ಸಕ್ಕರೆ ನಾಡು, ಕಬ್ಬಿನ ಬೆಳೆಯ ಹುಲುಸಾದ ಬೀಡು, ಗಂಡು ಮೆಟ್ಟಿನ ಜಿಲ್ಲೆ ಎಂದೆಲ್ಲ ಹೆಸರಾದ ಮಾಂಡವ್ಯ ಋಷಿಗಳ ತಪೋಭೂಮಿಯಾದ ಮಂಡ್ಯ ಜಿಲ್ಲೆಯಲ್ಲಿ ಇನ್ನೇನು ಕೆಲವೇ ಗಂಟೆಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಆರಂಭದ ಜಯ ಘೋಷ ಮೊಳಗಲಿದೆ. ಮಂಡ್ಯ ಜಿಲ್ಲೆಯ ಪ್ರತಿ ಮನೆ ಮನೆಯೂ ಕನ್ನಡದ ಈ ಹಬ್ಬವನ್ನು ತಳಿರು ತೋರಣ ಕಟ್ಟಿ ಸಂಭ್ರಮದಿಂದ ಬರ ಮಾಡಿಕೊಂಡಿದ್ದಾರೆ. ಮಂಡ್ಯದ ಪ್ರಸಿದ್ಧ ಅಮರಾವತಿ ಹೋಟೆಲ್ ನ ಹಿಂಭಾಗದಲ್ಲಿ ಸುಮಾರು 300 ಎಕರೆ ಜಾಗದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ ನಡೆದಿದ್ದು ಅತಿ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆಯ ಜನರಲ್ಲಿ ಸಂಭ್ರಮೋತ್ಸಾಹ ಮೇರೆ ಮುಟ್ಟಿದೆ ಎಂದರೆ ತಪ್ಪಿಲ್ಲ.
ಆರು ಸಾವಿರಕ್ಕೂ ಹೆಚ್ಚು ಜನಪ್ರತಿನಿಧಿಗಳು ನೋಂದಾಯಿಸಿಕೊಂಡಿರುವ ಈ ಸಮ್ಮೇಳನದಲ್ಲಿ ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆಯಿದ್ದು ನೂರಕ್ಕೂ ಹೆಚ್ಚು ಜನ ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸುತ್ತಿದ್ದಾರೆ. 30ಕ್ಕೂ ಹೆಚ್ಚು ವಿವಿಧ ವಿಚಾರಗಳ ಕುರಿತ ಗೋಷ್ಠಿಗಳು ನಡೆಯುತ್ತಿದ್ದು
ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ತಾಲೂಕು, ಜಿಲ್ಲೆ ಮತ್ತು ರಾಜ್ಯವಾರು ಘಟಕಗಳ ಸದಸ್ಯರು, ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಕರ್ನಾಟಕ ಘನ ಸರ್ಕಾರದ ಮುಖ್ಯಮಂತ್ರಿಗಳು,ವಿವಿಧ ಇಲಾಖೆಗಳ ಉಸ್ತುವಾರಿ ವಹಿಸಿರುವ ಸಚಿವರು, ಉಪಮುಖ್ಯಮಂತ್ರಿಗಳು, ಗಣ್ಯ ಸಾಹಿತಿಗಳು, ಸಾಹಿತ್ಯಾಭಿಮಾನಿಗಳು ವಿದ್ಯಾರ್ಥಿಗಳು ಬಹು ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ವೈವಿಧ್ಯತೆಯನ್ನು ಹೊಂದಿರುವ ಕನ್ನಡ ಭಾಷೆಯ ಬಳಕೆ ಉಳಿಕೆ ಮತ್ತು ಬೆಳವಣಿಗೆಯ ನಿಟ್ಟಿನಲ್ಲಿ ಅಂದಿನ ಮೈಸೂರು ಅರಸರ ನೇತೃತ್ವದಲ್ಲಿ ಸರ್ ಎಂ ವಿಶ್ವೇಶ್ವರಯ್ಯ, ಕರ್ಪೂರ ಶ್ರೀನಿವಾಸ್ ರಾವ್, ಡಿಎಲ್ ನರಸಿಂಹಾಚಾರ್, ರಾವ್ ಬಹದ್ದೂರ್ ಎಂ ರಾಮರಾವ್ ಮುಂತಾದವರನ್ನು ಒಳಗೊಂಡ ಸ್ವಾಯತ್ತ ಸಂಸ್ಥೆಯೊಂದು 1915 ಮೇ 3ರಂದು ವಿದ್ಯುಕ್ತವಾಗಿ ಪ್ರಾರಂಭವಾಯಿತು. ಅದುವೇ ಕನ್ನಡ( ಕರ್ನಾಟಕ) ಸಾಹಿತ್ಯ ಪರಿಷತ್ತು.
ಕನ್ನಡ ಭಾಷೆಯ ಈ ಹಿಂದಿನ ಎಲ್ಲ ಸಮಗ್ರ ಲೇಖನಗಳನ್ನು ಕೃತಿಗಳನ್ನು ಒಂದೆಡೆ ಸೇರಿಸುವ, ಕನ್ನಡ ಭಾಷೆಯ ಎಲ್ಲಾ ಸಾಂಸ್ಕೃತಿಕ, ಐತಿಹಾಸಿಕ ಸಾಮಾಜಿಕ ಮೂಲಗಳನ್ನು ಗುರುತಿಸುವ ನಿಟ್ಟಿನಲ್ಲಿ ಬೃಹತ್ ಪ್ರಮಾಣದಲ್ಲಿ ರಾಜ್ಯದ ವಿವಿಧೆಡೆಗಳಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಭಾಷಾ ಬೆಳವಣಿಗೆಯನ್ನು, ಸಾಂಸ್ಕೃತಿಕ ಪುನರುತ್ಥಾನವನ್ನು ಕೈಗೊಳ್ಳುವ ಬಹುಮುಖ್ಯ ಯೋಜನೆಗಳನ್ನು ರೂಪಿಸಿದ್ದು, ಕನ್ನಡ ನಾಡು-ನುಡಿಯ ಅಸ್ತಿತ್ವವನ್ನು ಮೆರೆಯುವ, ಕವಿ ಸಾಹಿತಿಗಳನ್ನು ಗುರುತಿಸುವ, ಕನ್ನಡ ಭಾಷೆಯ ಕುರಿತು ಅಭಿಮಾನವನ್ನು ಬಿಂಬಿಸುವ ನಿಟ್ಟಿನಲ್ಲಿ ಈ ಸಮ್ಮೇಳನಗಳು ಕಾರ್ಯನಿರ್ವಹಿಸುತ್ತಿವೆ. ಇದೀಗ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಕ್ಕರೆ ನಾಡಾದ ಮಂಡ್ಯದಲ್ಲಿ ಖ್ಯಾತ ಜಾನಪದ ಸಾಹಿತಿ ಸ್ವಾತಂತ್ರ್ಯ ಹೋರಾಟಗಾರರಾದ ಗೋ.ರು. ಚೆನ್ನಬಸಪ್ಪನವರ ಸರ್ವಾಧ್ಯಕ್ಷತೆಯಲ್ಲಿ ನಡೆಯುತ್ತಿದೆ.
ಈ ಹಿಂದೆ ಬ್ರಿಟಿಷರ ಆಳ್ವಿಕೆಯಲ್ಲಿ ಕರ್ನಾಟಕವು ನಾಲ್ಕು ಭಾಗಗಳಾಗಿ ಒಡೆದು ಹೋಗಿದ್ದು ಮರಾಠಿ ಪ್ರಬಂಧವಿರುವ ಭಾಗವನ್ನು ಮುಂಬೈ ಕರ್ನಾಟಕ, ನಿಜಾಮರ ಪ್ರಾಬಲ್ಯವಿರುವ ಭಾಗವನ್ನು ಹೈದರಾಬಾದ್ ಕರ್ನಾಟಕ, ತಮಿಳು ತೆಲುಗು ಪ್ರಾಬಲ್ಯವಿರುವ ಭಾಗವನ್ನು ಮದ್ರಾಸು ಪ್ರಾಂತ ಮತ್ತು ಮೈಸೂರು ಅರಸರು ಆಳುವ ಭಾಗವನ್ನು ಮೈಸೂರು ಪ್ರಾಂತ ಎಂದು ಗುರುತಿಸಲಾಗಿದ್ದು ಕನ್ನಡ ಮಾತನಾಡುವ ಜನರು ಈ ನಾಲ್ಕು ಪ್ರಾಂತಗಳಲ್ಲಿ ಹರಿದು ಹಂಚಿ ಹೋಗಿದ್ದರು. ಈ ಎಲ್ಲರನ್ನೂ ಒಂದು ಭಾಷೆಯ, ಒಂದು ಲಾಂಛನದ ಅಡಿಯಲ್ಲಿ ಒಗ್ಗೂಡಿಸುವ ಮೂಲಕ ಅಖಂಡ ಕರ್ನಾಟಕವನ್ನು ಉಳಿಸುವ ಬೆಳೆಸುವ ನಿಟ್ಟಿನಲ್ಲಿ ಅನೇಕ ಮಹನೀಯರು ಕರ್ನಾಟಕ ಏಕೀಕರಣದ ಹೋರಾಟದಲ್ಲಿ ತೊಡಗಿದ ಫಲವಾಗಿ 1973ರಲ್ಲಿ ನಮಗೆ ಕರ್ನಾಟಕ ಎಂಬ ಹೆಸರನ್ನು ಅಂದಿನ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರು ನಾಮಕರಣ ಮಾಡಿದರು.
ಎರಡುವರೆ ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆ ಜಗತ್ತಿನ ಉಳಿದೆಲ್ಲ ಭಾಷೆಗಳಿಗಿಂತ ಹೆಚ್ಚು ಸಾಂಸ್ಕೃತಿಕ,ಐತಿಹಾಸಿಕ, ಚಾರಿತ್ರಿಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಿರಿವಂತಿಕೆಯನ್ನು ಹೊಂದಿದ್ದು ಸಮೃದ್ಧವಾದ ಭಾಷೆಯಾಗಿದೆ. ಕನ್ನಡದ ಮೊದಲ ಗದ್ಯಕೃತಿ ಕವಿರಾಜಮಾರ್ಗದಿಂದ ಹಿಡಿದು ಇಂದಿನವರೆಗೆ ಲಕ್ಷಾಂತರ ಕವಿ, ಲೇಖಕ, ಕಲಾವಿದರು,ವಚನಕಾರರು ಗಮಕಿಗಳು, ದಾಸರು ಈ ಪುಣ್ಯಭೂಮಿಯಲ್ಲಿ ತಮ್ಮ ಮಣಿಹವನ್ನು ಪೂರೈಸಿದ್ದಾರೆ.
ಸಾಹಿತ್ಯ ಸಮ್ಮೇಳನದಲ್ಲಿ, ಸಮ್ಮೇಳನವನ್ನು ಉದ್ಘಾಟಿಸುವ ಸಮ್ಮೇಳನ ಅಧ್ಯಕ್ಷರ ಆಶಯ ಭಾಷಣ ಪ್ರಮುಖವಾಗಿದ್ದು ಕನ್ನಡ ಸಾಹಿತ್ಯದ ಬೆಳವಣಿಗೆಗೆ ಬೇಕಾದ ಅಂಶಗಳನ್ನು ಇದರಲ್ಲಿ ಒಳಗೊಂಡಿದ್ದು ನಂತರ ಈ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವ ಮುಖ್ಯ ಉದ್ದೇಶ ಈ ಸಮ್ಮೇಳನಕ್ಕೆ ಇರುತ್ತದೆ.
ಕನ್ನಡದ ಮನಸ್ಸುಗಳನ್ನು ಒಂದುಗೂಡಿಸುವುದು, ಕನ್ನಡ ಅಭಿಮಾನವನ್ನು ಮೆರೆಯುವುದು, ಕನ್ನಡದ ವಿವಿಧ ಕೃತಿಗಳ ಪರಿಚಯ,ಪ್ರಸ್ತುತ ಸಾಮಾಜಿಕ ಜೀವನದ ಹಲವಾರು ವಿಷಯಗಳ ಕುರಿತು ಗೋಷ್ಠಿ, ಕನ್ನಡದ ನೆಲ ಜಲ ಭಾಷೆಯ ಅಭಿವೃದ್ಧಿಯ ಕುರಿತ ಮಹತ್ವದ ನಿರ್ಣಯಗಳು, ಕರ್ನಾಟಕದಲ್ಲಿ ಕನ್ನಡಿಗರಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ದೊರಕಿಸಿಕೊಡಲು ಸರ್ವ ಪ್ರಯತ್ನಗಳು ಹೀಗೆ ಹತ್ತು ಹಲವು ವಿಷಯಗಳು ಸಮ್ಮೇಳನದ ಉದ್ದೇಶ ವಾಗಿರುತ್ತದೆ., ಸಮ್ಮೇಳನ ನಡೆಯುತ್ತಿರುವ ಜಿಲ್ಲೆಯ ಕವಿಗಳ, ಸಾಹಿತಿಗಳ, ಸಾಹಿತ್ಯಾಸಕ್ತ ಮನಸ್ಸುಗಳನ್ನು ಒಗ್ಗೂಡಿಸಿಕೊಂಡು ಆ ಭಾಗದ ಸಾಂಸ್ಕೃತಿಕ ಐತಿಹಾಸಿಕ ಮಹತ್ವವನ್ನು ಸಾರುವ ಸ್ಥಳಗಳ ಕುರಿತು,ಆ ಭಾಗದ ಅಭಿವೃದ್ಧಿಗೆ ದುಡಿದ ಮಹನೀಯರ, ಸಾಹಿತಿಗಳ ಕಲಾವಿದರ ಸಾಂಸ್ಕೃತಿಕ ಕಲೆಗಳ ಮಾಹಿತಿಯನ್ನು ಒಳಗೊಂಡ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡುವುದು ಕೂಡ ಸಮ್ಮೇಳನದ ಮುಖ್ಯ ಉದ್ದೇಶಗಳಲ್ಲಿ ಒಂದಾಗಿರುತ್ತದೆ.
ಕನ್ನಡ ಭಾಷೆಯ ಮೇಲೆ ಅನ್ಯ ಭಾಷೆಗಳ ಪ್ರಭಾವ, ಗಡಿನಾಡ ಕನ್ನಡಿಗರಲ್ಲಿ ಉಂಟಾಗಿರುವ ಅಸುರಕ್ಷತಾಭಾವವನ್ನು ಹೋಗಲಾಡಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು, ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ನಲುಗುತ್ತಿರುವ ಭಾಷೆ ಮತ್ತು ಸಂಸ್ಕೃತಿಯ ಕುರಿತು, ಸ್ತ್ರೀ ಸಬಲೀಕರಣದ ನಿಟ್ಟಿನಲ್ಲಿ ಎದುರಿಸುತ್ತಿರುವ ಸವಾಲುಗಳು ಮತ್ತು ಪರಿಹಾರಗಳು ಹೀಗೆ ಹತ್ತು ಹಲವು ವೈವಿಧ್ಯಮಯ ವಿಷಯಗಳು ಮೇಲೆ ಗೋಷ್ಠಿಗಳನ್ನು ನಡೆಸುವ ಮೂಲಕ ಪ್ರಾಜ್ಞರ ಸಲಹೆ, ಸಹಕಾರಗಳು ಮತ್ತು ನಿಯಂತ್ರಣೋಪಾಯಗಳನ್ನು ಕಂಡುಕೊಳ್ಳುವುದು ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ.
ಕನ್ನಡ ನಾಡು-ನುಡಿಗೆ ತಮ್ಮ ಗಣನೀಯ ಸೇವೆ ಸಲ್ಲಿಸಿರುವ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಗಳಿಸಿರುವ, ಹಲವಾರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಹೊಂದಿರುವ ಕನ್ನಡ ಸಾಹಿತ್ಯ ಅತ್ಯಂತ ಸಮೃದ್ಧವಾದ ಸಾಹಿತ್ಯ ಕೃಷಿಯನ್ನು ಮಾಡಿದ್ದು, ನಮ್ಮ ಕನ್ನಡ ನಾಡಿನ ನೆಲ ಜಲ ಭಾಷೆ ಸಂಸ್ಕೃತಿಯ ಬೆಳವಣಿಗೆಗೆ ಮಹತ್ತರವಾದ ಕಾಣಿಕೆಯನ್ನು ಸಲ್ಲಿಸಿದೆ. ಕನ್ನಡಮ್ಮನ ಸೇವೆಗಾಗಿ ಕಂಕಣ ಬದ್ಧರಾದ
ಕೋಟ್ಯಾಂತರ ಕನ್ನಡ ಭಕ್ತರು ಕನ್ನಡ ಡಿಂಡಿಮವನ್ನು ಬಾರಿಸಲು ಸದಾ ಸಜ್ಜಾಗಿ ನಿಂತಿದ್ದಾರೆ. ಶಾಂತಿಯ ಸಮಯದಲ್ಲಿ ಅಭಿವೃದ್ಧಿ ಮತ್ತು ವಿಕಾಸ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಕನ್ನಡಿಗರು ಕನ್ನಡ ನಾಡು ನುಡಿಗೆ ಸಂಚಕಾರ ಬಂದಲ್ಲಿ ಸಿಡಿದೆದ್ದು ನಿಲ್ಲುವರು ಎಂಬುದಕ್ಕೆ ಹಲವಾರು ಚಳುವಳಿಗಳು ಸಾಕ್ಷಿಯಾಗಿ ನಿಂತಿವೆ.
ಕಡು ಬಡತನದ ಹಿನ್ನೆಲೆಯಲ್ಲಿ ಹುಟ್ಟಿ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ, ಶಿಕ್ಷಕರಾಗಿ ಕಾರ್ಯನಿರ್ವಹಿಸುವುದರ ಜೊತೆ ಜೊತೆಗೆ ಕನ್ನಡದ ಜಾನಪದ ಲೋಕವನ್ನು ಜಗತ್ತಿಗೆ ಪರಿಚಯಿಸಿದ ಶರಣ ಸಾಹಿತ್ಯವನ್ನು ಲೋಕ ಸಾಹಿತ್ಯವನ್ನಾಗಿಸುವಲ್ಲಿ
ಅಹರ್ನಿಷಿ ಪ್ರಯತ್ನ ಪಡುತ್ತಿರುವ ಇಳಿ ವಯಸ್ಸಿನಲ್ಲಿಯೂ ನವ ತರುಣನಂತೆ ಕಾರ್ಯನಿರ್ವಹಿಸುತ್ತಿರುವ ಗೋ ರು ಚನ್ನಬಸಪ್ಪನವರು ಈ ವರ್ಷ ಮಂಡ್ಯದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿರುವುದು ಸಂತಸದ ವಿಷಯವಾಗಿದೆ. ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿ ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಮಹತ್ವದ ಪಾತ್ರ ವಹಿಸಿದ ಕನ್ನಡದ ಪ್ರಗತಿಪರ ಚಿಂತಕರು ಶ್ರೇಷ್ಠ ಸಾಹಿತಿಗಳು, ಜಾನಪದ ವಿದ್ವಾಂಸರೂ ಆಗಿರುವ
ಚನ್ನಬಸಪ್ಪ ಅವರು ಮಂಡ್ಯದಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವುದು ಸಮ್ಮೇಳನದ ಸಂಭ್ರಮಕ್ಕೆ ಕಿರೀಟ ಪ್ರಾಯವಾಗಿದೆ.
ಮಂಡ್ಯದಲ್ಲಿ ನಡೆಯುತ್ತಿರುವ ಈ ಕನ್ನಡ ಸಾಹಿತ್ಯ ಸಮ್ಮೇಳನದ ಬೃಹತ್ ಜಾತ್ರೆಯಲ್ಲಿ ನೀವೂ ಪಾಲ್ಗೊಳ್ಳಿ ಕನ್ನಡ ನಾಡು-ನುಡಿಗೆ ನಿಮ್ಮ ಕೈಲಾದಷ್ಟು ಸೇವೆಯನ್ನು ಸಲ್ಲಿಸಿ ಎಂದು ಆಶಿಸುವ
ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್