Ad image

“ಕಿಸಾನ್ ಸಮ್ಮಾನ್ ಹಣ ಪ್ರತಿಯೊಬ್ಬ ಅರ್ಹ ರೈತನಿಗೆ ಸಿಗಬೇಕು: ಸಂಸದ ಡಾ.ಕೆ ಸುಧಾಕರ್” “ಕಿಸಾನ್ ಕ್ರೆಡಿಟ್ ಕಾರ್ಡ್ ಲಾಭ ಪಡೆಯಿರಿ”

Vijayanagara Vani
“ಕಿಸಾನ್ ಸಮ್ಮಾನ್ ಹಣ ಪ್ರತಿಯೊಬ್ಬ ಅರ್ಹ ರೈತನಿಗೆ ಸಿಗಬೇಕು: ಸಂಸದ ಡಾ.ಕೆ ಸುಧಾಕರ್” “ಕಿಸಾನ್ ಕ್ರೆಡಿಟ್ ಕಾರ್ಡ್ ಲಾಭ ಪಡೆಯಿರಿ”
ಬೆಂ.ಗ್ರಾ.ಜಿಲ್ಲೆ, ಜೂನ್ 18ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ನೀಡುತ್ತಿರುವ 6000 ರೂ.ಗಳ ಅರ್ಥಿಕ ನೆರವು ಜಿಲ್ಲೆಯ ಪ್ರತಿಯೊಬ್ಬ ಅರ್ಹ ರೈತನಿಗೆ ಸಿಗುವಂತಾಗಬೇಕು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದರಾದ ಡಾ. ಕೆ. ಸುಧಾಕರ್ ಅವರು ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ 2025-26 ನೇ ಸಾಲಿನ ಮೊದಲನೇ ತ್ರೈಮಾಸಿಕ ದಿಶಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಿಸಾನ್ ಸಮ್ಮಾನ್ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕವಾಗಿ ಬೆಂಬಲವಾಗಿ ನಿಲ್ಲಲು ವಾರ್ಷಿಕ 6000 ರೂ.ಗಳನ್ನು ಕೇಂದ್ರ ಸರ್ಕಾರದಿಂದ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 1,70,000 ರೈತರಿದ್ದು ಕಳೆದ ಸಾಲಿನಲ್ಲಿ 63,375 ರೈತರು ಮಾತ್ರ ಯೋಜನೆಯ ಸೌಲಭ್ಯ ಪಡೆದುಕೊಂಡಿದ್ದಾರೆ. ಈ ಯೋಜನೆಯ ಬಗ್ಗೆ ಜಿಲ್ಲೆಯಲ್ಲಿ ವಿಶೇಷ ಅಭಿಯಾನ ಕೈಗೊಳ್ಳುವ ಮೂಲಕ ಕ್ಷೇತ್ರ ಭೇಟಿ ನೀಡಿ ಸೌಲಭ್ಯ ವಂಚಿತ ರೈತರ ಸಮಸ್ಯೆ ಆಲಿಸಿ, ಅದನ್ನು ಬಗೆ ಹರಿಸುವ ಮೂಲಕ ಅರ್ಹ ಪ್ರತಿಯೊಬ್ಬ ರೈತನಿಗೂ ಈ ಯೋಜನೆಯ ಸೌಲಭ್ಯ ಸಿಗುವಂತೆ ಮಾಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರು ಬೆಳೆ ವಿಮೆ ಮಾಡಿಸುವುದರಿಂದ ಬೆಳೆ ನಷ್ಟವನ್ನು ವಿಮೆ ಮೂಲಕ ಪಡೆಯಬಹುದು. ಈ ಬಗ್ಗೆ ರೈತರಿಗೆ ಮನವರಿಕೆ ಮಾಡುವ ಮೂಲಕ ವ್ಯಾಪಕ ಪ್ರಚಾರ ಕೈಗೊಂಡು ನೋಂದಣಿ ಹೆಚ್ಚಿಸಿ ಎಂದರು.
◆ ಕಿಸಾನ್ ಕ್ರೆಡಿಟ್ ಕಾರ್ಡ್ ನ ಸದುಉಪಯೋಗ ಪಡೆಯಿರಿ:-
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯು ರೈತರಿಗೆ ಕೃಷಿ ಮತ್ತು ಕೃಷಿ ಆಧಾರಿತ ಚಟುವಟಿಕೆ ಕೈಗೊಳ್ಳಲು ಬ್ಯಾಂಕಿಂಗ್ ವ್ಯವಸ್ಥೆಯಿಂದ ಸಾಕಷ್ಟು ಮತ್ತು ಸಕಾಲಿಕ ಸಾಲ ಬೆಂಬಲವನ್ನು ಒದಗಿಸುವ ಗುರಿಯನ್ನು ಹೊಂದಲಾಗಿದೆ.
ರೈತರಿಗೆ ಅವರ ಕೃಷಿ ಕಾರ್ಯಾಚರಣೆಗಳಿಗೆ ಸಾಕಷ್ಟು ಮತ್ತು ಸಕಾಲಿಕ ಸಾಲವನ್ನು ಒದಗಿಸುವ ಉದ್ದೇಶದಿಂದ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಯೋಜನೆಯನ್ನು ಪರಿಚಯಿಸಲಾಯಿತು. ಕೇಂದ್ರ ಸರ್ಕಾರವು ರೈತರಿಗೆ 2% ಬಡ್ಡಿ ಸಬ್ವೆನ್ಷನ್ ಮತ್ತು 3% ತ್ವರಿತ ಮರುಪಾವತಿ ಪ್ರೋತ್ಸಾಹವನ್ನು ನೀಡುತ್ತದೆ, ಹೀಗಾಗಿ ಸಾಲವು ವಾರ್ಷಿಕ 4% ಸಬ್ಸಿಡಿ ದರದಲ್ಲಿ ಲಭ್ಯವಾಗುತ್ತಿದೆ. ಈ ಯೋಜನೆ ಬಗ್ಗೆ ರೈತರಿಗೆ ಹೆಚ್ಚಿನ ಜಾಗೃತಿ ಮೂಡಿಸಿ ಹೆಚ್ಚು ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಮಾಡಿಸಲು ಅಗತ್ಯ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

Share This Article
error: Content is protected !!
";