Ad image

ಕಾಳರಾತ್ರಿದೇವಿ ನವರಾತ್ರಿ ಹಬ್ಬದ ಏಳನೆಯ ದಿನ

Vijayanagara Vani
ಕಾಳರಾತ್ರಿದೇವಿ ನವರಾತ್ರಿ ಹಬ್ಬದ ಏಳನೆಯ ದಿನ

ನವರಾತ್ರಿ ಹಬ್ಬದ ದಿನ ಪಾರ್ವತಿ ದೇವಿಯನ್ನು ತಾಯಿ ಕಾಳರಾತ್ರಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಕಗ್ಗತ್ತಲ ರಾತ್ರಿಯ ಶಕ್ತಿಯನ್ನು ಪ್ರತಿನಿಧಿಸುವ ಕಾಳರಾತ್ರಿ ದೇವಿಯು ಉಗ್ರ ರಾಕ್ಷಸರಾದ ಚಂಡ ಮುಂಡರನ್ನು ಸಂಹರಿಸಿದ ದಿನ.

ಮೂರು ಲೋಕದ ಪ್ರಜೆಗಳಿಗೆ ಉಪಟಳ ನೀಡುತ್ತಿದ್ದ ಪ್ರಳಯಾಂತಕ ರಾಕ್ಷಸರಾದ ಶು0ಭ ಮತ್ತು ನಿಶು0ಭ ದ್ವಯರು ಹಿಮಾಚಲದಲ್ಲಿ ತಪಗೈಯುತ್ತಿದ್ದ ಸೌಂದರ್ಯದ ಖನಿಯಾಗಿದ್ದ ವನದೇವಿಯ ಕುರಿತು ದೂತರಿಂದ ಅರಿತು ವಿವಾಹವಾಗಬೇಕೆಂಬ ಆಸೆಯಿಂದ ಆಕೆಯನ್ನು ಕರೆತರಲು ಚಂಡ ಮುಂಡರನ್ನು ಕಳುಹಿಸಿದನು. ಆಗ ಮಹಾದೇವಿಯು ಚಂಡ ಮುಂಡರನ್ನು ಯುದ್ಧದಲ್ಲಿ ಸಂಹರಿಸಿ ಆಕೆ ಚಾಮುಂಡಿ ಎನಿಸಿದಳು. ಕಾಳರಾತ್ರಿಯು ಪಾರ್ವತಿ ದೇವಿಯ ಅತ್ಯಂತ ಉಗ್ರ ಸ್ವರೂಪವಾಗಿದ್ದು ಆಕೆ ಕತ್ತಲನ್ನು ಕೊನೆಗಾಣಿಸುವ ದೇವತೆ ಎಂದು ಪರಿಗಣಿಸಲ್ಪಟ್ಟಿದ್ದಾಳೆ.

ತನ್ನ ಚಿನ್ನದ ಬಣ್ಣವನ್ನು ತೊರೆದು ಕಪ್ಪು ಬಣ್ಣವನ್ನು ಹೊಂದುವ ಪಾರ್ವತಿ ದೇವಿಯು ಕಾಳರಾತ್ರಿಯಾಗಿ ಕತ್ತೆಯ ಮೇಲೆ ಸವಾರಿ ಮಾಡುತ್ತಾ ದುಷ್ಟ ರಾಕ್ಷಸರಾದ ಶು0ಭ ಮತ್ತು ನಿಶುಂಭರನ್ನು, ರಕ್ತ ಬೀಜಾಸುರ ಮತ್ತು ಚಂಡ ಮುಂಡರನ್ನು ಸಂಹರಿಸಿ ಎಲ್ಲ ರಾಕ್ಷಸರು ಮತ್ತು ಋಣಾತ್ಮಕ ಶಕ್ತಿಗಳನ್ನು ನಾಶ ಮಾಡಿದಳು.

ಒರಿಸ್ಸಾದ ಕಪಾಲಶಾಸ್ತ್ರದ ಪುಸ್ತಕ ‘ಶಿಲ್ಪ ಪ್ರಕಾಶ’ ಎಂಬ ಕೃತಿಯಲ್ಲಿ ಕಾಳರಾತ್ರಿ ದೇವಿಯ ಕುರಿತು ಹೆಚ್ಚಿನ ವಿವರಗಳಿದ್ದು ಈಕೆ ಸಹಸ್ರಾರ ಚಕ್ರದ ಅಧಿದೇವತೆಯಾಗಿದ್ದು, ತನ್ನ ಭಕ್ತರನ್ನು ದುಷ್ಟರಿಂದ ರಕ್ಷಿಸಲು ಅವರನ್ನು ಸಂಹರಿಸುವ ಮೂಲಕ ತನ್ನ ಭಕ್ತರಿಗೆ ಅಭಯಪ್ರದಾಯಿನಿಯಾಗಿದ್ದಾಳೆ.

ಕಾಲ ಎಂಬ ಪದದಲ್ಲಿ ಎರಡು ಅರ್ಥಗಳಿದ್ದು, ಒಂದು ಸಮಯವನ್ನು ಮತ್ತೊಂದು ಕಡು ಕತ್ತಲೆಯನ್ನು ಸೂಚಿಸುತ್ತದೆ. ಕಾಳರಾತ್ರಿ ದೇವಿಯು ಕಡುಗಪ್ಪು ಬಣ್ಣವನ್ನು ಧರಿಸಿದ್ದು ಉಗ್ರವಾದ ಕೆಂಗಣ್ಣು ಮತ್ತು ರಕ್ತವರ್ಣದ ನಾಲಿಗೆಯನ್ನು ಹೊಂದಿದ್ದು 4 ಕೈಗಳನ್ನು ಹೊಂದಿದ್ದಾಳೆ. ಒಂದು ಕೈಯಲ್ಲಿ ಖಡ್ಗವನ್ನು ಮತ್ತೊಂದು ಕೈಯಲ್ಲಿ ಪರಶುವನ್ನು ಹಿಡಿದಿರುವ ಆಕೆ ತನ್ನ ಇನ್ನೊಂದು ಕೈಯಲ್ಲಿ ರಕ್ತವನ್ನು ತುಂಬಿದ ತಲೆಬುರುಡೆಯನ್ನು ಹಿಡಿದಿದ್ದಾಳೆ. ಆಕೆಯ ಇನ್ನೊಂದು ಕೈ ಅಭಯಮುದ್ರೆಯನ್ನು ಹೊಂದಿದ್ದಾಳೆ.

ಕರಲ್ವಂದನ ಧೋರಂ ಮುಕ್ತಕೇಶೀ ಚತುರ್ಭುಜಮ್। ಕಾಲ ರಾತ್ರಿಂ ಕರಾಲಿಕಾಂ ದಿವ್ಯಂ ವಿದ್ಯುತ್ಮಲಾ ವಿಭೂಷಿತಾಮ್

ಕೇಶವನ್ನು ಹರಿ ಬಿಟ್ಟಿರುವ ಚತುರ್ಭುಜಗಳನ್ನು ಹೊಂದಿರುವ ಕಾಲ ರಾತ್ರಿ ದೇವಿಯು ದಿವ್ಯವಾದ ಬೆಳಕಿನ ಪ್ರಭೆಯನ್ನು ಹೊಂದಿದ್ದಾಳೆ.

ಓಂ ಐ0 ಹ್ರೀ0 ಶ್ರೀ0 ಕಾಳರಾತ್ರಿಯೇ ನಮಃ

ಎಂದು ಜಪಿಸಬೇಕು.

ಯಾ ದೇವಿ ಸರ್ವಭೂತೇಶು ಶ್ರದ್ಧಾ ರೂಪೇಣ ಸಂಸ್ಥಿತ
ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋ ನಮಃ

ಎಂಬ ಮಂತ್ರವನ್ನು ನಾಲ್ಕು ಬಾರಿ ಹೇಳಿಕೊಂಡು ಆ ದೇವಿಯನ್ನು ಪೂಜಿಸಿ ಆರಾಧಿಸಬೇಕು.

ಎಲ್ಲರಿಗೂ ನವರಾತ್ರಿ ಹಬ್ಬದ ಏಳನೇ ದಿನದ ಶುಭಾಶಯಗಳು

ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ, ಗದಗ್.

Share This Article
error: Content is protected !!
";