ಚಿತ್ರದುರ್ಗ
ಕರ್ನಾಟಕ ಸಂಭ್ರಮ-50ರ ಅಂಗವಾಗಿ ರಾಜ್ಯಾಧ್ಯಂತ ಸಂಚರಿಸುತ್ತಿರುವ ಕರ್ನಾಟಕ ಜ್ಯೋತಿ ರಥಯಾತ್ರೆಯು ಚಿತ್ರದುರ್ಗ ಜಿಲ್ಲೆಯಲ್ಲಿ ಜುಲೈ 9 ರಿಂದ 14ರವರೆಗೆ ಸಂಚರಿಸಲಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ಮಾರ್ಗವಾಗಿ ಜುಲೈ 09ರಂದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿಗೆ ಆಗಮಿಸಲಿದೆ. ಅಂದು ಹೊಳಲ್ಕೆರೆ ತಾಲ್ಲೂಕಿನಾದ್ಯಂತ ರಥಯಾತ್ರೆ ಸಂಚರಿಸಿ, ಸಂಜೆ ಚಿತ್ರದುರ್ಗ ನಗರಕ್ಕೆ ಆಗಮಿಸಿ ವಾಸ್ತವ್ಯ ಮಾಡಲಿದೆ. ಜುಲೈ 10ರಂದು ಬೆಳಿಗ್ಗೆ 9ಕ್ಕೆ ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯ ಕನಕವೃತ್ತದಿಂದ ಕರ್ನಾಟಕ ಜ್ಯೋತಿ ರಥಯಾತ್ರೆಯ ಭವ್ಯ ಮೆರವಣಿಗೆ ನಡೆಯಲಿದೆ ಎಂದು ಚಿತ್ರದುರ್ಗ ತಹಶೀಲ್ದಾರ್ ಡಾ.ನಾಗವೇಣಿ ಹೇಳಿದರು.
ನಗರದ ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರ ಜರುಗಿದ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜುಲೈ 10ರಂದು ಬೆಳಿಗ್ಗೆ 9ಕ್ಕೆ ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದಿಂದ ಕರ್ನಾಟಕ ಜ್ಯೋತಿ ರಥಯಾತ್ರೆ ಮೆರವಣಿಗೆ ಜನಪ್ರತಿನಿಧಿಗಳು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಕನ್ನಡ ಪರ ಸಂಘಟನೆಗಳು, ಶಾಲಾ-ಕಾಲೇಜಿನ ಮಕ್ಕಳು ಹಾಗೂ ಸಾರ್ವಜನಿಕರ ಸಹಯೋಗದೊಂದಿಗೆ ಚಾಲನೆ ನೀಡಲಾಗುವುದು.
ಕರ್ನಾಟಕ ಜ್ಯೋತಿ ರಥಯಾತ್ರೆ ಮೆರವಣಿಗೆಯಲ್ಲಿ ಸಾಂಸ್ಕøತಿಕ ಕಲಾ ತಂಡಗಳು ಹಾಗೂ ರಾಜ್ಯ ಬಾವುಟ ಹಿಡಿದ ಶಾಲಾ ಮಕ್ಕಳು, ಪೂರ್ಣಕುಂಭ ಹೊತ್ತ ಅಂಗನಾಡಿ ಕಾರ್ಯಕರ್ತೆಯರು ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು. ನಗರದ ಕನ್ನಡಪರ ಸಂಘಟನೆಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ.
ಜ್ಯೋತಿ ರಥಯಾತ್ರೆಯ ಮೆರವಣಿಗೆ ಚಿತ್ರದುರ್ಗ ನಗರದ ಸಂಗೊಳ್ಳಿ ರಾಯಣ್ಣ ವೃತ್ತ, ಮಹಾತ್ಮ ಗಾಂದಿ ವೃತ್ತ, ಎಸ್.ಬಿ.ಐ ವೃತ್ತ, ಮಹಾವೀರ, ಅಂಬೇಡ್ಕರ್, ಮದಕರಿ ವೃತ್ತದ ಮೂಲಕ ಸಂಚರಿಸಿ ಒನಕೆ ಓಬವ್ವ ವೃತ್ತದಲ್ಲಿ ಸಮಾಪ್ತಿಗೊಳ್ಳಲಿದೆ. ನಂತರ ನಗರದಿಂದ ರಥಯಾತ್ರೆಯನ್ನು ಬೀಳ್ಕೊಡಲಾಗುವುದು.ಗೋನೂರು ಮಾರ್ಗವಾಗಿ ಕರ್ನಾಟಕ ಜ್ಯೋತಿ ರಥಯಾತ್ರೆ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ನಾಯಕನಹಟ್ಟಿಗೆ ತೆರಳುವುದು. ಜುಲೈ 12ರಂದು ಚಳ್ಳಕೆರೆ, ಜುಲೈ 13ರಂದು ಹಿರಿಯೂರು, ಜುಲೈ 14ರಂದು ಹೊಸದುರ್ಗ ತಾಲ್ಲೂಕಿನಲ್ಲಿ ಸಂಚರಿಸಿ, ಜುಲೈ 15ರಂದು ತುಮಕೂರು ಜಿಲ್ಲೆಗೆ ತಲುಪಲಿದೆ.
ಕರ್ನಾಟಕ ಜ್ಯೋತಿ ರಥಯಾತ್ರೆ ಅಂಗವಾಗಿ ನಗರಸಭೆಯಿಂದ ನಗರದ ಎಲ್ಲಾ ಪ್ರಮುಖ ವೃತ್ತಗಳನ್ನು ಬಾಳೆ ಕಂಬಗಳಿಂದ ಸಿಂಗರಿಸಬೇಕು. ಮಹನೀರ ಪುತ್ಥಳಿಗಳಿಗೆ ಪುಷ್ಪಾಲಂಕಾರ ಮಾಡಬೇಕು. ಕನ್ನಡ ಚರಿತ್ರೆ, ಸಾಹಿತ್ಯ, ಪರಂಪರೆ ಬಿಂಬಿಸುವ ಗೀತೆಗಳನ್ನು ಮೆರವಣಿಗೆಯಲ್ಲಿ ಧ್ವನಿ ವರ್ಧಕದ ಮೂಲಕ ಮೊಳಗಿಸಬೇಕು. ಪೊಲೀಸ್ ಇಲಾಖೆಯು ಸುಗಮ ರಥ ಸಂಚಾರಕ್ಕೆ ಅನುವು ಮಾಡಿಕೊಟ್ಟು, ರಕ್ಷಣೆ ಒದಗಿಸಬೇಕು ಎಂದು ತಹಶೀಲ್ದಾರ್ ಡಾ.ನಾಗವೇಣಿ ಹೇಳಿದರು.
ಸಭೆಯಲ್ಲಿ ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್ ಸೇರಿದಂತೆ, ನಗರಸಭೆ, ತೋಟಗಾರಿಕೆ, ಪೊಲೀಸ್ ಇಲಾಖೆ ಅಧಿಕಾರಿಗಳು, ಕನ್ನಡಪರ ಸಂಘಟನೆಗಳ ಮುಖಂಡರು ಹಾಜರಿದ್ದರು.