ಕೊಟ್ಟೂರು : ತಾಲೂಕಿನ ನಿಂಬಳಗೆರೆ ಗ್ರಾಮದಲ್ಲಿ ಬುಧುವಾರ ಸಂಜೆ ಅಪಾರ ಭಕ್ತರ ಜಯ ಘೋಷ, ಹರ್ಷೋದ್ಘಾರದ ನಡುವೆ ಶ್ರೀ ಕಲ್ಲೇಶ್ವರ ಸ್ವಾಮಿ ರಥೋತ್ಸವ ಅದ್ದೂರಿಯಾಗಿ ಜರುಗಿತು.
ದೇವಸ್ಥಾನದಿಂದ ಪಲ್ಲಕ್ಕಿಯ ಭವ್ಯ ಮೆರವಣಿಗೆಯಲ್ಲಿ ಸಾಗಿ ಬಂದ ಸ್ವಾಮಿಯ ಉತ್ಸವ ಮೂರ್ತಿ ರಥಕ್ಕೆ ಪ್ರದಕ್ಷಿಣೆ ಹಾಕಿತು. ಬಗೆ ಬಗೆಯ ಹೂವು, ತಳಿರು, ತೋರಣಗಳಿಂದ ಸರ್ವಾಲಂಕೃತಗೊಂಡಿದ್ದ ರಥಕ್ಕೆ ಪೂಜೆ ನೆರವೇರಿಸಿ, ಸ್ವಾಮಿಯನ್ನು ರಥದಲ್ಲಿ ಪ್ರತಿಷ್ಟಾಪನೆ ಮಾಡಲಾಯಿತು.
ನಂತರ ನಡೆದ ಸ್ವಾಮಿಯ ಪಟ ಹರಾಜು ಪ್ರಕಿಯೆಯಲ್ಲಿ ಗ್ರಾಮದ ಪೊಜಾರ ಸಿದ್ದಲಿಂಗಪ್ಪ 55000 ರೂಗಳಿಗೆ ಪಟವನ್ನು ಪಡೆದುಕೊಂಡರು. ನಂತರ ಭಕ್ತರ ಜಯಘೋಷದೊಂದಿಗೆ ರಥೋತ್ಸವ ಚಾಲನೆ ಪಡೆದುಕೊಂಡಿತು. ರಥ ಬೀದಿಯಲ್ಲಿ ನೆರೆದಿದ್ದ ಭಕ್ತರು ರಥಕ್ಕೆ ಬಾಳೆಹಣ್ಣು ಎಸೆದು ಭಕ್ತಿಯಿಂದ ಕೈ ಮುಗಿದರು. ಸಮಾಳ ನಂದಿಕೋಲು, ಮಂಗಳವಾದ್ಯಗಳ ವೈಭವ ರಥೋತ್ಸವ ಮೆರಗು ಹೆಚ್ಚಿಸಿದ್ದವು. ನಿಂಬಳಗೆರೆ, ಯರಮ್ಮನಹಳ್ಳಿ, ಮಂಗಾಪುರ, ಗಾಣಗಟ್ಟೆ, ಬೇಳದೇರೆ,ಹಾರಕಭಾವಿ, ಸುಂಕದಕಲ್ಲು , ಸೇರಿದ್ದಂತೆ ವಿವಿಧ ಗ್ರಾಮದಳಿಂದ ಬಂದಿದ್ದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿ ಭಕ್ತಿ ಸಮರ್ಪಿಸಿದರು. ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.