ದಾವಣಗೆರೆ,ಜುಲೈ.24ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ್ ಕರೆಣ್ಣವರ ಜುಲೈ 22 ರಂದು ಆಜಾದ್ ನಗದರಲ್ಲಿನ ವೆಂಕಾಭೋವಿ ಕಾಲೋನಿಯ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿನ ಸ್ಥಿತಿಗತಿ ಬಗ್ಗೆ ಗಮನ ಸೆಳೆದಿದ್ದರು.
ಭೇಟಿ ನೀಡಿದ ಪರಿಣಾಮವಾಗಿ ಅಂಗನವಾಡಿಯಲ್ಲಿ ಸ್ವಚ್ಚತೆ, ಮಕ್ಕಳನ್ನು ಮಲಗಿಸಲು ಸೊಳ್ಳೆ ಪರದೆ, ಸರ್ಕಾರದ ಮೆನು ಪ್ರಕಾರ ಮಕ್ಕಳಿಗೆ ಪೌಷ್ಟಿಕಾಂಶವುಳ್ಳ ಆಹಾರ ವಿತರಣೆ ಸೇರಿದಂತೆ ಸಾಕಷ್ಟು ಬದಲಾವಣೆಯನ್ನು ಕಾಣಲಾಗಿದೆ. ಇಲಾಖೆ ಮೇಲಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ಮಕ್ಕಳಿಗೆ ಅತ್ಯುತ್ತಮವಾದ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಮಕ್ಕಳಿಗೆ ಆಟಿಕೆಗಳ ಉಪಯೋಗ, ಕೇಂದ್ರದ ಒಳಗೆ ಮಕ್ಕಳ ಕಲಿಕೆಗೆ ಬೇಕಾದ ಸ್ಟಿಕ್ಕರ್‌ಗಳ ಬಳಕೆ ಸೇರಿದಂತೆ ಆಹಾರ ಪದಾರ್ಥಗಳ ದಾಸ್ತಾನು ವಿವರದ ಪ್ರದರ್ಶನ, ಮೆನು ಫಲಕಗಳೆಲ್ಲವನ್ನು ಪ್ರದರ್ಶನ ಮಾಡಲಾಗಿದೆ.
ಈ ಬಗ್ಗೆ ನ್ಯಾಯಾಧೀಶರಾದ ಮಹಾವೀರ್ ಕರೆಣ್ಣವರ್ ಪ್ರತಿಕ್ರಿಯಿಸಿ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ಸಮಯದಲ್ಲಿದ್ದ ಸ್ಥಿತಿಗೂ, ಈಗಿನ ಸ್ಥಿತಿಗೂ ಸಾಕಷ್ಟು ಸುಧಾರಣೆಯಾಗಿದ್ದು ಇದೇ ರೀತಿ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಸರ್ಕಾರದ ಮಾರ್ಗಸೂಚಿಯನ್ವಯ ಮಕ್ಕಳಿಗೆ ಅತ್ಯುತ್ತಮವಾದ ಸೌಲಭ್ಯಗಳು ಸಿಗುವಂತಾಗಲಿ ಎಂದು ತಿಳಿಸಿದ್ದಾರೆ.