ಕೊಪ್ಪಳ ಸೆಪ್ಟೆಂಬರ್ 17 ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ ಮೊದಲಾದ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆ ನೀಡಿದ ಕಲ್ಯಾಣ ಕರ್ನಾಟಕ ಪ್ರದೇಶವು ವಚನ ಕ್ರಾಂತಿಯ ಮೂಲಕ ಬಹುದೊಡ್ಡ ಹೆಸರು ಪಡೆಯಿತು. ಶರಣ ಸಂತರ ಹೋರಾಟದಿಂದಾಗಿ ಜಾಗತಿಕ ಪರಿವರ್ತನೆಗೆ ಕಲ್ಯಾಣ ಕರ್ನಾಟಕದ ನೆಲವು ಪ್ರೇರಣೆಯಾಯಿತು ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಹೇಳಿದರು.
ಜಿಲ್ಲಾಡಳಿತದಿಂದ ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಸೆ.17ರಂದು ನಡೆದ ಕಲ್ಯಾಣ ಕರ್ನಾಟಕ ಉತ್ಸವ ದಿನದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ನಮ್ಮ ಕಲ್ಯಾಣ ಕರ್ನಾಟಕ ಭಾಗವು ಈ ಮೊದಲು ನಿಜಾಮರ ಆಳ್ವ್ವಿಕೆಯಲ್ಲಿತ್ತು. ಈ ಪ್ರಾಂತ್ಯವನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳಲು ಬ್ರಿಟಿಷರು ಕಮ್ಮಕ್ಕು ನೀಡಿದ್ದರು. ಈ ಭಾಗದಲ್ಲಿ ಎಷ್ಟೇ ಹೋರಾಟಗಳಾದರು ಸಹ ನಿಜಾಮನು ಭಾರತ ಒಕ್ಕೂಟಕ್ಕೆ ಸೇರಲು ನಿರಾಕರಿಸಿದನು. ಭಾರತದ ಉಕ್ಕಿನ ಮನುಷ್ಯ ಎಂದೇ ಹೆಸರಾಗಿದ್ದ ಸರ್ದಾರ್ ವಲ್ಲಭ ಬಾಯಿ ಪಟೇಲರು ದಿಟ್ಟತನದಿಂದ ಕೈಗೊಂಡ ಪೊಲೀಸ್ ಕಾರ್ಯಚರಣೆಯಲ್ಲಿ ನಿಜಾಮನು ಶರಣಾದನು. ಈ ಪ್ರದೇಶವು 1948ರ ಸೆಪ್ಟೆಂಬರ್ 17 ರಂದು ಭಾರತದ ಒಕ್ಕೂಟಕ್ಕೆ ಸೇರಿತು. ನಮ್ಮ ದೇಶದ ರಾಷ್ಟ್ರೀಯತಂತ್ರ್ಯ ಹೋರಾಟವು ಹೇಗೆ ನಡೆಯಿತೋ ಅದೇ ರೀತಿ ಹೈದ್ರಾಬಾದ್ ಕರ್ನಾಟಕ ವಿಮೋಚನಾ ಹೋರಾಟವು ಸಹ ನಡೆಯಿತು. ಈ ಭಾಗದಲ್ಲಿ ಸ್ವಾಮಿ ರಮಾನಂದ ತೀರ್ಥರು ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟವನ್ನು ಅಹಿಂಸಾತ್ಮಕವಾಗಿ ಪ್ರಾರಂಭಿಸಿದರು. ರಜಾಕರ ಪಡೆಯು ಜನಸಾಮಾನ್ಯರ ಮೇಲೆ ನಿರಂತರವಾಗಿ ಅನ್ಯಾಯ, ದೌರ್ಜನ್ಯ ಮಾಡುತ್ತಿತ್ತು. ಇದನ್ನು ಸಹಿಸದೆ ಈ ಭಾಗದಲ್ಲಿ ಹೋರಾಟಗಳು ನಡೆದವು. ರಾಮಚಂದ್ರಪ್ಪ ವೀರಪ್ಪನವರು, ಶಿವಮೂರ್ತಿಸ್ವಾಮಿ ಅಳವಂಡಿ, ಪುಂಡಲೀಕಪ್ಪ ಜ್ಞಾನಮೋಠೆ, ವೀರಭದ್ರಪ್ಪ ಶಿರೂರು, ಸಿ.ಎಂ. ಚುರ್ಚಿಹಾಳಮಠ, ಸೋಮಪ್ಪ ಡಂಬಳ, ಯರಾಶಿ ಶಂಕ್ರಪ್ಪ, ಎಂ. ವಿರುಪಾಕ್ಷಪ್ಪ, ನರಸಿಂಗರಾವ್, ಜನಾರ್ಧನರಾವ್ ದೇಸಾಯಿ, ದೇವೇಂದ್ರಕುಮಾರ ಹಕಾರಿ, ಡಾ.ಪಂಚಾಕ್ಷರಿ ಹಿರೇಮಠ ಸೇರಿದಂತೆ ಅನೇಕರು ಹೋರಾಟಕ್ಕೆ ಕೈಜೋಡಿಸಿದರು. ಹೀಗೆ ಈ ಭಾಗದ ಹೋರಾಟಗಾರರ ತ್ಯಾಗ ಬಲಿದಾನಗಳಿಂದ ಹೈದ್ರಾಬಾದ್- ಕರ್ನಾಟಕ ವಿಮೋಚನಾ ಹೋರಾಟವು ಈ ನಾಡಿನ ಭವ್ಯ ಇತಿಹಾಸವಾಗಿ ಉಳಿದಿದೆ ಎಂದು ತಿಳಿಸಿದರು.
ಹೈದ್ರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಇದೀಗ ‘ಕಲ್ಯಾಣ ಕರ್ನಾಟಕ ಉತ್ಸವ’ ದಿನವನ್ನಾಗಿ ಆಚರಿಸಲಾಗುತ್ತಿದೆ. ಹಲವರು ಮಹನಿಯರ ತ್ಯಾಗ ಹೋರಾಟದ ಪ್ರತೀಕವಾದ ಈ ಕಲ್ಯಾಣ ಕರ್ನಾಟಕ ಉತ್ಸವ ದಿನದ ಧ್ವಜಾರೋಹಣ ನೆರವೇರಿಸಿರುವುದು ನನ್ನ ಪುಣ್ಯ ಎಂದೇ ಭಾವಿಸಿದ್ದೇನೆ ಎಂದರು.
ನಮ್ಮ ರಾಜ್ಯ ಸರ್ಕಾರವು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಅಭಿವೃದ್ಧಿಗಾಗಿ ವಿಶೇಷ ಅಭಿವೃದ್ಧಿ ಯೋಜನೆಗಳನ್ನು ಜಾರಿ ತಂದಿದೆ. ಇದಕ್ಕಾಗಿಯೇ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿ ಹಲವಾರು ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಜನರು ನೆಮ್ಮದಿಯಿಂದ ಬದುಕುವಂತಾಗಿದೆ. ಈ ನಿಟ್ಟಿನಲ್ಲಿ ಸರ್ವರಿಗು ಸಮಬಾಳು ಸರ್ವರಿಗು ಸಮಪಾಲು ಎನ್ನುವ ಸಾಮಾಜಿಕ ನ್ಯಾಯದ ಪರಿಪಾಲನೆಯನ್ನು ನಾವು ಮಾಡಿದ್ದೇವೆ ಎಂದು ಹೇಳಲು ಹೆಮ್ಮೆ ಅನಿಸುತ್ತದೆ ಎಂದು ತಿಳಿಸಿದರು.
ಕೊಪ್ಪಳ ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ 2023ರ ಜುಲೈ 1 ರಿಂದ 2024ರ ಆಗಸ್ಟ್ 31ರವರೆಗೆ ಒಟ್ಟು 2,73,803 ಗ್ರಾಹಕರು ಲಾಭ ಪಡೆದುಕೊಂಡಿದ್ದಾರೆ. ಗೃಹಲಕ್ಷಿö್ಮÃ ಯೋಜನೆಯಡಿ ಜುಲೈ-2024ರ ಅಂತ್ಯಕ್ಕೆ ಒಟ್ಟು 3,20,150 ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದು, ಈವರೆಗೆ 3,08,510 ಫಲಾನುಭವಿಗಳು ಮಾಹೆಯಾನ ರೂ.2000 ಪಡೆದುಕೊಳ್ಳುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಒಟ್ಟು 11,74,681 ಸದಸ್ಯರಿಗೆ ಸರ್ಕಾರದ ರಾಷ್ಯ ಆಹಾರ ಭದ್ರತಾ ಕಾಯ್ದೆಯಂತೆ ಪ್ರತಿ ಸದಸ್ಯರಿಗೆ 5 ಕೆ.ಜಿ. ಆಹಾರ ಧಾನ್ಯವನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಹೆಚ್ಚುವರಿಯಾಗಿ 5 ಕೆ.ಜಿ ಅಕ್ಕಿ ಬದಲಿಗೆ ಪ್ರತಿ ಸದಸ್ಯರಿಗೆ 170 ರೂ. ನೇರ ನಗದು ವರ್ಗಾವಣೆ ಮೂಲಕ ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಡಿ ಒಟ್ಟು 5,128 ಡಿಪ್ಲೋಮಾ ಹಾಗೂ ಪದವೀಧರರಿಗೆ ರೂ. 2,48,46,000 ಗಳ ನಿರುದ್ಯೋಗ ಭತ್ಯೆಯನ್ನು ಪಾವತಿ ಮಾಡಲಾಗಿದೆ. ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ 2023ರ ಜೂನ್ 11 ರಿಂದ ಆಗಸ್ಟ್-2024ರವರೆಗೆ ಒಟ್ಟು 475.74 ಲಕ್ಷ ಮಹಿಳೆಯರು ಪ್ರಯಾಣಿಸಿದ್ದು, ಶಕ್ತಿ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ.
2024-25ನೇ ಸಾಲಿನಲ್ಲಿ ಹೊಸದಾಗಿ ಯಲಬುರ್ಗಾ ತಾಲೂಕಿನ ಮುಧೋಳ, ಕೊಪ್ಪಳ ತಾಲ್ಲೂಕಿನ ಹಿಟ್ನಾಳ (ಲಿಂಗದಳ್ಳಿ) ಗ್ರಾಮದಲ್ಲಿ ಹಾಗೂ ಕನಕಗಿರಿ ತಾಲ್ಲೂಕಿನ ಕನಕಗಿರಿ ಪಟ್ಟಣದಲ್ಲಿ 250 ಸಂಖ್ಯಾಬಲದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗಿದೆ. 2024-25ನೇ ಸಾಲಿನಲ್ಲಿ ಹೊಸದಾಗಿ 100 ಸಂಖ್ಯಾಬಲದೊAದಿಗೆ ಕೊಪ್ಪಳ ನಗರದಲ್ಲಿ 02 ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಮತ್ತು 01 ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಹಾಗೂ ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ 01 ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಸೇರಿ ಒಟ್ಟು 04 ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಗಳನ್ನು ಪ್ರಾರಂಭಿಸಲಾಗಿದೆ. 2024-25ನೇ ಸಾಲಿನಲ್ಲಿ ಕೊಪ್ಪಳ ಮತ್ತು ಗಂಗಾವತಿ ನಗರದಲ್ಲಿ 02 ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆಗಳನ್ನು ಪಿಯುಸಿ ಕಾಲೇಜುಗಳನ್ನಾಗಿ ಉನ್ನತೀಕರಿಸಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗಗಳನ್ನು ಪ್ರಾರಂಭಿಸಲಾಗಿದೆ.
2024-25ನೇ ಸಾಲಿನಲ್ಲಿ ಕೊಪ್ಪಳ ಜಿಲ್ಲೆಗೆ 5 ಬಾಲಕರ ಮತ್ತು 5 ಬಾಲಕಿಯರ ತಲಾ 100 ಸಂಖ್ಯಾಬಲದ ಒಟ್ಟು 10 ಮೆಟ್ರಿಕ್ ನಂತರ ನಿಲಯಗಳು ಮತ್ತು ಕನಕಗಿರಿ ಪಟ್ಟಣಕ್ಕೆ ಹೊಸದಾಗಿ 100 ಸಂಖ್ಯಾಬಲದ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆ ಮಂಜೂರಾಗಿದ್ದು, ಸದರಿ ಶಾಲೆಯನ್ನು ಪ್ರಸ್ತುತ ಸಾಲಿನಿಂದ ಪ್ರಾರಂಭಿಸಲು ಕ್ರಮವಹಿಸಲಾಗಿದೆ. ಕೆ.ಕೆ.ಆರ್.ಡಿ.ಬಿ ಯೋಜನೆಯಡಿ ಜಿಲ್ಲೆಗೆ 2024-25ನೇ ಸಾಲಿನಲ್ಲಿ ಹೊಸದಾಗಿ ಬಂಡಿ, ಬಳಗೇರಿ & ಚಿಕ್ಕಮ್ಯಾಗೇರಿ ಗ್ರಾಮಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅನುಮೋದನೆಯಾಗಿರುತ್ತವೆ. ತಾಯಿ ಮತ್ತು ಮಗು ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಜನನಿ ಸುರಕ್ಷಾ ಯೋಜನೆಯಡಿಯಲ್ಲಿ 1,422 ಫಲಾನುಭವಿಗಳಿಗೆ ಒಟ್ಟು ರೂ 1,21,76,000/-ಗಳ ಮೊತ್ತವನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಪ್ರವಾಸೋದ್ಯಮ ನೀತಿ 2024-29 ಜಾರಿ: ಮಾನ್ಯ ಮುಖ್ಯಮಂತ್ರಿಗಳು 2024-25ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ (371) ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದಲ್ಲಿನ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಸ್ತುತ ಜಾರಿಯಲ್ಲಿರುವ ಕರ್ನಾಟಕ ಪ್ರವಾಸೋದ್ಯಮ ನೀತಿಯನ್ನು ಮತ್ತಷ್ಟು ಹೂಡಿಕೆದಾರರ ಹಾಗೂ ಪ್ರವಾಸಿಗರ ಸ್ನೇಹಿಯಾಗಿ ಮಾಡಲು ಪರಿಷ್ಕೃತ ಪ್ರವಾಸೋದ್ಯಮ ನೀತಿ 2024-29 ಜಾರಿ ತರಲಾಗುವುದು ಎಂದು ಘೋಷಿಸಿರುತ್ತಾರೆ. ಇದರಿಂದಾಗಿ ಈ ಭಾಗದಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೆ ಸಾಕಷ್ಟು ಅನುಕೂಲವಾಗಲಿದೆ.
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 2020-21 ರಿಂದ 2023-24ನೇ ಸಾಲಿನವರೆಗೆ ಒಟ್ಟು ಕುಟುಂಬಗಳ ಸಂಖ್ಯೆ 3,07,000 ಇದ್ದು ಇದರಲ್ಲಿ 1,87,000 ಕುಟುಂಬಗಳಿಗೆ ಗ್ರಾಮ ಪಂಚಾಯತಿಗಳಿAದ ನೈಸರ್ಗಿಕ ಸಂಪನ್ಮೂಲ ಕಾಮಗಾರಿಗಳಾದ ಕೆರೆ ಅಭಿವೃದ್ಧಿ, ನಾಲಾ ಹೂಳೆತ್ತುವುದು, ಕೃಷಿಹೊಂಡ, ರೈತರ ಜಮೀನುಗಳಲ್ಲಿ ಬದು ನಿರ್ಮಾಣ, ಕಲ್ಯಾಣಿಗಳ ಅಭಿವೃದ್ಧಿ, ಮಳೆ ನೀರು ಕೊಯ್ಲು, ಕೊಳವೆಭಾವಿ ಮರುಪೂರಣ ಘಟಕ, ಚೆಕ್ ಡ್ಯಾಂ ಹೂಳೆತ್ತುವ ಕಾಮಗಾರಿ ನಡೆಸಲಾಗಿದೆ. ಜೊತೆಗೆ ಶಾಲಾ ಅಭಿವೃದ್ಧಿ ಕಾಮಗಾರಿಗಳು, ಅರಣ್ಯ ಇಲಾಖೆಯಿಂದ ರಸ್ತೆ ಬದಿ ನೆಡುತೋಪು, ಕೃಷಿ ಇಲಾಖೆಯಿಂದ, ತೋಟಗಾರಿಕಾ ಬೇರೆ ಬೇರೆ ಕಾಮಗಾರಿಗಳನ್ನು ನಡೆಸಲಾಗಿದೆ.
ಕೊಪ್ಪಳ ಜಿಲ್ಲೆಯ 7 ನಗರ ಸ್ಥಳೀಯ ಸಂಸ್ಥೆಗಳಿಗೆ ಕುಡಿಯುವ ನೀರಿನ ಯೋಜನೆಯನ್ನು ನುಷ್ಠಾನಗೊಳಿಸಲು ಅಮೃತ 2.0 ಯೋಜನೆಯಡಿಯಲ್ಲಿ ಕೊಪ್ಪಳ-ಭಾಗ್ಯನಗರ ಸಂಯುಕ್ತ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಮೊತ್ತ ರೂ.139.94 ಕೋಟಿ., ಯಲಬುರ್ಗಾ-ಕುಕನೂರು ಸಂಯುಕ್ತ ಕುಡಿಯವ ನೀರಿನ ಯೋಜನೆಯ ಕಾಮಗಾರಿ ಮೊತ್ತ ರೂ.242.23 ಕೋಟಿ., ಕನಕಗಿರಿ-ಕಾರಟಗಿ ಸಂಯುಕ್ತ ಕುಡಿಯವ ನೀರಿನ ಯೋಜನೆಯ ಕಾಮಗಾರಿ ಮೊತ್ತ ರೂ.195.79 ಕೋಟಿಗೆ ಆದೇಶಕ್ಕೆ ನೀಡಲಾಗಿದೆ. ಕುಷ್ಟಗಿ ಕುಡಿಯವ ನೀರಿನ ಯೋಜನೆಯ ಕಾಮಗಾರಿಯು ಮೊತ್ತ ರೂ.28.00 ಟೆಂಡರ್ ಪ್ರಕ್ರಿಯೆಯಲ್ಲಿರುತ್ತದೆ.
ಮಾನ್ಯ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ (ಮುನಿಸಿಪಾಲಿಟಿ) ಯೋಜನೆ (ಹಂತ-4)ರಡಿ ಜಿಲ್ಲೆಯಾದ್ಯಂತ ಅಂದಾಜು ಮೊತ್ತ ರೂ.106.25 ಕೋಟಿಗಳಲ್ಲಿ ಸುಮಾರು 255 ವೈಯಕ್ತಿಕ ಮತ್ತು ಸಮುದಾಯ ಆಧಾರಿತ ವಿವಿಧ ಅಭಿವೃದ್ದಿ ಕಾಮಗಾರಿಗಳು ಕೈಗೆತ್ತಿಕೊಳ್ಳಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ 445 ಶಿಕ್ಷಕರನ್ನು ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸಲಾಗಿದೆ.
2024-25ನೇ ಸಾಲಿನಲ್ಲಿ ಜಿಲ್ಲೆಯ ರಾಜೂರ-ಆಡೂರ ಹಾಗೂ ಮುಧೋಳ-ಕರಮುಡಿ ಗ್ರಾಮಗಳಿಗೆ 02 ಸರ್ಕಾರಿ ಪದವಿ ಪೂರ್ವ ಕಾಲೇಜ್‌ಗಳನ್ನು ಕೆಕೆಆರ್‌ಡಿಬಿ ಅನುದಾನದಲ್ಲಿ ಮಂಜೂರಿ ಮಾಡಲಾಗಿದೆ. 2023-24ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನೆಯಡಿ ಕೊಪ್ಪಳ ಜಿಲ್ಲೆಗೆ ಮೈಕ್ರೋ ವಲಯದಲ್ಲಿ 208.14 ಕೋಟಿ ರೂ. ಹಾಗೂ ಮ್ಯಾಕ್ರೋ ವಲಯದಲ್ಲಿ 89.20 ಕೋಟಿ ರೂ. ಹೀಗೆ ಒಟ್ಟು 297.34 ಕ್ಕೆ ಕ್ರಿಯಾ ಯೋಜನೆ ಅನುಮೋದಿಸಲಾಗಿದ್ದು, ವಿವಿಧ ಕಾಮಗಾರಿಗಳು ಪ್ರಗತಿ ಹಂತದಲ್ಲಿರುತ್ತವೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸ್ಥಾಪನೆಯಿಂದ ಈ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಅನುಕೂಲವಾಗಿದೆ. 2024-25ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆಯಡಿಯಲ್ಲಿ ಕೊಪ್ಪಳ ಜಿಲ್ಲೆಗೆ ಮೈಕ್ರೋ ವಲಯದಲ್ಲಿ 238.81 ಕೋಟಿ ರೂ. ಹಾಗೂ ಮ್ಯಾಕ್ರೋ ವಲಯದಲ್ಲಿ 128.59 ಕೋಟಿ ರೂ. ಹೀಗೆ ಒಟ್ಟು 367.40 ಕೋಟಿ ಅನುದಾನವನ್ನು ನಿಗದಿಪಡಿಸಲಾಗಿರುತ್ತದೆ. ಕ್ರಿಯಾಯೋಜನೆ ಅನುಮೋದನೆ ಪಕ್ರಿಯೆ ಹಂತದಲ್ಲಿದೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ಹಾಗೂ ಕುಕನೂರ ತಾಲೂಕಿನ 38 ಗ್ರಾಮಗಳಲ್ಲಿ ಕುಡಿಯುವ ನೀರು ಹಾಗೂ ಅಂತರ್ಜಲ ಅಭಿವೃದ್ಧಿಗಾಗಿ ಹೊಸ ಕೆರೆ ನಿರ್ಮಾಣ ಮತ್ತು ನೀರು ತುಂಬಿಸುವ ಯೋಜನೆಗೆ ಘನ ಸರ್ಕಾರವು 2024-25ನೇ ಸಾಲಿನ ಆಯವ್ಯಯದಲ್ಲಿ 970 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಘೋಷಿಸಿದ್ದು, ಯೋಜನೆಯ ಅನುಷ್ಠಾನ ಪ್ರಕ್ರಿಯೆಯು ಪ್ರಗತಿಯಲ್ಲಿರುತ್ತದೆ ಎಂದು ತಿಳಿಸಿದರು.
ಮಹತ್ವದ ಬೇರೆ ಬೇರೆ ಯೋಜನೆಗಳ ಅನುಷ್ಠಾನದಿಂದಾಗಿ ಮುಂಬರುವ ದಿನಗಳಲ್ಲಿ ಈ ಭಾಗವು ಸಮಗ್ರ ಅಭಿವೃದ್ಧಿಯಾಗಲಿದೆ. ನಾವೆಲ್ಲರೂ ಒಟ್ಟಾಗಿ ದುಡಿದಲ್ಲಿ ಈ ಭಾಗವು ಸರ್ವತೋಮುಖ ಅಭಿವೃದ್ಧಿ ಸಾಧಿಸಲಿದೆ ಎಂದು ಸಚಿವರು ತಿಳಿಸಿದರು.
ಸಮಾರಂಭದಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದ ಸದಸ್ಯರಾದ ಕೆ. ರಾಘವೇಂದ್ರ ಹಿಟ್ನಾಳ ಅವರು ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಸಂಸದರಾದ ಕೆ.ರಾಜಶೇಖರ ಹಿಟ್ನಾಳ್, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್ ಎಸ್.ಎಂ. ಪಟೇಲ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ರೆಡ್ಡಿ ಶ್ರೀನಿವಾಸ, ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ, ಡಾ.ರಾಮ್ ಎಲ್. ಅರಸಿದ್ದಿ, ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯ ಚತುರ್ವೇದಿ, ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಹೇಮಂತಕುಮಾರ, ತಹಸೀಲ್ದಾರ ವಿಠ್ಠಲ್ ಚೌಗಲಾ ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು. ಕೆ.ಎಚ್.ಕಲಕಬಂಡಿ ನಿರೂಪಿಸಿದರು.