ಬಳ್ಳಾರಿ,ಅ.20
ಡಿಸೆಂಬರ್ ನಲ್ಲಿ ಮಂಡ್ಯದಲ್ಲಿ ಜರುಗಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥವು ಭಾನುವಾರದಂದು ಬಳ್ಳಾರಿ ಜಿಲ್ಲೆಗೆ ಆಗಮಿಸಿತು.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಕ್ಕೆ ಬಳ್ಳಾರಿ ನಗರದಲ್ಲಿ ಜಿಲ್ಲಾಡಳಿತ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು. ನಗರದ ಡಾ.ರಾಜ್ ಕುಮಾರ್ ರಸ್ತೆಯ ಮುನಿಸಿಪಲ್ ಕಾಲೇಜು ಮೈದಾನದ ಆವರಣದಲ್ಲಿ ಗಣ್ಯರೆಲ್ಲರೂ ಸೇರಿ ಕನ್ನಡ ತಾಯಿ ಭುವನೇಶ್ವರಿ ಮೂರ್ತಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿದರು.
ಬಳ್ಳಾರಿ ತಾಲ್ಲೂಕು ತಹಶೀಲ್ದಾರ ಗುರುರಾಜ ಅವರು ಮಾತನಾಡಿ, ಕನ್ನಡ ಭಾಷೆ ಬೆಳೆಸುವಲ್ಲಿ ಪ್ರತಿಯೊಬ್ಬರೂ ಕಂಕಣ ಬದ್ದರಾಗಿ ನಿಲ್ಲಬೇಕು, ಕನ್ನಡ ಉಳಿಸಿ ಬೆಳೆಸುವ ಇಂತಹ ಕಾರ್ಯಕ್ರಮವು ಎಲ್ಲರಲ್ಲೂ ಸಂತೋಷ ಉಂಟು ಮಾಡಿದೆ ಎಂದು ಹೇಳಿದರು.
ಕನ್ನಡ ಜ್ಯೋತಿ ರಥವನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯು ನಗರದ ಡಾ.ರಾಜ್ ಕುಮಾರ್ ರಸ್ತೆಯ ಮುನಿಸಿಪಲ್ ಕಾಲೇಜು ಮೈದಾನದ ಆವರಣದಿಂದ ಆರಂಭವಾಗಿ ಗಡಿಗಿ ಚೆನ್ನಪ್ಪ ವೃತ್ತದ ಮೂಲಕ ಬೆಂಗಳೂರು ರಸ್ತೆ, ಬ್ರೂಸ್ ಪೇಟೆ ಪೊಲೀಸ್ ಠಾಣೆ ಮುಂಭಾಗದಿಂದ ಜೈನ್ ಮಾರ್ಕೆಟ್ ರಸ್ತೆಯಲ್ಲಿ ಹೆಚ್.ಆರ್.ಗವಿಯಪ್ಪ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ಆವರಣಕ್ಕೆ ತಲುಪಿ ಸಂಪನ್ನಗೊಂಡಿತು.
ಕನ್ನಡ ಜ್ಯೋತಿ ರಥದ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ತಾಷೆ ರಾಮ್ಡೋಲ್ ಸೇರಿದಂತೆ ಹಲವು ಕಲಾ ವಾದ್ಯಗಳು ಸಾಂಸ್ಕೃತಿಕ ಮೆರಗು ತಂದವು.
ಇದಕ್ಕೂ ಮುನ್ನ ಜಿಲ್ಲೆಯ ಸಿರುಗುಪ್ಪ ಪಟ್ಟಣಕ್ಕೆ ಆಗಮಿಸಿದ ಕನ್ನಡ ಜ್ಯೋತಿ ರಥಕ್ಕೆ ಸಿರುಗುಪ್ಪ ತಾಲೂಕ ಆಡಳಿತ, ಸಿರುಗುಪ್ಪ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳು ಹಾಗೂ ಪಟ್ಟಣದ ಜನತೆ ಬರಮಾಡಿಕೊಂಡು ತಾಯಿ ಭುವನೇಶ್ವರಿ ಮೂರ್ತಿಗೆ ಪೂಜೆ ಸಲ್ಲಿಸಿದರು.
ಬಳಿಕ ಕುರುಗೋಡು ಪಟ್ಟಣಕ್ಕೆ ಆಗಮಿಸಿದ ಕನ್ನಡ ಜ್ಯೋತಿ ರಥಕ್ಕೆ ಕುರುಗೋಡು ತಾಲೂಕ ಆಡಳಿತ, ಕುರುಗೋಡು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳು ಹಾಗೂ ಪಟ್ಟಣದ ಜನತೆ ಬರಮಾಡಿಕೊಂಡು ತಾಯಿ ಭುವನೇಶ್ವರಿ ಮೂರ್ತಿಗೆ ಪೂಜೆ ಸಲ್ಲಿಸಿ, ತಾಷೆ-ರಾಮ್ ಡೋಲ್ ಹಾಗೂ ಇತರೆ ವಾದ್ಯಗಳೊಂದಿಗೆ ಪಟ್ಟಣದ ಮುಖ್ಯಬೀದಿಗಳಲ್ಲಿ ಮೆರವಣಿಗೆ ನಡೆಸಿ, ಬಳ್ಳಾರಿ ನಗರಕ್ಕೆ ಬೀಳ್ಕೊಟ್ಟರು.
ಕನ್ನಡ ಜ್ಯೋತಿ ರಥಯಾತ್ರೆ ಮೆರವಣಿಗೆಯು ಸೋಮವಾರದಂದು, ಕಂಪ್ಲಿ ಪಟ್ಟಣಕ್ಕೆ ತೆರಳಿ ಬಳಿಕ ಸಂಡೂರು ಪಟ್ಟಣದಲ್ಲಿ ಸಂಚರಿಸಿ, ವಿಜಯನಗರ ಜಿಲ್ಲೆಗೆ ತೆರಳಲಿದೆ. ರಥವು ತಾಯಿ ಭುವನೇಶ್ವರಿ, ಕಾವೇರಿ ಮಾತೆ, ಉಳುಮೆ ಮಾಡಲು ಸಿದ್ಧವಿರುವ ಎತ್ತುಗಳು ಮತ್ತು ರೈತ, ಜ್ಞಾನ ಪೀಠ ಪುರಸ್ಕೃತರ ಭಾವಚಿತ್ರಗಳು ರಥದಲ್ಲಿ ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ನಾಗರಾಜ, ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಿವಾಜಿರಾವ್ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಕನ್ನಡ ಪ್ರೇಮಿಗಳು, ಸಾರ್ವಜನಿಕರು ಇದ್ದರು.