕೊಟ್ಟಿತ್ತು. ಆದರೆ ಇಶಿತ್ ಭಟ್ ನ ವರ್ತನೆ ಎಲ್ಲ ಪಾಲಕರಿಗೆ ಒಂದು ಪಾಠವಾಗಿ ಪರಿಣಮಿಸಲೇಬೇಕು. ಇವು ಈ ತಲೆಮಾರಿನ ಮಕ್ಕಳು ಎಂದು ಇನ್ ಸೆನ್ಸಿಟೀವ್ ಮಕ್ಕಳನ್ನು ಬೆಳೆಸಬಾರದು. ಬದಲು ಅನಾದಿ ಕಾಲದಿಂದಲೂ ನಮ್ಮಲ್ಲಿ ಹಾಸು ಹೊಕ್ಕಾಗಿರುವ ಮೌಲ್ಯಗಳ ಮರು ಸ್ಥಾಪನೆಗೆ ಇದು ಸಕಾಲ ಎಂದು ಭಾವಿಸಿ ಜೆನ್ ಜಿ ಮಕ್ಕಳು, ಎ ಐ ಮಕ್ಕಳು ಇರುವುದೇ ಹೀಗೆ ಎಂಬಂತೆ ಅವರನ್ನು ಅವರಿರುವಂತೆಯೇ ಬಿಡುವುದರ ಬದಲು ಸರಿ ತಪ್ಪುಗಳನ್ನು ಮಕ್ಕಳಿಗೆ ತಿಳಿ ಹೇಳಬೇಕು.

ನಮ್ಮ ಹಿರಿಯರು ಹೇಳಿದಂತೆ “ಓಣಿಯ ಕೂಸು ಬೆಳೆಯಿತು ಕೋಣೆಯ ಕೂಸು ಕೊಳೆಯಿತು” ಎಂಬ ಮಾತನ್ನು ನೆನಪಿಸುತ್ತ, ಮನುಷ್ಯ ಮೂಲತಃ ಸಾಮಾಜಿಕ ಜೀವಿ ಎಂಬುದರ ಅರಿವಿಟ್ಟುಕೊಂಡು ಮಕ್ಕಳಿಗೆ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳನ್ನು ಆಟೋಟಗಳನ್ನು ರೂಢಿಸಬೇಕು. ಮೌಲ್ಯಗಳ ಅರಿವನ್ನು ಮೂಡಿಸಬೇಕು.
ಏನಂತೀರಾ ಸ್ನೇಹಿತರೆ?

ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ, ಗದಗ್

Share This Article
error: Content is protected !!
";